ಭಟ್ಕಳ: ಇಲ್ಲಿನ ಮುರ್ಡೇಶ್ವರ ದೇವಸ್ಥಾನದ ದರ್ಶನಕ್ಕೆ ಬರುವ ಭಕ್ತರು ವಸ್ತ್ರ ಸಂಹಿತೆ ನಿಯಮ ಪಾಲಿಸಬೇಕೆಂದು ದೇವಸ್ಥಾನದ ವತಿಯಿಂದ ವಸ್ತ್ರ ಸಂಹಿತೆಯ ಕಟೌಟ್ ಹಾಕಿ ವಿನಂತಿಸಲಾಗಿದೆ.
ಭಾನುವಾರ ದೇವಸ್ಥಾನಕ್ಕೆ ಬರುವ ಭಕ್ತರು ವಸ್ತ್ರಸಂಹಿತೆ ಪಾಲಿಸುವಂತೆ ವಿನಂತಿಸಿ ಕಟೌಟ್ ಹಾಕಲಾಗಿದೆ. ಈ ಕಟೌಟ್‌ನಲ್ಲಿ ಮಹಿಳೆಯರು ಸೀರೆ, ಚೂಡಿದಾರ, ಪುರುಷರು ಅಂಗಿ, ಧೋತಿ, ಪ್ಯಾಂಟ್ ಶರ್ಟ್ ಮತ್ತು ಕುರ್ತಾ ಫೈಜಾಮ್ ಧರಿಸಿ ದೇವರ ದರ್ಶನ ಪಡೆಯಬಹುದೆಂದು ತಿಳಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ದೇವಸ್ಥಾನದ ವ್ಯವಸ್ಥಾಪಕ ಮಂಜುನಾಥ ಶೆಟ್ಟಿ ಅವರು, ಮುರುಡೇಶ್ವರನ ಸನ್ನಿಧಿಯಲ್ಲಿ ಪಾವಿತ್ರ್ಯತೆ ಕಾಪಾಡುವ ಉದ್ದೇಶದಿಂದ ದೇವರ ದರ್ಶನ ಮಾಡುವ ಭಕ್ತರಿಗೆ ವಸ್ತ್ರಸಂಹಿತೆ ನಿಯಮ ಪಾಲಿಸುವಂತೆ ವಿನಂತಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಭಕ್ತರ ಸ್ಪಂದನೆ ನೋಡಿ ವಸ್ತ್ರಸಂಹಿತೆ ನಿಯಮವನ್ನು ಕಡ್ಡಾಯಗೊಳಿಸಲು ನಿರ್ಧರಿಸಲಾಗಿದೆ ಎಂದರು.ಮುರ್ಡೇಶ್ವರದ ದೇವಸ್ಥಾನದಿಂದ ಭಕ್ತಾದಿಗಳಿಗೆ ವಸ್ತ್ರಸಂಹಿತೆ ಬಗ್ಗೆ ಕಟೌಟ್ ಹಾಕಿ ವಿನಂತಿಸಿರುವುದು.