ತಾಲೂಕು ಬಿಜೆಪಿ ಪಕ್ಷದಿಂದ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನಾ ಸಭೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಕುಡಿಯುವ ನೀರಿನ ಯೋಜನೆ ಜಲ ಜೀವನ್ ಮಿಷನ್ ಯೋಜನೆಯಡಿ ಕೋಟ್ಯಂತರ ರುಪಾಯಿ ಅವ್ಯವಹಾರ ನಡೆದಿರುವ ಶಂಕೆ ಇದ್ದು ಲೋಕಾಯುಕ್ತ ತನಿಖೆ ನಡೆಸಬೇಕು ಎಂದು ಮಾಜಿ ಸಚಿವ ಡಿ.ಎನ್.ಜೀವರಾಜ್ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ಸೋಮವಾರ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ರಾಜ್ಯ ಸರ್ಕಾರದ ವಿರುದ್ಧ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್ ಮುಖಂಡರೊಬ್ಬರು ಜಲ ಜೀವನ್ ಮಿಷನ್ ಯೋಜನೆಯಡಿ ₹1 ಕೋಟಿ ಭ್ರಷ್ಟಾಚಾರ ನಡೆದಿದೆ ಎಂದು ಹೇಳಿಕೆ ನೀಡಿದ್ದಾರೆ. ಮಾಹಿತಿ ಹಕ್ಕಿನಲ್ಲಿ ನಮ್ಮ ಕಾರ್ಯಕರ್ತರು ದಾಖಲೆ ಕೇಳಿದ್ದಾರೆ. ಈ ಯೋಜನೆಯಡಿ ಯಾವುದೇ ಗ್ರಾಮಗಳಿಗೂ ಸಮರ್ಪಕ ನೀರು ಬಂದಿಲ್ಲ. ಪೈಪ್ ಲೈನ್ , ಟ್ಯಾಂಕ್, ಪಂಪ್ ಸೆಟ್ ಗಳಲ್ಲೂ ಅವ್ಯವಹಾರದ ಶಂಕೆ ಇದ್ದು ಸರ್ಕಾರ ತಕ್ಷಣ ತನಿಖೆ ನಡೆಸಬೇಕು. ಮನೆ, ಮನೆಗಳಿಗೆ ಶುದ್ಧವಾದ ಕುಡಿಯುವ ನೀರು ನೀಡಬೇಕು ಎಂದು ಒತ್ತಾಯಿಸಿದರು.ರಸ್ತೆಗಳೆಲ್ಲಾ ಗುಂಡಿ ಬಿದ್ದಿದೆ. ನಾನು ಶಾಸಕನಾಗಿದ್ದಾಗ ನರಸಿಂಹರಾಜಪುರ- ಬಾಳೆ ಹೊನ್ನೂರು ರಸ್ತೆ ಮಾಡಿಸಿದ್ದೆ.ಈಗ 14 ವರ್ಷ ಕಳೆದಿದೆ.ಒಂದು ಗುಂಡಿಯೂ ಬಿದ್ದಿಲ್ಲ. ಗ್ರಾಮೀಣ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಅರಣ್ಯ ಇಲಾಖೆ ಹಾಗೂ ಪೊಲೀಸ್ ಠಾಣೆಗಳು ಕಾಂಗ್ರೆಸ್ ಕಚೇರಿಯಾಗಿದೆ. ವಿದ್ಯುತ್ ವ್ಯವಸ್ಥೆ ಹದಗೆಟ್ಟಿದೆ. ಟಿ.ಸಿ.ಹಾಳಾಗಿ ವಾರ ಕಳೆದರೂ ಹೊಸ ಟಿ.ಸಿ.ಕೊಟ್ಟಿಲ್ಲ.ಶೃಂಗೇರಿ ಕ್ಷೇತ್ರದಲ್ಲಿ ಅರಾಜಕತೆ ಸೃಷ್ಠಿಯಾಗಿದೆ ಎಂದು ಟೀಕಿಸಿದರು.
ತಾಲೂಕು ಬಿಜೆಪಿ ಅಧ್ಯಕ್ಷ ನೀಲೇಶ್ ಮಾತನಾಡಿ, ಜೆಜೆಎಂ ಯೋಜನೆ ಸೂಕ್ತ ನಿರ್ವಹಣೆ ಮಾಡದೆ ಇರುವುದರಿಂದ ಹಳೇ ನೀರು ಇಲ್ಲ. ಹೊಸ ನೀರು ಬಂದಿಲ್ಲ. ಪೈಪ್ ಗಳು ಹಾಳಾಗಿದೆ. ಗ್ರಾಮೀಣ ರಸ್ತೆಗಳೆಲ್ಲಾ ಹಾಳಾಗಿದೆ. ಗ್ಯಾರಂಟಿ ಯೋಜನೆ ಗಳು ಫಲಾನುಭವಿಗಳಿಗೆ ಸಮರ್ಪಕವಾಗಿ ಸಿಗುತ್ತಿಲ್ಲ. ಕಾಡಾನೆಗೆ ಶಾಶ್ವತ ಪರಿಹಾರ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಹಳ್ಳಿ, ಹಳ್ಳಿಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.ಬಿಜೆಪ ರಾಜ್ಯ ಪರಿಷತ್ ಸದಸ್ಯ ಅರುಣಕುಮಾರ್ ಮಾತನಾಡಿ, ಸಾಮಾನ್ಯ ಜನರ ಸಮಸ್ಯೆಗಳ ಧ್ವನಿ ಶಾಸಕರ ಮನೆಗೆ ತಲಪಬೇಕು.10 - 12 ಜ್ವಲಂತ ಸಮಸ್ಯೆ ಇಟ್ಟು ಕೊಂಡು ಇಂದು ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ. ನರಸಿಂಹ ರಾಜಪುರ ತಾಲೂಕಿನಲ್ಲಿ 4359 ಎಕರೆ ಸರ್ಕಾರಿ ಜಮೀನನ್ನು ಅರಣ್ಯಕ್ಕೆ ಸೇರಿಸಲು ಸರ್ಕಾರ ಹೊರಟಿದೆ. ಡಿ.ಎನ್.ಜೀವರಾಜ್ ಶಾಸಕ ರಾಗಿದ್ದಾಗ 2797 ಜನರಿಗೆ ಹಕ್ಕು ಪತ್ರ ನೀಡಿದ್ದರು. ನಿಮ್ಮ 7 ವರ್ಷದ ಅವಧಿಯಲ್ಲಿ ಎಷ್ಟು ಹಕ್ಕುಪತ್ರ ನೀಡಿದ್ದೀರಿ ಎಂದು ಶಾಸಕ ಟಿ.ಡಿ.ರಾಜೇಗೌಡರಿಗೆ ಪ್ರಶ್ನಿಸಿದರು.
ಬಿಜೆಪಿ ರಾಜ್ಯ ಯುವ ಮೋರ್ಚ ಸಮಿತಿ ಸದಸ್ಯ ಬಿ.ಎಸ್.ಆಶೀಶ್ ಕುಮಾರ್ ಮಾತನಾಡಿ, ಕಾಡಾನೆಗಳ ಹಾವಳಿ ತಡೆಗಟ್ಟಲು ಬಜೆಟ್ ನಲ್ಲಿ ವಿಶೇಷ ಅನುದಾನ ತರುತ್ತಾರೆ ಎಂಬ ನಿರೀಕ್ಷೆ ಸುಳ್ಳಾಗಿದೆ.ತಾಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಎಂ.ಎನ್.ನಾಗೇಶ್ ಮಾತನಾಡಿ, ಸರ್ಕಾರ ಜಿಲ್ಲಾ , ತಾಲೂಕು ಪಂಚಾಯಿತಿ ಚುನಾವಣೆ ನಡೆಸದೆ ಇರುವುದರಿಂದ ಅಧಿಕಾರಿಗಳೇ ಆಡಳಿತ ನಡೆಸುತ್ತಿದ್ದಾರೆ. ಶಾಸಕರು ಕೆಡಿಪಿ ಸಭೆ ಸರಿಯಾಗಿ ನಡೆಸದೆ ಅಧಿಕಾರಿಗಳ ದರ್ಬಾರ್ ಹೆಚ್ಚಾಗುತ್ತಿದೆ ಎಂದರು. ಬಿಜೆಪಿ ಮುಖಂಡರಾದ ವೈ.ಎಸ್.ರವಿ, ರೀನಾ ಬೆನ್ನಿ, ಕೆ.ಪಿ.ಸಂಪತ್ ಕುಮಾರ್ ಮಾತನಾಡಿದರು.
ವೇದಿಕೆಯಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷೆ ರಶ್ಮಿ ದಯಾನಂದ್, ಬಿಜೆಪಿ ಪಕ್ಷದ ಮುಖಂಡರಾದ ಕೆಸವಿ ಮಂಜುನಾಥ್, ಕೆ.ಎಸ್.ಉಮೇಶ್, ಸುರಭಿ ರಾಜೇಂದ್ರ, ವಾಲ್ಮೀಕಿ ಶ್ರೀನಿವಾಸ್, ಪ್ರೀತಂ, ಸುರೇಶ್, ಸಜಿ, ಎಚ್.ಡಿ.ಲೋಕೇಶ್, ಪರ್ವೀಜ್, ಹೊಸೂರು ಸುರೇಶ್, ಪ್ರದೀಪ್, ಎ.ಬಿ.ಮಂಜುನಾಥ್ ಮತ್ತಿತರರು ಇದ್ದರು. ನಂತರ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಅರ್ಪಿಸಲಾಯಿತು.-- ಬಾಕ್ಸ್-
ಶಾಶ್ವತ ಪರಿಹಾರ ನೀಡುವಲ್ಲಿ ವಿಫಲ:ನರಸಿಂಹರಾಜಪುರದಾದ್ಯಂತ ಕಾಡಾನೆ ಕಾಟ ಹೆಚ್ಚಿದ್ದು, ಇಬ್ಬರು ರೈತರನ್ನು ಆನೆ ಸಾಯಿಸಿದೆ. ನೂರಾರು ಎಕರೆ ಅಡಕೆ, ಬಾಳೆ ತೋಟ ಹಾಳು ಮಾಡಿವೆ. 6 ವರ್ಷದ ಹಿಂದೆಯೇ ನಾನು ಕಾಡಾನೆಗಳನ್ನು ಭದ್ರಾ ಹಿನ್ನೀರಿನಿಂದ ಬರಲು ಬಿಡಬಾರದು ಎಚ್ಚರಿಕೆ ನೀಡಿದ್ದೆ. ಈ ಭಾಗಕ್ಕೆಕಾಡಾನೆ ಬಂದು ಮರಿ ಹಾಕಿದರೆ ಮತ್ತೆ ಅವು ವಾಪಾಸು ಹೋಗುವುದಿಲ್ಲ. ಈಗ ಕಾಡಾನೆಗಳು ತೋಟಕ್ಕೆ ಬಂದರೆ ಕಲ್ಲು ಸಹ ಹೊಡೆಯುವ ಹಾಗಿಲ್ಲ. ಆನೆ ನಡೆದಿದ್ದೇ ದಾರಿ ಎಂತಾಗಿದೆ. ರೈತರು ಮತ್ತು ಬೆಳಗಿನ ಜಾವ ರಬ್ಬರ್ ಟ್ಯಾಪಿಂಗ್ ಮಾಡುವವರು ತೋಟಕ್ಕೆ ಹೋಗಲು ಭಯ ಪಡುತ್ತಿದ್ದಾರೆ. ಈಗಾಗಲೇ ನರಸಿಂಹರಾಜಪುರ ಪಟ್ಟಣದ 1-2 ಕಿ.ಮೀ.ದೂರದಲ್ಲಿ ಕಾಡಾನೆಗಳಿದ್ದು ಪಟ್ಟಣಕ್ಕೆ ನುಗ್ಗಿದರೆ ಅಪಾಯ ಹೆಚ್ಚಾಗಲಿದೆ ಎಂದು ಎಚ್ಚರಿಕೆ ನೀಡಿದರು. ಶಾಸಕ ಟಿ.ಡಿ.ರಾಜೇಗೌಡರು ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ಕಂಡು ಹಿಡಿದಿಲ್ಲ. ವಿಧಾನ ಸೌಧದಲ್ಲಿ ಆನೆಗಳ ಬಗ್ಗೆ ಮಾತನಾಡಿಲ್ಲ. ನಾನಾಗಿದ್ದರೆ ಸದನದಲ್ಲಿ ಧರಣಿ ಕೂರುತ್ತಿದ್ದೆ ಎಂದರು. ಹಕ್ಕು ಪತ್ರ ನೀಡಿಲ್ಲ: ನಾನು ಶಾಸಕನಾಗಿದ್ದಾಗ ರೈತರಿಗೆ ನೀಡಿದ ಸಾಗುವಳಿ ಚೀಟಿಗಳಿಗೆ ಇನ್ನೂ ಪಹಣಿ ಮಾಡಿಲ್ಲ. ಶಾಸಕರೇ ನಿಮ್ಮ ಅವಧಿಯಲ್ಲಿ ಜನರಿಗೆ ಹಕ್ಕು ಪತ್ರನೀಡಲು ಏಕೆ ಸಾಧ್ಯವಾಗಿಲ್ಲ ? ಎಂದು ಪ್ರಶ್ನಿಸಿದರು. ತಾಲೂಕು ಕಚೇರಿಯಲ್ಲಿ ಅಧಿಕಾರಿಗಳು ಭ್ರಷ್ಟರಾಗಿದ್ದು ಪೋನ್ ಪೇ ಯಲ್ಲಿ ಲಂಚ ಕೇಳುತ್ತಿದ್ದಾರೆ ಎಂದು ಆರೋಪಿಸಿದರು.