ದೈಹಿಕ ಆರೋಗ್ಯಕ್ಕೆ ಸೈಕ್ಲಿಂಗ್ ಅವಶ್ಯ-ಶೆಟ್ಟೆಪ್ಪ ಪಿರಂಗಿ

KannadaprabhaNewsNetwork |  
Published : Jul 27, 2026, 02:30 AM IST
ಹಾವೇರಿ ನಗರದ ಶ್ರೀ ಚನ್ನಬಸಪ್ಪ ಮಾಗಾವಿ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ 2025-26ನೇ ಸಾಲಿನಲ್ಲಿ ಎಸ್‌ಆರ್ ಸಾಧನೆ ಮಾಡಿದ ತಿಮ್ಮೇಶ ಸಂಪಳ್ಳಿ, ಪ್ರಕಾಶ ಎಚ್.ಟಿ., ಜಯಪ್ರಕಾಶ ಹಾಗೂ ರಾಘವೇಂದ್ರ ಕುಲಕರ್ಣಿ ಅವರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಪ್ರತಿಯೊಬ್ಬರೂ ತಮ್ಮ ದೈಹಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದರ ಜೊತೆಗೆ ಉತ್ತಮ ಉದ್ದೇಶದೊಂದಿಗೆ ಸೈಕ್ಲಿಂಗ್‌ನಲ್ಲಿ ತೊಡಗಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದು ಹುಬ್ಬಳ್ಳಿ ಬೈಸಿಕಲ್ ಕ್ಲಬ್ ಅಧ್ಯಕ್ಷ ಶೆಟ್ಟೆಪ್ಪ ಪಿರಂಗಿ ಹೇಳಿದರು.

ಹಾವೇರಿ:ಪ್ರತಿಯೊಬ್ಬರೂ ತಮ್ಮ ದೈಹಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದರ ಜೊತೆಗೆ ಉತ್ತಮ ಉದ್ದೇಶದೊಂದಿಗೆ ಸೈಕ್ಲಿಂಗ್‌ನಲ್ಲಿ ತೊಡಗಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದು ಹುಬ್ಬಳ್ಳಿ ಬೈಸಿಕಲ್ ಕ್ಲಬ್ ಅಧ್ಯಕ್ಷ ಶೆಟ್ಟೆಪ್ಪ ಪಿರಂಗಿ ಹೇಳಿದರು.

ನಗರದ ಶ್ರೀ ಚನ್ನಬಸಪ್ಪ ಮಾಗಾವಿ ಪ್ರೌಢಶಾಲೆಯಲ್ಲಿ ಹಾವೇರಿ ಫಿಟ್‌ನೆಸ್ ಟ್ರಸ್ಟ್ ಹಾಗೂ ಸೈಕ್ಲೋತ್ಸವ ಕ್ಲಬ್ ವತಿಯಿಂದ ಆಯೋಜಿಸಿದ್ದ 4ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಡಾ. ಅಕ್ವಲ್ ಶೇಖ್ ಮಾತನಾಡಿ, ಸೈಕ್ಲಿಂಗ್ ಆರಂಭಿಸುವ ಮುನ್ನ ದೇಹವನ್ನು ಸಜ್ಜುಗೊಳಿಸುವುದು ಹಾಗೂ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಅತ್ಯಂತ ಮುಖ್ಯವಾಗಿದೆ. ಸವಾರರು ಆರಂಭದಲ್ಲೇ ವೇಗವಾಗಿ ಸೈಕಲ್ ಓಡಿಸದೆ ನಿಧಾನವಾಗಿ ಸವಾರಿ ಆರಂಭಿಸಬೇಕು. ಸೈಕ್ಲಿಂಗ್ ವೇಳೆ ಉಸಿರಾಟದ ಮೇಲೆ ನಿಯಂತ್ರಣ ಹೊಂದಿರಬೇಕು. ಪ್ರತಿಯೊಬ್ಬರೂ ತಮ್ಮ ವಯಸ್ಸು ಮತ್ತು ದೈಹಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ಸೈಕ್ಲಿಂಗ್ ವೇಗವನ್ನು ನಿರ್ಧರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಹಾವೇರಿ ಫಿಟ್‌ನೆಸ್ ಕ್ಲಬ್ ಅಧ್ಯಕ್ಷ ದಯಾನಂದ ಸೂರಗುಂಡ ಮಾತನಾಡಿ, ಸೈಕ್ಲಿಂಗ್ ಕೇವಲ ಕ್ರೀಡೆಯಲ್ಲ. ಅದು ದೀರ್ಘ ದೂರದ ಪ್ರಯಾಣದ ಅನುಭವದ ಜೊತೆಗೆ ವ್ಯಕ್ತಿಯ ದೈಹಿಕ ಹಾಗೂ ಮಾನಸಿಕ ಸಹನೆಯ ಪರೀಕ್ಷೆಯೂ ಆಗಿದೆ ಎಂದರು.

ಎಂ.ಆರ್.ಎಂ. ರಾವ್ ಮಾತನಾಡಿ, ಸೈಕಲ್ ಪಟುಗಳು ತಮ್ಮ ಗುರಿ ಸಾಧನೆಗೆ ಅಗತ್ಯವಾದ ಶಿಸ್ತು, ನಿಖರತೆ, ಚಾಣಾಕ್ಷತನ ಹಾಗೂ ಸದಾ ಎಚ್ಚರಿಕೆಯ ಗುಣಗಳನ್ನು ಬೆಳೆಸಿಕೊಳ್ಳಬೇಕು. ಆರಂಭದ ದಿನಗಳಲ್ಲಿ ಹಲವು ಸವಾಲುಗಳನ್ನು ಎದುರಿಸಿದ್ದರೂ ಸದಸ್ಯರ ಸಹಕಾರದಿಂದ ಕ್ಲಬ್ ಉತ್ತಮವಾಗಿ ಬೆಳೆದಿದೆ ಎಂದರು.

ವೈದ್ಯ ಡಾ. ಸುದೀಪ್ ಪಂಡಿತ್ ಮಾತನಾಡಿ, ತಾವು 2003ರಿಂದ ಸೈಕ್ಲಿಂಗ್ ಮಾಡುತ್ತಿದ್ದು, 40 ವರ್ಷಗಳ ನಂತರ ದೈಹಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ಸೈಕ್ಲಿಂಗ್ ಮಾಡುವುದು ಆರೋಗ್ಯದ ದೃಷ್ಟಿಯಿಂದ ಸೂಕ್ತವಾಗಿದೆ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ 2025-26ನೇ ಸಾಲಿನಲ್ಲಿ ಎಸ್‌ಆರ್ ಸಾಧನೆ ಮಾಡಿದ ತಿಮ್ಮೇಶ ಸಂಪಳ್ಳಿ, ಪ್ರಕಾಶ ಎಚ್.ಟಿ., ಜಯಪ್ರಕಾಶ ಹಾಗೂ ರಾಘವೇಂದ್ರ ಕುಲಕರ್ಣಿ ಅವರನ್ನು ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು. ಅಡಾಕ್ಸ್ ಮಾನ್ಯತೆ ಪಡೆದ ಬಳಿಕ ಕ್ಲಬ್ ಸದಸ್ಯರು ಗುಡುವಿ, ಗೋವಾ, ಬಂದಳಕಿ, ಚಂದ್ರಗುತ್ತಿ ಸೇರಿದಂತೆ ಹಲವು ಪ್ರವಾಸಿ ತಾಣಗಳಿಗೆ ಸೈಕ್ಲಿಂಗ್ ಪ್ರವಾಸ ಕೈಗೊಂಡಿರುವುದನ್ನು ಸ್ಮರಿಸಲಾಯಿತು.

ಎಸ್‌ಆರ್ ಸಾಧಕ ತಿಮ್ಮೇಶ ಸಂಪಳ್ಳಿ ಮಾತನಾಡಿ, ಸೈಕ್ಲಿಂಗ್‌ನಿಂದ ಹೊರಜಗತ್ತಿನ ಪರಿಚಯವಾಗುವುದರ ಜೊತೆಗೆ ಉತ್ತಮ ಸ್ನೇಹಿತರು ದೊರೆಯುತ್ತಾರೆ. ಸೈಕ್ಲಿಂಗ್ ಆರಂಭಿಸಿದ ಬಳಿಕ ತಮ್ಮ ದೈಹಿಕ ಸಾಮರ್ಥ್ಯದಲ್ಲಿ ಉತ್ತಮ ಬದಲಾವಣೆ ಕಂಡುಬಂದಿದೆ. ಜಮ್ಮು-ಕಾಶ್ಮೀರ, ಹುಬ್ಬಳ್ಳಿಯಿಂದ ಮೈಸೂರು ಸೇರಿದಂತೆ 100, 200, 400 ಮತ್ತು 600 ಕಿ.ಮೀ. ದೂರದ ಸೈಕ್ಲಿಂಗ್ ಪೂರ್ಣಗೊಳಿಸಿದ್ದು, ಲಂಡನ್‌ನಲ್ಲಿಯೂ ಸೈಕ್ಲಿಂಗ್ ಮಾಡಿರುವ ಅನುಭವ ಹಂಚಿಕೊಂಡರು.

ಕಾರ್ಯಕ್ರಮಕ್ಕೂ ಮುನ್ನ ನಗರ ಪ್ರಮುಖ ರಸ್ತೆಗಳಲ್ಲಿ ಸೈಕಲ್ ಜಾಥಾ ನಡೆಯಿತು. ನಿವೃತ್ತ ಯೋಧ ಶಿವಪುತ್ರಪ್ಪ ಕಡ್ಲಿ ಜಾಥಾಕ್ಕೆ ಚಾಲನೆ ನೀಡಿದರು.

ಯೋಗಗುರು ಸುಂದರ ಕುಲಕರ್ಣಿ, ಅರವಿಂದ ಮುಲಿಮನಿ, ಸಂಜಯ ಗುಂಜಟ್ಟಿ, ಶ್ರೀನಿವಾಸ ತೇಲಕರ್, ಮೃತ್ಯುಂಜಯ ಪಾಟೀಲ್, ಹೊನ್ನಪ್ಪ ಪಟ್ಟಣಶೆಟ್ಟಿ, ಕಿರಣಕುಮಾರ ನೀರಲಗಿಮಠ, ಮಲ್ಲಿಕಾರ್ಜುನ ಗಾಣಗೇರ, ಉಮೇಶ ಪಾಟೀಲ್, ಉಜ್ವಲ ಹಿರೆಗೌಡರ, ಪ್ರಸನ್ನ ಜೋಶಿ ಹಾಗೂ ಮದುಶ್ವಿನಿ ಸೇರಿದಂತೆ ಹಲವರು ಭಾಗವಹಿಸಿದ್ದರು.

ವೈಷ್ಣವಿ ಮೂಲಿಮನಿ ಪ್ರಾರ್ಥಿಸಿದರು. ಪ್ರಶಾಂತ ದೊಡ್ಡಮನಿ ನಿರೂಪಿಸಿದರು. ಪ್ರಕಾಶ ಎಚ್.ಟಿ. ಸ್ವಾಗತಿಸಿದರು. ಡಾ. ಶ್ರವಣ ಪಂಡಿತ್ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಕರ ಮೇಲಿದೆ ಸಮಾಜದ ಭವಿಷ್ಯ ರೂಪಿಸುವ ಹೊಣೆ: ಡಿ.ಕೆ. ಹೊನ್ನಪ್ಪನವರ
ನರಗುಂದ ತಾಲೂಕಿನಲ್ಲಿ ಬೆಳೆ ಉಳಿಸಲು ಟ್ಯಾಂಕರ್‌ ನೀರಿನ ಮೊರೆ