ಕನ್ನಡಪ್ರಭ ವಾರ್ತೆ ಮಂಗಳೂರು
ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ 2 ವರ್ಷಗಳಲ್ಲಿ ಗ್ಯಾರಂಟಿ ಯೋಜನೆಗಳ ಮೂಲಕ ದ.ಕ. ಜಿಲ್ಲೆಯ ಫಲಾನುಭವಿಗಳಿಗೆ ಒಟ್ಟು 2,488 ಕೋಟಿ ರು. ನೀಡಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೃಹಲಕ್ಷ್ಮೀ ಯೋಜನೆಗೆಯಡಿ ಈವರೆಗೆ ದ.ಕ. ಜಿಲ್ಲೆಯಲ್ಲಿ 3,77,434 ಫಲಾನುಭವಿಗಳಿಗೆ 1,233 ಕೋಟಿ ರು. ಮೊತ್ತವನ್ನು ಪಾವತಿಸಲಾಗಿದೆ. ಶಕ್ತಿ ಯೋಜನೆಯಡಿ 8,37,39,294 ಪ್ರಯಾಣಿಕರು ಪ್ರಯೋಜನ ಪಡೆದುಕೊಂಡಿದ್ದು, 275 ಕೋಟಿ ರು.ಗಳನ್ನು ಈಗಾಗಲೇ ಪಾವತಿಸಲಾಗಿದೆ. ಗೃಹಜ್ಯೋತಿ ಯೋಜನೆಯಡಿ 5,61,438 ಬಳಕೆದಾರರು ಉಚಿತ ವಿದ್ಯುತ್ ಸೌಲಭ್ಯ ಪಡೆದಿದ್ದು, 698 ಕೋಟಿ ರು. ಪಾವತಿಸಲಾಗಿದೆ. ಅನ್ನಭಾಗ್ಯ ಯೋಜನೆಯಡಿ 11,71,487 ಫಲಾನುಭವಿಗಳು 273 ಕೋಟಿ ರು. ಮೊತ್ತದ ಪ್ರಯೋಜನ ಪಡೆದಿದ್ದಾರೆ. ಯುವನಿಧಿ ಯೋಜನೆಯಡಿ 5840 ಫಲಾನುಭವಿಗಳು ನೋಂದಣಿ ಮಾಡಿದ್ದು, 6 ಕೋಟಿ ರು. ಮೊತ್ತ ಪಾವತಿಸಲಾಗಿದೆ ಎಂದು ತಿಳಿಸಿದರು.
ವಿಶ್ವದ ಅರ್ಥಶಾಸ್ತ್ರಜ್ಞರು ಮತ್ತು ವಿವಿಧ ಅಧ್ಯಯಗಳಿಗೆ ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳು ಕಾರಣವಾಗಿವೆ. ಕಾಂಗ್ರೆಸ್ ಗ್ಯಾರಂಟಿಯನ್ನು ಟೀಕೆ ಮಾಡಿದ್ದ ಬಿಜೆಪಿ ಕೂಡ ನಮ್ಮ ಗ್ಯಾರಂಟಿಯನ್ನು ಕಟ್ ಆ್ಯಂಡ್ ಪೇಸ್ಟ್ ಮಾಡಿ ಜಾರಿಗೊಳಿಸಿದೆ. ಕೇಂದ್ರ ಸರ್ಕಾರದ ತೆರಿಗೆ ಹಂಚಿಕೆ ಅನ್ಯಾಯದ ಹೊರತಾಗಿಯೂ ಕರ್ನಾಟಕದ ಅಭಿವೃದ್ಧಿ, ಗ್ಯಾರಂಟಿ ಯೋಜನೆ ಜಾರಿ ಮಾಡಿ ನುಡಿದಂತೆ ನಡೆದಿದ್ದೇವೆ, ಬಡವರ ಬಾಳಿಗೆ ಕಾಂಗ್ರೆಸ್ ಸರ್ಕಾರ ಬೆಳಕಾಗಿದೆ ಎಂದು ಐವನ್ ಡಿಸೋಜ ಹೇಳಿದರು.ಕಾಂಗ್ರೆಸ್‌ನ ಜನಗಣತಿಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವೂ ಜನಗಣತಿಗೆ ಮುಂದಾಗಿದೆ. ಕಾಂಗ್ರೆಸ್‌ನ ಯೋಜನೆಗಳು ಕೇವಲ ಬೂಟಾಟಿಕೆ ಅಲ್ಲ ಎನ್ನುವುದನ್ನು 2 ವರ್ಷಗಳಲ್ಲಿ ತೋರಿಸಿಕೊಟ್ಟಿದ್ದೇವೆ ಎಂದರು.
ಗೋಷ್ಠಿಯಲ್ಲಿ ಮುಖಂಡರಾದ ಶಶಿಧರ ಹೆಗ್ಡೆ, ಗಿರೀಶ್, ವಿಕಾಶ್ ಶೆಟ್ಟಿ, ಪದ್ಮ ಪ್ರಸಾದ್ ಜೈನ್, ಎಲಿಸ್ಟರ್ ಡಿಕುನ್ನಾ, ಸತೀಶ್ ಪೆಂಗಲ್ ಮತ್ತಿತರರು ಇದ್ದರು.