ಪುತ್ತೂರಿನಲ್ಲಿ ದ.ಕ ಜಿಲ್ಲಾ ಮಟ್ಟದ ಗಾಂಧಿ ಜಯಂತಿ ಆಚರಣೆಗೆ ನಿರ್ಧಾರ
ಪುತ್ತೂರು: ದ.ಕ. ಜಿಲ್ಲಾ ಜನಜಾಗೃತಿ ವೇದಿಕೆಯ ಪ್ರಥಮ ತ್ರೈಮಾಸಿಕ ಸಭೆ ಮಂಗಳವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪುತ್ತೂರು ಯೋಜನಾ ಕಚೇರಿ ಸಭಾಭವನದಲ್ಲಿ, ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಪದ್ಮನಾಭ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ದ.ಕ.ಜಿಲ್ಲಾ ಮಟ್ಟದ ಗಾಂಧಿ ಜಯಂತಿ ಕಾರ್ಯಕ್ರಮವನ್ನು ಅ.೨ರಂದು ಪುತ್ತೂರಿನಲ್ಲಿ ಹಮ್ಮಿಕೊಳ್ಳುವ ಬಗ್ಗೆ ನಿರ್ಣಯಿಸಲಾಯಿತು.ಯೋಜನೆಯ ಕರಾವಳಿ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಸಭೆ ಉದ್ಘಾಟಿಸಿ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನಡೆಯುವಂತ ಎಲ್ಲ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು.
೨೦೨೫-೨೬ನೇ ಸಾಲಿನ ಕ್ರಿಯಾ ಯೋಜನೆಯ ಅನುಷ್ಠಾನದ ಕುರಿತು ಕರಾವಳಿ ಪ್ರಾದೇಶಿಕ ವಿಭಾಗದ ಜನಜಾಗೃತಿ ಯೋಜನಾಧಿಕಾರಿ ಗಣೇಶ್ ಆಚಾರ್ಯ ಮಾಹಿತಿ ನೀಡಿದರು. ಜಿಲ್ಲಾ ಜನಜಾಗೃತಿ ವೇದಿಕೆ ಕಾರ್ಯದರ್ಶಿಗಳಾದ ದಿನೇಶ್ ಡಿ ಮತ್ತು ಬಾಬು ನಾಯ್ಕ ಸಲಹೆ ಸೂಚನೆ ನೀಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳದ ಹಾಗೂ ವೀರೇಂದ್ರ ಹೆಗ್ಗಡೆ ಅವರ ಬಗ್ಗೆ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಯಿತು, ಕ್ಷೇತ್ರದ ಬಗ್ಗೆ ಪೂಜ್ಯರ ಬಗ್ಗೆ ಅಪಪ್ರಚಾರವನ್ನು ಜಿಲ್ಲಾ ಜನಜಾಗೃತಿ ವೇದಿಕೆ ತೀವ್ರವಾಗಿ ಖಂಡಿಸಿ ಜಿಲ್ಲಾ ಜನಜಾಗೃತಿ ವೇದಿಕೆ ಪದಾಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.ವೇದಿಕೆಯ ಮಾಜಿ ಜಿಲ್ಲಾ ಅಧ್ಯಕ್ಷರಾದ ಎನ್ ರಾಮಚಂದ್ರ, ಸಾಜ ರಾಧಾಕೃಷ್ಣ ಆಳ್ವ, ಇಸ್ಮಾಯಿಲ್, ಜಿಲ್ಲಾ ಜನಜಾಗೃತಿ ವೇದಿಕೆ ಪದಾಧಿಕಾರಿಗಳು, ಮಂಗಳೂರು, ಪುತ್ತೂರು, ಕಡಬ, ಸುಳ್ಯ, ಕಾಸರಗೋಡು, ಮಂಜೇಶ್ವರ, ಬೆಳ್ತಂಗಡಿ, ಬಂಟ್ವಾಳ, ಮೂಡುಬಿದಿರೆ, ಬಜೆ, ವಿಟ್ಲ, ಗುರುವಾಯನಕೆರೆ ತಾಲೂಕು ವೇದಿಕೆಯ ಕಾರ್ಯದರ್ಶಿಗಳು, ಎಂಐಎಸ್ ಯೋಜನಾಧಿಕಾರಿ ಶಕುಂತಲಾ ಹಾಗೂ ತಾಲೂಕು ಹಾಗೂ ಜಿಲ್ಲಾ ಕಚೇರಿ ಪ್ರಬಂಧಕರು ಹಾಗೂ ಸಿಬ್ಬಂದಿ ಇದ್ದರು.
ಪುತ್ತೂರು ಕ್ಷೇತ್ರ ಯೋಜನಾಧಿಕಾರಿ ಶಶಿಧರ್ ಸ್ವಾಗತಿಸಿದರು. ಮಂಗಳೂರು ಯೋಜನಾಧಿಕಾರಿ ಸುರೇಂದ್ರ ವಂದಿಸಿದರು. ಜನಜಾಗೃತಿ ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿ ಗಣೇಶ್ ಆಚಾರ್ಯ ನಿರ್ವಹಿಸಿದರು.