ಗಿರೀಶ್ ಮಾದೇನಹಳ್ಳಿ
ಬೆಂಗಳೂರು : ಚಿನ್ನಸ್ವಾಮಿ ಕ್ರೀಡಾಂಗಣ ಕಾಲ್ತುಳಿತ ದುರಂತ ಸಂಬಂಧ ಅಮಾನತುಗೊಂಡಿರುವ ಎಡಿಜಿಪಿ ಬಿ.ದಯಾನಂದ್ ಸೇರಿ ಐವರು ಪೊಲೀಸರ ಮೇಲೆ ಇದೀಗ ಇಲಾಖಾ ವಿಚಾರಣೆ (ಡಿಇ) ತೂಗುಗತ್ತಿ ನೇತಾಡುತ್ತಿದ್ದು, ಇದು ಅವರ ಮುಂಬಡ್ತಿಗೂ ಕುತ್ತಾಗಿ ಪರಿಣಮಿಸಿದೆ.
ಅಮಾನತು ರದ್ದುಪಡಿಸಿದ್ದ ಕೇಂದ್ರ ಆಡಳಿತಾತ್ಮಕ ನ್ಯಾಯಾಧಿಕರಣದ ಆದೇಶ ಹಿನ್ನೆಲೆಯಲ್ಲಿ ನಿರಾಳರಾಗಿದ್ದ ಪೊಲೀಸ್ ಅಧಿಕಾರಿಗಳಿಗೆ ನಿವೃತ್ತ ನ್ಯಾ.ಮೈಕಲ್.ಡಿ.ಕುನ್ಹಾ ಸಾರಥ್ಯದ ನ್ಯಾಯಾಂಗ ತನಿಖೆ, ಅಪರಾಧ ತನಿಖಾ ಇಲಾಖೆ (ಸಿಐಡಿ)ಯ ತನಿಖೆ ಹಾಗೂ ಜಿಲ್ಲಾಧಿಕಾರಿ ಜಗದೀಶ್ ನೇತೃತ್ವದ ಮ್ಯಾಜಿಸ್ಟ್ರೀಯಲ್ ತನಿಖೆ ಬಳಿಕ ಇಲಾಖಾ ವಿಚಾರಣೆ ಸಂಕಷ್ಟ ಎದುರಾಗಿದೆ. ಕೆಲವೇ ದಿನಗಳಲ್ಲಿ ಈ ಬಗ್ಗೆ ಸರ್ಕಾರ ತೀರ್ಮಾನ ಕೈಗೊಳ್ಳುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.
ಈ ಸಂಬಂಧ ಜಿಲ್ಲಾಧಿಕಾರಿ ಅವರಿಂದ ಮ್ಯಾಜಿಸ್ಟ್ರೀಯಲ್ ತನಿಖಾ ವರದಿ ಅಥವಾ ನ್ಯಾಯಾಂಗ ತನಿಖೆಯ ಮಧ್ಯಂತರ ವರದಿ ಪಡೆದು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಇಲಾಖಾ ವಿಚಾರಣೆಗೆ ಸರ್ಕಾರ ಆದೇಶಿಸುವ ಸಾಧ್ಯತೆಗಳಿವೆ. ಡಿಇ ಆರಂಭವಾದರೆ ಇದೇ ತಿಂಗಳಾಂತ್ಯಕ್ಕೆ ಡಿಜಿಪಿ ಹುದ್ದೆಗೆ ಸೇವಾ ಹಿರಿತನದ ಆಧಾರದ ಮೇರೆಗೆ ಮುಂಬಡ್ತಿ ಪಡೆಯಲಿದ್ದ ಎಡಿಜಿಪಿ ಬಿ.ದಯಾನಂದ್ ಅವರಿಗೆ ಅಡ್ಡಿಯಾಗಲಿದೆ ಎಂದು ಮೂಲಗಳು ‘ಕನ್ನಡಪ್ರಭ’ಕ್ಕೆ ಹೇಳಿವೆ.
ಏಕೆ ಇಲಾಖಾ ಮಟ್ಟದ ವಿಚಾರಣೆ?:
ಕರ್ತವ್ಯಲೋಪದ ಆಧಾರದ ಮೇರೆಗೆ ಅಧಿಕಾರಿಗಳು ಅಮಾನತುಗೊಂಡ ಬಳಿಕ ಆ ಆರೋಪ ಸಂಬಂಧ ಇಲಾಖಾ ವಿಚಾರಣೆ ನಡೆಯಲಿದೆ. ಆ ವಿಚಾರಣೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ವಿಚಾರಣೆಗೊಳಪಡಿಸಿ ಕರ್ತವ್ಯ ಲೋಪದ ಬಗ್ಗೆ ವರದಿ ಸಲ್ಲಿಕೆಯಾಗಲಿದೆ. ಈ ವರದಿ ಆಧರಿಸಿ ಸರ್ಕಾರ ಅಥವಾ ಇಲಾಖೆ ಅಂತಿಮ ತೀರ್ಮಾನ ಮಾಡಲಿದೆ.
ಹಿಂದೆ ಪೊಲೀಸ್ ಇಲಾಖೆ ಇಲಾಖಾ ವಿಚಾರಣೆಯನ್ನು ಹಿರಿಯ ಅಧಿಕಾರಿಗಳೇ ನಡೆಸುತ್ತಿದ್ದರು. ಆದರೆ ಹಿಂದಿನ ಡಿಜಿ-ಐಜಿಪಿ ಅಲೋಕ್ ಮೋಹನ್ ಅವರು, ಇಲಾಖಾ ವಿಚಾರಣೆ ಪಾರದರ್ಶಕತೆಗಾಗಿ ನಿವೃತ್ತ ನ್ಯಾಯಾಧೀಶರಿಗೆ ಇಲಾಖಾ ವಿಚಾರಣೆ ವಹಿಸುವ ವ್ಯವಸ್ಥೆ ಜಾರಿಗೊಳಿಸಿದ್ದರು. ಈಗಾಗಲೇ ಚಿನ್ನಸ್ವಾಮಿ ಕ್ರೀಡಾಂಗಣ ದುರಂತ ಘಟನೆಯಲ್ಲಿ ಐದು ಅಧಿಕಾರಿಗಳನ್ನು ಅಮಾನತು ಮಾಡಿದೆ. ಇದೀಗ ಭದ್ರತಾ ಲೋಪದ ಕುರಿತು ಇಲಾಖಾ ವಿಚಾರಣೆಗೆ ಸರ್ಕಾರ ಆದೇಶಿಸಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದರಿಂದ ಅಂದಿನ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್, ಹೆಚ್ಚುವರಿ ಪೊಲೀಸ್ ಆಯುಕ್ತ (ಪಶ್ಚಿಮ) ವಿಕಾಸ್ ಕುಮಾರ್ ವಿಕಾಸ್, ಕೇಂದ್ರ ವಿಭಾಗದ ಡಿಸಿಪಿ ಶೇಖರ್.ಎಚ್.ಟೆಕ್ಕಣ್ಣನವರ್, ಕಬ್ಬನ್ ಪಾರ್ಕ್ ಉಪ ವಿಭಾಗದ ಎಸಿಪಿ ಬಾಲಕೃಷ್ಣ ಹಾಗೂ ಕಬ್ಬನ್ ಪಾರ್ಕ್ ಇನ್ಸ್‌ಪೆಕ್ಟರ್ ಗಿರೀಶ್ ಅವರಿಗೆ ಹೊಸ ಸಂಕಷ್ಟ ಶುರುವಾಗಿದೆ.
ನಾಲ್ವರಲ್ಲಿ ಯಾರಿಗೆ ಮುಂಬಡ್ತಿ ಅದೃಷ್ಟ?
ರಾಜ್ಯದಲ್ಲಿ ಡಿಜಿ-ಐಜಿಪಿ, ಅಗ್ನಿಶಾಮಕ ದಳ ಮತ್ತು ಸಿಐಡಿ ಕೇಡರ್ ಡಿಜಿಪಿ ಹುದ್ದೆಗಳಿದ್ದು, ಅವುಗಳಿಗೆ ಪರ್ಯಾಯವಾಗಿ ಮೂರು ಡಿಜಿಪಿ ಹುದ್ದೆಗಳ ಸೃಜಿಸಲಾಗಿದೆ. ಅಂದರೆ ರಾಜ್ಯದಲ್ಲಿ ಒಟ್ಟು ಆರು ಡಿಜಿಪಿ ಹುದ್ದೆಗಳಿವೆ.
ಒಂದೂವರೆ ತಿಂಗಳ ಹಿಂದೆ ಅಲೋಕ್ ಮೋಹನ್ ಅವರು ನಿವೃತ್ತಿ ಬಳಿಕ ಒಂದು ಹುದ್ದೆ ಖಾಲಿ ಇದ್ದು, ಇದೇ ತಿಂಗಳಾಂತ್ಯಕ್ಕೆ ಕಾರಾಗೃಹ ಮತ್ತು ಸುಧಾರಣಾ ಇಲಾಖೆಯ ಡಿಜಿಪಿ ಮಾಲಿನಿ ಕೃಷ್ಣಮೂರ್ತಿ ಅವರು ನಿವೃತ್ತರಾಗಲಿದ್ದಾರೆ. ಹೀಗಾಗಿ ಎರಡು ಡಿಜಿಪಿ ಹುದ್ದೆಗಳು ಖಾಲಿಯಾಗಲಿವೆ.
ಈ ಹುದ್ದೆಗಳಿಗೆ ಸೇವಾ ಹಿರಿತನ ಆಧಾರದ ಮೇರೆಗೆ ತರಬೇತಿ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಹಾಗೂ ಎಡಿಜಿಪಿ ಬಿ.ದಯಾನಂದ್ ಮುಂಬಡ್ತಿ ಪಡೆಯಬೇಕಿತ್ತು. ಆದರೆ ಈ ಇಬ್ಬರು ಅಧಿಕಾರಿಗಳು ಇದೀಗ ಇಲಾಖಾ ವಿಚಾರಣಾ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಇವರಿಬ್ಬರ ಸೇವಾ ಹಿರಿತನದಲ್ಲಿ ಕೆಎಸ್‌ಆರ್‌ಪಿ ಎಡಿಜಿಪಿ ಉಮೇಶ್ ಕುಮಾರ್ ಹಾಗೂ ಅಮೃತ್ ಪಾಲ್ ಇದ್ದಾರೆ. ಆದರೆ ಪಿಎಸ್‌ಐ ಹಗರಣದಲ್ಲಿ ಬಂಧಿತ ಅಮೃತ್ ಪಾಲ್ ವಿರುದ್ಧ ಸಹ ಇಲಾಖಾ ವಿಚಾರಣೆ ಬಾಕಿ ಇದ್ದು, ಅವರ ನಂತರ ಸೇವಾ ಜೇಷ್ಠತೆಯಲ್ಲಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಎಡಿಜಿಪಿ ಅರುಣ್ ಚಕ್ರವರ್ತಿ ಇದ್ದಾರೆ. ಹೀಗಾಗಿ ಡಿಜಿಪಿ ಹುದ್ದೆಗೆ ಉಮೇಶ್ ಕುಮಾರ್ ಹಾಗೂ ಅರುಣ್ ಚಕ್ರವರ್ತಿ ಪದೋನ್ನತಿ ಪಡೆಯಬಹುದು.
ವಿಕಾಸ್ ನಡೆ ತಂದ ಸಂಕಟ:
ಅಮಾನತು ರದ್ದು ಆದೇಶ ಹೊರಬಿದ್ದ ಕೆಲವೇ ತಾಸುಗಳಲ್ಲಿ ಮತ್ತೆ ಬೆಂಗಳೂರಿನ ಹೆಚ್ಚುವರಿ ಆಯುಕ್ತರಾಗಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಐಜಿಪಿ ವಿಕಾಸ್ ಕುಮಾರ್ ವಿಕಾಸ್ ಮುಂದಾಗಿದ್ದು, ಸರ್ಕಾರದ ಅವಕೃಪೆಗೆ ತುತ್ತಾಗಿದ್ದಾರೆ. ಹೀಗಾಗಿಯೇ ಇಲಾಖಾ ವಿಚಾರಣೆಗೆ ಕೈಗೊಳ್ಳಲು ಚಾರ್ಜ್ ಮೆಮೋ ನೀಡಲು ಸರ್ಕಾರ ಮುಂದಾಗಿದೆ ಎಂದು ತಿಳಿದು ಬಂದಿದೆ.
ಜಂಟಿ ಡಿಇ ತಲೆನೋವು?
ಅಮಾನತಾಗಿರುವ ಐಪಿಎಸ್ ಅಧಿಕಾರಿಗಳು ಸೇರಿ ಐವರ ವಿರುದ್ಧ ಜಂಟಿ ಇಲಾಖಾ ವಿಚಾರಣೆ ನಡೆಯಲಿದೆ. ಒಬ್ಬರ ವಿರುದ್ಧ ವಿಚಾರಣೆ ನಡೆದರೆ ಅದನ್ನು ತ್ವರಿತವಾಗಿ ಪರಿಹರಿಸಿಕೊಳ್ಳಬಹುದು. ಆದರೆ ಜಂಟಿ ವಿಚಾರಣೆಯಲ್ಲಿ ಐವರು ಒಂದೇ ನಿಲುವು ತಾಳಬೇಕು. ಅದಕ್ಕೆ ಪೂರಕವಾದ ಪುರಾವೆ ಒದಗಿಸಬೇಕಾಗುತ್ತದೆ. ಅಲ್ಲದೆ ಪ್ರಕ್ರಿಯೆ ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಡಿಇ ಮುಗಿಯದೆ ಮುಂಬಡ್ತಿ ಸಾಧ್ಯವಾಗುವುದಿಲ್ಲ. ಅಮಾನತು ಆರು ತಿಂಗಳೊಳಗೆ ಹಿಂಪಡೆಯಬಹುದು. ಆದರೆ ಡಿಇ ಕಾಲಮಿತಿಯೊಳಗೆ ಇತ್ಯರ್ಥವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಎರಡೂವರೆ ವರ್ಷಗಳ ಸೇವಾವಧಿ ಹೊಂದಿರುವ ಎಡಿಜಿಪಿ ದಯಾನಂದ್ ಅವರಿಗೆ ಡಿಜಿಪಿ ಮುಂಬಡ್ತಿಗೆ ತೊಂದರೆಯಾಗಲಿದೆ ಎನ್ನಲಾಗಿದೆ.