ಯಳಂದೂರು: ತಾಲೂಕಿನ ಅಗರ ಗ್ರಾಮದಲ್ಲಿರುವ ಐತಿಹಾಸಿಕ ಲಕ್ಷ್ಮಿ ನರಸಿಂಹಸ್ವಾಮಿ ದೇಗುಲದ ಅಭಿವೃದ್ಧಿಗೆ ಇನ್ನಷ್ಟು ಅನುದಾನವನ್ನು ಕೊಡಿಸಲು ಸಂಬಂಧಪಟ್ಟ ಇಲಾಖೆಯ ಸಚಿವರ ಜೊತೆ ಮಾತನಾಡಿ ಇದರ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ತಿಳಿಸಿದರು.
ಅವರು ಶನಿವಾರ ತಾಲೂಕಿನ ಅಗರ ಗ್ರಾಮದಲ್ಲಿರುವ ಲಕ್ಷ್ಮಿ ನರಸಿಂಹಸ್ವಾಮಿ ದೇಗುಲದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಚೋಳರ ಕಾಲದ ಈ ದೇಗುಲ ನೂರಾರು ವರ್ಷಗಳ ಐತಿಹ್ಯ ಇರುವ ಪುರಾತನ ದೇಗುಲವಾಗಿದೆ. ತನ್ನ ವಿಭಿನ್ನ ವಾಸ್ತು ಶೈಲಿಯಿಂದ ಪ್ರಸಿದ್ಧಿ ಪಡೆದಿರುವ ದೇಗುಲ ಇದಾಗಿದೆ. ಅಷ್ಟೇ ಶಕ್ತಿಶಾಲಿ ದೇವರು ಇದಾಗಿದೆ. ಇಲ್ಲಿಗೆ ಪ್ರತಿನಿತ್ಯ ನೂರಾರು ಭಕ್ತರು ಭೇಟಿ ನೀಡುತ್ತಾರೆ. ಆದರೆ ಇದರ ಮೇಲೆ ಗಿಡಮರಗಳು ಬೆಳೆದಿವೆ. ಅಲ್ಲದೆ ದೇಗುಲ ಶಿಥಿಲವಾಗಿದೆ. ಇದನ್ನು ದುರಸ್ತಿ ಮಾಡಿಸಬೇಕೆಂದು ಗ್ರಾಮದವರ ಹತ್ತಾರು ವರ್ಷದ ಬೇಡಿಕೆಯಾಗಿದೆ. ಹಾಗಾಗಿ ಇದರ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಇದರ ಅಭಿವೃದ್ಧಿಗೆ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ವತಿಯಿಂದ ೩೦ ಲಕ್ಷ ರೂ. ಬಿಡುಗಡೆಯಾಗಿದೆ. ಈಗಾಗಲೇ ೧೫ ಲಕ್ಷ ರೂ. ಹಣ ಬಿಡುಗಡೆಯಾಗಿರುವ ಬಗ್ಗೆ ಸಂಬಂಧಪಟ್ಟ ಎಇಇ ಮಾಹಿತಿ ನೀಡಿದ್ದಾರೆ. ಆದರೆ ಈ ಹಣ ಇದರ ಸಮಗ್ರ ಅಭಿವೃದ್ಧಿಗೆ ಸಾಲುವುದಿಲ್ಲ ಹಾಗಾಗಿ ಸಂಬಂಧಪಟ್ಟ ಇಲಾಖೆಯ ಸಚಿವರು, ಅಧಿಕಾರಿಗಳೊಂದಿಗೆ ಚರ್ಚಿಸಿ ಇದರ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಈಗಾಗಲೇ ವಸತಿ ಸಮೇತ ಅಗ್ನಿ ಶಾಮಕ ಠಾಣೆಯನ್ನು ಯಳಂದೂರಿನಲ್ಲಿ ನಿರ್ಮಾಣ ಮಾಡಲು ಹಣ ಬಿಡುಗಡೆಯಾಗಿದ್ದು ಆದಷ್ಟು ಬೇಗ ಇದರ ಭೂಮಿ ಪೂಜೆಯನ್ನು ನೆರವೇರಿಸಲಾಗುವುದು. ಸಂತೆಮರಹಳ್ಳಿಯಲ್ಲಿ ಎಳೆನೀರು ಮಾರುಕಟ್ಟೆ ನಿರ್ಮಾಣ ಮಾಡಲು ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ವಿಶ್ವಬ್ಯಾಂಕ್ ನೆರವಿನೊಂದಿಗೆ ಈ ಮಾರುಕಟ್ಟೆ ನಿರ್ಮಿಸಲು ಯೋಜನೆ ರೂಪಿಸಲಾಗಿದ್ದು ಈಗಾಗಲೇ ಮುಂಬೈಯಲ್ಲಿರುವ ಇದರ ಪ್ರಧಾನ ಕಚೇರಿಗೆ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ. ಪಟ್ಟಣದಲ್ಲಿ ಪದವಿಪೂರ್ವ ಕಾಲೇಜಿನ ಮೈದಾನದಲ್ಲೇ ೩ ಕೋಟಿ ರೂ. ವೆಚ್ಚದಲ್ಲಿ ಪದವಿ ಕಾಲೇಜು ನಿರ್ಮಾಣಕ್ಕೂ ಶೀಘ್ರದಲ್ಲೇ ಚಾಲನೆ ನೀಡಲಾಗುವುದು. ಕೊಳ್ಳೇಗಾಲದ ೨೫೦ ಹಾಸಿಗೆಗಳ ಆಸ್ಪತ್ರೆ, ಶಾದಿಮಹಲ್, ವಿವಿಧ ಸಮುದಾಯ ಭನವಗಳ ಉದ್ಘಾಟನೆಯನ್ನು ಒಂದೇ ವೇದಿಕೆಯಲ್ಲಿ ಮುಖ್ಯಮಂತ್ರಿ, ಸಂಬಂಧಪಟ್ಟ ಸಚಿವರ ಸಮ್ಮುಖದಲ್ಲಿ ಒಂದೇ ಕಡೆ ಉದ್ಘಾಟಿಸಲು ಯೋಜನೆ ರೂಪಿಸಲಾಗಿದ್ದು ಶೀಘ್ರದಲ್ಲೇ ಈ ಕಾರ್ಯಕ್ರಮ ನಡೆಸಲಾಗುವುದು ಎಂದರು.ಗ್ರಾಪಂ ಅಧ್ಯಕ್ಷ ವೆಂಕಟಾಚಲ ಉಪಾಧ್ಯಕ್ಷೆ ನಿರ್ಮಲ ಶ್ರೀನಿವಾಸ್, ಜಿಪಂ ಮಾಜಿ ಉಪಾಧ್ಯಕ್ಷ ಜೆ. ಯೋಗೇಶ್, ಸಿದ್ದರಾಜು, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಕಿನಕಹಳ್ಳಿ ಪ್ರಭುಪ್ರಸಾದ್, ಕಂದಹಳ್ಳಿ ನಂಜುಂಡಸ್ವಾಮಿ, ತಹಸೀಲ್ದಾರ್ ಎಸ್.ಎಲ್. ನಯನ, ಎಇಇ ಅಂಬರೀಷ್, ಸುಬ್ಬಣ್ಣ, ವೆಂಕಟೇಶ್, ನಾರಾಯಣಸ್ವಾಮಿ, ಮಾದೇಶ್, ನಾಗರಾಜು, ಪಿಡಿಒ ವೀಣಾ ಸೇರಿದಂತೆ ಅನೇಕರು ಇದ್ದರು.
೧೫ವೈಎಲ್‌ಡಿ ಚಿತ್ರ೦೧ ಯಳಂದೂರು ತಾಲೂಕಿನ ಅಗರ ಗ್ರಾಮದ ಐತಿಹಾಸಿಕ ಲಕ್ಷ್ಮಿನರಸಿಂಹಸ್ವಾಮಿ ದೇಗುಲದ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎ.ಆರ್. ಕೃಷ್ಣಮೂರ್ತಿ ತೆಂಗಿನ ಗಿಡ ನೆಟ್ಟು ನೀರೆರೆಯುವ ಮೂಲಕ ಚಾಲನೆ ನೀಡಿದರು.