2 ತಿಂಗಳಾದ್ರೂ ಸೈಬರ್ ತನಿಖಾ ಘಟಕ ನಿದ್ರೆ!

KannadaprabhaNewsNetwork |  
Published : Jul 07, 2025, 11:48 PM ISTUpdated : Jul 08, 2025, 10:36 AM IST
vidhan soudha

ಸಾರಾಂಶ

ಸೈಬರ್ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಲು ದೇಶದಲ್ಲೇ ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ರಾಜ್ಯದಲ್ಲಿ ರಚಿಸಲಾದ ಪ್ರತ್ಯೇಕ ತನಿಖಾ ವಿಭಾಗ ‘ಸೈಬರ್ ಕಮಾಂಡರ್ ಸೆಂಟರ್ ಗೆ ಆರಂಭದಲ್ಲೇ ಗ್ರಹಣ ಹಿಡಿದಿದೆ.

ಗಿರೀಶ್ ಮಾದೇನಹಳ್ಳಿ

 ಬೆಂಗಳೂರು :  ಸೈಬರ್ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಲು ದೇಶದಲ್ಲೇ ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ರಾಜ್ಯದಲ್ಲಿ ರಚಿಸಲಾದ ಪ್ರತ್ಯೇಕ ತನಿಖಾ ವಿಭಾಗ ‘ಸೈಬರ್ ಕಮಾಂಡರ್ ಸೆಂಟರ್ (ಸಿಸಿಯು)’ಗೆ ಆರಂಭದಲ್ಲೇ ಗ್ರಹಣ ಹಿಡಿದಿದೆ.

ಪೊಲೀಸ್ ಇಲಾಖೆ ಕಳುಹಿಸಿದ್ದ ಪ್ರಸ್ತಾವನೆಗೆ ತದ್ವಿರುದ್ಧವಾಗಿ ಸೈಬರ್ ಕಮಾಂಡ್ ಸೆಂಟರ್ ಸ್ಥಾಪಿಸಲಾಗಿದೆ ಎಂಬ ಮಾತು ಕೇಳಿ ಬಂದಿದೆ. ಅಲ್ಲದೆ, ಸಿಸಿಯು ಕಾರ್ಯ ನಿರ್ವಹಣೆಗೆ ಸ್ಪಷ್ಟನೆ ನೀಡದೆ ಗೊಂದಲಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಸಿಸಿಯು ರಚನೆ ಆದೇಶ ಬದಲಾಯಿಸುವಂತೆ ಹಿಂದಿನ ಡಿಜಿಪಿ ಅಲೋಕ್ ಮೋಹನ್ ಪತ್ರ ಬರೆದಿದ್ದರು. ಆದರೆ ಈ ಪತ್ರಕ್ಕೆ ಎರಡು ತಿಂಗಳಾದರೂ ಸರ್ಕಾರದ ಪ್ರತ್ರಿಯೆ ಬಂದಿಲ್ಲ. ಇತ್ತ ಸಿಸಿಯು ಡಿಜಿಪಿ ಪ್ರಣವ್ ಮೊಹಂತಿ ಅವರನ್ನು ನೇಮಿಸಿದ ಸರ್ಕಾರ, ಆ ವಿಭಾಗಕ್ಕೆ ಸೂಕ್ತ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಸಹ ವಿಳಂಬ ಮಾಡಿದೆ ಎನ್ನಲಾಗಿದೆ.

ಈ ಬೆಳ‍ವಣಿಗೆ ಹಿನ್ನೆಲೆಯಲ್ಲಿ ದೇಶದಲ್ಲೇ ಸೈಬರ್ ಅಪರಾಧ ಪತ್ತೆದಾರಿಕೆಗೆ ಪ್ರತ್ಯೇಕವಾಗಿ ಸ್ಥಾಪನೆಯಾದ ಸೈಬರ್ ಕಮಾಂಡ್ ಸೆಂಟರ್ ತ್ರಿಶಂಕು ಸ್ಥಿತಿಗೆ ತಲುಪಿದೆ. ಸಿಸಿಯು ಕಾರ್ಯನಿರ್ವಹಣೆಗೆ ಸರ್ಕಾರದ ಸ್ಪಷ್ಟನೆ ನಿರೀಕ್ಷಿಸಲಾಗುತ್ತಿದೆ. ಸರ್ಕಾರದ ಉತ್ತರ ಬಳಿಕ ಕಾರ್ಯನಿರ್ವಹಣೆ ಖಚಿತತೆ ಸಿಗಲಿದೆ. ಅಲ್ಲಿವರೆಗೆ ಇದೇ ಪರಿಸ್ಥಿತಿ ಮುಂದುವರೆಯಬಹುದು ಎಂದು ಹಿರಿಯ ಅಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸಿದರು.

ಗೊಂದಲಗಳಿಗೆ ಕಾರಣಗಳು ಹೀಗಿವೆ:

1.ರಾಜ್ಯ ಪೊಲೀಸ್ ಇಲಾಖೆಗೆ ಡಿಜಿ-ಐಜಿಪಿ ಮಹಾದಂಡನಾಯಕರಾಗಿದ್ದು, ಎಲ್ಲ ವಿಭಾಗಗಳ ಮುಖ್ಯಸ್ಥರು ಇವರಿಗೇ ವರದಿ ಮಾಡಿಕೊಳ್ಳಬೇಕಿದೆ. ಆದರೆ ಸಿಸಿಯು ಮುಖ್ಯಸ್ಥರು ಮಾತ್ರ ಸರ್ಕಾರದ ಆಡಳಿತ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರ ಅಧೀನಕ್ಕೊಳಪಟ್ಟಿರುವುದು ಡಿಜಿ-ಐಜಿಪಿ ಅವರ ಪ್ರಮುಖ ಆಕ್ಷೇಪಕ್ಕೆ ಕಾರಣ. ಇದು ಪೊಲೀಸ್ ಇಲಾಖೆಯೊಳಗಿನ ಸಮನ್ವಯದ ಮೇಲೆ ಪರಿಣಾಮ ಬೀರುವ ಎಂಬ ಆತಂಕ ಇದೆ.

2.ಸಿಸಿಯುಗೆ ಹೊಸದಾಗಿ ಕಚೇರಿ ಹಾಗೂ ಹುದ್ದೆಗಳನ್ನು ಸೃಜಿಸಿಲ್ಲ. ಸದ್ಯ ಪೊಲೀಸ್ ಇಲಾಖೆಯ ಅಸ್ತಿತ್ವದಲ್ಲಿರುವ ಹುದ್ದೆಗಳು ಹಾಗೂ ಕಚೇರಿ ಬಳಸಿಕೊಳ್ಳುವಂತೆ ಸರ್ಕಾರ ಸೂಚಿಸಿದೆ. ಹೀಗಾಗಿ ಕಚೇರಿ, ಸಿಬ್ಬಂದಿ ಸೇರಿ ಮೂಲ ಸೌಲಭ್ಯ ಕಲ್ಪಿಸುವುದು ಒಂದು ವಿಭಾಗವಾದರೆ, ಅಧಿಕಾರ ಮತ್ತೊಂದು ವಿಭಾಗಕ್ಕೆ ಸೇರಿದಂತಾಗಿದೆ.

3. ಸಿಐಡಿಯ ಮಾದಕ ವಸ್ತು ಮತ್ತು ಸೈಬರ್ ಘಟಕಗಳನ್ನು ಸಿಸಿಯುಗೆ ಸೇರ್ಪಡೆ ಮಾಡುವುದಕ್ಕೆ ಪ್ರಬಲ ವಿರೋಧ ವ್ಯಕ್ತವಾಗಿದೆ. ಸಿಬಿಐ ಮಾದರಿಯಲ್ಲಿ ರಾಜ್ಯದಲ್ಲಿ ಸಿಐಡಿ ಇದ್ದು, ಪ್ರತ್ಯೇಕ ತನಿಖಾ ಇಲಾಖೆಯಾಗಿ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ ಸಿಐಡಿಗೆ ಸೈಬರ್ ಪ್ರಕರಣಗಳ ತನಿಖೆಗೆ ಸೈಬರ್ ಘಟಕದ ಅವಶ್ಯಕತೆ ಇದೆ. ಹೀಗಿದ್ದರೂ ಅದಕ್ಕೆ ಸೈಬರ್ ವಿಭಾಗ ಹಿಂಪಡೆದಿರುವ ಮರ್ಮವೇನು? ಸೈಬರ್ ತನಿಖೆಗೆ ರಚಿಸಲಾದ ಸಿಸಿಯುಗೆ ಮಾದಕ ವಸ್ತು ನಿಗ್ರಹ ಘಟಕದ ಸೇರ್ಪಡೆ ಔಚಿತ್ಯವೇನು? ಎಂದು ಅಧಿಕಾರಿಗಳು ಆಕ್ಷೇಪಿಸಿದ್ದಾರೆ.

4. ರಾಜ್ಯದ 43 ಸಿಇಎನ್ ಠಾಣೆಗಳನ್ನು ಸಿಸಿಯು ವ್ಯಾಪ್ತಿಗೆ ಸೇರಿಸಲಾಗಿದೆ. ಆದರೆ ಬೆಂಗಳೂರಿನಲ್ಲಿ ಅತಿ ಹೆಚ್ಚು ಸೈಬರ್ ಪ್ರಕರಣಗಳು ದಾಖಲಾಗುತ್ತಿವೆ. ಅಲ್ಲದೆ, ಸಿಸಿಬಿ ಹಾಗೂ ಸಿಐಡಿಯಲ್ಲಿ ಸೈಬರ್ ಠಾಣೆಗಳಿವೆ. ಕಾನೂನು ಪ್ರಕಾರ ಸ್ವಾಯತ್ತ ಸಂಸ್ಥೆಯಂತೆ ಬೆಂಗಳೂರಿನ ಪೊಲೀಸ್ ಆಯುಕ್ತರಿಗೆ ಸ್ವತಂತ್ರ ನಿರ್ವಹಣೆ ಅಧಿಕಾರವಿದೆ. ಹೀಗಾಗಿ ಸೈಬರ್ ಠಾಣೆ ಕಾರ್ಯನಿರ್ವಹಣೆ ವಿಚಾರವಾಗಿ ಎರಡು ಅಧಿಕಾರ ಕೇಂದ್ರಗಳ ಸ್ಥಾಪನೆ ತಿಕ್ಕಾಟಕ್ಕೆ ಕಾರಣವಾಗಬಹುದು.

5.ಸಿಸಿಯುಗೆ ವಲಯವಾರು ಎಸ್ಪಿಗಳನ್ನು ನೇಮಿಸುವಂತೆ ಡಿಜಿಪಿ ಪ್ರಸ್ತಾಪಿಸಿದ್ದರು. ಆದರೀಗ ಐಜಿಪಿ ವಲಯದ ಕೇಂದ್ರ ಸ್ಥಾನದ ಜಿಲ್ಲೆಯ ಎಸ್ಪಿ ಅವರಿಗೆ ಆ ವಲಯ ವ್ಯಾಪ್ತಿಯ ಜಿಲ್ಲೆಗಳ ಸಿಇಎನ್ ಠಾಣೆಗಳ ಹೊಣೆಗಾರಿಗೆ ನೀಡಲಾಗಿದೆ. ಉದಾಹರಣೆ: ಉತ್ತರ ವಲಯ ಐಜಿಪಿ ಕೇಂದ್ರ ಸ್ಥಾನ ಬೆಳಗಾವಿಯಲ್ಲಿದ್ದು, ಬೆಳಗಾವಿ ಎಸ್ಪಿ ಅವರಿಗೆ ಉತ್ತರ ವಲಯದ ಎಲ್ಲ ಸಿಇಎನ್ ಠಾಣೆಗಳ ಜವಾಬ್ದಾರಿ ಇರುತ್ತದೆ. ಇದು ಎಸ್ಪಿಗಳ ಮಧ್ಯೆ ಅಧಿಕಾರದ ಮೇಲಾಟಕ್ಕೂ ಕಾರಣವಾಗಬಹುದು.

6.ರಾಜ್ಯದ ಮಾಹಿತಿ ಸುರಕ್ಷತಾ ಅಧಿಕಾರಿಯಾಗಿ ಡಿಜಿ ಸೈಬರ್ ಕಮಾಂಡರ್ ಅವರನ್ನು ನೇಮಿಸಿದೆ. ಆದರೆ ಇ-ಆಡಳಿತಕ್ಕೆ ಪ್ರತ್ಯೇಕ ಇಲಾಖೆ ಇದೆ. ಈ ನಡುವೆ ಪೊಲೀಸ್ ಇಲಾಖೆ ವ್ಯಾಪ್ತಿಗೆ ಮಾಹಿತಿ ಸುರಕ್ಷತಾ ಅಧಿಕಾರಿಯಾಗಿ ನಿಯೋಜನೆ ಆಂತರಿಕ ಕಲಹ ಹುಟ್ಟು ಹಾಕಬಹುದು ಎನ್ನಲಾಗಿದೆ.

PREV
Read more Articles on

Latest Stories

ಡಿಕೆಶಿ ಪರ ದಾವಣಗೆರೆಯಲ್ಲಿ 101 ತೆಂಗಿನಕಾಯಿ ಸೇವೆ
ಬೆಂಗಳೂರು-ತುಮಕೂರುಪ್ರಯಾಣ, ಜನ ಹೈರಾಣ
ಸ್ಮಾರ್ಟ್‌ ಮೀಟರ್‌ ವಿವಾದ: ಸಚಿವಜಾರ್ಜ್ ವಿರುದ್ಧ ಬಿಜೆಪಿ ದೂರು