ಕಳೆದ ಹಲವು ದಶಕಗಳಿಂದ ಈ ರಸ್ತೆಯನ್ನು ಡಾಂಬರೀಕರಣ ಮಾಡುವಂತೆ ಒತ್ತಾಯಿಸಿ ಬ್ಯಾಡ್ರಳ್ಳಿ ಹಾಗೂ ಹೊಸೂರು ಗ್ರಾಮಸ್ಥರು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗದ ಕಾರಣ ಬೇಸತ್ತ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಚುನಾವಣೆ ಬಹಿಷ್ಕರಿಸಲು ಮುಂದಾದರು. ಈ ಸಂದರ್ಭದಲ್ಲಿ ಈ ಹಿಂದೆ ಇದ್ದ ಶಾಸಕರು ಕೆಲವು ಮೀಟರುಗಳಷ್ಟು ಜಲ್ಲಿ ರಸ್ತೆ ಮಾಡಿಸಿ ಶೀಘ್ರ ಡಾಂಬರ್ ರಸ್ತೆ ಮಾಡಿಸಿಕೊಡುವ ಭರವಸೆ ನೀಡಿ ಗ್ರಾಮಸ್ಥರನ್ನು ಸಮಾಧಾನಗೊಳಿಸಿದ್ದರು. ಆದರೆ ಈಗ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆ ಸಂಪೂರ್ಣ ಹಾಳಾಗಿದ್ದು, ಈ ರಸ್ತೆಯಲ್ಲಿ ಸಂಚಾರ ಅಸಾಧ್ಯವಾಗಿದೆ.
ಕನ್ನಡಪ್ರಭ ವಾರ್ತೆ ಆಲೂರು ತಾಲೂಕಿನ ಭೈರಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊಸೂರು ಹಾಗೂ ಬ್ಯಾಡ್ರಳ್ಳಿ ಗ್ರಾಮಗಳನ್ನು ಸಂಪರ್ಕಿಸುವ ರಸ್ತೆ ಸಂಪೂರ್ಣ ಗುಂಡಿಮಯವಾಗಿದ್ದು, ಕಳೆದ ಎರಡು ವಾರಗಳಿಂದ ಎಡಬಿಡದೆ ಸುರಿಯುತ್ತಿರುವ ಮುಂಗಾರು ಮಳೆಯಿಂದಾಗಿ ರಸ್ತೆ ಸಂಪೂರ್ಣ ಕೆಸರು ಗದ್ದೆಯಂತಾಗಿ ಗ್ರಾಮಸ್ಥರು ಪರದಾಡುವಂತಾಗಿದೆ.
ಕಳೆದ ಹಲವು ದಶಕಗಳಿಂದ ಈ ರಸ್ತೆಯನ್ನು ಡಾಂಬರೀಕರಣ ಮಾಡುವಂತೆ ಒತ್ತಾಯಿಸಿ ಬ್ಯಾಡ್ರಳ್ಳಿ ಹಾಗೂ ಹೊಸೂರು ಗ್ರಾಮಸ್ಥರು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗದ ಕಾರಣ ಬೇಸತ್ತ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಚುನಾವಣೆ ಬಹಿಷ್ಕರಿಸಲು ಮುಂದಾದರು. ಈ ಸಂದರ್ಭದಲ್ಲಿ ಈ ಹಿಂದೆ ಇದ್ದ ಶಾಸಕರು ಕೆಲವು ಮೀಟರುಗಳಷ್ಟು ಜಲ್ಲಿ ರಸ್ತೆ ಮಾಡಿಸಿ ಶೀಘ್ರ ಡಾಂಬರ್ ರಸ್ತೆ ಮಾಡಿಸಿಕೊಡುವ ಭರವಸೆ ನೀಡಿ ಗ್ರಾಮಸ್ಥರನ್ನು ಸಮಾಧಾನಗೊಳಿಸಿದ್ದರು. ಆದರೆ ಈಗ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆ ಸಂಪೂರ್ಣ ಹಾಳಾಗಿದ್ದು, ಈ ರಸ್ತೆಯಲ್ಲಿ ಸಂಚಾರ ಅಸಾಧ್ಯವಾಗಿದೆ. ಪ್ರತಿವರ್ಷ ಮಳೆಗಾಲದಲ್ಲಿ ಕಷ್ಟಪಟ್ಟು ಪರದಾಡಿಕೊಂಡು, ಜಲ್ಲಿ ರಸ್ತೆಯಲ್ಲಿ ವಿಧಿ ಇಲ್ಲದೆ ಓಡಾಡುತ್ತಿದ್ದ ಈ ಭಾಗದ ಗ್ರಾಮಸ್ಥರಿಗೆ ಈಗ ಜಲಜೀವನ್ ಮಿಷನ್ ಯೋಜನೆಯವರು ಎಲ್ಲೆಂದರಲ್ಲಿ ಜೆಸಿಬಿ ಯಂತ್ರದಿಂದ ಬಗೆದು ರಸ್ತೆಯನ್ನು ಸಂಪೂರ್ಣ ಹಾಳು ಮಾಡಿದ್ದಾರೆ. ಜಲ್ ಜೀವನ್ ಮಿಷನ್ ಯೋಜನೆಯಡಿ ಕುಡಿವ ನೀರಿನ ಸರಬರಾಜಿಗಾಗಿ ಪೈಪ್ ಲೈನ್ ಗಳನ್ನು ಅಳವಡಿಸುವ ಸಂದರ್ಭದಲ್ಲಿ, ಬೇಕಾಬಿಟ್ಟಿಯಾಗಿ ಕಾಮಗಾರಿ ನಡೆಸುತ್ತಿರುವುದರಿಂದಾಗಿ ಈ ಭಾಗದ ಎಲ್ಲಾ ರಸ್ತೆಗಳು ಹಾಳಾಗಿವೆ. ಕಾಮಗಾರಿ ನಡೆಸುವ ಸಂದರ್ಭದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಸ್ಥಳದಲ್ಲಿದ್ದು, ಸರಿಯಾದ ರೀತಿಯಲ್ಲಿ ಕಾಮಗಾರಿ ನಡೆಸುವುದಂತೆ ಕ್ರಮ ಕೈಗೊಳ್ಳದ ಕಾರಣ, ಕಾಮಗಾರಿ ನಡೆಸುತ್ತಿರುವವರು ಬೇಕಾಬಿಟ್ಟಿಯಾಗಿ ಎಲ್ಲೆಂದರಲ್ಲಿ ಬಗೆದು ಪೈಪ್‌ಲೈನ್ ಅಳವಡಿಸುತ್ತಿದ್ದು ಇದರಿಂದಾಗಿ ತಕ್ಕಮಟ್ಟಿಗೆ ಓಡಾಡಲು ಯೋಗ್ಯವಾಗಿದ್ದ ರಸ್ತೆಗಳು ಸಹ ಸಂಪೂರ್ಣ ಹಾಳಾಗುತ್ತಿವೆ.ಗ್ರಾಮಸ್ಥರು ರೊಚ್ಚಿಗೆದ್ದು ಪ್ರತಿಭಟನೆಯ ಹಾದಿ ಹಿಡಿಯುವ ಮೊದಲು ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಗ್ರಾಮೀಣ ಭಾಗದ ರಸ್ತೆಗಳು ಹಾಳಾಗುವುದನ್ನು ತಡೆಯುವುದರ ಜೊತೆಗೆ, ಈಗಾಗಲೇ ಹಾಳಾಗಿರುವ ರಸ್ತೆಗಳನ್ನು ಕಾಂಕ್ರೀಟ್ ಅಥವಾ ಡಾಂಬರ್ ರಸ್ತೆಗಳನ್ನಾಗಿ ಮಾಡಬೇಕಾಗಿದೆ.
---------ಹೇಳಿಕೆ1ಕಳೆದ ಬಾರಿ ನಾವು ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ 400 ಮೀಟರ್‌ನಷ್ಟು ಜಲ್ಲಿ ರಸ್ತೆ ಮಾಡಿ ಶೀಘ್ರ ಮಗ್ಗೆ ರಸ್ತೆಯಿಂದ ಬ್ಯಾಡ್ರಳ್ಳಿಯವರೆಗೂ ಡಾಂಬರ್ ರಸ್ತೆ ಮಾಡುವುದಾಗಿ ಈ ಹಿಂದೆ ಇದ್ದ ಶಾಸಕರು ಭರವಸೆ ನೀಡಿದ್ದರು. ನಮ್ಮ ಗ್ರಾಮಕ್ಕೆ ಟಾರ್ ರಸ್ತೆ ನಿರ್ಮಾಣ ಮಾಡಲಿಲ್ಲ. ಈಗ ಇದ್ದ ರಸ್ತೆಯೂ ಸಂಪೂರ್ಣ ಹಾಳಾಗಿದೆ.
- ಜವರೇಗೌಡ, ಬ್ಯಾಡ್ರಳ್ಳಿ ಗ್ರಾಮಸ್ಥಹೇಳಿಕೆ2
ಈ ರಸ್ತೆ ಕಾಮಗಾರಿಗೆ 50 ಲಕ್ಷ ರು. ಅನುದಾನವನ್ನು ಈಗಾಗಲೇ ಮೀಸಲಿಟ್ಟಿದ್ದು, ಮಳೆ ನಿಂತ ತಕ್ಷಣವೇ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಗುವುದು. 50 ಲಕ್ಷದಲ್ಲಿ ಎಲ್ಲಿಯವರೆಗೂ ಗುಣಮಟ್ಟದ ರಸ್ತೆ ನಿರ್ಮಾಣ ಮಾಡಬಹುದು ಅಲ್ಲಿವರೆಗೂ ಮಾಡಿ, ಮುಂದಿನ ದಿನಗಳಲ್ಲಿ ಬಗ್ಗೆ ರಸ್ತೆಯಿಂದ ಈ ಎರಡು ಗ್ರಾಮಗಳಿಗೂ ಕಾಂಕ್ರೀಟ್ ಅಥವಾ ಡಾಂಬರ್ ರಸ್ತೆಯನ್ನು ಮಾಡಿಕೊಡಲು ಕ್ರಮ ಕೈಗೊಳ್ಳಲಾಗುವುದು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.