ಕನ್ನಡಪ್ರಭ ವಾರ್ತೆ ಭಾಲ್ಕಿ
ಹೆತ್ತ ತಂದೆ, ತಾಯಿಯ ಸೇವೆಯೇ ದೇವರ ಸೇವೆಗೆ ಸಮ. ಬಾಳಿಗೆ ಬೆಳಕಾದ ತಾಯಿ-ತಂದೆ ಸೇವೆಯಿಂದ ಸಂತೃಪ್ತಿ ಕಾಣಬೇಕು ಎಂದು ಕಟ್ಟಿಮನಿ ಹಿರೇಮಠ ಸಂಸ್ಥಾನ ಮೆಹಕರ, ತಡೋಳಾದ ರಾಜೇಶ್ವರ ಶಿವಾಚಾರ್ಯರು ಪ್ರತಿಪಾದಿಸಿದರು.ತಾಲೂಕಿನ ಮೊರಂಬಿ ಗ್ರಾಮದಲ್ಲಿ ಸೋಮವಾರ ನಡೆದ ಮಹಾದೇವ ಮಂದಿರದ ಕಳಸಾರೋಹಣ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಮಂದಿರ ಗ್ರಾಮಸ್ಥರೆಲ್ಲರೂ ಸೇರಿ ಕಟ್ಟುತ್ತಾರೆ. ಆದರೆ ಆ ಮಂದಿರದ ಮುಕುಟ ಮಣಿಯಾದ ಕಳಸಾರೋಹಣ ಕಾರ್ಯಕ್ರಮ ಮಾತ್ರ ಲೇಕ ಮಾತೆಯರು ನಡೆಸಿಕೊಡುವರು.
ಲೇಕ ಮಾತೆಯರೆಂದರೆ ಮದುವೆಯಾಗಿ ಬೇರೆ ಗ್ರಾಮಕ್ಕೆ ತೆರಳಿದ ಗ್ರಾಮದ ಮಹಿಳೆಯರು. ಗ್ರಾಮದಿಂದ ಹೊರಹೋದ ಎಲ್ಲಾ ಮಾತೆಯರಿಗೆ ಗ್ರಾಮಕ್ಕೆ ಕರೆಯಿಸಿ, ಅವರಿಂದ ಕಾಣಿಕೆ ಪಡೆದು ಕಳಸಾರೋಹಣ ಕಾರ್ಯಕ್ರಮ ನಡೆಸಿಕೊಡುವರು. ಹೀಗಾಗಿ ಕಳಸಾರೋಹಣ ಕಾರ್ಯಕ್ರಮಕ್ಕೆ ಲೇಕ ಮಾತೆಯರಿಂದಲೇ ಕಾಣಿಕೆ ಪಡೆಯಲಾಗುವುದು ಎಂದು ಹೇಳಿದರು.ಪಂಢರಾಪುರದ ವಿಠಲ ರುಕ್ಮಿಣಿ ಮಂದಿರದ ಅಧ್ಯಕ್ಷ ಗಹಿನಿನಾಥ ಮಹಾರಾಜ ಔಸೇಕರ, ಪ್ರತಿಯೊಂದು ಗ್ರಾಮಗಳಲ್ಲಿಯೂ ಮಂದಿರಗಳಿರುತ್ತವೆ. ಮನುಷ್ಯರು ಮಂದಿರಕ್ಕೆ ನಮಸ್ಕರಿಸಲು ಹೋಗುವುದು ವಾಡಿಕೆ. ಆದರೆ ಮನುಷ್ಯನಿಗೆ ಅತಿ ದು:ಖವಾದಾಗಲೂ ಮಂದಿರಕ್ಕೆ ಬಂದು ಪೂಜೆ ಸಲ್ಲಿಸುವರು. ಅತೀ ಸುಖವಾದಾಗಲೂ ಮಂದಿರಕ್ಕೆ ಆಗಮಿಸಿ ಪೂಜಿಸುವರು. ಪ್ರತಿ ಗ್ರಾಮಗಳಲ್ಲಿಯ ದೇವಾಲಯಗಳಿಂತಲೂ ಮೊರಂಬಿ ಗ್ರಾಮದ ಮಹಾದೇವ ಮಂದಿರಕ್ಕೆ ವಿಶೇಷತೆ ಇದೆ ಎಂದರು.
ಸುಮಾರು 50 ವರ್ಷಗಳ ಹಿಂದೆ ಮೊರಂಬಿ ಬಸವೇಶ್ವರ ದೇವಸ್ಥಾನದ ನಿರ್ಮಾತೃ ಮಹಾದೇವಪ್ಪ ಗುಂದಗೆ ಸ್ಥಾಪಿಸಿದ. ಈ ಪುರಾತನ ಮಹಾದೇವರ ದೇವಾಲಯಕ್ಕೆ ಗ್ರಾಮದ ಯುವಕರು, ಹಿರಿಯರು ಸೇರಿ ಭವ್ಯ ಮಂದಿರ ನಿರ್ಮಿಸಿ, ಗ್ರಾಮದ ಲೇಕ ಮಾತೆಯರಿಂದ ಕಳಸಾರೋಹಣ ಮಾಡಿಸುತ್ತಿರುವುದು ನಿಜಕ್ಕೂ ಪ್ರಶಂಸನಾರ್ಹವಾಗಿದೆ.ಮಂದಿರದ ಕಳಸಕ್ಕೆ ತುಂಬಾ ಮಹತ್ವವಿದೆ. ದೇಹದಮೇಲಿನ ಮುಖಕ್ಕಿರುವ ಕಿಮ್ಮತ್ತು ದೇವಾಲಯದ ಮೇಲಿನ ಕಳಸಕ್ಕಿದೆ. ಹೀಗಾಗಿ ಕಳಸವಿಲ್ಲದಿದ್ದರೆ ಮಂದಿರಕ್ಕೆ ಬೆಲೆಯಿಲ್ಲ. ಗ್ರಾಮದ 751 ಲೇಕ ಮಾತೆಯರು ಸೇರಿ ಕಳಸಾರೋಹಣ ಕಾರ್ಯಕ್ರಮಕ್ಕೆ ಮೆರಗು ತಂದು ಕೊಟ್ಟಿರುವುದು ಎಲ್ಲರೂ ಮೆಚ್ಚುವಂತಹ ಕಾರ್ಯವಾಗಿದೆ ಎಂದರು.
ಮುಚಳಂಬಿ ನಾಗಭೂಷಣ ಶಿವಯೋಗಿ ಮಠದ ಪ್ರಣವಾನಂದ ಸ್ವಾಮೀಜಿ ಆಶಿವರ್ಚನ ನೀಡಿದರು. ಅಡವಿ ಸಿದ್ದೇಶ್ವರ ಮಠದ ಅಶೋಕ ಮಹಾಲೀಂಗ ಸ್ವಾಮಿ ದಂಪತಿಗೆ ದೇವಸ್ಥಾನ ಸಮಿತಿಯಿಂದ ಗೌರವಿಸಲಾಯಿತು. ಇದಕ್ಕೂ ಮುನ್ನ ಕಟ್ಟಿಮನಿ ಹಿರೇಮಠ ಸಂಸ್ಥಾನದ ರಾಜೇಶ್ವರ ಶಿವಾಚಾರ್ಯರಿಂದ ಶಿವದೀಕ್ಷೆ ಹಾಗೂ ಜಪಯಜ್ಞ ಕಾರ್ಯಕ್ರಮಗಳು ನಡೆದವು.ಮದಕಟ್ಟಿಯ ಕೀರ್ತನಕಾರ ಸುರೇಶ ಮಹಾರಾಜ, ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಜಯರಾಜ ದಾಬಶೆಟ್ಟಿ, ಸಂತೋಷ ಬಿಜಿ ಪಾಟೀಲ, ಭದ್ರೇಶ ಸ್ವಾಮಿ, ಶಣ್ಮುಖಪ್ಪ ಉಚ್ಚೇಕರ, ವಿಜಯಕುಮಾರ ವಾರದ, ಅಂಕುಶರಾವ ಪಾಟೀಲ, ನರಸಿಂಗ ಕಾಂಗಲೆ, ಅಮೃತ ಪಾಟೀಲ, ಶರಣಪ್ಪಾ ಕಾಗೆ, ನಾಗೇಶ ಪ್ರಥ್ವಿರಾಜ ಮೇತ್ರೆ, ಶ್ರೀಧರ ವಿಶ್ವನಾಥ ಪಾಟೀಲ ಉಪಸ್ಥಿತರಿದ್ದರು.
ವಿಯಕುಮಾರ ವಾರದ ಸ್ವಾಗತಿಸಿದರು. ಅವಿನಾಶ ಸ್ವಾಮಿ ನಿರೂಪಸಿದರೆ ಸುನೀಲ ಮಾಗಾವೆ ವಂದಿಸಿದರು.