- ಎಸ್‌ಸಿ- ಎಸ್‌ಟಿ ಸಮುದಾಯದ ಕುಂದುಕೊರತೆ ಸಭೆಯಲ್ಲಿ ಮುಖಂಡರ ಆಗ್ರಹ
ಕನ್ನಡಪ್ರಭ ವಾರ್ತೆ ಹರಿಹರ
ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಮಟ್ಕಾ ಹಾಗೂ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಇದರಿಂದ ಪರಿಶಿಷ್ಟ ಜಾತಿಯ ಯುವಜನರು ಹಾಳಾಗುತ್ತಿದ್ದಾರೆ. ಈ ಅವ್ಯವಸ್ಥೆ ನಿಯಂತ್ರಿಸಲು ಅಧಿಕಾರಿಗಳು ಮುಂದಾಗಬೇಕೆಂದು ಎಸ್‌ಸಿ- ಎಸ್‌ಟಿ ಸಮುದಾಯ ಮುಖಂಡರು ಆಗ್ರಹಿಸಿದರು.ನಗರದ ಗುರು ಭವನದಲ್ಲಿ ಶುಕ್ರವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ, ಜಿಲ್ಲಾ ಗ್ರಾಮಾಂತರ ಡಿವೈಎಸ್‌ಪಿ ಕಚೇರಿ, ಸ್ಥಳಿಯ ಪೊಲೀಸ್ ಠಾಣೆ ಹಾಗೂ ವಿವಿಧ ಇಲಾಖೆಗಳ ಆಶ್ರಯದಲ್ಲಿ ಕರೆದಿದ್ದ ಎಸ್‌ಸಿ- ಎಸ್‌ಟಿ ಸಮುದಾಯದ ಕುಂದು ಕೊರತೆಗಳ ಸಭೆಯಲ್ಲಿ ಅವರು ಮಾತನಾಡಿದರು.
ರಾಜನಹಳ್ಳಿ ಗ್ರಾಪಂ ಮಾಜಿ ಸದಸ್ಯ ಎ.ಕೆ. ನಾಗೇಂದ್ರಪ್ಪ ಹಾಗೂ ಹರಳಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಹನುಮಂತಪ್ಪ ಮಾತನಾಡಿ, ರಾಜನಹಳ್ಳಿ ಹಾಗೂ ಹರಳಳ್ಳಿ ಗ್ರಾಮದಲ್ಲಿ ಡಾ. ಅಂಬೇಡ್ಕರ್ ಭವನ ನಿರ್ಮಿಸಲು ಹಣ ಬಿಡುಗಡೆಯಾಗಿದೆ. ಸಂಬಂಧಿಸಿದ ಅಧಿಕಾರಿಗಳು ಭವನ ನಿರ್ಮಿಸಲು ಏಕೆ ಮುಂದಾಗುತ್ತಿಲ್ಲ ಎಂದು ಪ್ರಶ್ನಿಸಿದರು.
ಸಭಾ ಸ್ಥಳ ಸಂಪೂರ್ಣ ಧೂಳಿನಿಂದ ಕೂಡಿದ್ದು, ಕಾರ್ಯಕ್ರಮಕ್ಕೆ ಮೊದಲು ಸ್ವಚ್ಛ ಮಾಡಿಸದೇ, ಅದರಲ್ಲಿಯೇ ಸಭೆ ನಡೆಸಿದ ಅಧಿಕಾರಿಗಳ ನಿರ್ಲಕ್ಷಕ್ಕೆ ಬೇಸರಗೊಂಡ ಘಟನೆ ನಡೆಯಿತು.
ಗ್ರಾಮೀಣ ಡಿವೈಎಸ್‌ಪಿ ಬಿ.ಎಸ್. ಬಸವರಾಜ, ಸಿಪಿಐ ಸುರೇಶ ಸಗರಿ, ಪಿಎಸ್‌ಐ ಯುವರಾಜ ಕಂಬಳಿ, ಮಲೇಬೆನ್ನೂರು ಪಿಎಸ್‌ಐ ಹಾರೂನ್ ಅಖ್ತರ್, ನಗರ ಸಿಪಿಐ ಆರ್.ಎಫ್. ದೇಸಾಯಿ, ಪಿಎಸ್‌ಐಗಳಾದ ಶ್ರೀಪತಿ ಗಿನ್ನಿ, ಮಂಜುಳಾ, ಮಂಜುನಾಥ ಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ದುರುಗಪ್ಪ, ಸಮಾಜ ಕಲ್ಯಾಣಾಧಿಕಾರಿ ಹನುಮಂತಪ್ಪ ನಾಯ್ಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಪ್ರಿಯದರ್ಶಿನಿ, ಪ್ರಭಾರ ಪೌರಾಯುಕ್ತ ವಿನಯ್‌ಕುಮಾರ, ವ್ಯವಸ್ಥಾಪಕ ಶಿವಕುಮಾರ, ಶಿರಸ್ತೇದಾರ ಹರ್ಷವರ್ಧನ್, ಹಿರಿಯ ಆರೋಗ್ಯ ನಿರೀಕ್ಷಕ ನಾಗರಾಜ ಉಪಸ್ಥಿತರಿದ್ದರು.
-22ಎಚ್.ಆರ್.ಆರ್01: ಹರಿಹರದ ಗುರು ಭವನದಲ್ಲಿ ಎಸ್.ಸಿ/ಎಸ್‌ಟಿ ಕುಂದುಕೊರತೆ ಸಭೆ ನಡೆಯಿತು.