ಕನ್ನಡಪ್ರಭ ವಾರ್ತೆ ಮೈಸೂರುನಕಾರಾತ್ಮಕ ಚಿಂತನೆ ಬಿಡಿ. ಗುರಿಗೆ ಸಮಯ ನಿಗದಿಪಡಿಸಿಕೊಳ್ಳಿ. ಸ್ಮರ್ಧಾತ್ಮಕ ಜಗತ್ತಿಗೆ ದೃಢ ವಿಶ್ವಾಸವೇ ಮುಖ್ಯ ಎಂದು ಮಂಡ್ಯ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್. ನಂದಿನಿ ತಿಳಿಸಿದರು.ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರದ ವತಿಯಿಂದ ಕಾವೇರಿ ಸಭಾಂಗಣದಲ್ಲಿ ನಡೆಯುತ್ತಿರುವ ಐಎಎಸ್ ಹಾಗೂ ಕೆಎಎಸ್ ಪರೀಕ್ಷಾ ತರಬೇತಿ ಶಿಬಿರಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಸ್ಮರ್ಧಾತ್ಮಕ ಪರೀಕ್ಷೆ ಕುರಿತು ಗೊಂದಲ ನಿವಾರಿಸಿದ ಅವರು, ಸಿದ್ಧತೆ ಹೇಗಿದ್ದರೆ ಉತ್ತಮ, ಓದುವುದು ಹೇಗೆ, ಓದಿದನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು ಹೇಗೆ. ಪ್ರಶ್ನೆಗೆ ಉತ್ತರಿಸುವ ಕ್ರಮ, ಎಷ್ಟು ಅಂಕದ ಪ್ರಶ್ನೆಗಳಿಗೆ ಓದಲು ಆದ್ಯತೆ ನೀಡಬೇಕು. ವಿಷಯವಾರು ಅಧ್ಯಯನ ಮಾಡುವ ವಿಧಾನ, ಓದಿದ್ದನ್ನು ನೆನಪಿನಲ್ಲಿ ಇಟ್ಟುಕೊಳ್ಳಲು ಅವರು ಅನುಸರಿಸಿದ ತಂತ್ರ, ಪ್ರತಿನಿತ್ಯ ಎಷ್ಟು ವಿಷಯ ಓದಬಹುದು, ಕಂಠಪಾಠ ಅಥವಾ ಅರ್ಥ ಮಾಡಿಕೊಂಡು ಓದುವುದರಲ್ಲಿ ಯಾವ ವಿಧಾನ ಉತ್ತಮ, ಮನನ ಕ್ರಮ ಹೇಗೆ, ಓದಿದ್ದನ್ನು ಬರೆದು ಅಭ್ಯಾಸ ಮಾಡಿದರೆ ನೆನಪಿನಲ್ಲಿ ಉಳಿಯುತ್ತಾ... ಹೀಗೆ ಹತ್ತು ಹಲವು ಪ್ರಶ್ನೆಗಳಿಗೆ ಶಿಬಿರಾರ್ಥಿಗಳೊಂದಿಗೆ ಸಂವಾದ ನಡೆಸಿದರು.ಗುರಿಗೆ ನಿರ್ಣಯ ಮಾಡುವುದು ಮುಖ್ಯ. ಸರಿಯಾದ ಸಮಯಕ್ಕೆ ಸರಿಯಾದ ನಿರ್ಣಯ ಮಾಡಬೇಕು. ಪರೀಕ್ಷೆ ಎದುರಿಸುವುದಕ್ಕೆ ಧೈರ್ಯ ಮಾಡಿ, ಪರೀಕ್ಷೆಯೇ ಅಂತಿಮ ಅಲ್ಲ. ಎರಡು ವರ್ಷ ಓದಿ ಪರೀಕ್ಷೆ ಆಗಲಿಲ್ಲ ಅಂದರೆ ಧೃತಿಗೆಡಬೇಡಿ. ಮುಂದಿನ ದಾರಿ ಹುಡುಕಿ ಎಂದು ಸಲಹೆ ನೀಡಿದರು. ಯುಪಿಎಸ್ಸಿ ಪಯಣ ಏಕೀಕೃತವಾಗಿದೆ. ಬೇರೆಯವರೊಂದಿಗೆ ನೀವು ಹೋಲಿಕೆ ಮಾಡಿಕೊಳ್ಳಬೇಡಿ. ಪರೀಕ್ಷೆ ಬರೆಯುವವರು ಪ್ರಸ್ತುತ ವಿದ್ಯಮಾನದ ಬಗ್ಗೆ ಗಮನ ಹರಿಸಿ. ನೀವು ಪ್ರಸ್ತುತ ಓದುತ್ತಿರುವ ವಿಷಯದ ಕುರಿತು ಸಂಪೂರ್ಣ ತಿಳಿದುಕೊಳ್ಳಿ. ಬೆಸಿಕಲಿ ಎನ್.ಸಿ.ಆರ್.ಟಿ ಪುಸ್ತಕ ಸಹಾಯವಾಗುತ್ತದೆ. ಇಂಗ್ಲಿಷ್, ಹಿಂದಿ ಹಾಗೂ ಕನ್ನಡ ಎಂಬ ಮಾಧ್ಯಮ ಅಸಹಾಯಕತೆ ಬೇಡ. ಕನ್ನಡದಲ್ಲಿ ನೀವು ಉತ್ತಮವೇ ಕನ್ನಡದಲ್ಲೇ ಪರೀಕ್ಷೆ ಎದುರಿಸಿ. ನಾನು ಕೂಡ ಯುಪಿಎಸ್ಸಿಯಲ್ಲಿ ಐಚ್ಛಿಕ ವಿಷಯ ಕನ್ನಡವನ್ನೇ ಆಯ್ಕೆ ಮಾಡಿಕೊಂಡಿದ್ದೆ ಎಂದು ಉದಾಹರಿಸುವ ಮೂಲಕ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಬಿ. ರಂಗೇಗೌಡ ಮಾತನಾಡಿ, ಓದಿಗೆ ಆಸಕ್ತಿ ಮುಖ್ಯ. ಇಲ್ಲಿ ಬಹಳ ಕನ್ನಡ ಮಾಧ್ಯಮ ವಿದ್ಯಾರ್ಥಿಗಳೇ ಇದ್ದಾರೆ. ಮಾಧ್ಯಮ ಮುಖ್ಯ ಅಲ್ಲ. ಓದುವ ಆಸಕ್ತಿ ಮುಖ್ಯ. ಹೀಗಾಗಿ ನನಗೆ ಇಂಗ್ಲಿಷ್ ಬರಲ್ಲ, ಹಿಂದಿ ಬರಲ್ಲ ಎನ್ನುವ ಹಿಂಜರಿಕೆ ಬೇಡ. ನಿಮಗೆ ದೃಢವಿರುವ ಮಾಧ್ಯಮದಲ್ಲೇ ಓದಿ ಪರೀಕ್ಷೆ ಎದುರಿಸಿ ಎಂದರು.ಓದುವ ಅನಿವಾರ್ಯತೆ ಸೃಷ್ಟಿಸಿಕೊಳ್ಳಿ. ಎರಡು ವರ್ಷ ಓದಿಗೆ ಅಂತನೆ ಮೀಸಲಿಡಿ. ಒಳ್ಳೆ ಒಳ್ಳೆ ಪುಸ್ತಕ ತೆಗೆದುಕೊಳ್ಳಿ. ನಿಮ್ಮ ಸ್ನೇಹತರ ಜೊತೆ ವಿಷಯವಾರು ಚರ್ಚಿಸಿ. ಒಟ್ಟಾರೆ ಪರೀಕ್ಷೆ ಎದುರಿಸುವ ಛಲ ಬೆಳೆಸಿಕೊಳ್ಳಿ ಎಂದು ಅವರು ಹೇಳಿದರು.ಶ್ರದ್ಧೆ ಹಾಗೂ ಸತತ ಪ್ರಯತ್ನದಿಂದ ತಮ್ಮ ಗುರಿ ಮುಟ್ಟುವ ತನಕ ಅಭ್ಯಾಸ ಮಾಡಿ. ಸಮಸ್ಯೆಗೆ ಹೆದರಿ ಅಭ್ಯಾಸ ನಿಲ್ಲಿಸಬೇಡಿ. ಜೊತೆಗೆ ಸಮಯವನ್ನು ವ್ಯರ್ಥ ಮಾಡದೆ ಸದುಪಯೋಗ ಮಾಡಿಕೊಳ್ಳಿ. ನಿಮ್ಮ ಶೈಕ್ಷಣಿಕ ಅರ್ಹತೆಗೆ ಪೂರಕವಾದ ಎಲ್ಲಾ ಪರೀಕ್ಷೆಗಳನ್ನು ಧೈರ್ಯವಾಗಿ ತೆಗೆದುಕೊಳ್ಳಿ ಎಂದರು.ಪರೀಕ್ಷೆ ಎದುರಿಸಲು ನಿಮ್ಮ ವೈಯಕ್ತಿಕ ಆಸಕ್ತಿ ಮುಖ್ಯವಾಗಿರಬೇಕೆ ಹೊರತು ಬೇರೆಯವರ ಒತ್ತಾಯಕ್ಕೆ ಓದಬಾರದು. ನಿಮ್ಮ ಗುರಿ ಅಚಲವಾಗಿರಬೇಕು ಎಂದು ಹೇಳಿದರು. ಕುಲಪತಿ ಪ್ರೊ.ವಿ. ಶರಣಪ್ಪ ಹಲಸೆ ಮಾತನಾಡಿದರು. ಕುಲಸಚಿವ ಪ್ರೊ.ಕೆ.ಬಿ. ಪ್ರವೀಣ, ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣ ಇದ್ದರು.