ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ನಗರದ ಹೊರವಲಯದ ಅಗಲಗುರ್ಕಿಯ ಬಿಜಿಎಸ್ ಇಂಗ್ಲೀಷ್ ಶಾಲೆಯಲ್ಲಿ ಬುಧವಾರದಂದು ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ವೃಕ್ಷವಂದನೆಯನ್ನು ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಈ ವರ್ಷ ವಿಶ್ವ ಪರಿಸರ ದಿನವನ್ನು ಭೂಮಿ ಪುನಃಸ್ಥಾಪನೆ, ಮರುಭೂಮೀಕರಣ ಮತ್ತು ಬರ ಸ್ಥಿತಿ ಸ್ಥಾಪಕತ್ವ ಎಂಬ ವಿಷಯದೊಂದಿಗೆ ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ಪ್ರಕೃತಿ ನಾಶಕ್ಕೆ ಕಡಿವಾಣ ಹಾಕಿ ಹೆಚ್ಚು ಹೆಚ್ಚು ಗಿಡಗಳನ್ನು ಬೆಳೆಸಿ, ಮರಗಳನ್ನು ಉಳಿಸಿ ಪ್ರಕೃತಿ ಮಾತೆಯ ಒಡಲು ಹಸಿರಾಗಿರುವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.
ಪರಿಸರ ಪ್ರೇಮಿ ಗುಂಪುಮರದ ಆನಂದ್ ಮಾತನಾಡಿ, ಮನುಷ್ಯ ಬದುಕಿದ್ದಾಗ ಬೆಲೆ ಇರುತ್ತದೆ. ಸತ್ತ ನಂತರ ಯಾವುದೇ ಉಪಯೋಗವಿರುವುದಿಲ್ಲ. ಆದರೆ ಮರ ಬದುಕಿದ್ದಾಗಲು ಮತ್ತು ಕಡಿದನಂತರವೂ ಅದಕ್ಕೆ ತನ್ನದೇ ಆದಂತಹ ಬೆಲೆ ಇರುತ್ತದೆ. ಪ್ರತಿಯೊಂದು ಮರದಿಂದ ಆಗುವ ಪ್ರಯೋಜನೆಗಳನ್ನು ತಿಳಿಸಿದರು.ಪ್ರತಿಯೊಂದು ಮಗು ತಾನು ತಿಂದ ಹಣ್ಣುಗಳ ಬೀಜಗಳನ್ನು ಮಣ್ಣಿನಲ್ಲಿ ಹಾಕಿದರೆ ಅದು ಸಸಿಯಾಗಿ ಬೆಳೆದು ದೊಡ್ಡಮರವಾಗುತ್ತದೆ. ಪರಿಸರ ಪ್ರೇಮಿಗಳಾದ ಆ. ನ. ಯಲ್ಲಪ್ಪರೆಡ್ದಿ ಹಾಗೂ ಸಾಲುಮರದ ತಿಮ್ಮಕ್ಕ ರವರ ಸಾಧನೆಗಳನ್ನು ತಿಳಿಸಿದರು.
ಶಾಲೆಯ ಆವರಣದಲ್ಲಿ ವೃಕ್ಷವಂದನೆಯನ್ನು ಮಾಡುವ ಮೂಲಕ ಅರ್ಥಪೂರ್ಣವಾಗಿ ಪರಿಸರ ದಿನ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಮ್ಮ ಮನೆಗಳಿಂದ ನೂರಾರು ಗಿಡಗಳನ್ನು ತಂದು ಪರಸ್ಪರ ವಿನಿಮಯಮಾಡಿಕೊಂಡು ಸಂಭ್ರಮಿಸಿದರು. ಪರಿಸರದ ಮಹತ್ವವನ್ನು ಸೂಚಿಸುವ ನೂರಾರು ಉಕ್ತಿಗಳನ್ನು ಫಲಕಗಳಲ್ಲಿ ಪ್ರದರ್ಶಿಸುತ್ತಾ, ಮೆರವಣಿಗೆ ಮೂಲಕ ಗಿಡಗಳನ್ನು ಕೊಂಡೊಯ್ದು ಶಾಲಾವರಣದಲ್ಲಿ ನೆಟ್ಟಿದರು. ನರ್ಸರಿಯಿಂದ 10ನೇ ತರಗತಿ ವರೆಗಿನ ವಿದ್ಯಾರ್ಥಿಗಳು ಶಾಲಾವರಣದಲ್ಲಿರುವ ಬೇವಿನಮರ, ಹಲಸಿನಮರ ಮತ್ತು ಮಾವಿನ ಮರಗಳನ್ನು ಶ್ರದ್ಧಾ- ಭಕ್ತಿಯಿಂದ ಪೂಜಿಸಿ ವಂದಿಸಿದರು.
ಕಾರ್ಯಕ್ರಮದಲ್ಲಿ ಬಿಜಿಎಸ್ ಶಿಕ್ಷಣ ಸಲಹೆಗಾರರಾದ ಮಂಜುನಾಥ್, ಶಾಲೆಯ ಶಿಕ್ಷಕರು, ಭೋದಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.