ನಿಲ್ಲದ ಜನಿವಾರ್‌: ರಾಜ್ಯವ್ಯಾಪಿ ಹೋರಾಟ

KannadaprabhaNewsNetwork |  
Published : Apr 22, 2025, 01:48 AM IST
ಪೋಟೋ: 21ಎಸ್‌ಎಂಜಿಕೆಪಿ3ಶಿವಮೊಗ್ಗ, ಬೀದರ್ ಜಿಲ್ಲೆಯಲ್ಲಿ ಸಿಇಟಿ ಪರೀಕ್ಷೆ ಬರೆಯಲು ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಪ್ರಕರಣ ಖಂಡಿಸಿ ಸೋಮವಾರ ಜಿಲ್ಲಾ ಬ್ರಾಹ್ಮಣ ಮಹಾ ಸಭಾ, ವಿವಿಧ ವಿಪ್ರ ಸಂಘಟನೆಗಳು, ವಿಪ್ರ ವಕೀಲರ ವೇದಿಕೆಗಳ ಸಹಯೋಗದಲ್ಲಿ ತಿಲಕನಗರದ ಶ್ರೀ ರಾಘವೇಂದ್ರಸ್ವಾಮಿ ಮಠದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೌನ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಜನಿವಾರ ತೆಗೆಯಲೊಪ್ಪದ ವಿದ್ಯಾರ್ಥಿಗೆ ಬೀದರ್‌ನಲ್ಲಿ ಸಿಇಟಿ ಪರೀಕ್ಷೆ ಪ್ರವೇಶ ನಿರಾಕರಣೆ ಮತ್ತು ಶಿವಮೊಗ್ಗ, ಸಾಗರದಲ್ಲಿ ಪರೀಕ್ಷಾರ್ಥಿಗಳ ಜನಿವಾರ ತೆಗೆಸಿದ್ದರ ವಿರುದ್ಧ ರಾಜ್ಯಾದ್ಯಂತ ಭುಗಿಲೆದ್ದಿರುವ ಹೋರಾಟದ ಕಿಡಿ ಸೋಮವಾರವೂ ಮುಂದುವರಿಯಿತು.

ಸರ್ಕಾರದ ವಿರುದ್ಧ ಆಕ್ರೋಶ । ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

==

ಕನ್ನಡಪ್ರಭ ವಾರ್ತೆ ಬೆಂಗಳೂರು

ಜನಿವಾರ ತೆಗೆಯಲೊಪ್ಪದ ವಿದ್ಯಾರ್ಥಿಗೆ ಬೀದರ್‌ನಲ್ಲಿ ಸಿಇಟಿ ಪರೀಕ್ಷೆ ಪ್ರವೇಶ ನಿರಾಕರಣೆ ಮತ್ತು ಶಿವಮೊಗ್ಗ, ಸಾಗರದಲ್ಲಿ ಪರೀಕ್ಷಾರ್ಥಿಗಳ ಜನಿವಾರ ತೆಗೆಸಿದ್ದರ ವಿರುದ್ಧ ರಾಜ್ಯಾದ್ಯಂತ ಭುಗಿಲೆದ್ದಿರುವ ಹೋರಾಟದ ಕಿಡಿ ಸೋಮವಾರವೂ ಮುಂದುವರಿಯಿತು. ಶಿವಮೊಗ್ಗ, ಬೆಳಗಾವಿ, ವಿಜಯಪುರ ಸೇರಿ ರಾಜ್ಯಾದ್ಯಂತ ಹಲವು ಜಿಲ್ಲೆ - ತಾಲೂಕು ಕೇಂದ್ರಗಳಲ್ಲಿ ಬ್ರಾಹ್ಮಣ ಸಂಘಟನೆಗಳು ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ. ಶಿವಮೊಗ್ಗದಲ್ಲಿ ಜಿಲ್ಲಾ ಬ್ರಾಹ್ಮಣ ಮಹಾಸಭಾ, ವಿವಿಧ ವಿಪ್ರ ಸಂಘಟನೆಗಳು, ವಿಪ್ರ ವಕೀಲರ ವೇದಿಕೆಗಳ ಸಹಯೋಗದಲ್ಲಿ ತಿಲಕನಗರದ ಶ್ರೀ ರಾಘವೇಂದ್ರಸ್ವಾಮಿ ಮಠದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೌನ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಎಸ್.ಕೆ.ನಟರಾಜ ಭಾಗವತ್ ಮಾತನಾಡಿ, ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರಕ್ಕೆ ಕೈ ಹಾಕುವುದರ ಹಿಂದೆ ದೊಡ್ಡ ಷಡ್ಯಂತ್ರ ಅಡಗಿದ್ದು, ಸಮಗ್ರ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು. ಶಾಸಕ ಎಸ್.ಎನ್.ಚನ್ನಬಸಪ್ಪ ಅವರು ಜನಿವಾರ ಕತ್ತರಿಸಿರುವುದು ಒಂದು ದುಷ್ಕೃತ್ಯ. ಮುಖ್ಯಮಂತ್ರಿ ಸಿದ್ದರಾಮಯ್ಯ ಘಟನೆ ಹೊಣೆಹೊತ್ತು ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು. ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಇತರರಿದ್ದರು. ತುಮಕೂರಿನಲ್ಲಿ ಜಿಲ್ಲಾ ಬಾಹ್ಮಣ ಸಭಾದ ನೇತೃತ್ವದಲ್ಲಿ ಸಮಾವೇಶಗೊಂಡ ಆರ‍್ಯವೈಶ್ಯ, ವಿಶ್ವಕರ್ಮ ಹಾಗೂ ಜೈನ ಸಮುದಾಯದ ಮುಖಂಡರು ಜನಿವಾರ ತೆಗೆಸಿದ್ದರ ವಿರುದ್ಧ ಖಂಡನಾ ನಿರ್ಣಯ ಅಂಗೀಕರಿಸಿದರು. ಧಾರವಾಡದಲ್ಲಿ ತಾಲೂಕು ಬ್ರಾಹ್ಮಣ ಸಭಾ ಹಾಗೂ ಹಿಂದು ಪರ ಸಂಘಟನೆಗಳ ವತಿಯಿಂದ ಬೃಹತ್​ ಪ್ರತಿಭಟನೆ ನಡೆಸಲಾಯಿತು. ನೇತೃತ್ವ ವಹಿಸಿದ್ದ ಶಾಸಕ ಅರವಿಂದ ಬೆಲ್ಲದ, ಹೀನ ಕೃತ್ಯ ನಡೆಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ತೀವ್ರ ಸ್ವರೂಪದ ಹೋರಾಟ ನಡೆಸುವುದಾಗಿ ಎಚ್ಚರಿಸಿದರು. ವಿಧಾನಪರಿಷತ್​ ಸದಸ್ಯ ಶಾಂತಾರಾಮ ಸಿದ್ದಿ ಮಾತನಾಡಿದರು.

ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿ ತಾಲೂಕು ಬ್ರಾಹ್ಮಣ ಸಂಘದ ನೇತೃತೃದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಯಿತು. ಬೆಳಗಾವಿ ನಗರದಲ್ಲಿ ಬ್ರಾಹ್ಮಣ ಸಮಾಜ ಪ್ರತಿಭಟನೆ ನಡೆಸಿತು. ನಗರದ ಚನ್ನಮ್ಮ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಶಾಸಕ ಅಭಯ ಪಾಟೀಲ ಮತ್ತು ಸಮಾಜದ ಮುಖಂಡ ಅನಿಲ ಪೋತದಾರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಬಾಗಲಕೋಟೆ ನಗರದಲ್ಲಿ ಹಿಂದೂ ಸಂಸ್ಕೃತಿ ಸುರಕ್ಷಾ ಸಮಿತಿಯು ಪ್ರತಿಭಟನೆ ನಡೆಸಿ, ಆಕ್ರೋಶ ಹೊರಹಾಕಿತು.

ಹಾಸನ ಜಿಲ್ಲೆ ಅರಕಲಗೂಡು ಪಟ್ಟಣದಲ್ಲಿ ಜನಿವಾರ ಧಾರಣೆ ಮಾಡುವ ವಿವಿಧ ಸಮುದಾಯಗಳು ಬೃಹತ್ ಪ್ರತಿಭಟನೆ ನಡೆಸಲಾಯಿತು. ಯಾದಗಿರಿ ಜಿಲ್ಲೆ ಸುರಪುರದಿಂದ ಅರ್ಚಕರ ಸಂಘದ ಜಿಲ್ಲಾಧ್ಯಕ್ಷ ವೇದಮೂರ್ತಿ ಭೀಮಸೇನಾಚಾರ್ಯ ಜ್ಯೋಶಿ ಮಂಗಳೂರು ಅವರು ಸಿಎಂ ಅವರಿಗೆ ಪತ್ರ ಬರೆದಿದ್ದು, ಜನಿವಾರ ತೆಗೆಸಿದ ಘಟನೆಗೆ ಕಾರಣದಾವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಪರೀಕ್ಷೆಯಿಂದ ವಂಚಿತ ವಿದ್ಯಾರ್ಥಿ ಭವಿಷ್ಯಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ನೇತೃತ್ವದಲ್ಲಿ ವಿವಿಧ ಬ್ರಾಹ್ಮಣ ಸಂಘಟನೆಗಳ ಸಹಭಾಗಿತ್ವದಲ್ಲಿ ನಡೆದ ಹೋರಾಟದಲ್ಲಿ ಮಾತನಾಡಿದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಜಿಲ್ಲಾ ಪ್ರತಿನಿಧಿ, ನ್ಯಾಯವಾದಿ ಮಹೇಶ್ ಕಜೆ, ಜನಿವಾರ ಕೇವಲ ನೂಲಲ್ಲ, ಅದು ಬ್ರಾಹ್ಮಣರ ಅಸ್ಮಿತೆ. ಅದಕ್ಕೆ ಕೈ ಹಾಕಿದರೆ ತಾಯಿ ಗಾಯತ್ರಿ ಸೆರಗಿಗೆ ಕೈ ಹಾಕಿದಂತೆ. ಇದಕ್ಕೆ ಕೊನೆಯ ಉಸಿರು ಇರುವ ತನಕ ಅವಕಾಶ ನೀಡಲಾರೆವು ಎಂದು ಗುಡುಗಿದರು.

==

ಸಚಿವ ಖಂಡ್ರೆಗೆ ಬ್ರಾಹ್ಮಣ ಮಹಾಸಭಾ ಅಭಿನಂದನೆ

ಬೀದರ್‌: ಸಿಇಟಿ ಗಣಿತ ಪರೀಕ್ಷೆಯಿಂದ ವಂಚಿತ ವಿದ್ಯಾರ್ಥಿ ಸುಚಿವ್ರತ್‌ ಕುಲಕರ್ಣಿಗೆ ಭಾಲ್ಕಿಯ ಭೀಮಣ್ಣ ಖಂಡ್ರೆ ತಾಂತ್ರಿಕ ವಿದ್ಯಾಲಯದಲ್ಲಿ (ಬಿಕೆಐಟಿ) ಉಚಿತ ಪ್ರವೇಶ ನೀಡುವುದಾಗಿ ಘೋಷಿಸಿರುವ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ.ಖಂಡ್ರೆ ಅವರಿಗೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಭಿನಂದನೆ ಸಲ್ಲಿಸಿದೆ. ಸುಚಿವ್ರತ್‌ ಮನೆಗೆ ಭೇಟಿ ನೀಡಿ ಆತ್ಮಸ್ಥೈರ್ಯ ತುಂಬಿದ ಸಚಿವರಿಗೆ ಮಹಾಸಭಾಧ್ಯಕ್ಷ ಎಸ್‌.ರಘುನಾಥ ಅಭಿನಂದನೆ ಸಲ್ಲಿಸಿ ಪತ್ರ ಬರೆದಿದ್ದಾರೆ.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌