ಬೆಂಗ್ಳೂರಲ್ಲಿ ನಕಲಿ ನಂದಿನಿ ತುಪ್ಪ ಜಾಲ ಪತ್ತೆ

KannadaprabhaNewsNetwork |  
Published : Nov 16, 2025, 01:45 AM IST
Nandini

ಸಾರಾಂಶ

ಕರ್ನಾಟಕ ಹಾಲು ಮಹಾಮಂಡಳದ (ಕೆಎಂಎಫ್‌) ನಂದಿನಿ ಬ್ರ್ಯಾಂಡ್‌ ಹೆಸರಲ್ಲಿ ನಕಲಿ ತುಪ್ಪ ಮಾರಾಟ ಮಾಡುತ್ತಿದ್ದ ನಂದಿನಿ ಪಾರ್ಲರ್ ಮಳಿಗೆ ಮಾಲಿಕ ಹಾಗೂ ಆತನ ಮಗ ಸೇರಿ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು :  ಕರ್ನಾಟಕ ಹಾಲು ಮಹಾಮಂಡಳದ (ಕೆಎಂಎಫ್‌) ನಂದಿನಿ ಬ್ರ್ಯಾಂಡ್‌ ಹೆಸರಲ್ಲಿ ನಕಲಿ ತುಪ್ಪ ಮಾರಾಟ ಮಾಡುತ್ತಿದ್ದ ನಂದಿನಿ ಪಾರ್ಲರ್ ಮಳಿಗೆ ಮಾಲಿಕ ಹಾಗೂ ಆತನ ಮಗ ಸೇರಿ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಚಾಮರಾಜಪೇಟೆ ಸಮೀಪದ ಅಜಾದ್‌ ನಗರದ ನಿವಾಸಿ ಮಹೇಂದ್ರ, ಆತನ ಮಗ ದೀಪಕ್‌, ವಾಹನ ಚಾಲಕ ಮುನಿರಾಜು ಹಾಗೂ ತಮಿಳುನಾಡಿನ ಅಭಿ ಅರಸ್ ಬಂಧಿತನಾಗಿದ್ದು, ಆರೋಪಿಗಳಿಂದ 8,350 ಲೀಟರ್ ನಕಲಿ ತುಪ್ಪ ಹಾಗೂ ನಾಲ್ಕು ವಾಹನಗಳನ್ನು ಜಪ್ತಿ ಮಾಡಲಾಗಿದೆ. ದಾಳಿ ವೇಳೆ ತಪ್ಪಿಸಿಕೊಂಡಿರುವ ನಕಲಿ ತುಪ್ಪ ತಯಾರಿಕಾ ಘಟಕದ ಮಾಲಿಕ ಶಿವಕುಮಾರ್ ಸೇರಿ ಇತರರ ಪತ್ತೆಗೆ ಸಿಸಿಬಿ ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದಾರೆ.

ಚಾಮರಾಜಪೇಟೆಯಲ್ಲಿ ಆರೋಪಿ ಮಹೇಂದ್ರ ಹೊಂದಿದ್ದ ನಂದಿನಿ ಪಾರ್ಲರ್‌ನಲ್ಲಿ ನಕಲಿ ತುಪ್ಪ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಶುಕ್ರವಾರ ಸಿಸಿಬಿ ಹಾಗೂ ಕೆಎಂಎಫ್ ಜಾಗೃತ ದಳ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿದ ವೇಳೆ ಜಾಲ ಬಯಲಾಯಿತು ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಹೇಗೆ ನಕಲಿ ತುಪ್ಪ ತಯಾರಿಕೆ?:

ಚಂದ್ರಶೇಖರ್ ಕೆಎಂಎಫ್‌ ಪರವಾನಗೆ ಪಡೆದಿದ್ದ. ಚಾಮರಾಜಪೇಟೆಯಲ್ಲಿ ಆತನ ನಂದಿನಿ ಪಾರ್ಲರ್ ಇತ್ತು. ಕೆಎಂಎಫ್‌ನಿಂದ ನಂದಿನಿ ತುಪ್ಪ ಖರೀದಿಸಿ ಬಳಿಕ ಆ ತುಪ್ಪವನ್ನು ತಮಿಳುನಾಡಿನ ಅವಿನಾಶಿಗೆ ಸಾಗಿಸುತ್ತಿದ್ದ. ಅಲ್ಲಿ ನಕಲಿ ತುಪ್ಪ ತಯಾರಿಕೆ ಘಟಕವನ್ನು ಆರೋಪಿ ಶಿವಕುಮಾರ್ ನಡೆಸುತ್ತಿದ್ದ. ನಂದಿನಿ ತುಪ್ಪಕ್ಕೆ ಡಾಲ್ಡಾ ಹಾಗೂ ಪಾಮೋಲಿವ್‌ ಎಣ್ಣೆ ಬೆರೆಸಿ, ಮತ್ತೆ ನಂದಿನಿ ಬ್ರ್ಯಾಂಡ್ ಹೆಸರಿನಲ್ಲಿ ಮಾರುಕಟ್ಟೆಗೆ ಬರುತ್ತಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಕಲಬೆರಕೆ ತುಪ್ಪಕ್ಕೆ ಕೆ.ಜಿ.ಗೆ 300 ರು. ಇತ್ತು. ಬಳಿಕ ನಂದಿನಿ ತುಪ್ಪದ ಬ್ರ್ಯಾಂಡ್‌ ಹೆಸರಿನಲ್ಲಿ 700 ರು.ಗೆ ಜನರಿಗೆ ಮಹೇಂದ್ರ ಮಾರಾಟ ಮಾಡುತ್ತಿದ್ದ. ಕಳೆದೊಂದು ವರ್ಷದಿಂದ ಈ ಕಲಬೆರಕೆ ದಂಧೆ ನಡೆದಿರುವ ಮಾಹಿತಿ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 ಕಲಬೆರಕೆ ಘಟಕದ ಮೇಲೆ ದಾಳಿ ನಡೆಸಿ ನಾಲ್ಕು ವಾಹನಗಳು ಹಾಗೂ 8,350 ಲೀಟರ್ ನಕಲಿ ತುಪ್ಪ ಸೇರಿ ಒಟ್ಟು 1.26 ಕೋಟಿ ರು. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ತಲೆಮರೆಸಿಕೊಂಡಿರುವ ಇನ್ನುಳಿದ ಆರೋಪಿಗಳಿಗೆ ಹುಡುಕಾಟ ನಡೆಸಲಾಗಿದೆ. ಸಿಸಿಬಿ ವಿಶೇಷ ವಿಚಾರಣಾ ದಳದ ಎಸಿಪಿ ಗೋಪಾಲ್‌.ಡಿ.ಜೋಗಿನ್ ತಂಡ ಆರೋಪಿಗಳನ್ನು ಬಂಧಿಸಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ತಂದೆಗೆ ಮಗನ ಸಾಥ್

ಕಲಬೆರಕೆ ನಂದಿನಿ ತುಪ್ಪ ಮಾರಾಟ ಜಾಲದ ಮಾಸ್ಟರ್‌ ಮೈಂಡ್‌ ಮಹೇಂದ್ರ ಪುತ್ರ ದೀಪಕ್ ಎಂಬಿಎ ಪದವೀಧರನಾಗಿದ್ದು, ಸುಲಭವಾಗಿ ಹಣ ಸಂಪಾದನೆಗೆ ತಂದೆ ಕೃತ್ಯಕ್ಕೆ ಸಾಥ್ ಕೊಟ್ಟು ಈಗ ಜೈಲು ಸೇರಿದ್ದಾನೆ ಎಂದು ಸಿಸಿಬಿ ಹೇಳಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ