ಮಾಜಿ ಪ್ರಿಯಕರನ ಮೇಲೆ ಹಲ್ಲೆ ಮಾಡಿದ ಹಾಲಿ ಪ್ರಿಯತಮ ಸೆರೆ

KannadaprabhaNewsNetwork | Published : Jan 26, 2025 1:31 AM

ಸಾರಾಂಶ

ಪ್ರೀತಿಯಲ್ಲಿ ಬಿರುಕು ಮೂಡಿದ ಹಿನ್ನೆಲೆಯಲ್ಲಿ ತಾನು ಕೊಡಿಸಿದ್ದ ಮೊಬೈಲ್‌ ಹಾಗೂ ದ್ವಿಚಕ್ರ ವಾಹನ ವಾಪಾಸ್‌ ಕೇಳಲು ಯುವತಿ ಮನೆ ಬಳಿ ತೆರಳಿದ್ದ ಮಾಜಿ ಪ್ರಿಯಕರನ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ಮಾಡಿದ್ದ ಹಾಲಿ ಪ್ರಿಯಕರನನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಪ್ರೀತಿಯಲ್ಲಿ ಬಿರುಕು ಮೂಡಿದ ಹಿನ್ನೆಲೆಯಲ್ಲಿ ತಾನು ಕೊಡಿಸಿದ್ದ ಮೊಬೈಲ್‌ ಹಾಗೂ ದ್ವಿಚಕ್ರ ವಾಹನ ವಾಪಾಸ್‌ ಕೇಳಲು ಯುವತಿ ಮನೆ ಬಳಿ ತೆರಳಿದ್ದ ಮಾಜಿ ಪ್ರಿಯಕರನ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ಮಾಡಿದ್ದ ಹಾಲಿ ಪ್ರಿಯಕರನನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನೇಪಾಳ ಮೂಲದ ಬಿಕಾಸ್‌ (26) ಬಂಧಿತ ಆರೋಪಿ. ಜ.13ರಂದು ಸಂಜೆ ಜಕ್ಕೂರು ಲೇಔಟ್‌ನ 10ನೇ ಬಿ ಕ್ರಾಸ್‌ನಲ್ಲಿ ನೇಪಾಳ ಮೂಲದ ಲೋಕೇಶ್‌ ಗುರುಂಗ್‌ (25) ಮೇಲೆ ಬಿಕಾಸ್‌ ಹಾಗೂ ಆತನ ಸಹಚರರು ಹಲ್ಲೆ ಮಾಡಿದ್ದರು. ಈ ಸಂಬಂಧ ನೀಡಲಾದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದ್ದು, ತಲೆ ಮರೆಸಿಕೊಂಡಿರುವ ಇನ್ನೂ ಕೆಲವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ ವಿವರ:

ಲೋಕೇಶ್‌ ನಗರದಲ್ಲಿ ಸೇಲ್ಸ್‌ ಕೆಲಸ ಮಾಡಿಕೊಂಡಿದ್ದ. ನೇಪಾಳ ಮೂಲದ ಸಂಧ್ಯಾ ಪಲ್ಪಲ್ಲಿ ಹಾಗೂ ಆಕೆಯ ಕುಟುಂಬವನ್ನು ನೇಪಾಳದಿಂದ ನಗರಕ್ಕೆ ಕರೆತಂದು ಬಾಡಿಗೆ ಮನೆ ಮಾಡಿ ಇರಿಸಿದ್ದ. ಬಳಿಕ ಲೋಕೇಶ್‌ ಮತ್ತು ಸಂಧ್ಯಾ ಪಲ್ಪಲ್ಲಿ ಪರಸ್ಪರ ಪ್ರೀತಿಸುತ್ತಿದ್ದರು. ಈ ವೇಳೆ ಲೋಕೇಶ್‌ ಯುವತಿಗೆ ಮೊಬೈಲ್‌ ಹಾಗೂ ದ್ವಿಚಕ್ರ ವಾಹನ ಕೊಡಿಸಿದ್ದ. 8 ತಿಂಗಳ ಕಾಲ ಒಂದೇ ಮನೆಯಲ್ಲಿ ಇಬ್ಬರು ಸಹಜೀವನ ನಡೆಸಿದ್ದಾರೆ. ಡಿ.1ರಂದು ಲೋಕೇಶ್‌ ಮತ್ತು ಸಂಧ್ಯಾ ನಡುವೆ ಭಿನ್ನಾಭಿಪ್ರಾಯ ಬಂದಿದ್ದು, ಆಗ ಸಂಧ್ಯಾ ಆರೋಪಿ ಬಿಕಾಸ್ ಜತೆಗೆ ಓಡಿ ಹೋಗಿದ್ದಾಳೆ. ಜ.13ರಂದು ಸಂಧ್ಯಾ ಅವರ ತಂಗಿ ಸೃಷ್ಟಿ ಪಲ್ಪಲ್ಲಿಗೆ ಕರೆ ಮಾಡಿರುವ ಲೋಕೇಶ್‌, ನಾನು ನಿಮ್ಮ ಅಕ್ಕನಿಗೆ ಕೊಡಿಸಿರುವ ಮೊಬೈಲ್‌ ಮತ್ತು ದ್ವಿಚಕ್ರ ವಾಹನ ವಾಪಾಸ್‌ ಕೊಡಿಸಿ ಎಂದು ಕೇಳಿದ್ದಾನೆ. ಅದಕ್ಕೆ ಮನೆ ಬಳಿ ಬಂದು ತೆಗೆದುಕೊಂಡು ಹೋಗುವಂತೆ ಸೃಷ್ಟಿ ಹೇಳಿದ್ದಾರೆ. ಮನೆ ಬಳಿ ಹೋದಾಗ ಹಲ್ಲೆ

ಅದರಂತೆ ಲೋಕೇಶ್‌ ಮತ್ತು ಆತನ ಸ್ನೇಹಿತ ಪ್ರೇಮ್‌ ದಾಮಿ ಇಬ್ಬರು ಜಕ್ಕೂರಿನ ಸಂಧ್ಯಾ ಅವರ ಮನೆ ಬಳಿ ತೆರಳಿದ್ದಾರೆ. ಈ ವೇಳೆ ಸೃಷ್ಟಿ, ಮೊಬೈಲ್‌ ಫೋನ್‌ ಹೊರಗೆ ಇದೆ. ಸ್ಪಲ್ಪ ಸಮಯ ಹೊರಗೆ ಕುಳಿತುಕೊಳ್ಳಿ ಎಂದಿದ್ದಾರೆ. ಅದರಂತೆ ಇಬ್ಬರು ಹೊರಗೆ ಕುಳಿತಿರುವಾಗ, ಆರೋಪಿ ಬಿಕಾಸ್‌ ಹಾಗೂ ಆತನ ಸಹಚರರು ಮನೆ ಬಳಿ ಬಂದು ಏಕಾಏಕಿ ಲೋಕೇಶ್‌ ಮೇಲೆ ಹಲ್ಲೆ ಮಾಡಿದ್ದಾರೆ. ಚಾಕು ಮತ್ತು ಸ್ಕ್ರೂ ಡ್ರೈವರ್‌ನಿಂದ ಎದೆ ಹಾಗೂ ಕುತ್ತಿಗೆಗೆ ಚುಚ್ಚಿದ್ದಾರೆ. ಜಗಳ ಬಿಡಿಸಲು ಮುಂದಾದ ಪ್ರೇಮ್‌ ದಾಮಿ ಮೇಲೂ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ.

ಬಳಿಕ ಲೋಕೇಶ್ ಮತ್ತು ಆತನ ಸ್ನೇಹಿತ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು ಅಮೃತಹಳ್ಳಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share this article