ಭಾರತ, ಶ್ರೀಲಂಕಾ ಸ್ನೇಹ ಬೆಸೆಯಲು ಸೈಕಲ್ ಯಾತ್ರೆ

KannadaprabhaNewsNetwork |  
Published : Feb 24, 2026, 03:45 AM IST
ಪೋಟೋಕನಕಗಿರಿ ಪಟ್ಟಣದ ಮಾರ್ಗವಾಗಿ ಸೈಕಲ್ ನಲ್ಲಿ ಸಾಗುತ್ತಿರುವ ಶ್ರೀಲಂಕಾ ಪ್ರವಾಸಿಗರು.    | Kannada Prabha

ಸಾರಾಂಶ

ಈಗಾಗಲೇ 7 ಸಾವಿರ ಕಿಮೀ ಕ್ರಮಿಸಿದ್ದು, ಇನ್ನೂ 2 ಸಾವಿರ ಕಿಮೀ ಬಾಕಿ ಉಳಿದಿದೆ

ಎಂ. ಪ್ರಹ್ಲಾದ್ ಕನಕಗಿರಿ

ಭಾರತ ಮತ್ತು ಶ್ರೀಲಂಕಾ ರಾಷ್ಟ್ರಗಳ ಸ್ನೇಹ ಬೆಸೆಯುವ ಸದುದ್ದೇಶದಿಂದ ಇಬ್ಬರು ಲಂಕಾ ಪ್ರವಾಸಿಗರು ದೇಶದಾದ್ಯಂತ 9 ಸಾವಿರ ಕಿಮೀ ಸೈಕಲ್ ಸಂಚಾರ ಕೈಗೊಂಡಿದ್ದು, ಬುಧವಾರ ಪಟ್ಟಣದ ಮಾರ್ಗವಾಗಿ ವಿಶ್ವ ಪ್ರಸಿದ್ಧ ಹಂಪಿ ಕಡೆ ಪಯಣ ಬೆಳೆಸಿದರು.

ಭಾರತ ಮತ್ತು ಶ್ರೀಲಂಕಾ ರಾಷ್ಟ್ರಗಳು ಜತೆಗೂಡಿ ಸಾಗಬೇಕೆನ್ನುವ ಹಿತದೃಷ್ಟಿಯಿಂದ ಶ್ರೀಲಂಕಾದ ನುವಾನ್ ಕುಮಾರ್ ಹಾಗೂ ಸುಗತ್ ಪಠರಾಣ್ ಇಬ್ಬರು ಜೊತೆಗೂಡಿ ಸೈಕಲ್ ಮೂಲಕ ದೇಶದ ರಾಮಾಯಣ, ಮಹಾಭಾರತದ ಐತಿಹ್ಯವುಳ್ಳ ಪುಣ್ಯಕ್ಷೇತ್ರಗಳಾದ ಕಾಶಿ, ಪ್ರಯಾಗ್, ಅಯ್ಯೋಧ್ಯೆ, ತಿರುಪತಿ, ಲೇಪಾಕ್ಷಿ, ಹಂಪಿ, ಕನ್ಯಾಕುಮಾರಿ, ದನುಷ್ಕೋಡಿ, ನಾಗಪಟ್ಟಣಂ ಸೇರಿ ವಿವಿಧಡೆ ಭೇಟಿ ನೀಡಿ ಎರಡೂ ರಾಷ್ಟ್ರಗಳು ಒಗ್ಗೂಡಿ ಸಾಗಲೆಂದು ಬೇಡಿಕೊಳ್ಳುತ್ತಿದ್ದಾರೆ.

ಈಗಾಗಲೇ 7 ಸಾವಿರ ಕಿಮೀ ಕ್ರಮಿಸಿದ್ದು, ಇನ್ನೂ 2 ಸಾವಿರ ಕಿಮೀ ಬಾಕಿ ಉಳಿದಿದೆ. ದೇಶದ ಬಿಹಾರ, ಉತ್ತರ ಪ್ರದೇಶ, ಮಧ್ಯ ಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು ರಾಜ್ಯಗಳಲ್ಲಿ ಸೈಕಲ್ ಯಾತ್ರೆ ನಡೆಸಿರುವ ಪ್ರವಾಸಗರು ಇನ್ನೂ 20 ದಿನದಲ್ಲಿ ಶ್ರೀಲಂಕಾಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. 4 ತಿಂಗಳ ನಡೆಯುವ ಈ ಸೈಕಲ್ ಯಾನಕ್ಕೆ ಶ್ರೀಲಂಕಾ ಅಷ್ಟೇ ಅಲ್ಲ ಭಾರತದ ಅನೇಕ ನಗರ ಮತ್ತು ಹಳ್ಳಿ ಜನ ತೋರಿದ ಪ್ರೀತಿ, ಗೌರವಕ್ಕೆ ಆಭಾರಿ ಎನ್ನುತ್ತಾರೆ ಲಂಕಾದ ಖಾಸಗಿ ಸೈಕಲ್ ಕಂಪನಿಯೊಂದರ ಉದ್ಯೋಗಿ ನುವನ್.

ಬೌದ್ಧ ಧರ್ಮದ ಅನುಯಾಯಿಗಳಾಗಿರುವ ನುವಾನ್ ಹಾಗೂ ಸುಗತ್ ತಮ್ಮ ಸೈಕಲ್ ಗಳಿಗೆ ಭಾರತ ಹಾಗೂ ಲಂಕಾ ದೇಶಗಳ ಬಾವುಟ ಕಟ್ಟಿಕೊಂಡು ಎರಡೂ ರಾಷ್ಟ್ರಗಳ ಸಮ್ಮಿಲನವಾಗಬೇಕೆನ್ನುವ ಧ್ಯೇಯ ಸಾರುತ್ತಿದ್ದಾರೆ. ಹೀಗೆ ಮಾರ್ಗದಲ್ಲಿ ಸಾಗುವಾಗ ಇವರಿಬ್ಬರಿಗೂ ಹಲವು ಸಂಘಟನೆಗಳು ಸನ್ಮಾನಿಸಿ ಗೌರವಿಸಿವೆ. ಇನ್ನೊಂದೆಡೆ 2024-25ನೇ ಸಾಲಿನಲ್ಲಿಯೂ ನುವನ್ ಕುಮಾರ ಮೊದಲ ಬಾರಿಗೆ ಸೈಕಲ್ ನೊಂದಿಗೆ ದೇಶ ಸುತ್ತಿದ್ದ. ಇದೀಗ 2ನೇ ಬಾರಿಯೂ ಸೈಕಲ್ ಯಾತ್ರೆಯಲ್ಲಿ ತೊಡಗಿಸಿಕೊಂಡಿದ್ದಾನೆ.

6 ತಿಂಗಳ ವಿಸಾ ಪಡೆದು ಭಾರತ, ಶ್ರೀಲಂಕಾ ಎರಡೂ ದೇಶಗಳು ಒಗ್ಗೂಡಲು ಸೈಕಲ್ ಯಾತ್ರೆ ಕೈಗೊಂಡಿದ್ದೇವೆ. ಭಾರತ, ಲಂಕಾ ಒಂದು ನಾಣ್ಯದ ಎರಡು ಮುಖವಾಗಿವೆ. ಸಹಬಾಳ್ವೆ, ಸಹನೆ,ಪ್ರೀತಿ ಎಲ್ಲವೂ ಮೂಡಲೆಂದು ಅಯ್ಯೋಧ್ಯೆ ರಾಮನಲ್ಲಿ ಪ್ರಾರ್ಥಿಸಿದ್ದೇವೆ. ದಿನಕ್ಕೆ 100 ಕಿಮೀ ಸೈಕಲ್ ಸವಾರಿ ಮಾಡುತ್ತೇವೆ ಎಂದು ಸೈಕಲ್ ಯಾತ್ರಿಕರಾದ ನುವಾನ್ ಮತ್ತು ಸುಗತ್ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೊಂದಲಗಳಿಗೆ ಶೀಘ್ರ ತೆರೆ: ಸತೀಶ್ ಜಾರಕಿಹೊಳಿ
ಪೌಷ್ಟಿಕ ಆಹಾರ ಸೇವಿಸಿ ಸದೃಢರಾಗಿ: ಡಾ. ಪ್ರಕಾಶ ಸಂಕನೂರ