ಕನ್ನಡಪ್ರಭ ವಾರ್ತೆ ಬೇಲೂರು
ಮಹಿಳೆಯರು ಸೈಬರ್ ಅಪರಾಧ ಪ್ರಕರಣಗಳಲ್ಲಿ ಸಿಲುಕುತ್ತಿದ್ದು ಫೇಸ್‌ಬುಕ್ ಮತ್ತು ವಾಟ್ಸಪ್ ಚಾಟ್ ಮಾಡುವಾಗ ಜಾಗೃತಿ ವಹಿಸಬೇಕು ಎಂದು ಜೆಎಂಎಫ್‌ಸಿ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಸಿ.ಪ್ರಸನ್ನ ಕುಮಾರ್ ಹೇಳಿದರು. ಪಟ್ಟಣದ ಕೋಟೆ ಮಾತೃಶ್ರೀ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ಆರೋಗ್ಯ ಇಲಾಖೆ ಮತ್ತು ವಕೀಲರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಬ್ಲಾಕ್ ಮಟ್ಟದ ಮಹಿಳೆಯರಿಗೆ ವಿಧನ್ ಸೇ ಸಮಾಧಾನ್ ಮತ್ತು ಉಚಿತ ಕಾನೂನು ಅರಿವು ಜಾಗೃತಿ ಕಾರ್ಯಕ್ರಮ ಉದ್ಘಾಟನೆ ನಡೆಸಿ ಮಾತನಾಡಿದ ಅವರು ದೇಶಕ್ಕೆ ಸ್ವಾತಂತ್ರ್ಯ ಬಂದು ಇಷ್ಟು ದಿನ ಕಳೆದರೂ ಕೂಡ ಸಮಾಜದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ದಬ್ಬಾಳಿಕೆ ನಡೆಯುತ್ತಿದೆ ಎಂದು ವಿಷಾದಿಸಿದರು. ಈ ಹಿಂದೆ ಫೋಟೋಗಳನ್ನು ನಕಲಿ ಮಾಡುವ ಜಾಲವಿತ್ತು. ಆದರೆ ಇತ್ತೀಚಿಗೆ ವಿಡಿಯೋಗಳನ್ನೇ ನಕಲಿ ಮಾಡುವ ಜಾಲಗಳು ಸೈಬರ್ ಬ್ಲಾಕ್ ಮೇಲ್ ಪ್ರಕರಣಗಳು ನಡೆಯುತ್ತಿರುವ ನಿಟ್ಟಿನಲ್ಲಿ ಮಹಿಳೆಯರು ಜಾಗೃತಿ ಮತ್ತು ಮುನ್ನೆಚ್ಚರಿಕೆ ವಹಿಸಬೇಕಿದೆ. ಸಮಾನತೆ ಕೇಲವ ಪುಸ್ತಕದ ಹಾಳೆಗೆ ಸೀಮಿತವಾಗದೆ ಸಮಾಜದಲ್ಲಿ ಪುರುಷ ಮತ್ತು ಸ್ತ್ರೀ ಸಮಾನತೆ ನಿರ್ಮಾಣಗೊಂಡರೆ ಮಾತ್ರ ಸುಸ್ಥಿರ ಸಮಾಜವನ್ನು ಕಾಣಲು ಸಾಧ್ಯವಾಗುತ್ತದೆ ಎಂಬ ಆಶಯವನ್ನು ವ್ಯಕ್ತಪಡಿಸಿದರು. ತಾಲೂಕು ವಕೀಲರ ಸಂಘದ ಕಾರ್ಯದರ್ಶಿ ಜೆ.ಸಿ.ಪುಟ್ಟಸ್ವಾಮಿಗೌಡ ಮಾತನಾಡಿ, ೧೯೯೪ರಲ್ಲಿ ಅನುಷ್ಠಾನಕ್ಕೆ ಬಂದ ಹೆಣ್ಣು ಭ್ರೂಣ ಹತ್ಯೆ ನಿಷೇಧ ಕಾಯಿದೆ ವಿದ್ಯಾವಂತರಿಂದಲೇ ದಾರಿ ತಪ್ಪುತ್ತಿದ್ದು, ಸಮಾಜದಲ್ಲಿ ಲಿಂಗಾನುಪಾತ ಏರುಪೇರಾಗುವ ಆತಂಕವಿದೆ ಎಂದರು.ಸಂಪನ್ಮೂಲ ವ್ಯಕ್ತಿ ಹಾಗೂ ವಕೀಲ ಎಚ್. ಆರ್.ಚಂದ್ರು ಮಾತನಾಡಿ, ಮಹಿಳೆಯರು ಕೆಲಸವನ್ನು ನಿರ್ವಹಿಸುವ ಕಡೆ ಆಸಿಡ್ ದಾಳಿ, ಅತ್ಯಾಚಾರ, ಅಪಹರಣ, ಮತ್ತು ಲೈಂಗಿಕ ದೌರ್ಜನ್ಯ ಮತ್ತು ದಬ್ಬಾಳಿಕೆ ಹೆಚ್ಚಾಗಿದೆ. ಮೊದಲು ಮಹಿಳೆಯರು ಶಿಕ್ಷಣವಂತರಾಗಿ ಸಮಾಜದ ಬಗ್ಗೆ ಪ್ರಜ್ಞೆ ಹೊಂದಿದಾಗ ಮಾತ್ರ ಇಂತಹ ಪ್ರಕರಣಗಳಿಗೆ ಅಂತ್ಯ ಕಾಣಬಹುದು ಎಂದರು. ಬೇಲೂರು ಆರೋಗ್ಯಾಧಿಕಾರಿ ಡಾ. ವಿಜಯ್ ಮಾತನಾಡಿ, ಹೆಣ್ಣು ಮಕ್ಕಳ ಮಾರಾಟ ಮತ್ತು ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳು ಸಮಾಜದಲ್ಲಿ ನಡೆಯುತ್ತಿದೆ. ಇದಕ್ಕೆ ಕೆಲ ಪ್ರಭಾವಿಗಳೆ ಕುಮ್ಮಕ್ಕು ನೀಡುತ್ತಿರುವ ಬಗ್ಗೆ ಇತ್ತೀಚಿನ ದಿನ ಮಂಡ್ಯ ಪ್ರಕರಣ ಸಾಕ್ಷಿಯಾಗಿದೆ. ಹೆಣ್ಣು ಭ್ರೂಣ ಹತ್ಯೆ ಒಂದು ರೀತಿಯಲ್ಲಿ ಕೊಲೆ ಎಂದು ನಮ್ಮ ಸಂವಿಧಾನದಲ್ಲಿ ಕಠಿಣ ಶಿಕ್ಷೆಗೆ ಗುರಿಯಾಗುತ್ತಾರೆ. ಆಶಾ ಕಾರ್ಯಕರ್ತೆರು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಮಹಿಳೆಯರು ಜಾಗೃತಿ ಮತ್ತು ಆರೋಗ್ಯದ ಬಗ್ಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಹೆಬ್ಬಾಳು ಹಾಲಪ್ಪ, ತಾಲೂಕು ಹಿರಿಯ ಆರೋಗ್ಯ ಸುರಕ್ಷಿತಾಧಿಕಾರಿ ಮಂಗಳಮ್ಮ, ಆರೋಗ್ಯ ಶಿಕ್ಷಣಾಧಿಕಾರಿ ಉಷಾ, ತಾಲೂಕು ಆರೋಗ್ಯ ನಿಯಂತ್ರಣಾಧಿಕಾರಿ ದಯಾನಂದ, ಇತರರು ಹಾಜರಿದ್ದರು.