ಬಸವರಾಜ ಸರೂರ ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು ಸಾರ್ವಜನಿಕರಿಗೆ ರಸ್ತೆ, ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದು ಸ್ಥಳೀಯ ಸಂಸ್ಥೆಗಳ ಆದ್ಯ ಕರ್ತವ್ಯವಾಗಿದೆ. ಆದರೆ ರಾಣಿಬೆನ್ನೂರಿನ ಹಳೇ ಮಾಗೋಡ ದ್ವಿಪಥ ರಸ್ತೆ ಹದಗೆಟ್ಟು ಸರಿ ಸುಮಾರು ಒಂದು ವರ್ಷ ಗತಿಸಿದರೂ ಇಂದಿಗೂ ಅದಕ್ಕೆ ದುರಸ್ತಿ ಭಾಗ್ಯ ಲಭಿಸದೇ ಶಾಪಗ್ರಸ್ತವಾಗಿದೆ.
ಗುಂಡಿಗಳ ನಡುವೆ ರಸ್ತೆ: ಸಾಮಾನ್ಯವಾಗಿ ರಸ್ತೆಗಳಲ್ಲಿ ಗುಂಡಿಗಳು ನಿರ್ಮಾಣಗೊಂಡಿರುತ್ತವೆ. ಆದರೆ ಇಲ್ಲಿ ಅದಕ್ಕೆ ವ್ಯತಿರಿಕ್ತವಾಗಿ ಗುಂಡಿಗಳ ನಡುವೆ ರಸ್ತೆಯಿರುವಂತೆ ಭಾಸವಾಗುತ್ತದೆ. ಹೀಗಾಗಿ ಇಲ್ಲಿ ಸಂಚರಿಸುವ ವಾಹನ ಸವಾರರು ಅಂಗೈಯಲ್ಲಿ ಜೀವ ಹಿಡಿದು ಸಾಗುವ ಪರಿಸ್ಥಿತಿಯಿದೆ. ಗುಂಡಿಗಳನ್ನು ತಪ್ಪಿಸುವ ಸಲುವಾಗಿ ಕೆಲವು ವಾಹನ ಸವಾರರು ದ್ವಿಪಥ ರಸ್ತೆಯಿದ್ದರೂ ಒಂದೇ ಕಡೆಯಿಂದ ಸಂಚರಿಸುತ್ತಾರೆ. ಇನ್ನು ಪಾದಚಾರಿಗಳ ಪರಿಸ್ಥಿತಿಯಂತೂ ಆ ದೇವರಿಗೆ ಪ್ರೀತಿ ಎನ್ನುವಂತಿದೆ. ಮಳೆಗಾಲದಲ್ಲಿ ಗುಂಡಿಗಳಲ್ಲಿ ನೀರು ಸಂಗ್ರಹವಾಗಿ ಸಾಕಷ್ಟು ಅಪಘಾತಗಳು ಸಂಭವಿಸುತ್ತಿವೆ.ಪ್ರಮುಖ ಸಂಪರ್ಕ ರಸ್ತೆ: ಇದು ನಾಲ್ಕೈದು ನಗರಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದೆ. ಈ ಮಾರ್ಗದಲ್ಲಿ ಅಯ್ಯಪ್ಪಸ್ವಾಮಿ ದೇವಸ್ಥಾನ, ಈಶ್ವರಿ ವಿಶ್ವವಿದ್ಯಾಲಯ ಹಾಗೂ ಎರಡು ವಿದ್ಯಾರ್ಥಿನಿಯರ ವಸತಿ ನಿಲಯಗಳಿವೆ. ಪ್ರತಿದಿನ ಸಾಕಷ್ಟು ಜನರು ಈ ರಸ್ತೆಯನ್ನು ಬಳಸಿ ಸಂಚಾರ ಕೈಗೊಳ್ಳುತ್ತಾರೆ. ನಗರಸಭೆ ಅಧಿಕಾರಿಗಳು ಕೂಡ ಪ್ರತಿ ದಿನ ಇದೇ ಮಾರ್ಗವಾಗಿ ಸಂಚರಿಸುತ್ತಿದ್ದರೂ ಸಮಸ್ಯೆಯ ಬಗ್ಗೆ ಗಮನಹರಿಸದಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿಯಾಗಿದೆ. ಇನ್ನು ಮೇಲಾದರೂ ನಗರಸಭೆ ಅಧಿಕಾರಿಗಳು ಯಾವುದೇ ನೆಪ ಹೇಳದೇ ರಸ್ತೆ ದುರಸ್ತಿ ಮಾಡಿಸುವರೋ ಕಾದು ನೋಡಬೇಕಾಗಿದೆ. ಈ ರಸ್ತೆಯು ನಾಲ್ಕೈದು ನಗರಗಳಿಗೆ ಸಂಪರ್ಕ ಕಲ್ಪಿಸುವುದರಿಂದ ಹೆಚ್ಚಿನ ಜನರು ಈ ಮಾರ್ಗವಾಗಿ ಸಂಚರಿಸುತ್ತಾರೆ. ಕಳೆದ ಒಂದು ವರ್ಷದಿಂದ ರಸ್ತೆ ಹದಗೆಟ್ಟಿದ್ದರೂ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಸಮಸ್ಯೆ ಬಗೆಹರಿಸಲು ಮುಂದಾಗದಿರುವುದು ಅಚ್ಚರಿಯ ಸಂಗತಿಯಾಗಿದೆ. ಆದಷ್ಟು ಶೀಘ್ರ ರಸ್ತೆ ಕಾಮಗಾರಿ ಕೈಗೊಂಡು ಜನರ ಬವಣೆ ತಪ್ಪಿಸಬೇಕು ಎಂದು ಗೌರಿಶಂಕರ ನಗರದ ನಿವಾಸಿ ಅಮಿತ ಹಿರೇಮಠ ಹೇಳಿದರು.ಕಾಮಗಾರಿ ಕುರಿತು ಗುತ್ತಿಗೆದಾರರು ನ್ಯಾಯಾಲಯಕ್ಕೆ ಹೋದ ಕಾರಣ ದುರಸ್ತಿ ಕಾರ್ಯ ವಿಳಂಬವಾಗಿದೆ. ಇದೀಗ ಸಮಸ್ಯೆ ಬಗೆಹರಿದಿದ್ದು ನಗರೋತ್ಥಾನ ಹಂತ 4ರ ಡಿಸಿಆರ್‌ನಡಿ 1.12 ಕೋಟಿ ರು. ವೆಚ್ಚದಲ್ಲಿ ಜೂ.8ರ ನಂತರ ಜಿಲ್ಲಾಧಿಕಾರಿಗಳಿಂದ ಆದೇಶ ಪತ್ರ ನೀಡಿ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ರಾಣಿಬೆನ್ನೂರಿನ ನಗರಸಭೆ ಪೌರಾಯುಕ್ತ ನಿಂಗಪ್ಪ ಕುಮ್ಮಣ್ಣನವರ ಹೇಳಿದರು.