)
ಕನ್ನಡಪ್ರಭ ವಾರ್ತೆ ರಾಯಚೂರು
ಕಳೆದ ಅ.3ರಂದು ಬೆಂಗಳೂರಿನ ನಾಯಂಡಹಳ್ಳಿಯ ವಿನಾಯಕ ಲೇಔಟ್‌ನ ಮನೆಯೊಂದರಲ್ಲಿ ನಡೆದ ಸಿಲಿಂಡರ್ ಸ್ಫೋಟದ ದುರ್ಘಟನೆಯಲ್ಲಿ ಜಿಲ್ಲೆಯ ಸಿರವಾರ ತಾಲೂಕಿನ ಹೊಕ್ರಾಣಿ ಗ್ರಾಮದ ಒಂದೇ ಕುಟುಂಬದ ಆರು ಜನರು ತೀವ್ರವಾಗಿ ಗಾಯಗೊಂಡಿದ್ದು, ಅಲ್ಲಿಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಸಂಬಂಧಿಕರು ಜನಪ್ರತಿನಿಧಿಗಳಲ್ಲಿ ಸಹಾಯ ಹಸ್ತ ಚಾಚಿದ್ದಾರೆ.
ವಿನಾಯಕ ಲೇಔಟ್‌ನಲ್ಲಿ ಸಿಲಿಂಡರ್ ಸ್ಫೋಟಗೊಂಡು ಜಿಲ್ಲೆಯ ಸಿರವಾರ ತಾಲೂಕಿನ ಹೊಕ್ರಾಣಿ ಗ್ರಾಮದ ಕರಿಲಿಂಗಪ್ಪ, ಪತ್ನಿ ಲಕ್ಷ್ಮಮ್ಮ, ಮಕ್ಕಳಾದ ಚೈತ್ರ, ಬಸವನಗೌಡ, ಗೀತಾ ಮತ್ತು ಗಿರಿಜಾ ಇವರು ಗಾಯಗೊಂಡವರು. ಇವರಲ್ಲಿ ತಾಯಿ ಲಕ್ಷ್ಮಮ್ಮ ಹಾಗೂ ಒಂದು ಮಗುವಿನ ಸ್ಥಿತಿ ಗಂಭೀರವಾಗಿದ್ದು, ಗಾಯಾಳು ಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದ್ದು, ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಕರಿಲಿಂಗಪ್ಪ ಕುಟುಂಬದವರು ಉದ್ಯೋಗ ಅರಸಿ ಬೆಂಗಳೂರಿಗೆ ವಲಸೆ ಹೋಗಿದ್ದು, ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್ಎಐ)ದಲ್ಲಿ ದಿನಗೂಲಿಯಾಗಿ ಗಾರ್ಡನಿಂಗ್ ಕೆಲಸ ನಿರ್ವಹಿಸುತ್ತಿದ್ದ. ಕುಟುಂಬ ಸಮೇತ ಬಾಡಿಗೆ ಮನೆಯಲ್ಲಿ ವಾಸುತ್ತಿದ್ದರು. ಕಳೆದ ಕೆಲವು ದಿನಗಳಿಂದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರಿಗೆ ಉತ್ತಮ ಚಿಕಿತ್ಸೆ ದೊರೆಯುತ್ತಿಲ್ಲ. ಹೀಗಾಗಿ ಜಿಲ್ಲಾ ಉಸ್ತು ವಾರಿ ಸಚಿವರು, ಕ್ಷೇತ್ರದ ಶಾಸಕರು ಅಥವಾ ಲೋಕಸಭಾ ಸದಸ್ಯರು ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಕುಟುಂಬದ ನೆರವಿಗೆ ಧಾವಿಸಬೇಕು ಎಂದು ನೊಂದ ಕುಟುಂಬ ಸಂಬಂಧಿಕರು ಮನವಿ ಮಾಡಿದ್ದಾರೆ.