ಹಾವೇರಿ: ಜಿಲ್ಲೆಯ ಖಾಸಗಿ ಹಣಕಾಸು ಸಂಸ್ಥೆಗಳು ಬಲವಂತದ ಸಾಲದ ವಸೂಲಾತಿಗೆ ಮುಂದಾಗಿದ್ದು, ಕಡಿವಾಣ ಹಾಕುವಂತೆ ಜೆಡಿಎಸ್ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲೆಯ ಮತ್ತು ಪಕ್ಕದ ಜಿಲ್ಲೆಗಳಿಂದ ಖಾಸಗಿ ಹಣಕಾಸು ಸಂಸ್ಥೆಗಳು ಲೇವಾದೇವಿ ಮಾಡುವ ನೋಂದಾಯಿತ ಖಾಸಗಿ ಹಣಕಾಸು ಸಂಸ್ಥೆಗಳಿಂದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಾಗೂ ಕೃಷಿಗಾಗಿ ಸಾಲ ಮಾಡಿಕೊಂಡ ಗ್ರಾಮೀಣ ಹಾಗೂ ಶಹರ ಪ್ರದೇಶದಲ್ಲಿ ಬಡವರಿಗೆ, ರೈತರಿಗೆ, ಮಹಿಳಾ ಸ್ತ್ರೀಶಕ್ತಿ ಸಂಘಗಳಿಗೆ ಕಡಿಮೆ ಬಡ್ಡಿದರದ ಆಸೆ ಆಮಿಷಗಳನ್ನು ತೋರಿಸಿ ಅವರಿಂದ ಛಾಪಾಕಾಗದದಲ್ಲಿ ತಮಗೆ ಅನುಕೂಲವಾಗುವ ಶರತ್ತು ಬರೆಸಿಕೊಂಡು ಸಾಲ ನೀಡುತ್ತಾರೆ. ಸಾಲ ನೀಡಿದ ತಕ್ಷಣ ಪ್ರತಿವಾರ ಮತ್ತು ತಿಂಗಳಿಗೊಮ್ಮೆ ಸಾಲ ಪಡೆದವರ ಮನೆಗೆ ಹೋಗಿ ಅಸಲು ಮತ್ತು ಬಡ್ಡಿಯನ್ನು ತುಂಬಲು ಮುಗ್ಧ ಜನರಿಗೆ ತೊಂದರೆ ಕೊಡುತ್ತಿದ್ದಾರೆ. ಜಿಲ್ಲೆಯಲ್ಲಿ ಭೀಕರ ಬರಗಾಲ ಆವರಿಸಿದ್ದರಿಂದ ಬೆಳೆಯಿಲ್ಲದೇ ರೈತರು ಕಂಗಾಲಾಗಿದ್ದಾರೆ. ಕುಟುಂಬ ಸಮೇತ ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ನಾನಾ ಖಾಸಗಿ ಫೈನಾನ್ಸ್ ಕಂಪನಿಗಳು ಬಲವಂತವಾಗಿ ಖಾಸಗಿ ರಿಕವರಿ ಎಜೆಂಟರ್ ಮೂಲಕ ವಸೂಲಾತಿ ಮಾಡಲು ಮುಂದಾಗಿವೆ.ಸಾಲ ಪಡೆದ ಸಾಲಗಾರರ ಮನೆಗೆ ರಾತ್ರಿ ವೇಳೆ ಬಂದು ಮನ ಬಂದ ರೀತಿಯಲ್ಲಿ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದಾರೆ. ರಿಕವರಿ ನೋಟಿಸ್ ನೀಡದೇ ವಸೂಲಾತಿಗೆ ಬರುತ್ತಿದ್ದಾರೆ. ಇದರಿಂದ ಅವರ ಮನೆಯಲ್ಲಿ ಅಶಾಂತಿ ಮೂಡಿ, ಮಾನಸಿಕ ಹಿಂಸೆಗೆ ಒಳಗಾಗಿ, ಖಾಸಗಿ ಹಣಕಾಸು ಸಂಸ್ಥೆಗಳು ವಸೂಲಾತಿ ಮಾಡುತ್ತಿರುವ ಗುಂಡಾ ಪ್ರವೃತ್ತಿಯಿಂದ ಬೇಸತ್ತು ಮುಗ್ಧರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವ ಕಾಲ ಎದುರಾಗಬಹುದು. ಈ ಎಲ್ಲ ಅಹಿತಕರ ಘಟನೆಗೆ ಕಾರಣವಾಗುತ್ತಿರುವ ಖಾಸಗಿ ಹಣಕಾಸು ಲೇವಾದೇವಿ ಮಾಡುವ ಸಂಸ್ಥೆಗಳ ಯಾದಿಯನ್ನು ಪಡೆದುಕೊಂಡು ಅವರಿಗೆ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಲು ಮತ್ತು ಗ್ರಾಹಕರ ಜತೆಗೆ ಅನುಚಿತ ವರ್ತನೆ ತೋರದಂತೆ ನೋಡಿಕೊಳ್ಳಬೇಕು. ಗ್ರಾಹಕರಿಗೆ ನಿಂದಿಸುವುದು, ಕಿರುಕುಳ ಕೊಡುವುದನ್ನು ಈ ಕೂಡಲೇ ನಿಲ್ಲಿಸಬೇಕು ಮತ್ತು ಭೀಕರ ಬರಗಾಲದ ಪರಿಸ್ಥಿತಿ ಇರುವುದರಿಂದ ಸಾಲ ಮರುಪಾವತಿಯನ್ನು ಮಾಡಲು ಸಮಯಾವಕಾಶವನ್ನು ನೀಡಬೇಕು ಎಂದು ಒತ್ತಾಯಿಸಿದರು.
ಒಂದು ವೇಳೆ ಖಾಸಗಿ ಫೈನಾನ್ಸ್ ಕಂಪನಿಯವರು ಜಿಲ್ಲೆಯಲ್ಲಿ ಇದೇ ಪ್ರವೃತ್ತಿಯನ್ನು ಮುಂದುವರಿಸಿದ್ದಲ್ಲಿ ರೈತ ಸಂಘಟನೆ, ಮಹಿಳಾ ಸಂಘಟನೆ, ಕೂಲಿ ಕಾರ್ಮಿಕ ಸಂಘಟನೆಗಳೊಂದಿಗೆ ಜೆಡಿಎಸ್ ಕಾರ್ಯಕರ್ತರು ಅಂತಹ ಶಾಖೆಗಳ ವಿರುದ್ಧ ಹೋರಾಟ ನಡೆಸಿ, ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಸತೀಶ ಮಾಳದಕರ, ಅಮೀರಜಾನ್ ಬೇಪಾರಿ, ಶಿವಕುಮಾರ ತಳವಾರ, ಮಹಾಂತೇಶ ಬೇವಿನಹಿಂಡಿ, ರವಿ ಸೊಪ್ಪಿನ, ಎನ್.ಆರ್. ಪಾಟೀಲ, ವಿನಯಕುಮಾರ ಇತರರು ಇದ್ದರು.