ಆಧುನಿಕತೆ ಭರಾಟೆಯಲ್ಲಿ ಮನೆಮದ್ದು ನಿರ್ಲಕ್ಷ್ಯ ಸಲ್ಲ

KannadaprabhaNewsNetwork |  
Published : Feb 24, 2025, 12:32 AM IST
ಕ್ಯಾಪ್ಷನ22ಕೆಡಿವಿಜಿ39 ದಾವಣಗೆರೆಯಲ್ಲಿ ಜಿಲ್ಲಾ ವಕೀಲರ ಸಂಘದಿಂದ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ನ್ಯಾ. ರಾಜೇಶ್ವರಿ ಎನ್.ಹೆಗಡೆ ಉದ್ಘಾಟಿಸಿದರು. | Kannada Prabha

ಸಾರಾಂಶ

ಹಿಂದಿನ ಕಾಲದಲ್ಲಿ ಯಾರಿಗೇ ಸಮಸ್ಯೆಯಾದರೂ ಮನೆಮದ್ದು ಇರುತ್ತಿತ್ತು. ಆದರೆ, ಇಂದು ಆಧುನಿಕತೆ ಭರಾಟೆಯಲ್ಲಿ ಅತ್ಯಮೂಲ್ಯವಾದ ಮನೆಮದ್ದು ಬಳಕೆ ಮರೆತಿದ್ದೇವೆ. ನಿಯಮಿತ ಆಹಾರ ಸೇವಿಸದ ಕಾರಣ ಶರೀರ ಸಮತೋಲನದಲ್ಲಿ ಇಲ್ಲ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ ಹೇಳಿದ್ದಾರೆ.

- ಉಚಿತ ಆರೋಗ್ಯ ತಪಾಸಣೆ- ಔಷಧ ವಿತರಣೆ ಕಾರ್ಯಕ್ರಮದಲ್ಲಿ ನ್ಯಾ. ರಾಜೇಶ್ವರ ಹೆಗಡೆ- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಹಿಂದಿನ ಕಾಲದಲ್ಲಿ ಯಾರಿಗೇ ಸಮಸ್ಯೆಯಾದರೂ ಮನೆಮದ್ದು ಇರುತ್ತಿತ್ತು. ಆದರೆ, ಇಂದು ಆಧುನಿಕತೆ ಭರಾಟೆಯಲ್ಲಿ ಅತ್ಯಮೂಲ್ಯವಾದ ಮನೆಮದ್ದು ಬಳಕೆ ಮರೆತಿದ್ದೇವೆ. ನಿಯಮಿತ ಆಹಾರ ಸೇವಿಸದ ಕಾರಣ ಶರೀರ ಸಮತೋಲನದಲ್ಲಿ ಇಲ್ಲ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ ಹೇಳಿದರು.

ನಗರದ ಜಿಲ್ಲಾ ವಕೀಲರ ಭವನದಲ್ಲಿ ಶನಿವಾರ ಆಯುಷ್ ಇಲಾಖೆ, ಜಿಲ್ಲಾ ವಕೀಲರ ಸಂಘ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ವಕೀಲರು, ನ್ಯಾಯಾಧೀಶರು ಹಾಗೂ ನ್ಯಾಯಾಲಯ ಸಿಬ್ಬಂದಿಗೆ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಮತ್ತು ಔಷಧ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಆಯುಷ್ ಸೇರಿದಂತೆ ಆರೋಗ್ಯಕ್ಕೆ ಸಂಬಂಧಿಸಿದಂತೆ ಸರ್ಕಾರದ ಇಲಾಖೆಗಳು ಸಾಕಷ್ಟು ಯೋಜನೆ, ಕಾರ್ಯಕ್ರಮ ಜಾರಿಗೊಳಿಸುತ್ತಿದೆ. ಆದರೂ ಜನರಿಗೆ ಅವುಗಳ ಲಾಭ ತಲುಪುತ್ತಿಲ್ಲ. ಮಾಧ್ಯಮಗಳಲ್ಲಿ ಬರುವ ಸುದ್ದಿಯನ್ನಾದರೂ ನೋಡಿ ಜನರು ಇದರ ಲಾಭ ಪಡೆದುಕೊಳ್ಳಲು ಮುಂದಾಗಬೇಕಿದೆ ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರೆಣ್ಣವರ ಮಾತನಾಡಿ, ವಕೀಲರು, ನ್ಯಾಯಾಧೀಶರು, ಸಿಬ್ಬಂದಿ ತಿಂಗಳಿಗೊಮ್ಮೆಯಾದರೂ ಮಧುಮೇಹ ಹಾಗೂ ರಕ್ತದೊತ್ತಡ ಪರೀಕ್ಷಿಸಿಕೊಳ್ಳಬೇಕು. ದಿನದ ಒಂದು ಗಂಟೆಯಾದರೂ ಯೋಗ ಮತ್ತು ಧ್ಯಾನಕ್ಕೆ ಸಮಯ ಮೀಸಲಿಡಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಆಯುಷ್ ಇಲಾಖೆ ಅಧಿಕಾರಿ ಡಾ. ಬಿ.ಯು. ಯೋಗೇಂದ್ರ ಕುಮಾರ್ ಮಾತನಾಡಿ, ಜನರನ್ನು ದೈಹಿಕ ಮತ್ತು ಮಾನಸಿಕವಾಗಿ ಸದೃಢಗೊಳಿಸುವುದೇ ಆಯುಷ್ ಇಲಾಖೆ ಧ್ಯೇಯವಾಗಿದೆ ಎಂದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್.ಅರುಣ ಕುಮಾರ್ ಅಧ್ಯಕ್ಷತೆ ವಹಿಸಿ, ಜಿಲ್ಲಾಸ್ಪತ್ರೆ ಸೇರಿದಂತೆ ಬೇರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಕ್ಕೆ ಬೇರೆ ಕಡೆ ಚೀಟಿ ಬರೆಯುವುದು ಸರ್ವೇಸಾಮಾನ್ಯ ಆದರೆ, ಆಯುಷ್ ಆಸ್ಪತ್ರೆಯಲ್ಲಿ ಯಾವುದೇ ಚೀಟಿಯನ್ನು ಹೊರಗೆ ಬರೆದುಕೊಡುವುದಿಲ್ಲ. ಆಹಾರವೇ ಔಷಧ ಎಂಬಂತೆ ಆಯುಷ್ ಇಲಾಖೆಯ ಸಲಹೆ ಪಡೆದು ನಾವು ಬದಲಾಗಬೇಕಿದೆ ಎಂದರು.

2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಆರ್.ಎನ್.ಪ್ರವೀಣ್ ಕುಮಾರ್, ಎಸ್‌ಟಿಎಫ್‌ಸಿ ನ್ಯಾಯಾಧೀಶ ಶ್ರೀರಾಮ ನಾರಾಯಣ ಹೆಗಡೆ, ನ್ಯಾಯಾಧೀಶರಾದ ಶಿವಪ್ಪ ಗಂಗಪ್ಪ ಸಲಗರೆ, ನ್ಯಾಯಾಧೀಶೆ ಟಿ.ಎಂ.ನಿವೇದಿತ, ವಕೀಲರ ಸಂಘದ ಉಪಾಧ್ಯಕ್ಷ ಜಿ.ಕೆ.ಬಸವರಾಜ ಗೋಪನಾಳ್, ಕಾರ್ಯದರ್ಶಿ ಎಸ್.ಬಸವರಾಜ, ಸಹ ಕಾರ್ಯದರ್ಶಿ ಎ.ಎಸ್.ಮಂಜುನಾಥ ಇತರರು ಇದ್ದರು.

- - -

ಕೋಟ್ ಎಲ್ಲ ಭಾಗ್ಯಗಳ ಪೈಕಿ ಆರೋಗ್ಯ ಭಾಗ್ಯ ದೊಡ್ಡದು. 15 ದಶಲಕ್ಷ ವರ್ಷಗಳ ಹಿಂದೆ ಮನುಷ್ಯ ಜನಿಸಿದಾಗ ತನ್ನ ಆರೋಗ್ಯ ತಾನೇ ಕಾಪಾಡಿಕೊಳ್ಳುವಂತಿದ್ದ. ಆದರೆ, ಕಲುಷಿತ ಆಹಾರ ಸೇವನೆಯಿಂದಾಗಿ ಇಂದು ನಮ್ಮ ಆರೋಗ್ಯ ಹದಗೆಟ್ಟಿದೆ. ಸರಿಯಾಗಿ ಊಟ ಮಾಡಿ, ಕುಟುಂಬದವರ ಜೊತೆಗೆ ಉತ್ತಮ ಬಾಂಧವ್ಯದಿಂದ ಇರಬೇಕು. ಚೆನ್ನಾಗಿ ನಿದ್ದೆ ಮಾಡಿ, ಉತ್ತಮ ಆರೋಗ್ಯ ಹೊಂದಬೇಕು

- ಮಂಜಪ್ಪ ಹನುಮಂತಪ್ಪ ಅಣ್ಣಯ್ಯನವರ್‌, ನ್ಯಾಯಾಧೀಶ

- - - -22ಕೆಡಿವಿಜಿ39.ಜೆಪಿಜಿ:

ದಾವಣಗೆರೆಯಲ್ಲಿ ಜಿಲ್ಲಾ ವಕೀಲರ ಸಂಘದಿಂದ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ನ್ಯಾ. ರಾಜೇಶ್ವರಿ ಎನ್. ಹೆಗಡೆ ಉದ್ಘಾಟಿಸಿದರು.

PREV

Recommended Stories

ಕೆಪಿಎಸ್ಸಿ: 384 ಹುದ್ದೆ ನೇಮಕಕ್ಕೆ ಕೋರ್ಟ್‌ ಅನುಮತಿ
ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ