ಹೊನ್ನಾಳಿ ಸಣ್ಣ ನೀರಾವರಿ ಇಲಾಖೆ ಕಟ್ಟಡ ತುಂಬ ಬಿರುಕುಗಳು!

KannadaprabhaNewsNetwork | Published : Apr 22, 2025 1:48 AM

ಸಾರಾಂಶ

ಸರ್ಕಾರಿ ಕಚೇರಿ ಕಟ್ಟಡಗಳ ಅಸಮರ್ಪಕ ನಿರ್ವಹಣೆ ಫಲವಾಗಿ ಹಲವಾರು ಸಂದರ್ಭಗಳಲ್ಲಿ ನೌಕರರು ಭಯದಲ್ಲೇ ಕೆಲಸ ಮಾಡುವಂತಹ ದುಸ್ಥಿತಿ ಇರುತ್ತದೆ. ಇದಕ್ಕೆ ಪಟ್ಟಣದ ಟಿ.ಬಿ. ವೃತ್ತದ ಬಳಿ ಇರುವ ಸಣ್ಣ ನೀರಾವರಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕಚೇರಿ ಸೂಕ್ತ ಉದಾಹರಣೆ.

- ಮಳೆ ಬಂದರೆ ಸೋರಿಕೆ, ಸಿಮೆಂಟ್‌ ಚಕ್ಕಳ ಕಿತ್ತುಬರುವ ಮೇಲ್ಚಾವಣಿ । ಅಧಿಕಾರಿ-ಸಿಬ್ಬಂದಿಗೆ ಕಟ್ಟಡ ಕುಸಿಯುವ ಆತಂಕ- - -

* ರಾಜು ಹೊನ್ನಾಳಿ

ಕನ್ನಡಪ್ರಭ ವಾರ್ತೆ ಹೊನ್ನಾಳಿಸರ್ಕಾರಿ ಕಚೇರಿ ಕಟ್ಟಡಗಳ ಅಸಮರ್ಪಕ ನಿರ್ವಹಣೆ ಫಲವಾಗಿ ಹಲವಾರು ಸಂದರ್ಭಗಳಲ್ಲಿ ನೌಕರರು ಭಯದಲ್ಲೇ ಕೆಲಸ ಮಾಡುವಂತಹ ದುಸ್ಥಿತಿ ಇರುತ್ತದೆ. ಇದಕ್ಕೆ ಪಟ್ಟಣದ ಟಿ.ಬಿ. ವೃತ್ತದ ಬಳಿ ಇರುವ ಸಣ್ಣ ನೀರಾವರಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕಚೇರಿ ಸೂಕ್ತ ಉದಾಹರಣೆ.ಪಟ್ಟಣದ ತುಂಗಭದ್ರಾ ನದಿ ದಂಡೆ ಸಮೀಪದ ಅನೇಕ ಸರ್ಕಾರಿ ಕಟ್ಟಡಗಳಲ್ಲಿ ಸಣ್ಣ ನೀರಾವರಿ ಇಲಾಖೆ ಕಟ್ಟಡವೂ ಒಂದಾಗಿದೆ. ಕಳೆದ 10 ವರ್ಷಗಳಿದ ಈ ಕಚೇರಿಗೆ ಅನೇಕ ಅಧಿಕಾರಿಗಳು ಬಂದುಹೋಗಿದ್ದರೂ ಈ ಕಚೇರಿ ದಿನದಿಂದ ದಿನಕ್ಕೆ ಶಿಥಿಲಗೊಳ್ಳುತ್ತ, ಅಪಾಯದ ಅಂಚಿನಲ್ಲಿದೆ. ಆದರೆ, ಯಾವ ಅಧಿಕಾರಿಗಳೂ ಕೂಡ ಕಟ್ಟಡದ ಜೀರ್ಣೋದ್ಧಾರಕ್ಕೆ ತಲೆಕೆಡಿಸಿಕೊಂಡಂತಿಲ್ಲ.

ಹತ್ತಾರು ವರ್ಷಗಳಿಂದ ಈ ದುಸ್ಥಿತಿಯಲ್ಲಿರುವ ಕಟ್ಟಡದಲ್ಲಿಯೇ ಸರ್ಕಾರಿ ನೌಕರರು ಇಲಾಖೆಯ ಎಲ್ಲ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಕಟ್ಟಡದಲ್ಲಿ ಒಂದು ಚಿಕ್ಕಹಾಲ್, ಅದರ ಪಕ್ಕ ಎರಡು ಕೊಠಡಿಗಳು, ನಂತರ ಒಂದು ಶೌಚಾಲಯ ಹಾಗೂ ಒಂದು ಹಾಳುಬಿದ್ದ ಕೊಠಡಿ ಇದೆ. ಇದನ್ನು ಗಮನಿಸಿದರೆ ಈ ಹಿಂದೆ ಇದು ಸರ್ಕಾರಿ ನೌಕರರ ವಸತಿ ಗೃಹ ಆಗಿತ್ತು ಎಂದು ತಿಳಿಯುತ್ತದೆ. ಈ ಕಟ್ಟಡದ ಪ್ರವೇಶ ಭಾಗದ ಬಲಭಾಗದ ಕೊಠಡಿಯಲ್ಲಿ ಎ.ಇ.ಇ. ಅಧಿಕಾರಿ ಕಾರ್ಯನಿರ್ವಹಿಸುವ ಛೇಂಬರ್ ಇದೆ. ಇನ್ನೊಂದು ಕೊಠಡಿಯಲ್ಲಿ ಇರುವ ಒಬ್ಬರೇ ಗುಮಾಸ್ತರು ಕೆಲಸ ಮಾಡುವ ಜಾಗವಾಗಿದೆ. ಇನ್ನು ಹಾಲ್‌ನಲ್ಲಿ ಗಣಕಯಂತ್ರ ನಿರ್ವಾಹಕರು ಕಂಪ್ಯೂಟರ್ ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ. ಅಲ್ಲಿಯೇ ಪಕ್ಕದಲ್ಲಿ ಜೆ.ಇ. ಕೆಲಸ ಮಾಡುತ್ತಾರೆ. ಕಟ್ಟಡದ ಬಹುತೇಕ ಗೋಡೆಗಳು ದೊಡ್ಡ ದೊಡ್ಡ ಬಿರುಕು ಬಿಟ್ಟಿವೆ. ಗೋಡೆ ಬಿರುಕುಗಳನ್ನು ನೋಡಿದರೆ ಇಲ್ಲಿ ಕೆಲಸ ಮಾಡಲು ಯಾರಿಗೂ ಧೈರ್ಯವೇ ಬರುವುದಿಲ್ಲ.

ಇನ್ನೊಂದೆಡೆ ಕಟ್ಟಡದ ಮೇಲ್ಛಾವಣೆ ಕೂಡ ದೊಡ್ಡ ಬಿರುಕು ಬಿಟ್ಟಿದೆ. ಇದು ಯಾವ ಸಂದರ್ಭದಲ್ಲಿ ಬೇಕಾದರೂ ಕುಸಿದು ಬೀಳುವ ಪರಿಸ್ಥಿತಿ ಇದೆ. ಇನ್ನೇನು ಮಳೆಗಾಲ ಆರಂಭಗೊಳ್ಳುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಈಗಲೇ ಎಚ್ಚೆತ್ತುಕೊಂಡು ಪರ್ಯಾಯ ವ್ಯವಸ್ಥೆ ಕೈಗೊಂಡರೆ ಮುಂದೆ ಅಗಬಹುದಾದ ಅಪಾಯಗಳನ್ನು ತಪ್ಪಿಸಬಹುದು.ಈ ಕಚೇರಿಯಲ್ಲಿ ಒಬ್ಬರು ಎ.ಇ.ಇ., ಜೂನಿಯರ್ ಎಂಜಿನಿಯರ್, ದ್ವಿತೀಯ ದರ್ಜೆ ಸಹಾಯಕರು ಇದ್ದು, ಮಹಿಳಾ ಸಿಬ್ಬಂದಿ ಮಾತ್ರ ಗುತ್ತಿಗೆ ಅಧಾರದ ಮೇಲೆ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಎಂಜಿನಿಯರ್‌ಗಳು ಫೀಲ್ಡ್‌ ವರ್ಕ್ ಎಂದು ಹೊರಗಡೆ ಹೋಗುತ್ತಾರೆ. ಆದರೆ, ಇನ್ನುಳಿದ ಕೆಲಸಗಾರರು ಇಂತಹ ದುಸ್ಥಿತಿಯಲ್ಲಿರುವ ಅಪಾಯಕಾರಿ ಕಟ್ಟಡದಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡು ಹೊಟ್ಟೆ ಪಾಡಿನ ಕೆಲಸ ಮಾಡಬೇಕಾದ ಅನಿರ್ವಾತೆ ಇದೆ.ಕಟ್ಟಡ ಬಿರುಕುಗಳಿಂದ ಅಧಿಕಾರಿ-ಸಿಬ್ಬಂದಿ ಆತಂಕಗೊಂಡಿದ್ದೇವೆ. ಕೂಡಲೇ ಈ ಕಚೇರಿಯನ್ನು ಸುರಕ್ಷಿತವಾದ ಕಟ್ಟಡಕ್ಕೆ ಸ್ಥಳಾಂತರಿಸಬೇಕು. ಇಷ್ಟಾದರೆ ಸಾಕು ಎನ್ನುತ್ತಿದ್ದಾರೆ. ಈ ಕೋರಿಕೆಗೆ ಮೇಲಧಿಕಾರಿಗಳು, ಸ್ಥಳೀಯ ಶಾಸಕರು, ಮುಖಂಡರು ಗಮನಹರಿಸುವರೇ ಎಂಬುದು ಕಾದುನೋಡಬೇಕಿದೆ.

- - -

(ಕೋಟ್ಸ್‌) ಹೊನ್ನಾಳಿ ಪಟ್ಟಣದಲ್ಲಿರುವ ಸಣ್ಣ ನೀರಾವರಿ ಇಲಾಖೆ ಕಟ್ಟಡ ಸಾಕಷ್ಟು ಶಿಥಿಲವಾಗಿದೆ. ಪ್ರಸ್ತುತ ಹೊಸ ಕಟ್ಟಡ ನಿರ್ಮಾಣ ಕಷ್ಟಸಾಧ್ಯ. ಆದರೆ ಆದಷ್ಟು ಬೇಗ ಇರುವ ಕಟ್ಟಡವನ್ನೇ ಜೀರ್ಣೋದ್ಧಾರ ಮಾಡಲು ಚಿಂತಿಸಲಾಗಿದೆ. ಈ ಬಗ್ಗೆ ಅಗತ್ಯ ದಾಖಲೆಗಳೊಂದಿಗೆ ಈಗಾಗಲೇ ಜಿಲ್ಲಾ ಮತ್ತು ಇಲಾಖೆ ರಾಜ್ಯ ಉನ್ನತ ಅಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸದ್ಯದಲ್ಲೇ ಕಟ್ಟಡ ದುರಸ್ತಿ ಕಾಮಗಾರಿ ಆರಂಭಗೊಳ್ಳಲಿದೆ

- ಡಿ.ಜಿ.ಶಾಂತನಗೌಡ, ಶಾಸಕ, ಹೊನ್ನಾಳಿ ಕ್ಷೇತ್ರ

- - -

-18ಎಚ್.ಎಲ್.ಐ1.ಜೆಪಿಜಿ: ಹೊನ್ನಾಳಿಯ ಶಿಥಿಲ ಸಣ್ಣ ನೀರಾವರಿ ಇಲಾಖೆ ಕಟ್ಟಡ.

-18ಎಚ್.ಎಲ್.ಐ1ಎ.ಜೆಪಿಜಿ: ಮೇಲ್ಛಾವಣೆ ಶಿಥಿಲಗೊಂಡು ಸಿಮೆಂಟ್‌ ಉದುರಿ ಬಿದ್ದಿರುವುದು.

-18ಎಚ್.ಎಲ್.ಐ1ಬಿ.ಜೆಪಿಜಿ: ಗೋಡೆಗಳಲ್ಲಿ ಉಂಟಾಗಿರುವ ದೊಡ್ಡ ಬಿರುಕುಗಳು.

Share this article