ಸಿಲಿಂಡರ್ ಸ್ಫೋಟ ಪ್ರಕರಣ: ಬೆಂಗಳೂರಿನ ವಿಕ್ಟೋರಿಯಾದಲ್ಲಿ ಇಬ್ಬರು ಸಾವು

KannadaprabhaNewsNetwork |  
Published : Oct 04, 2025, 01:00 AM IST
3ಎಚ್‌ಪಿಟಿ1- ವಕೀಲ ಕುರುಬರ ದಾಸಪ್ಪನವರ ಹಾಲಪ್ಪ | Kannada Prabha

ಸಾರಾಂಶ

ಹಾಲಪ್ಪ ಗುರುವಾರ ರಾತ್ರಿ 10:05ರ ಹೊತ್ತಿಗೆ ಮೃತಪಟ್ಟರೆ, ಗಂಗಮ್ಮ ಶುಕ್ರವಾರ ಮೃತಪಟ್ಟಿದ್ದಾರೆ.

ಹೊಸಪೇಟೆ: ತಾಲೂಕಿನ ಗಾದಿಗನೂರು ಗ್ರಾಮದಲ್ಲಿ ಸೆ.27ರಂದು ಸಿಲಿಂಡರ್‌ ಸ್ಫೋಟವಾಗಿ ಗಾಯಗೊಂಡು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆರು ಜನರ ಪೈಕಿ ಇಬ್ಬರು ಮೃತಪಟ್ಟಿದ್ದಾರೆ.

ಗಾದಿಗನೂರಿನ ವಕೀಲ ಕುರುಬರ ದಾಸಪ್ಪನವರ ಹಾಲಪ್ಪ (40) ಮತ್ತು ಅವರ ತಾಯಿ ಗಂಗಮ್ಮ(80) ಚಿಕಿತ್ಸೆಗೆ ಸ್ಪಂದಿಸದೇ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟ ಗಾಯಾಳುಗಳು.

ಹಾಲಪ್ಪ ಗುರುವಾರ ರಾತ್ರಿ 10:05ರ ಹೊತ್ತಿಗೆ ಮೃತಪಟ್ಟರೆ, ಗಂಗಮ್ಮ ಶುಕ್ರವಾರ ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿ ಪೋಸ್ಟ್‌ ಮಾರ್ಟಂ ಮಾಡಿ ಇಬ್ಬರ ಮೃತದೇಹಗಳನ್ನು ಗಾದಿಗನೂರು ಗ್ರಾಮಕ್ಕೆ ತಂದು ಅಂತ್ಯಕ್ರಿಯೆ ನೆರವೇರಿಸಲಾಯಿತು. ವಕೀಲ ಹಾಲಪ್ಪ ಅವರ ಅಭಿಮಾನಿಗಳು ತಾಲೂಕಿನ ಧರ್ಮಸಾಗರ ಗ್ರಾಮದಿಂದ ಗಾದಿಗನೂರು ಗ್ರಾಮದವರೆಗೆ ಬೈಕ್‌ ರ್‍ಯಾಲಿ ನೆರವೇರಿಸಿದರು.

ವಕೀಲ ಹಾಲಪ್ಪ, ಅವರ ತಾಯಿ ಗಂಗಮ್ಮ ಮೃತಪಟ್ಟ ಸುದ್ದಿ ಕೇಳಿ ಇಡೀ ಗಾದಿಗನೂರು, ಧರ್ಮಸಾಗರ, ಕಾಕುಬಾಳು, ಗುಂಡ್ಲವದ್ದಿಗೇರಿ, ಬೈಲುವದ್ದಿಗೇರಿ, ಪಾಪಿನಾಯಕನಹಳ್ಳಿ, ವಡ್ಡರಹಳ್ಳಿ, ಇಂಗಳಗಿ, ಜೋಗ ಗ್ರಾಮಗಳಲ್ಲಿ ನೀರವ ಮೌನ ಆವರಿಸಿತ್ತು. ಎಲ್ಲರ ಮೊಗದಲ್ಲೂ ದುಃಖ ಮಡುಗಟ್ಟಿತ್ತು. ಹೊಸಪೇಟೆಯ ವಕೀಲರ ಸಂಘ ಕೂಡ ವಕೀಲ ಕುರುಬರ ದಾಸಪ್ಪನವರ ಹಾಲಪ್ಪರ ಸಾವಿನ ಸುದ್ದಿ ಕೇಳಿ ದಿಗ್ಭ್ರಮೆ ವ್ಯಕ್ತಪಡಿಸಿದೆ.

ಘಟನೆ ವಿವರ:

ಗಾದಿಗನೂರು ಗ್ರಾಮದ ಹಾಲಪ್ಪರ ಮನೆಯಲ್ಲಿ ಸೆ.27ರಂದು ಅಡುಗೆ ಸಿಲಿಂಡರ್‌ವೊಂದು ಖಾಲಿ ಆಗಿದ್ದು, ಬೆಳಗಿನ ಜಾವ ಐದು ಗಂಟೆ ಹೊತ್ತಿಗೆ ಅವರ ಪತ್ನಿ ಕವಿತಾ (33) ಅನ್ನ ಅರ್ಧಂಬರ್ಧ ಬೆಂದಿದ್ದು, ಸಿಲಿಂಡರ್‌ ಬದಲಿಸಲು ಕೇಳಿಕೊಂಡಿದ್ದಾರೆ. ನಿದ್ದೆ ಮಂಪರಿನಲ್ಲಿದ್ದ ಅವರು, ಸಿಲಿಂಡರ್‌ ಬದಲಿಸಲು ಮುಂದಾಗಿದ್ದಾರೆ. ಪಕ್ಕದಲ್ಲೇ ಒಲೆಯಲ್ಲಿ ರೊಟ್ಟಿ ಮಾಡುತ್ತಿದ್ದರಿಂದ ಅದರ ಬೆಂಕಿ ಈ ಹೊಸ ಸಿಲಿಂಡರ್‌ಗೆ ಹೊತ್ತುಕೊಂಡಿದೆ. ಆಗ ಆಕಸ್ಮಿಕವಾಗಿ ಸಿಲಿಂಡರ್‌ ಸ್ಫೋಟ ಸಂಭವಿಸಿ ವಕೀಲ ಹಾಲಪ್ಪ ಅವರ ಮನೆ ಗೋಡೆ ಸಂಪೂರ್ಣ ಜಖಂಗೊಂಡಿದೆ. ಎಂಟು ಜನರು ಗಂಭೀರ ಗಾಯಗೊಂಡಿದ್ದರು.

ಸಿಲಿಂಡರ್‌ ಸ್ಫೋಟದ ತೀವ್ರತೆಗೆ ಗಂಭೀರವಾಗಿ ಗಾಯಗೊಂಡಿದ್ದ ವಕೀಲ ಹಾಲಪ್ಪ, ಗಂಗಮ್ಮ, ಕವಿತಾ, ಮೈಲಾರಪ್ಪ, ಮಲಿಯಮ್ಮ, ಕಾವೇರಿ ಅವರನ್ನು ಬಳ್ಳಾರಿ ಜಿಲ್ಲೆಯ ತೋರಣಗಲ್‌ನ ಜಿಂದಾಲ್‌ನ ಸಂಜೀವಿನಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಪೈಕಿ ಚಿಕಿತ್ಸೆ ಫಲಕಾರಿ ಆಗದೇ ವಕೀಲ ಹಾಲಪ್ಪ, ಅವರ ತಾಯಿ ಗಂಗಮ್ಮ ಮೃತಪಟ್ಟಿದ್ದಾರೆ.

ಇನ್ನೊಂದೆಡೆ ಬಳ್ಳಾರಿಯ ಬಿಮ್ಸ್‌ನಲ್ಲಿ ಮಲ್ಲಿಕಾರ್ಜುನ ಎಂಬವರು ಚಿಕಿತ್ಸೆ ಪಡೆದು ಡಿಸ್ಚಾರ್ಜ್‌ ಹೊಂದಿದ್ದು, ಜಿಂದಾಲ್‌ನ ಸಂಜೀವಿನಿ ಆಸ್ಪತ್ರೆಯಲ್ಲಿ ಕೃತಿಕಾ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಸತಿ ಸಚಿವ ಜಮೀರ್ ಅಹಮ್ಮದ್ ಖಾನ್‌, ಶಾಸಕ ಎಚ್‌.ಆರ್‌. ಗವಿಯಪ್ಪ, ಸಂಸದ ಈ. ತುಕಾರಾಂ ಸೇರಿದಂತೆ ಅನೇಕರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.

ಕಂಬನಿ ಮಿಡಿದ ಸಚಿವ ಜಮೀರ್‌:

ವಿಜಯನಗರ ಜಿಲ್ಲೆ ಹೊಸಪೇಟೆಯ ಗಾದಿಗನೂರಿನಲ್ಲಿ ಸಿಲಿಂಡರ್ ಸ್ಫೋಟಗೊಂಡು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳುಗಳ ಪೈಕಿ ಇಬ್ಬರು ಮೃತಪಟ್ಟಿದ್ದು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಆಸ್ಪತ್ರೆಗೆ ಭೇಟಿ ನೀಡಿ ಮೃತರ ಅಂತಿಮ ದರ್ಶನ ಪಡೆದು ನಮನ ಸಲ್ಲಿಸಿದರು.

ಮೃತರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ ಅವರು, ಸರ್ಕಾರದ ಪರವಾಗಿ ಮೃತರಾದ ಹಾಲಪ್ಪ, ಗಂಗಮ್ಮ ಕುಟುಂಬಗಳಿಗೆ ತಲಾ ಐದು ಲಕ್ಷ ರು. ಪರಿಹಾರ ಘೋಷಿಸಿದರು. ಘಟನೆಯಿಂದ ಮನೆಗೆ ಹಾನಿಯಾಗಿದ್ದು, ವೈಯಕ್ತಿಕ ವೆಚ್ಚದಲ್ಲಿ ಮನೆ ನಿರ್ಮಿಸಿಕೊಡುವುದಾಗಿ ತಿಳಿಸಿದರು.

ನಂತರ ಆ್ಯಂಬುಲೆನ್ಸ್ ಮೂಲಕ ಪಾರ್ಥಿವ ಶರೀರ ಸ್ವ-ಗ್ರಾಮಕ್ಕೆ ಕಳುಹಿಸಿಕೊಡಲು ಸಚಿವರು ವ್ಯವಸ್ಥೆ ಮಾಡಿಕೊಟ್ಟರು. ಅಂತ್ಯಕ್ರಿಯೆಗೆ ಎಲ್ಲ ರೀತಿಯ ವ್ಯವಸ್ಥೆ ಮಾಡಲು ಜಿಲ್ಲಾಧಿಕಾರಿ ಕವಿತಾ ಎಸ್‌. ಮನ್ನಿಕೇರಿ ಅವರಿಗೆ ಸೂಚಿಸಿದರು.

PREV

Recommended Stories

ಬೆಡ್‌ರೂಮಲ್ಲಿ ರಹಸ್ಯ ಕ್ಯಾಮೆರಾ: ಲೈಂಗಿಕಕ್ರಿಯೆ ಚಿತ್ರೀಕರಿಸಿ ದೌರ್ಜನ್ಯ
ಕಾವೇರಿ ಆರತಿ ನಿಲ್ಲಿಸಲ್ಲ: ಡಿಸಿಎಂ