ಆಹಾರ ಉತ್ಪನ್ನಗಳಿಗೆ ರಾಸಾಯನಿಕ ಬಳಕೆಗೆ ಕಡಿವಾಣ ಹಾಕಿ: ಸಚಿವ ತಿಮ್ಮಾಪುರ

KannadaprabhaNewsNetwork | Published : Jun 25, 2024 12:35 AM

ಸಾರಾಂಶ

ಆಹಾರ ಉತ್ಪನ್ನಗಳಿಗೆ ರಾಸಾಯನಿಕ ಸಿಂಪರಣೆ ಮಾಡುವ ಪದ್ಧತಿಗೆ ಕಡಿವಾಣ ಹಾಕುವ ಕೆಲಸವಾಗಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಆಹಾರ ಉತ್ಪನ್ನಗಳಿಗೆ ರಾಸಾಯನಿಕ ಸಿಂಪರಣೆ ಮಾಡುವ ಪದ್ಧತಿಗೆ ಕಡಿವಾಣ ಹಾಕುವ ಕೆಲಸವಾಗಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಸೂಚಿಸಿದರು.

ಜಿಪಂ ನೂತನ ಸಭಾಭವನದಲ್ಲಿ ಸೋಮವಾರ ಜರುಗಿದ ಜಿಲ್ಲಾ ಪಂಚಾಯತಿ ತ್ರೈಮಾಸಿಕ ಕೆ.ಡಿ.ಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಇತ್ತೀಚಿಗೆ ತರಕಾರಿ, ಹಣ್ಣು ಹಂಪಲ ತಿನ್ನುವ ಸ್ಥಿತಿ ಇಲ್ಲ. ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ರಾಸಾಯನಿಕ ಸಿಂಪರಣೆ ಮಾಡಲಾಗುತ್ತಿದ್ದಾರೆ. ಇದು ನಿಲ್ಲಬೇಕು, ಸಂಬಂಧಿಸಿದ ಇಲಾಖೆಯವರು ಈ ಬಗ್ಗೆ ಗಮನಹರಿಸಿ ಈ ಪದ್ಧತಿಗೆ ಕಡಿವಾಣ ಹಾಕುವುದರ ಜೊತೆಗೆ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು ತಿಳಿಸಿದರು.

ರಾಂಪುರದಲ್ಲಿ ಹೆಸರು ಬೀಜ ಸಿಗುತ್ತಿಲ್ಲ ಎಂದು ಶಾಸಕ ಎಚ್.ವೈ. ಮೇಟಿ ಆಪಾದಿಸಿದಾಗ ಇದಕ್ಕೆ ಪ್ರತಿಕ್ರಿಯಿಸಿದ ಜಂಟಿ ಕೃಷಿ ನಿರ್ದೇಶಕ ಲಕ್ಷ್ಮಣ ಕಳ್ಳೇನ್ನವರ ಬೀಜದ ಕೊರತೆ ಇಲ್ಲವೆಂದು ಸಮಜಾಯಿಸಿ ನೀಡಿದರು. ಬೀಜ ಮತ್ತು ಗೊಬ್ಬರ ಅಕ್ರಮ ಮಾರಾಟದ ಮೇಲೆ ನಿಗಾವಹಿಸಲು ಸಚಿವರು ಸಲಹೆ ನೀಡಿದರು. ಕಟಗೇರಿಯಲ್ಲಿ 10 ಹೊಂಡಗಳ ನಿರ್ಮಾಣಕ್ಕೆ ಶಿಫಾರಸ್ಸು ಮಾಡಲಾಗಿತ್ತು. ಆದರೆ, ಆ ಕೆಲಸವಾಗಿಲ್ಲ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಕೃಷಿ ಅಧಿಕಾರಿಗಳಿಗೆ ಸೂಚಿಸಿದರು.

ಚೆಕ್‌ ಡ್ಯಾಂ ನಿರ್ಮಾಣ ಬಗ್ಗೆ ತನಿಖೆ ನಡೆಸಲು ಅಧಿಕಾರಿಗಳಿಗೆ ಬೀಳಗಿ ಶಾಸಕ ಜೆ.ಟಿ. ಪಾಟೀಲ ಸಲಹೆ ನೀಡಿದರೆ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕಾಗಿ ಮೇಲಧಿಕಾರಿಗಳಿಗೆ ಪತ್ರ ಬರೆಯುವಂತೆ ಸಚಿವ ತಿಮ್ಮಾಪುರ ಸೂಚಿಸಿದರು. ಅಧಿಕಾರಿಗಳು ರೈತರ ಹೊಲಗಳಿಗೆ ಭೇಟಿ ನೀಡುವುದೇ ಇಲ್ಲ. ಕೃಷಿ ಸಾಮಗ್ರಿ ಹಂಚಿಕೆಯಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದು ಶಾಸಕರಾದ ಜೆ.ಟಿ. ಪಾಟೀಲ, ಭೀಮಸೇನ ಚಿಮ್ಮನಕಟ್ಟಿ ಸಭೆಯ ಗಮನಕ್ಕೆ ತಂದಾಗ ಮೇಲಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುವಂತೆ ಸಚಿವರು ತಿಳಿಸಿದರು.

ಶಾಲಾ ಕೊಠಡಿ ದುರಸ್ತಿಗೆ ಪ್ರತಿ ಕ್ಷೇತ್ರಕ್ಕೆ ಬಂದಿರುವ ಅನುದಾನವೆಷ್ಟು, ದುರಸ್ತಿಗೆ ಕ್ರಮ ಕೈಗೊಂಡಿದ್ದಿರಾ, ಕ್ರಿಯಾಯೋಜನೆ ರೂಪಿಸಲಾಗಿದೆಯೇ ಎಂಬ ಎಂದು ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಕೆ. ನಂದನೂರ ಅವರಿಗೆ ಕೇಳಿದರಲ್ಲದೆ, ತಮ್ಮ ಅನುದಾಡಿ ₹ 4.83 ಕೋಟಿ ಬಿಡುಗಡೆ ಮಾಡಲಾಗಿದೆ. ಈ ಅನುದಾನ ಸಮರ್ಪಕ ಬಳಕೆಗೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ಗಣಿ ಅನುದಾನದಲ್ಲಿ ಹಣ ಇದ್ದರೂ ಶಾಲಾ ಕೊಠಡಿಗಳ ದುರಸ್ತಿ ಆರಂಭಗೊಂಡಿಲ್ಲವೆಂದು ಶಾಸಕ ಎಚ್.ವೈ. ಮೇಟಿ ಆರೋಪಿಸಿದ ಹಿನ್ನೆಲೆಯಲ್ಲಿ ಸರಿಯಾಗಿ ಕೆಲಸ ನಿರ್ವಹಿಸದ ಗಣಿ ಇಲಾಖೆಯ ಅಧಿಕಾರಿ ಮುತ್ತಪ್ಪ ವಿರುದ್ಧ ಕ್ರಮಕ್ಕಾಗಿ ಸರ್ಕಾರಕ್ಕೆ ಪತ್ರ ಬರೆಯಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ಪಶು ಇಲಾಖೆ ಅಧಿಕಾರಿಗಳು ಹವಾಮಾನಕ್ಕೆ ತಕ್ಕಂತೆ ಬರುವಂತ ರೋಗಗಳಿಗೆ ಸೂಕ್ತ ಚಿಕಿತ್ಸೆ ನೀಡಬೇಕು. ಔಷಧಿ ವಿತರಿಸಲು ಕ್ರಮವಹಿಸಬೇಕು. ಪಶು ಚಿಕಿತ್ಸಾ ಕೇಂದ್ರಗಳಿಗೆ ಮೇಲಧಿಕಾರಿಗಳು ಭೇಟಿ ನೀಡಿ ಜಿಲ್ಲೆಯಲ್ಲಿರುವ ಪಶುಗಳ ಅಂಕಿ ಅಂಶ ಕಲೆ ಹಾಕಲು ಸಚಿವರು ತಿಳಿಸಿದರು.

ಸಭೆಯಲ್ಲಿ ಶಾಸಕರಾದ ವಿಜಯಾನಂದ ಕಾಶಪ್ಪನವರ, ಸಿದ್ದು ಸವದಿ, ಜಗದೀಶ ಗುಡಗುಂಟಿ, ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ, ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಜಿ.ಪಂ ಸಿಇಒ ಶಶಿಧರ ಕುರೇರ, ಎಸ್ಪಿ ಅಮರನಾಥ ರೆಡ್ಡಿ, ಯುಕೆಪಿ ಮಹಾ ವ್ಯವಸ್ಥಾಪಕ ರಮೇಶ ಕಳಸದ, ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಜಿಪಂ ಉಪ ಕಾರ್ಯದರ್ಶಿ ಅಮರೇಶ ನಾಯಕ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಶೇ.40ರಷ್ಟು ಸಸಿ ಬೆಳೆಸಿದ್ದರೆ ಅಧಿಕಾರಿಗಳಿಗೆ ಬಹುಮಾನ

ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿ ಸಿ.ಜಿ. ಮಿರ್ಜಿ ಜಿಲ್ಲೆಯಲ್ಲಿರುವ 556 ಹೆಕ್ಟೇರ್‌ ಅರಣ್ಯ ಭೂಮಿಯಲ್ಲಿ 3.98 ಲಕ್ಷ ಸಸಿಗಳನ್ನು ನೆಡುವ ಗುರಿ ಹೊಂದಲಾಗಿದ್ದು, ಇದರಲ್ಲಿ ಶೇ.90ರಷ್ಟು ಸಸಿಗಳು ಬೆಳೆದಿರುವುದಾಗಿ ಅರಣ್ಯ ಇಲಾಖೆ ಅಧಿಕಾರಿ ಸಭೆಗೆ ತಿಳಿಸಿದಾಗ, ಶೇ.40ರಷ್ಟು ಸಹ ಸಸಿಗಳು ಬೆಳೆದಿಲ್ಲ. ಬೆಳೆದಿದ್ದರೆ ಸೂಕ್ತ ಬಹುಮಾನ ನೀಡುವುದಾಗಿ ಜೆ.ಟಿ. ಪಾಟೀಲ ಹೇಳಿದರು. ಅರಣ್ಯ ಅಧಿಕಾರಿಗಳು ಜನಪ್ರತಿನಿಧಿಗಳ ಫೋನ್ ಸಹ ತೆಗೆಯುತ್ತಿಲ್ಲ. ಅಧಿಕಾರಿಗಳು ತಮ್ಮ ವರ್ತನೆ ಬದಲಿಸಿಕೊಳ್ಳದಿದ್ದರೆ ಶಿಸ್ತುಕ್ರಮ ಕೈಗೊಳ್ಳಲಾಗುವುದೆಂದು ಸಚಿವರು ತಿಳಿಸಿದರು.

Share this article