ಹನೂರು: ತಾಲೂಕಿನ ಹೊಸಳ್ಳಿ ಸಮೀಪದ ತೋಟದ ಮನೆಗೆ ಚಿರತೆ ಲಗ್ಗೆ ಇಟ್ಟು ಕುರಿಯೊಂದನ್ನು ಬಲಿ ಪಡೆದಿರುವ ಘಟನೆ ಶನಿವಾರ ನಡೆದಿದೆ.
ಹೊಸಳ್ಳಿ ಗ್ರಾಮದ ರೈತ ನಾಗರಾಜು ಅವರ ತೋಟದ ಮನೆ ಬಳಿ ಅರಣ್ಯ ಪ್ರದೇಶದಿಂದ ಬಂದ ಚಿರತೆ, ಕೊಟ್ಟಿಗೆಯೊಳಗೆ ಕಟ್ಟಿದ್ದ ಎರಡು ಕುರಿಗಳಲ್ಲಿ ಒಂದರ ಮೇಲೆ ದಾಳಿ ಮಾಡಿ, ಹೊತ್ತೊಯ್ದು ತಿಂದಿದ್ದು 200 ಮೀಟರ್ ದೂರದಲ್ಲಿ ಕುರಿ ಕಳೇಬರ ಪತ್ತೆಯಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೂಂಡಿದ್ದಾರೆ.ವಯೋವೃದ್ಧೆ ಚಿರತೆಯಿಂದ ಬಚಾವ್: ಚಿರತೆ ಮೇಕೆಯನ್ನು ಹೊತ್ತಯ್ಯವ ಸಂದರ್ಭದಲ್ಲಿ ರೈತ ನಾಗರಾಜ್ ತಾಯಿ ಚಂದ್ರಮ್ಮಸಹ ತೋಟದ ಮನೆಯಲ್ಲಿ ಮಲಗಿದ್ದು ಚಿರತೆಯಿಂದ ಚಂದ್ರಮ್ಮ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಈ ಭಾಗದಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಚಿರತೆ ಸೆರೆಗೆ ಅರಣ್ಯ ಇಲಾಖೆ ಹರಸಾಹಸ:ತಾಲೂಕಿನ ಗಂಗನದೊಡ್ಡಿ ಬಸಪ್ಪನ ದೊಡ್ಡಿ ಗುಂಡಾಪುರ ದೊಮ್ಮನಗದ್ದೆ ಸೇರಿದಂತೆ ವಿವಿಧ ಭಾಗಗಳಲ್ಲಿ ಚಿರತೆ ಹಾವಳಿಯಿಂದ ಮೇಕೆ, ಕುರಿ, ಸಾಕು ನಾಯಿಗಳು ಬಲಿಯಾಗಿರುವ ಘಟನೆಯಿಂದ ಕಳೆದ ವಾರ ಅರಣ್ಯಾಧಿಕಾರಿಗಳನ್ನು ರೈತ ಸಂಘಟನೆ ದಿಗ್ಭಂದನಗೊಳಿಸಿ ಚಿರತೆ ಸೆರೆಹಿಡಿಯುವಂತೆ ಒತ್ತಾಯಿಸಿದ್ದರು. ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷದಿಂದ ರೈತರ ಸಾಕುಪ್ರಾಣಿಗಳು ಕಾಡು ಪ್ರಾಣಿಗಳಿಗೆ ಬಲಿಯಾಗುತ್ತಿವೆ. ಜನಪ್ರತಿನಿಧಿಗಳು ಹಾಗೂ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಇತ್ತ ಗಮನ ಹರಿಸಿ ಶಾಶ್ವತ ಪರಿಹಾರ ಕಲ್ಪಿಸಿ, ಜನ ಜಾನುವಾರುಗಳ ರಕ್ಷಣೆಗೆ ಮುಂದಾಗಬೇಕು ಎಂದು ರೈತ ಸಂಘಟನೆ ಒತ್ತಾಯಿಸಿದೆ.
15ಸಿಎಚ್ಎನ್16ಹನೂರು ತಾಲೂಕಿನ ಹೊಸಳ್ಳಿ ಗ್ರಾಮದ ರೈತ ನಾಗರಾಜ್ ಅವರಿಗೆ ಸೇರಿದ ಮೇಕೆಯನ್ನು ಚಿರತೆ ಬಲಿ ತೆಗೆದುಕೊಂಡಿರುವ ಬಗ್ಗೆ ಗ್ರಾಮಸ್ಥರು ಆತಂಕ ವ್ಯಕ್ತಪಡಿಸುತ್ತಿರುವುದು.
15ಸಿಎಚ್ಎನ್15ಹನೂರು ತಾಲೂಕಿನ ಗಂಗನ ದೊಡ್ಡಿ ಗ್ರಾಮದ ಸುತ್ತಮುತ್ತಲಿನಲ್ಲಿ ಅರಣ್ಯ ಅಧಿಕಾರಿಗಳು ಸಾಕುಪ್ರಾಣಿಗಳನ್ನು ಕೊಂದು ತಿನ್ನುತ್ತಿರುವ ಚಿರತೆ ಸೆರೆ ಹಿಡಿಯಲು ಅರಣ್ಯಾಧಿಕಾರಿಗಳ ಪರಿಶೀಲಿಸುತ್ತಿರುವುದು.