ಶಾಲಾ ಅಂಗಳದಲ್ಲಿ ಅರಳಿದ ವಿಜ್ಞಾನ

KannadaprabhaNewsNetwork |  
Published : Feb 24, 2025, 12:32 AM IST
ಪೋಟೊ22ಕೆಎಸಟಿ1: ಕುಷ್ಟಗಿ ತಾಲೂಕಿನ ಬಿಜಕಲ್ ಸರಕಾರಿ ಪ್ರೌಢಶಾಲೆಯಲ್ಲಿ ಹತ್ತನೇಯ ತರಗತಿ ಮಕ್ಕಳು ರಂಗೋಲಿ ಮೂಲಕ ಬಿಡಿಸಲಾದ ಚಿತ್ರಗಳನ್ನು ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಶಿಕ್ಷಕರು ವೀಕ್ಷಣೆಯನ್ನು ಮಾಡಿದರು.22ಕೆಎಸಟಿ1ಎ: ಕುಷ್ಟಗಿ ತಾಲೂಕಿನ ಬಿಜಕಲ್ ಸರಕಾರಿ ಪ್ರೌಢಶಾಲೆಯಲ್ಲಿ ಹತ್ತನೇಯ ತರಗತಿ ಮಕ್ಕಳು ರಂಗೋಲಿ ಮೂಲಕ ಬಿಡಿಸಲಾದ ಚಿತ್ರಗಳು. | Kannada Prabha

ಸಾರಾಂಶ

ಭಾರತದ ಅಣೆಕಟ್ಟುಗಳ ಮಾಹಿತಿ, ಅಣು ವಿದ್ಯುತ್ ಕೇಂದ್ರಗಳ ಮಾಹಿತಿ, ಪತ್ರ ರಂಧ್ರಗಳು ಸೇರಿದಂತೆ ಅನೇಕ ಚಿತ್ರಗಳನ್ನು ಉತ್ಸಾಹದಿಂದ ವಿದ್ಯಾರ್ಥಿಗಳು ಬಿಡಿಸಿದ್ದರು

ಕುಷ್ಟಗಿ: ತಾಲೂಕಿನ ಬಿಜಕಲ್ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿಗಳು ವಿಜ್ಞಾನ ಹಾಗೂ ಸಮಾಜ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಚಿತ್ರಗಳನ್ನು ರಂಗೋಲಿಯಲ್ಲಿ ಬಿಡಿಸಿದ್ದು ಅಧಿಕಾರಿಗಳು ಹಾಗೂ ಶಿಕ್ಷಕರ ಚಿತ್ತ ಸೆಳೆಯುವಲ್ಲಿ ಸಫಲವಾದವು.

ಎಸ್‌ಎಸ್‌ಎಲ್‌ಸಿ ಫಲಿತಾಂಶದ ಹೆಚ್ಚಳಕ್ಕಾಗಿ ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ನಾನಾ ಕಸರತ್ತು ನಡೆಸುತ್ತಿದ್ದಾರೆ. ಇದರ ಅಂಗವಾಗಿ ರಂಗೋಲಿಯಲ್ಲಿ ಚಿತ್ರಗಳನ್ನು ಬಿಡಿಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಅನುಕೂಲವಾಗುವಂತೆ ನೋಡಿಕೊಂಡಿದ್ದಾರೆ.

ತಂಡಗಳ ಮೂಲಕ ಚಿತ್ರ:ಶಾಲಾ ಆವರಣದಲ್ಲಿ ಮೂರ್ನಾಲ್ಕು ವಿದ್ಯಾರ್ಥಿಗಳ ತಂಡ ರಚಿಸಿ ತಂಡದ ವಿದ್ಯಾರ್ಥಿಗಳಿಗೊಂದು ಟಾಸ್ಕ್ ನೀಡಿ ಚಿತ್ರ ಬಿಡಿಸುವ ಕಾರ್ಯ ಮಾಡಿಸಿದ್ದರು. ಈ ಹಿನ್ನೆಲೆಯಲ್ಲಿ ತಂಡದ ವಿದ್ಯಾರ್ಥಿಗಳು ಸುಂದರ ಚಿತ್ರ ಬಿಡಿಸಿ ಅದರ ಭಾಗಗಳನ್ನು ಗುರುತಿಸಿದರು ಹಾಗೂ ಆ ಚಿತ್ರಕ್ಕೆ ಬಣ್ಣ ಲೇಪನ ಮಾಡಿದರು.

ಯಾವ್ಯಾವ ಚಿತ್ರ: ಮಾನವನ ಹೃದಯ, ಮೆದುಳು, ಭಾರತ ನಕಾಶೆ, ನೀರಿನ ವಿದ್ಯುದ್ವಿಭಜನೆ, ಸಮನಾಂತರವಾಗಿರುವ ರೋಧಕ, ನೇಫ್ರಾನ ರಚನೆ, ಭಾರತದ ಬಂದರು, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಮಾಹಿತಿ, ಭಾರತದ ಅಣೆಕಟ್ಟುಗಳ ಮಾಹಿತಿ, ಅಣು ವಿದ್ಯುತ್ ಕೇಂದ್ರಗಳ ಮಾಹಿತಿ, ಪತ್ರ ರಂಧ್ರಗಳು ಸೇರಿದಂತೆ ಅನೇಕ ಚಿತ್ರಗಳನ್ನು ಉತ್ಸಾಹದಿಂದ ವಿದ್ಯಾರ್ಥಿಗಳು ಬಿಡಿಸಿದ್ದರು.

ವಿದ್ಯಾರ್ಥಿಗಳು ಬಿಡಿಸಿದ ರಂಗೋಲಿ ಚಿತ್ರವನ್ನು ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಕರು ವೀಕ್ಷಿಸಿ ಸಮಗ್ರ ಮಾಹಿತಿ, ಬಣ್ಣ ಸೇರಿದಂತೆ ಅನೇಕ ಮಾಹಿತಿ ಆಧಾರದ ಮೇಲೆ ಉತ್ತಮ ಚಿತ್ರಗಳನ್ನು ಆಯ್ಕೆ ಮಾಡಿ ತಂಡಕ್ಕೆ ಬಹುಮಾನ ನೀಡಿದರು.

ನೆನಪಿನಲ್ಲಿ ಉಳಿಯುತ್ತವೆ:ಶಿಕ್ಷಕರು ನಮಗೆ ತಂಡ ಕಟ್ಟಿಕೊಂಡು ಒಂದೊಂದು ಚಿತ್ರವನ್ನು ರಂಗೋಲಿಯಲ್ಲಿ ಬಿಡಿಸಲು ಹೇಳಿದ್ದರು. ಅದರಂತೆ ನಾವು ಬಿಡಿಸಿ ಬಣ್ಣ ತುಂಬಿದೇವು. ಇದು ನೆನಪಿನಲ್ಲಿ ಉಳಿಯಲು ಸಹಕಾರಿಯಾಗಿದ್ದು ಪರೀಕ್ಷಾ ಸಮಯದಲ್ಲಿ ಉಪಯೋಗವಾಗಲಿದೆ ಎಂದು ವಿದ್ಯಾರ್ಥಿಗಳಾದ ಜಗದೀಶ, ರೇಣುಕಾ, ಪ್ರತಿಭಾ ಹಿರೇಮಠ, ದೊಡ್ಡಬಸಮ್ಮ, ರತ್ನಾ ಪೊಲೀಸ್‌ಪಾಟೀಲ, ಗವಿಸಿದ್ದಮ್ಮ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಅಭಿಪ್ರಾಯಪಟ್ಟರು.

ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗಾಗಿ ಮಕ್ಕಳಿಗೆ ವಿಜ್ಞಾನ ಹಾಗೂ ಸಮಾಜ ವಿಜ್ಞಾನ ವಿಷಯದಲ್ಲಿ ಬರುವ ಚಿತ್ರಗಳನ್ನು ರಂಗೋಲಿ ಮೂಲಕ ಬಿಡಿಸಲು ಹೇಳಿರುವ ಶಿಕ್ಷಕರ ಕಾರ್ಯ ಉತ್ತಮವಾಗಿದೆ. ಇದರಿಂದ ಮಕ್ಕಳು ನೆನಪಿನಲ್ಲಿಡಲು ಅನೂಕೂಲವಾಗಲಿದೆ. ಇಂತಹ ಚಟುವಟಿಕೆಗಳಿಂದ ಮಕ್ಕಳು ಎಲ್ಲವನ್ನು ಕಲಿಯಬಹುದು ಎಂದು ಕುಷ್ಟಗಿ ನೋಡಲ್‌ ಅಧಿಕಾರಿ ದಾವಲಸಾಬ್‌ ವಾಲಿಕಾರ ತಿಳಿಸಿದ್ದಾರೆ.

ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆ ಕ್ರಮಗಳಲ್ಲಿ ವಿಜ್ಞಾನ ಚಿತ್ರ ಬಿಡಿಸುವುದು ಒಂದು ಭಾಗ. ವಿಜ್ಞಾನ ಹಾಗೂ ಸಮಾಜ ವಿಜ್ಞಾನ ವಿಷಯಗಳ ಪಠ್ಯಗಳಲ್ಲಿ ಬರುವ ಚಿತ್ರಗಳು ಮಕ್ಕಳ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯಲಿ ಎಂಬ ಉದ್ದೇಶದಿಂದ ಈ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಸರ್ಕಾರಿ ಪ್ರೌಢಶಾಲೆ ಬಿಜಕಲ್ ಮುಖ್ಯಶಿಕ್ಷಕ ಬಸವರಾಜ ಬಾಗಲಿ ಹೇಳಿದ್ದಾರೆ.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ