- ಡಿ.12 ರಂದು ಅನುಸೂಯ ಜಯಂತಿ । 13 ರಂದು ಚಿಕ್ಕಮಗಳೂರಿನಲ್ಲಿ ಶೋಭಾಯಾತ್ರೆ
---- ಈ ಬಾರಿ 30 ಸಾವಿರ ಭಕ್ತರ ನಿರೀಕ್ಷೆ
- ಇಂದು ಬೈಕ್ ರ್ಯಾಲಿ,- ಹೈಕೋರ್ಟ್ ನಿರ್ದೇಶನದ ಅನುಸಾರ ಪೂಜೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಸಂಯುಕ್ತ ಆಶ್ರಯದಲ್ಲಿ ಡಿ. 6 ರಿಂದ 14 ರವರೆಗೆ ಈ ಬಾರಿ ದತ್ತಮಾಲೆ ಹಾಗೂ ದತ್ತ ಜಯಂತಿ ಕಾರ್ಯಕ್ರಮ ನಡೆಯಲಿದೆ ಎಂದು ವಿಶ್ವ ಹಿಂದೂ ಪರಿಷತ್ತಿನ ದಕ್ಷಿಣ ಪ್ರಾಂತ ಕಾರ್ಯದರ್ಶಿ ಜಗನ್ನಾಥ್ ಶಾಸ್ತ್ರಿ ಹೇಳಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕಮಗಳೂರು ಜಿಲ್ಲೆಯ ಚಂದ್ರದ್ರೋಣ ಪರ್ವತದಲ್ಲಿ ಪ್ರತಿ ವರ್ಷವೂ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದಿಂದ ದತ್ತ ಜಯಂತಿ ಉತ್ಸವ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.ಈ ಬಾರಿ ದತ್ತ ಜಯಂತಿ ಉತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ನಡೆಸಲು ಸಂಘಟನೆ ತೀರ್ಮಾನಿಸಿದ್ದು ಸಾಧು ಸಂತರು ಮಾತೆಯರು, ದತ್ತ ಮಾಲಾಧಾರಿಗಳು ಮತ್ತು ದತ್ತ ಭಕ್ತರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿರುವ ನಿರೀಕ್ಷೆ ಇದೆ. ದತ್ತಪೀಠದಲ್ಲಿ ಹೈಕೋರ್ಟ್ ನಿರ್ದೇಶನದ ಅನುಸಾರ ಹೋಮ ಹವನ ಮತ್ತು ಪೂಜೆ ನಡೆಯಲಿದೆ ಎಂದು ಹೇಳಿದರು.
ಡಿ. 12ರಂದು ಅನುಸೂಯದೇವಿ ಪೂಜೆ ಅಂಗವಾಗಿ ಚಿಕ್ಕಮಗಳೂರು ನಗರದಲ್ಲಿ ಅಂದು ಬೆಳಿಗ್ಗೆ 9.30ಕ್ಕೆ ಮಾತೆಯರಿಂದ ಸಂಕೀರ್ತನಾ ಯಾತ್ರೆ ನಡೆಯಲಿದೆ. ಈ ಯಾತ್ರೆ ಶ್ರೀ ಬೋಳರಾಮೇಶ್ವರ ದೇವಾಲಯದಿಂದ ಹೊರಟು ಐ.ಜಿ. ರಸ್ತೆಯ ಮೂಲಕ ಶ್ರೀ ಕಾಮಧೇನು ದೇವಸ್ಥಾನ ತಲುಪಲಿದೆ. ಬಳಿಕ ದತ್ತಪೀಠಕ್ಕೆ ತೆರಳಲಿರುವ ಮಾತೆಯರು ದತ್ತಪೀಠದಲ್ಲಿ ನಡೆಯಲಿರುವ ಗಣಪತಿ ಹೋಮ, ಪುಣ್ಯಾಹ ವಾಚನ, ಪಂಚಗವ್ಯ ಶುದ್ಧಿ, ಗಣಪತಿ ಹೋಮ, ನವ ಹೋಮ, ದುರ್ಗ ಹೋಮ, ಚಂಡಿಕಾ ಪಾರಾಯಣ ಕಲಾಭಿಷೇಕ ಹಾಗೂ ಮಹಾಪೂಜೆ ನಡೆಯಲಿದೆ ಎಂದು ಹೇಳಿದರು.ಚಿಕ್ಕಮಗಳೂರು ನಗರದಲ್ಲಿ ಡಿ.13 ರಂದು ಶೋಭಾ ಯಾತ್ರೆ ನಡೆಯಲಿದೆ. ಈ ಯಾತ್ರೆ ಅಂದು ಮಧ್ಯಾಹ್ನ 2.30ಕ್ಕೆ ಶ್ರೀ ಕಾಮಧೇನು ಗಣಪತಿ ದೇವಾಲಯದಿಂದ ಹೊರಟು ಎಂ.ಜಿ. ರಸ್ತೆ ಮೂಲಕ ಆಜಾದ್ ಪಾರ್ಕ್ ತಲುಪಲಿದೆ. ಸಂಜೆ 6 ಗಂಟೆಗೆ ಇದೇ ಸ್ಥಳದಲ್ಲಿ ಧಾರ್ಮಿಕ ಸಭೆ ನಡೆಯಲಿದ್ದು, ಶಂಕರದೇವರ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹಾಗೂ ಕುಕ್ಕೆ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಸಾಮಾಜಿಕ ಕಾರ್ಯಕರ್ತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾಧ್ಯಕ್ಷ ಶ್ರೀಕಾಂತ್ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಯಾಗಿ ಬಜರಂಗದಳದ ದಕ್ಷಿಣ ಪ್ರಾಂತ ಸಂಯೋಜಕ ಪ್ರಭಂಜನ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಡಿ. 14ರಂದು ದತ್ತಪೀಠದಲ್ಲಿ ನಡೆಯಲಿರುವ ದತ್ತ ಜಯಂತಿಯಲ್ಲಿ ಸುಮಾರು 30 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.ಉತ್ಸವ ಅಂಗವಾಗಿ ಶುಕ್ರವಾರ ಚಿಕ್ಕಮಗಳೂರಿನಲ್ಲಿ ಬೈಕ್ ರ್‍ಯಾಲಿ ಆಯೋಜನೆ ಮಾಡಲಾಗಿದೆ. ಈ ರ್‍ಯಾಲಿ ಬೆಳಗ್ಗೆ ನಗರದ ಶ್ರೀ ಕತ್ರಿ ಮಾರಮ್ಮ ದೇವಸ್ಥಾನದಿಂದ ಹೊರಟು ಹನುಮಂತಪ್ಪ ವೃತ್ತ, ಎಂ.ಜಿ. ರಸ್ತೆ ರಸ್ತೆ ಮೂಲಕ ದತ್ತಪೀಠಕ್ಕೆ ತೆರಳಲಿದೆ ಎಂದು ಹೇಳಿದರು.
ದತ್ತಪೀಠ, ಪ್ರವಾಸಿ ಕೇಂದ್ರ ಅಲ್ಲ. ಅದು ತೀರ್ಥಕ್ಷೇತ್ರ, ಶ್ರದ್ಧಾ ಕೇಂದ್ರ ಆಗಬೇಕೆಂಬುದು ನಮ್ಮೆಲ್ಲರ ಅಭಿಲಾಷೆ. ನಮ್ಮ ಹೋರಾಟದ ಫಲವಾಗಿ ಈಗಾಗಲೇ ದತ್ತಪೀಠದಲ್ಲಿ ಪೂಜೆ ಸಲ್ಲಿಸಲು ಹಿಂದೂ ಅರ್ಚಕರನ್ನು ನೇಮಕ ಮಾಡಲಾಗಿದೆ. ಅಲ್ಲಿ ಪ್ರತಿನಿತ್ಯ ತ್ರಿಕಾಲ ಪೂಜೆ ನಡೆಯುತ್ತಿದೆ ಎಂದು ಹೇಳಿದರು,ಸುದ್ದಿಗೋಷ್ಠಿಯಲ್ಲಿ ಬಜರಂಗದಳದ ದಕ್ಷಿಣ ಪ್ರಾಂತ ಸಂಯೋಜಕ ಪ್ರಭಂಜನ್, ವಿಎಚ್‌ಪಿ ಜಿಲ್ಲಾಧ್ಯಕ್ಷ ಶ್ರೀಕಾಂತ್ ಪೈ, ಉಪಾಧ್ಯಕ್ಷ ಯೋಗೇಶ್‌ರಾಜ್ ಅರಸ್, ಜಿಲ್ಲಾ ಕಾರ್ಯದರ್ಶಿ ರಂಗನಾಥ್, ಹಾಸನ ವಿಭಾಗದ ಸಂಚಾಲಕ ಶಶಾಂಕ್, ಸಹ ಕಾರ್ಯದರ್ಶಿ ಆರ್.ಡಿ. ಮಹೇಂದ್ರ ಉಪಸ್ಥಿತರಿದ್ದರು. 14 ಕೆಸಿಕೆಎಂ 1ಚಿಕ್ಕಮಗಳೂರು ಪ್ರೆಸ್ ಕ್ಲಬ್‌ನಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ವಿಶ್ವ ಹಿಂದೂ ಪರಿಷತ್ತಿನ ದಕ್ಷಿಣ ಪ್ರಾಂತ ಕಾರ್ಯದರ್ಶಿ ಜಗನ್ನಾಥ್ ಶಾಸ್ತ್ರಿ ಮಾತನಾಡಿದರು. ಪ್ರಭಂಜನ್, ಶ್ರೀಕಾಂತ್ ಪೈ ಇದ್ದರು.