ಶಿವಮೊಗ್ಗ: ಜಾತಿಯು ಸಾಮಾಜಿಕ ಬಂಡವಾಳವಾಗಿರುವ ಸಮಕಾಲೀನ ಸಂದರ್ಭದಲ್ಲಿ ಜಾತಿ ಆಧಾರಿತ ಪ್ರಾತಿನಿಧ್ಯತೆ ಅತ್ಯಗತ್ಯ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕಾನಾಥ್ ಅಭಿಪ್ರಾಯಪಟ್ಟರು. ಕುವೆಂಪು ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರ ಸೋಮವಾರ ಜ್ಞಾನಸಹ್ಯಾದ್ರಿಯ ಬಸವ ಸಭಾ ಭವನದಲ್ಲಿ ಆಯೋಜಿಸಿದ್ದ ಡಾ.ಅಂಬೇಡ್ಕರ್ ಅವರ 134ನೇ ಜನ್ಮದಿನಾಚರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತದಲ್ಲಿ ಬ್ಯಾಂಕುಗಳ ರಾಷ್ಟ್ರೀಕರಣ, ಉಳುವ ಭೂಮಿಯ ರಾಷ್ಟ್ರೀಕರಣ, ಮಹಿಳೆಯರ ಮತದಾನದ ಹಕ್ಕುಗಳು, ಸಮಾನ ವೇತನ ಮತ್ತಿತರ ನೀತಿ ನಿರೂಪಣೆಯ ಜೊತೆಗೆ ಮಹಿಳೆಯ ಸಮಾನತೆಗೆ ಹಿಂದೂ ಕೋಡ್ ಬಿಲ್ ಅಂಬೇಡ್ಕರ್. ಆ ಮಸೂದೆ ಸಂಸತ್ತಿನಲ್ಲಿ ಅನುಮೋದನೆಯಾಗದೆ ಹೋದಾಗ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಧೀಮಂತ ವ್ಯಕ್ತಿತ್ವ ಅಂಬೇಡ್ಕರ್ ಅವರು ಎಂದು ತಿಳಿಸಿದರು. ಕುಲಪತಿ ಪ್ರೊ.ಶರತ್ ಅನಂತಮೂರ್ತಿ ಮಾತನಾಡಿ, ಅಂಬೇಡ್ಕರ್ ಚಿಂತನೆಯನ್ನು ಆಧುನಿಕ ಭಾರತದ ನಿರ್ಮಾಣಕ್ಕೆ ಪೂರಕವಾಗಿ ಬಳಸಬೇಕಿದೆ. ಅಂಬೇಡ್ಕರ್ ಅವರನ್ನು ಹಿಂದೂ ಧರ್ಮದ ಸುಧಾರಕ ಅಥವಾ ಸಾಮಾಜಿಕ ಸುಧಾರಕ ಎಂದು ಸೀಮಿತವಾಗಿ ಅರ್ಥೈಸಿಕೊಳ್ಳಬಾರದು. ಅಂಬೇಡ್ಕರ್ ಚಿಂತನೆಯನ್ನು ಒಂದು ಜ್ಞಾನ ಪರಂಪರೆಯಾಗಿ ಪರಿಭಾವಿಸಬೇಕಿದೆ ಎಂದು ಹೇಳಿದರು. ಕುಲಸಚಿವ ಎ.ಎಲ್.ಮಂಜುನಾಥ್, ಪರೀಕ್ಷಾಂಗ ಕುಲಸಚಿವ ಪ್ರೊ.ಎಸ್.ಎಂ.ಗೋಪಿನಾಥ್, ಹಣಕಾಸು ಅಧಿಕಾರಿ ಪ್ರೊ.ಎಚ್.ಎನ್.ರಮೇಶ್, ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ನೆಲ್ಲಿಕಟ್ಟೆ ಸಿದ್ದೇಶ್ ಸೇರಿದಂತೆ ವಿವಿಧ ವಿಭಾಗಗಳ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.