ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ
ಅತಿ ಸೂಕ್ಷ್ಮ ಕೊಡವ ಜನಾಂಗದಲ್ಲಿ ತಮ್ಮ ಸಂಸ್ಕೃತಿಯ ಆಚರಣೆ ಹಾಗೂ ಅನುಸರಣೆಗೆ ತುಂಬಾ ಮಹತ್ವ ನೀಡಬೇಕಾಗಿದೆ. ಇವುಗಳನ್ನು ಉಳಿಸಿಕೊಳ್ಳಲು ಪರಸ್ಪರ ಒಗ್ಗಟ್ಟು, ಸಹಕಾರ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಖ್ಯಾತ ಫ್ಯಾಷನ್ ಡಿಸೈನರ್ ನಡಿಕೇರಿಯಂಡ ಪ್ರಸಾದ್ ಬಿದ್ದಪ್ಪ ಹೇಳಿದರು.ಕುಟ್ಟ ಕೊಡವ ಸಮಾಜದಲ್ಲಿ ಭಾನುವಾರ ಆಯೋಜಿಸಿದ್ದ 13ನೇ ವರ್ಷದ ಕಕ್ಕಡ ನಮ್ಮೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೊಡವರ ಬಗ್ಗೆ ಬಹಳ ಹೆಮ್ಮೆ ಇದೆ. ವಿವಿಧ ಕ್ಷೇತ್ರದಲ್ಲಿ ಜನಾಂಗದವರು ಬಹಳಷ್ಟು ಸಾಧನೆ ಮಾಡಿದ್ದಾರೆ. ಕೊಡವರು ತಮ್ಮದೇ ಆದ ವಿಶೇಷತೆಯನ್ನು ಹೊಂದಿದ್ದಾರೆ. ದೇಶದ ವಿವಿಧ ಕ್ಷೇತ್ರದಲ್ಲಿಯೂ ಚಾಪು ಮೂಡಿಸಿದ್ದಾರೆ. ಕೊಡವರಿಗೆ ಬಹುಮುಖ ಪ್ರತಿಭೆ ಇದ್ದು ಜನಾಂಗದ ಮಕ್ಕಳು ತಮ್ಮ ಪ್ರತಿಭೆಯನ್ನು ಹೊರ ತರಲು ಸೂಕ್ತ ಕ್ಷೇತ್ರ ಆಯ್ಕೆ ಮಾಡಿಕೊಳ್ಳಬೇಕು. ಈ ಮೂಲಕ ಖ್ಯಾತಿ ಹಾಗೂ ಬದುಕು ರೂಪಿಸಿಕೊಳ್ಳಲು ಸಾಧ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.ಭಾರತೀಯ ಸೇನೆಯಲ್ಲಿ ಕೊಡವರ ಕೊಡುಗೆ ಬಹಳ ಆಪಾರವಾಗಿದೆ. ಮುಂಬೈನಲ್ಲಿ ಕಕ್ಕಡ ಖಾದ್ಯ ‘ಮದ್ದ್ ಪುಟ್ಟ್’ ಲಭ್ಯವಿಲ್ಲ, ಆದರೆ ಅದರ ಸವಿಯನ್ನು ಕೊಡಗಿನಲ್ಲಿ ಬಂದು ಸವಿದಿದ್ದೇನೆ. ಇದರ ಬಗ್ಗೆ ಹೆಮ್ಮೆ ಇದೆ ಎಂದು ಅವರು ಹೇಳಿದರು.
ಮತ್ತೋರ್ವ ಮುಖ್ಯ ಅತಿಥಿ ಕುಟ್ಟದಲ್ಲಿ ಕಳೆದ 40 ವರ್ಷಗಳಿಂದ ಸುದೀರ್ಘವಾಗಿ ಸ್ಥಳೀಯ ಜನರಿಗೆ ವೈದ್ಯಾಕೀಯ ಸೇವೆ ಸಲ್ಲಿಸುತ್ತಿರುವ ಡಾ. ಮುಕ್ಕಾಟೀರ ಜಿಮ್ಮಿ ಮೇದಪ್ಪ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿಸಲಾಯಿತು.ಕುಟ್ಟ ಕೊಡವ ಸಮಾಜ ಹಾಗೂ ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಮಾತನಾಡಿ, ಕಕ್ಕಡ ನಮ್ಮೆಯನ್ನು ಕಳೆದ 13 ವರ್ಷಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಈ ಹಿಂದೆ ಅವಿಭಕ್ತ ಕುಟುಂಬ ಜನಾಂಗದಲ್ಲಿ ಇತ್ತು. ಆಗ ಕುಟುಂಬದವರು ಸೇರಿ ಹಬ್ಬ ಆಚರಿಸುತ್ತಿದ್ದರು. ಆದರೆ ಇದೀಗ ಮನೆಗಳಲ್ಲಿ ಕೆಲವೇ ಜನರು ಇರುವುದರಿಂದ ಸಾರ್ವತ್ರಿಕವಾಗಿ ಆಚರಿಸುವುದು ಹೆಚ್ಚು ಮಹತ್ವ ಪಡೆದಿದೆ. ಈ ಮೂಲಕ ಜನಾಂಗದವರು ಒಂದೆಡೆ ಸೇರಿ ಕಕ್ಕಡ ನಮ್ಮೆಯ ಮಹತ್ವ ಅರಿಯಲು ಹಾಗೂ ಮುಂದಿನ ಪೀಳಿಗೆಯ ಮಕ್ಕಳಿಗೂ ಸಹ ಅದರ ಬಗ್ಗೆ ಅರಿವು ಮೂಡಲು ಪ್ರಯೋಜನವಾಗಲಿದೆ. ಕಕ್ಕಡ ನಮ್ಮೆಯನ್ನು ಮುಂದಿನ ಪೀಳಿಗೆಗಳು ಸಹ ಅನುಸರಿಸಿಕೊಂಡು ಆಚರಣೆ ಮಾಡಿಕೊಂಡು ಹೋಗುವಂತೆ ಕರೆ ನೀಡಿದರು.
2000ರಲ್ಲಿ ಕುಟ್ಟ ಕೊಡವ ಸಮಾಜ ಸ್ಥಾಪನೆಯಾಯಿತು. ಇದೀಗ ಬೆಳ್ಳಿ ಹಬ್ಬದ ವರ್ಷದಲ್ಲಿದ್ದೇವೆ. ಕುಟ್ಟ ಕೊಡವ ಸಮಾಜ ಆರಂಭಿಸಿದ ಕಕ್ಕಡ ನಮ್ಮೆ ಇಂದು ಎಲ್ಲ ಕಡೆ ಆಚರಿಸಲ್ಪಡುತ್ತಿದೆ. ಪ್ರತಿವರ್ಷ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಕಾರ್ಯಕ್ರಮದ ಅತಿಥಿಗಳಾಗಿ ಆಹ್ವಾನಿಸಲಾಗುತ್ತಿದೆ ಎಂದು ತಿಳಿಸಿದರು.ಕಳೆದ ಹತ್ತು ವರ್ಷಗಳಿಂದ ಸ್ಥಳೀಯ ಜನರಿಗೆ ಒಂದೆಡೆ ಸೇರಲು ಹಾಗೂ ಅವರ ಪ್ರತಿಭೆ ಅನಾವರಣಕ್ಕೆ ಕಕ್ಕಡ ನಮ್ಮೆ ಮೂಲಕ ಅವಕಾಶ ಕಲ್ಪಿಸಲಾಗಿದೆ. ಸ್ಥಳೀಯರು ಹೊಂದಿರುವ ವ್ಯಾಪಾರ, ಕರಕುಶಲ ಕಲೆ, ಆಹಾರ ತಯಾರಿಕೆ ಇತ್ಯಾದಿಗಳಿಗೆ ಪರಿಚಯಿಸುವ, ಪ್ರದರ್ಶಿಸುವ, ಪ್ರೋತ್ಸಾಹಿಸುವ ವೇದಿಕೆಯಾಗಿ ಕಕ್ಕಡ ನಮ್ಮೆಯನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಕೊಡವ ಸಮಾಜದ ಉಪಾಧ್ಯಕ್ಷ ಹೊಟ್ಟೇಂಗಡ ರಮೇಶ್, ಕಾರ್ಯದರ್ಶಿ ಕೊಂಗಾಂಡ ಸುರೇಶ್ ದೇವಯ್ಯ, ಉಪ ಕಾರ್ಯದರ್ಶಿ ತೀತಿರ ಮಂದಣ್ಣ, ಖಜಾಂಚಿ ಮಚ್ಚಮಾಡ ಸುಬ್ರಮಣಿ, ನಿರ್ದೇಶಕರಾದ ಕೇಚಮಾಡ ವಾಸು ಉತ್ತಪ್ಪ, ಕೋದಂಡ ಲೀಲಾ ಕಾರ್ಯಪ್ಪ, ತೀತಿರ ಕಬೀರ್ ತಿಮ್ಮಯ್ಯ, ಚೆಪ್ಪುಡೀರ ಪಾರ್ಥ, ಜಾಗದಾನಿಗಳಾದ ಮುಕ್ಕಾಟಿರ ರಾಜ ಮಂದಣ್ಣ, ಚೆಕ್ಕೆರ ರಾಬಿನ್ ಕಾರ್ಯಪ್ಪ ಹಾಗೂ ಸಾಂಸ್ಕೃತಿಕ ಮತ್ತು ಮಹಿಳಾ ಸಂಘದ ಪದಾಧಿಕಾರಿಗಳಾದ ಕಳ್ಳಿಚಂಡ ಶಾಲಿನಿ ಕಾರ್ಯಪ್ಪ, ತೀತಿರ ಮೇಘನಾ ತಿಮ್ಮಯ್ಯ, ಮಚ್ಚಮಾಡ ನವ್ಯ ಪ್ರಕಾಶ್, ಕಳ್ಳಂಗಡ ಗ್ರೀಷ್ಮ ಅಪ್ಪಣ್ಣ, ಚೆಕ್ಕೆರ ದೇಚು ರಾಬಿನ್, ಕೋಳೆರ ಪ್ರಿಯಾ ಮನೋಜ್ ಮತ್ತಿತರರು ಹಾಜರಿದ್ದರು.ತೀತಿರ ಪುಸಿ ಅಪ್ಪಣ್ಣ ಪ್ರಾರ್ಥಿಸಿ, ಅತಿಥಿಗಳ ಪರಿಚಯವನ್ನು ಚೆಕ್ಕೇರ ರಾಬಿನ್, ಚೆಕ್ಕೇರ ಆಯನಾ ಕಾರ್ಯಪ್ಪ, ಮಚ್ಚಮಾಡ ಸುಬ್ರಮಣಿ ಸ್ವಾಗತಿಸಿ ವಂದಿಸಿದರು.
ಸ್ಥಳೀಯರು ತೊಡಗಿಸಿಕೊಂಡಿರುವ ವ್ಯಾಪಾರ ಉದ್ದಿಮೆ, ಆಹಾರ ತಯಾರಿಕೆ ಆಟೋಮೊಬೈಲ್ ಕ್ಷೇತ್ರದ ಪರಿಚಯ ಹಾಗೂ ಪ್ರದರ್ಶನ, ಮಾರಾಟ ವ್ಯವಸ್ಥೆಯನ್ನು ಮಾಡಲಾಗಿತ್ತು.ಹೂವಿನ ಗಿಡಗಳು ಕರಕುಶಲ ವಸ್ತುಗಳು ಫ್ಯಾಷನ್ ಡಿಸೈನ್, ಪೇಂಟಿಂಗ್, ಆಹಾರ ತಯಾರಿಕಾ ವಿಭಾಗದಲ್ಲಿ ಚಟ್ನಿ, ಉಪ್ಪಿನಕಾಯಿ ವೈವಿಧ್ಯಮಯ ತಿನಿಸುಗಳು ಪ್ರದರ್ಶನ ಹಾಗೂ ಮಾರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಂಡು, ಮಹಿಳೆಯರ ಕಲರವ ಕಕ್ಕಡ ನಮಗೆ ಹಬ್ಬದ ವಾತಾವರಣ ಮೂಡಿಸಿತ್ತು. ಜಿಲ್ಲೆಯ ವಿವಿಧ ಭಾಗಗಳಿಂದ ಕಾರ್ಯಕ್ರಮಕ್ಕೆ ಮಹಿಳೆಯರು ಮಕ್ಕಳು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು.