ಹೊಸಪೇಟೆ: ಇಲ್ಲಿನ ಎಲ್‌ಎಫ್‌ಎಸ್ ಶಾಲೆಯ ಹಾಸ್ಟೆಲ್‌ನಲ್ಲಿ ಮಂಗಳವಾರ ಸಿಲಿಂಡರ್ ಸೋರಿಕೆಯಿಂದ ಸಂಭವಿಸಬಹುದಾದ ಭಾರೀ ದುರಂತಯೊಂದು ಸಮಯ ಪ್ರಜ್ಞೆಯಿಂದ ತಪ್ಪಿದೆ.ನಗರದ ಹೃದಯಭಾಗದಲ್ಲಿರುವ ಈ ಶಾಲೆಯ ಹಾಸ್ಟೆಲ್‌ನಲ್ಲಿ ಸಿಲಿಂಡರ್ ಸೋರಿಕೆ ತಿಳಿಯುತ್ತಿದ್ದಂತೆ ಪೋಷಕರು, ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಶಾಲಾ ಮಕ್ಕಳನ್ನು ಹೊರ ಕಳಿಸಿದ್ದಾರೆ. ಹಾಸ್ಟೆಲ್‌ನಲ್ಲಿ 50ರಿಂದ 60 ವಿದ್ಯಾರ್ಥಿಗಳಿದ್ದು, ಇಲ್ಲಿನ ಪಟ್ಟಣ ಠಾಣೆ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಪೋಷಕರಾದ ಡ್ಯಾನಿಯಲ್ ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿ ನಥಾಲಿಯನ್ ಐ ಸಾಂಗ್ಲಿ ಎಂಬವರು ಲೀಕೇಜ್ ತಡೆದಿದ್ದಾರೆ. ಇದೇ ವೇಳೆ ಗ್ಯಾಸ್ ಕಂಪನಿಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಇಆರ್‌ಎಸ್‌ನ ಎಎಸ್‌ಐ ಹನುಮಂತಪ್ಪ, ಪೊಲೀಸ್‌ರಾದ ಮಂಜುನಾಥ್, ಮಹೇಶ್ ಜಾಳೋದ್, ಜಗದೀಶ್, ಶಿವಮೂರ್ತಿ, ದತ್ತಪ್ಪ, ದೇವರಾಜ್, ಗೃಹರಕ್ಷಕ ದಳದ ಸಿಬ್ಬಂದಿ ಎನ್.ಐ. ಸಾಂಗ್ಲಿ ಮತ್ತು ಅಗ್ನಿಶಾಮಕ ಸಿಬ್ಬಂದಿ ಅವಘಡ ತಡೆಯುವಲ್ಲಿ ಯಶಸ್ವಿಯಾಗಿದ್ದು ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ.
ಈಗಾಗಲೇ ಜಿಲ್ಲೆಯ ಗಾದಿಗನೂರಿನಲ್ಲಿ ದುರಂತ ಸಂಭವಿಸಿ ನಾಲ್ವರು ಮೃತಪಪಟ್ಟಿರುವ ಘಟನೆ ಹಸಿರು ಇರುವಾಗಲೇ ಮತ್ತೊಂದು ಅಡುಗೆ ಅನಿಲ ಸೋರಿಕೆ ಪ್ರಕರಣ ಎದುರಾಗಿದೆ. ಹಳ್ಳಿ, ಪಟ್ಟಣ, ನಗರಗಳಲ್ಲಿ ಗ್ಯಾಸ್ ವಿತರಣೆ ವೇಳೆ ಸರಿಯಾಗಿ ಪರಿಶೀಲನೆ ನಡೆಸಲಾಗುತ್ತಿಲ್ಲ. ಜತೆಗೆ ಪೈಪ್ ಹಾಗೂ ವೈಸರ್‌ಗಳು ಸರಿ ಇಲ್ಲದಿದ್ದರೂ ವಿತರಣೆ ಮಾಡಲಾಗುತ್ತಿದೆ. ಅಡುಗೆ ಅನಿಲ ಸಿಲಿಂಡರ್‌ಗಳನ್ನು ವಾಣಿಜ್ಯ ಚಟುವಟಿಕೆಗಳಿಗೂ ಬಳಕೆಗೂ ಕೊಡಲಾಗುತ್ತಿದೆ. ಕಾಳಸಂತೆಯಲ್ಲಿ ಈ ದಂಧೆ ನಡೆಯುತ್ತಿದೆ. ವಾಣಿಜ್ಯ ಚಟುವಟಿಕೆಗೆ ಬಳಕೆ ಆದ ಸಿಲಿಂಡರ್‌ಗಳನ್ನು ಮನೆಗಳ ಬಳಕೆಗೆ ನೀಡಲಾಗುತ್ತಿದೆ. ಇದರಿಂದ ಸಮಸ್ಯೆ ಉಂಟಾಗುತ್ತಿದೆ.ಗ್ಯಾಸ್ ಸಿಲಿಂಡರ್ ವಿತರಕರು ಜನರಲ್ಲಿ ಜಾಗೃತಿ ಮೂಡಿಸುತ್ತಿಲ್ಲ. ಇದರಿಂದ ಈ ರೀತಿ ಅವಘಡಗಳು ಸಂಭವಿಸುತ್ತಿವೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.