ಚಿತ್ರದುರ್ಗ: ಹಿಂದಿನ ಕಾಲದಲ್ಲಿ ಕೃಷಿಗೆ ಅಗತ್ಯವಾಗಿ ಬೇಕಾದ ಸಾಮಾನುಗಳನ್ನು ತಾವೇ ತಯಾರು ಮಾಡಿಕೊಳ್ಳುತ್ತಿದ್ದರು. ಆದರೆ ಇಂದಿನ ದಿನದಲ್ಲಿ ಎಲ್ಲದಕ್ಕೂ ಬೇರೆಯವರನ್ನು ಅವಲಂಬಿಸುವಂತಾಗಿದೆ. ನಾವುಗಳು ನಮಗೆ ದುಡಿಯದೇ ಕಂಪನಿಗಳಿಗೆ ದುಡಿಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಉತ್ತರ ಪ್ರಾಂತ್ಯದ ಕಿಸಾನ್ ಸಂಘದ ಪ್ರಚಾರಕ ಪುಟ್ಟಸ್ವಾಮಿ ವಿಷಾದಿಸಿದರು.
ಒಂದು ಕಾಲದಲ್ಲಿ ಕಬ್ಬಿನಿಂದ ಬೆಲ್ಲವನ್ನು ತಯಾರು ಮಾಡಲಾಗುತ್ತಿತ್ತು. ಇಂದಿನಂತೆ ಸಕ್ಕರೆಯನ್ನು ತಯಾರು ಮಾಡುತ್ತಿರಲಿಲ್ಲ. ಆಗ ಬೆಲ್ಲದ ತಯಾರಿಕಾ ಕೇಂದ್ರಗಳು ಹೆಚ್ಚಾಗಿದ್ದವು. ಆದರೆ ಇಂದು ಬೆಲ್ಲವನ್ನು ತಯಾರಿಸುವ ಕೇಂದ್ರಗಳು ಕಡಿಮೆಯಾಗಿ ಸಕ್ಕರೆಯನ್ನು ಉತ್ಪಾದನೆ ಮಾಡುವ ಕಾರ್ಖಾನೆಗಳ ಸಂಖ್ಯೆ ಹೆಚ್ಚಾಗಿವೆ. ಹಿಂದೆ ಕೃಷಿಯನ್ನು ಉಳಿಸಿಕೊಳ್ಳಲಾಗುತ್ತಿತ್ತು ಆದರೆ ಈಗ ಕೃಷಿಯನ್ನು ಕಳೆದುಕೊಳ್ಳಲಾಗುತ್ತಿದೆ ಎಂದರು.
ನಮ್ಮ ತಾತ ಮುತ್ತಾತಂದಿರು ಕೃಷಿಯನ್ನು ಮಾಡುವಾಗ ಅದಕ್ಕೆ ಬೇಕಾದ ಎಲ್ಲಾ ರೀತಿಯ ಸೌಕರ್ಯಗಳನ್ನು ಅವರೇ ಸ್ವಂತಃ ಮಾಡಿಕೊಳ್ಳುತ್ತಿದ್ದರು. ಬೀಜ, ಗೊಬ್ಬರ, ಕ್ರೀಮಿ ನಾಶಕ ಸೇರಿದಂತೆ ಇತರೆ ವಸ್ತುಗಳನ್ನು ಹೊರಗಿನಿಂದ ತರದೇ ತಾವೇ ತಯಾರು ಮಾಡುವುದರ ಮೂಲಕ ಕೃಷಿಯನ್ನು ಮಾಡುತ್ತಿದ್ದರು. ಆದರೆ ಈಗ ಎಲ್ಲದಕ್ಕೂ ನಾವುಗಳು ಕಂಪನಿಗಳನ್ನು ಆಶ್ರಯಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಯಾವುದಾದರೂ ಒಂದು ವಸ್ತು ಸಿಗದಿದ್ದರೆ ಕೃಷಿಯನ್ನು ಮಾಡುವುದೇ ನಿಲ್ಲಿಸಬೇಕಾದ ವಾತಾವರಣ ನಿರ್ಮಾಣವಾಗಿದೆ. ಭೂಮಿಗೆ ಸಾವಯವ ಗೊಬ್ಬರವನ್ನು ಹಾಕುವುದರ ಮೂಲಕ ಭೂಮಿಯನ್ನು ಫಲವತ್ತಾಗಿ ಇಟ್ಟುಕೊಳ್ಳುತ್ತಿದ್ದರು. ಆದರೆ ನಾವುಗಳು ರಾಸಾಯಿನಿಕ ಗೊಬ್ಬರವನ್ನು ಹಾಕಿ ಭೂಮಿಯನ್ನು ಹಾಳು ಮಾಡಿದ್ದೇವೆ ಎಂದರು.ಕೃಷಿಯ ಎಂದರೆ ಮೂಲ ಜಾನುವಾರುಗಳು. ಜಾನುವಾರುಗಳು ಇಲ್ಲದಿದ್ದರೆ ಕೃಷಿ ಇಲ್ಲವಾಗುತ್ತದೆ. ಆಕಳು ವೈದ್ಯರಿದ್ದ ಹಾಗೆ. ಅದರ ಹಾಲು ಅಮೃತಕ್ಕೆ ಸಮಾನ. ಅದನ್ನು ಸೇವಿಸಿದರೆ ವಿವಿಧ ರೀತಿಯ ಪೋಷಕಾಂಶಗಳು ನಮಗೆ ಲಭ್ಯವಾಗುತ್ತವೆ. ಕೃಷಿಯು 10 ಸಾವಿರ ವರ್ಷದಿಂದ ಇದೆ. ಇಂದು ಕೃಷಿ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಯುವಜನತೆ ಕೃಷಿಯನ್ನು ಬಿಟ್ಟು ಉದ್ಯೋಗಕ್ಕಾಗಿ ನಗರದ ಕಡೆಗೆ ಮುಖ ಮಾಡುತ್ತಿದ್ದಾರೆ. ಇದರ ಬಗ್ಗೆ ಎಲ್ಲರೂ ಚಿಂತನೆ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಯುವ ಜನತೆ ಗ್ರಾಮದ ಕಡೆಗೆ ಬಂದು ಕೃಷಿಯಲ್ಲಿ ತೊಡಗಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಸ್ವದೇಶಿ ಮೇಳದ ಸಂಘಟಕರಾದ ಜಗದೀಶ್, ರೈತರಾದ ಹುಲಿಕರೆ, ವಿಶ್ವೇಶ್ವರಯ್ಯ, ಸಿದ್ದವ್ವನಹಳ್ಳಿ ಜ್ಞಾನೇಶ್, ಸಹಾಯಕ ಕೃಷಿ ನಿರ್ದೇಶಕ ಮಿಥುನ್, ಪ್ರಕಾಶ್, ಕೆ.ಟಿ.ಕುಮಾರಸ್ವಾಮಿ, ಬಿಜೆಪಿ ರೈತ ಮೋರ್ಚಾದ ಜಿಲ್ಲಾಧ್ಯಕ್ಷ ವೆಂಕಟೇಶ್ ಯಾದವ್, ರೇಖಾ ಇತರರಿದ್ದರು.