ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಪತ್ರಕರ್ತರ ಸೋಗಿನಲ್ಲಿ ಭೂವ್ಯವಹಾರದಲ್ಲಿ ಮಧ್ಯಪ್ರವೇಶಿಸಿ ಸುಲಿಗೆ ಮಾಡುವುದು, ಹೊಸದಾಗಿ ನಿರ್ಮಾಣವಾಗುತ್ತಿರುವ ಕಟ್ಟಡ/ನಿವಾಸ/ ಲೇಔಟ್‌ಗಳ ಬಗ್ಗೆ ದೂರುಗಳ ನೆಪದಲ್ಲಿ ಮಾಲೀಕರಿಗೆ ಹಣಕ್ಕಾಗಿ ಕಿರುಕುಳ ನೀಡುವುದು. ಸರ್ಕಾರಿ ಕಚೇರಿಗಳಿಗೆ ನುಗ್ಗಿ ಕೆಲಸದ ಅವಧಿಯಲ್ಲಿ ಅಧಿಕಾರಿ , ಸಿಬ್ಬಂದಿಗಳ ವಿಡಿಯೋ ಚಿತ್ರೀಕರಣ ಮಾಡುವುದು, ಅವರನ್ನು ಬ್ಲಾಕ್‌ಮೇಲ್ ಮಾಡುತ್ತಿರುವ ಪ್ರಕರಣಗಳು ನಡೆಯುತ್ತಿರುವುದು ಸಂಘದ ಗಮನಕ್ಕೆ ಬಂದಿವೆ. ನಕಲಿ ಪತ್ರಕರ್ತರ ಹಾವಳಿಯನ್ನು ಪ್ರಶ್ನಿಸುವ ನೈಜ ಕಾರ್ಯನಿರತ ಪತ್ರಕರ್ತರ ವಿರುದ್ದವೂ ಸಾಮಾಜಿಕ ಜಾಲತಾಣಗಳಲ್ಲಿ ಅವಮಾನಕಾರಿ ಬರಹ ಬರೆಯುವ ಮೂಲಕ ತೇಜೋವಧೆ ಮಾಡಲಾಗುತ್ತಿದೆ ಎಂದು ಆರೋಪಿಸಲಾಯಿತು.
ಅಲ್ಲದೆ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರೆಸ್-ಮಿಡಿಯಾ ಸ್ಟಿಕರ್ ಹಾಕಿಕೊಂಡ ವಾಹನಗಳು ಪತ್ರಿಕೋದ್ಯಮವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಕಂಡು ಬರುತ್ತಿದೆ. ಪತ್ರಕರ್ತರ ಹೆಸರಿನಲ್ಲಿ ಯಾರಾದರೂ ಹಣ ವಸೂಲಿ, ಬ್ಲಾಕ್ ಮೇಲ್ ಮಾಡುವುದು ಕಂಡುಬಂದಲ್ಲಿ ಬಾಧಿತ ಸರ್ಕಾರಿ ಅಧಿಕಾರಿಗಳು, ರಾಜಕಾರಣಿಗಳು, ಉದ್ದಿಮೆದಾರರು, ಸಾರ್ವಜನಿಕ ಸೇವೆಯಲ್ಲಿರುವವರು ತಕ್ಷಣವೇ ಪೊಲೀಸ್ ಇಲಾಖೆಗೆ ದೂರು ನೀಡಬೇಕೆಂದು ಸಂಘವು ಮನವಿ ಮಾಡಿದ್ದು, ಪೊಲೀಸ್ ಇಲಾಖೆ ಕೂಡ ಇಂತಹ ಪ್ರಕರಣಗಳಲ್ಲಿ ನಿರ್ದಾಕ್ಷಿಣ್ಯವಾಗಿ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಜಿಲ್ಲೆಯಾದ್ಯಂತ ಪ್ರೆಸ್ -ಮಿಡಿಯಾ ಸ್ಟಿಕರ್ ಹಾಕಿಕೊಂಡ ಎಲ್ಲಾ ಬಗೆಯವಾಹನಗಳನ್ನು ತಪಾಸಣೆ ನಡೆಸಿ ಪತ್ರಕರ್ತರು ಎಂಬುದರ ಬಗ್ಗೆ ನೋಂದಾಯಿತ ದಾಖಲೆಗಳನ್ನು ಪರಿಶೀಲಿಸಬೇಕು ಎಂದು ಆಗ್ರಹಿಸಿದರು.