ಮೆತಗಲ್‌ನಲ್ಲಿ ತೋಟಗಾರಿಕಾ ಬೆಳೆಗಳ ಸಂಸ್ಕರಣಾ ಘಟಕ

KannadaprabhaNewsNetwork |  
Published : Oct 15, 2025, 02:07 AM IST
14ಕೆಪಿಎಲ್26 ಕೊಪ್ಪಳ ತಾಲೂಕಿನ ಮೆತಗಲ್ ಗ್ರಾಮದಲ್ಲಿ ನಿರ್ಮಾಣವಾಗಿರುವ ತೋಟಗಾರಿಕಾ ಬೆಳೆಗಳ ಸಂಸ್ಕರಣಾ ಘಟಕ | Kannada Prabha

ಸಾರಾಂಶ

ಕೇಂದ್ರ ಸರ್ಕಾರ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಲ್ಯಾಣ ಸಂಪದ ಎನ್ನುವ ಯೋಜನೆಯಡಿ ರಾಯಚೂರು ವಿಶ್ವವಿದ್ಯಾಲಯ ಅಭಿವೃದ್ಧಿ ಪಡಿಸಿದ ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಸಂಸ್ಕರಣಾ ಘಟಕ ನಿರ್ಮಾಣ

ಸೋಮರಡ್ಡಿ ಅಳವಂಡಿ ಕೊಪ್ಪಳ

ನಬಾರ್ಡ ಸಹಯೋಗದಲ್ಲಿ ಕೇಂದ್ರ ಸರ್ಕಾರ ಕೊಪ್ಪಳ ತಾಲೂಕಿನ ಮೆತಗಲ್ ಗ್ರಾಮದ ಬಳಿ ತೋಟಗಾರಿಕಾ ಬೆಳೆಗಳ ಸಂಸ್ಕರಣಾ ಘಟಕ ನಿರ್ಮಾಣ ಮಾಡಿದ್ದು, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಸೆ.15 ರಂದು ಉದ್ಘಾಟಿಸಲಿದ್ದಾರೆ.

ಇದರಿಂದ ಕೊಪ್ಪಳ ಜಿಲ್ಲೆಯ ರೈತರು ಇನ್ಮುಂದೆ ಮಾವು, ಪೇರಲ ಹಾಗೂ ಟೊಮೆಟೋ ಸೇರಿದಂತೆ ತೋಟಗಾರಿಕಾ ಹಣ್ಣಿನ ಬೆಳೆಗಳ ದರ ಕುಸಿತದಿಂದ ಪಾರಾಗಲಿದ್ದಾರೆ. ದರ ಕುಸಿತವಾದಾಗಲೆಲ್ಲ ರೈತರು ಇಲ್ಲಿ ತಮ್ಮ ತೋಟಗಾರಿಕಾ ಬೆಳೆ ಸಂರಕ್ಷಣೆ ಹಾಗೂ ಮೌಲ್ಯವರ್ದನೆ ಮಾಡಿಕೊಳ್ಳಬಹುದಾಗಿದೆ.

ಹೌದು, ಕೇಂದ್ರ ಸರ್ಕಾರ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಲ್ಯಾಣ ಸಂಪದ ಎನ್ನುವ ಯೋಜನೆಯಡಿ ರಾಯಚೂರು ವಿಶ್ವವಿದ್ಯಾಲಯ ಅಭಿವೃದ್ಧಿ ಪಡಿಸಿದ ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಸಂಸ್ಕರಣಾ ಘಟಕ ನಿರ್ಮಾಣ ಮಾಡಿದ್ದು, ಅವುಗಳ ಉದ್ಘಾಟನೆಯಾಗುತ್ತಿದ್ದಂತೆ ರೈತರಿಗೆ ವರದಾನವಾಗಲಿದೆ. ಕೊಪ್ಪಳ ತಾಲೂಕಿನ ಮೆತಗಲ್ ಗ್ರಾಮದ ಬಳಿ ತೋಟಗಾರಿಕಾ ಬೆಳೆಗಳ ಸಂಸ್ಕರಣಾ ಘಟಕ ಸುಮಾರು ₹3.5 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದ್ದು, ಇದರಲ್ಲಿ ನಬಾರ್ಡ್ ₹3 ಕೋಟಿ ನೀಡಿದ್ದರೆ ಕೇಂದ್ರ ಸರ್ಕಾರ ₹50 ಲಕ್ಷ ನೀಡಿದೆ. ಈ ಮೂಲಕ ತೋಟಗಾರಿಕಾ ಬೆಳೆ ಬೆಳೆದು ಸಂಕಷ್ಟ ಎದುರಿಸುತ್ತಿದ್ದ ರೈತರಿಗೆ ಇನ್ಮುಂದೆ ಇದು ಸಾಕಷ್ಟು ಉಪಯುಕ್ತವಾಗಲಿದೆ.

ತರಬೇತಿ ಕೇಂದ್ರ: ಸಂಸ್ಕರಣಾ ಘಟಕ ಕೇವಲ ತೋಟಗಾರಿಕಾ ಬೆಳೆಗಳನ್ನು ಸಂಸ್ಕರಣೆ ಅಷ್ಟೇ ಮಾಡುವುದಿಲ್ಲ. ಇದರ ಬದಲಾಗಿ ರೈತರಿಗೆ ಮತ್ತು ರೈತರ ಮಕ್ಕಳಿಗೆ ತರಬೇತಿ ನೀಡಲಾಗುತ್ತದೆ. ಹೀಗಾಗಿಯೇ ಇದರ ಜತೆಗೆ ತರಬೇತಿ ಕೇಂದ್ರ ಪ್ರಾರಂಭಿಸಿರುವುದು ತೋಟಗಾರಿಕಾ ಬೆಳೆಯಲ್ಲಿ ದೊಡ್ಡ ಕ್ರಾಂತಿಗೆ ನಾಂದಿ ಹಾಡಲಿದೆ.

ತರಬೇತಿ ಪಡೆದ ರೈತರು ಪ್ರತ್ಯೇಕವಾಗಿ ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಸಂಸ್ಕರಣಾ ಕೇಂದ್ರ ತೆರೆಯಬಹುದಾಗಿದೆ. ಇದಕ್ಕಾಗಿ ಕೇಂದ್ರ ಸರ್ಕಾರದ ಸಹಾಯಧನ ಯೋಜನೆ ಉಪಯೋಗ ಪಡೆದುಕೊಳ್ಳುವುದಕ್ಕೂ ಸಹ ತರಬೇತಿಯ ವೇಳೆಯಲ್ಲಿ ಮಾಹಿತಿ ನೀಡಲಾಗುತ್ತದೆ. ಕೊಪ್ಪಳ ಜಿಲ್ಲೆಯಲ್ಲಿ ಈಗಾಗಲೇ ತೋಟಗಾರಿಕಾ ಬೆಳೆಯಲ್ಲಿ ದೊಡ್ಡ ಕ್ರಾಂತಿಯೇ ಆಗುತ್ತಿದ್ದು, ಈಗ ಕೇಂದ್ರ ಸರ್ಕಾರದ ಈ ಘಟಕದಿಂದ ಮತ್ತಷ್ಟು ವಿಸ್ತರಣೆಯಾಗಲಿದೆ. ಮಾವು, ಪೇರಲ, ಟೊಮೆಟೋ, ದಾಳಿಂಬೆ, ಪಪ್ಪಾಯಿ ಸೇರಿದಂತೆ ಹತ್ತು ಹಲವು ತೋಟಗಾರಿಕಾ ಬೆಳೆ ಬೆಳೆಯುತ್ತಿರುವ ಕೊಪ್ಪಳ ಜಿಲ್ಲೆಯಲ್ಲಿ ಅವುಗಳ ಸಂಸ್ಕರಣೆಗೆ ಹೊಸ ಆಯಾಮ ದೊರೆಯಲಿದೆ ಎಂದೇ ವಿಶ್ಲೇಷಣೆ ಮಾಡಲಾಗುತ್ತಿದೆ.

ಮೊದಲ ಭೇಟಿ: ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇದೇ ಮೊದಲ ಬಾರಿಗೆ ಕೊಪ್ಪಳ ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಮೆತಗಲ್ ಗ್ರಾಮದಲ್ಲಿ ತೋಟಗಾರಿಕಾ ಬೆಳೆಗಳ ಸಂಸ್ಕರಣಾ ಘಟಕ ಉದ್ಘಾಟಿಸುವ ಅವರು ನಂತರ ಚಿಲವಾಡಗಿ ಗ್ರಾಮದಲ್ಲಿ ರೈತನೋರ್ವ ಕೇಂದ್ರ ಸರ್ಕಾರದ ಸಹಾಯಧನದಿಂದ ತಮ್ಮ ಬದುಕು ಹಸನ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಅಲ್ಲಿಗೂ ಭೇಟಿ ನೀಡಲಿದ್ದಾರೆ.

PREV

Recommended Stories

ಮರಳು ದಂಧೆ ತಡೆದ ಎಎಸ್‌ಐಗೆ ಹಲ್ಲೆ: ರಾಜೂಗೌಡ
ನಟ ದರ್ಶನ್‌ ಸೆಲ್‌ ಪರಿಶೀಲನೆ ನಡೆಸಿದ ಕಾನೂನು ಪ್ರಾಧಿಕಾರ