ರನ್ಯಾಳ ಮತ್ತೊಂದು ಮುಖ ಜತಿನ್ ಅರಿವಿಗೆ : ಸ್ಮಗ್ಲರ್‌ ರನ್ಯಾಳನ್ನು 2 ತಿಂಗಳಿಂದ ದೂರ ಇಟ್ಟಿದ್ದ ಪತಿ ?

KannadaprabhaNewsNetwork |  
Published : Mar 11, 2025, 12:49 AM ISTUpdated : Mar 11, 2025, 07:08 AM IST
Kannada actor Ranya Rao

ಸಾರಾಂಶ

ವಾಸ್ತು ಶಿಲ್ಪಿ ಜತಿನ್ ಹುಕ್ಕೇರಿ   ಪರಿಚಯವಾಗಿ, ಬಳಿಕ ಅವರಲ್ಲಿ ಪ್ರೇಮವಾಗಿತ್ತು. ಕೊನೆಗೆ  2024ರ ನವೆಂಬರ್‌ನಲ್ಲಿ ಎರಡೂ ಕುಟುಂಬಗಳ ಸಮ್ಮತಿ ಪಡೆದು ಇಬ್ಬರೂ ವಿವಾಹವಾಗಿದ್ದರು ಎಂದು ಮೂಲಗಳು ಹೇಳಿವೆ.

 ಬೆಂಗಳೂರು : ನಟಿ ರನ್ಯಾಗೆ ವನ್ಯಜೀವಿ ಫೋಟೋಗ್ರಫಿ ಹವ್ಯಾಸವಿತ್ತು. ಅಂತೆಯೇ 2024ರ ಫೆಬ್ರವರಿಯಲ್ಲಿ ವನ್ಯಜೀವಿಗಳ ಫೋಟೋ ತೆಗೆಯಲು ರನ್ಯಾ ಕಾಡಿಗೆ ಹೋಗಿದ್ದರು. ಅದೇ ಕಾಡಿಗೆ ವಾಸ್ತು ಶಿಲ್ಪಿ ಜತಿನ್ ಹುಕ್ಕೇರಿ ಸಹ ವಿಹಾರಕ್ಕೆ ತೆರಳಿದ್ದರು. ಆ ವೇಳೆ ಪರಸ್ಪರ ಪರಿಚಯವಾಗಿ, ಬಳಿಕ ಅವರಲ್ಲಿ ಪ್ರೇಮವಾಗಿತ್ತು. ಕೊನೆಗೆ ಅದೇ ವರ್ಷದ ನವೆಂಬರ್‌ನಲ್ಲಿ ಎರಡೂ ಕುಟುಂಬಗಳ ಸಮ್ಮತಿ ಪಡೆದು ಇಬ್ಬರೂ ವಿವಾಹವಾಗಿದ್ದರು ಎಂದು ಮೂಲಗಳು ಹೇಳಿವೆ.

ಈ ಮದುವೆ ನಂತರ ರನ್ಯಾಳ ಮತ್ತೊಂದು ಮುಖ ಜತಿನ್ ಅರಿವಿಗೆ ಬಂದಿದೆ. ವಿದೇಶಕ್ಕೆ ನಿರಂತರ ಪಯಣ ಹಾಗೂ ರಹಸ್ಯವಾಗಿ ಕೆಲವರೊಂದಿಗೆ ಆಕೆ ನಡೆಸುತ್ತಿದ್ದ ಮಾತುಕತೆಗಳು ಜತಿನ್ ಅವರಿಗೆ ಶಂಕೆ ಮೂಡಿಸಿದೆ. ಈ ಗುಮಾನಿ ಮೇರೆಗೆ ತಮ್ಮ ಪತ್ನಿ ನಿಗೂಢ ನಡವಳಿಕೆ ಬೆನ್ನತ್ತಿದ್ದಾಗ ಅವರಿಗೆ ಕಳ್ಳ ವ್ಯವಹಾರಗಳು ಗೊತ್ತಾಗಿವೆ. ಈ ವಿಷಯ ತಿಳಿದು ಕೋಪಗೊಂಡ ಜತಿನ್‌, ಇದೇ ವಿಚಾರ ಮುಂದಿಟ್ಟು ಪತ್ನಿ ಜತೆ ಜಗಳವಾಡಿದ್ದಾರೆ. ನೀನು ನನಗೆ ಮೋಸ ಮಾಡಿದೆ. ನಾನು ವಿಚ್ಛೇದನ ಕೊಡುತ್ತೇನೆಂದು ಪತ್ನಿಗೆ ಹೇಳಿ ಆಕೆಯಿಂದ ಪ್ರತ್ಯೇಕವಾಗಲು ಅವರು ಮುಂದಾಗಿದ್ದರು ಎಂದು ಮೂಲಗಳು ಹೇಳಿವೆ.

ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಜತಿನ್‌ ವಾಸ್ತುಶಿಲ್ಪಿಯಾಗಿದ್ದು, ಪ್ರತಿಷ್ಠಿತ ಸ್ವಂತ ಕಂಪನಿಯೊಂದನ್ನು ತಮ್ಮ ಸೋದರನ ಪಾಲುದಾರಿಕೆಯಲ್ಲಿ ಅವರು ನಡೆಸುತ್ತಿದ್ದಾರೆ. ಕೈಗಾರಿಕೆಗಳ ವಿನ್ಯಾಸದಲ್ಲಿ ಅವರು ಹೆಸರು ಪಡೆದಿದ್ದಾರೆ. ಅಲ್ಲದೆ ಜತಿನ್ ಕುಟುಂಬಕ್ಕೆ ಸಹ ಒಳ್ಳೆಯ ಹಿನ್ನೆಲೆ ಇದ್ದು, ಬೆಳಗಾವಿ ಪ್ರದೇಶದಲ್ಲಿ ಅವರಿಗೆ ಉತ್ತಮ ಹೆಸರಿದೆ ಎನ್ನಲಾಗಿದೆ.

ಅಳಿಯನಿಗೆ ಮಲತಂದೆ ಧಮ್ಕಿ?:

ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಇದೇ ವರ್ಷದ ಜನವರಿಯಲ್ಲಿ ತಮ್ಮ ಪತ್ನಿ ರನ್ಯಾಳಿಗೆ ಜತಿನ್ ವಿಚ್ಛೇದನ ಕೊಡಲು ಮುಂದಾಗಿದ್ದರು. ಆಗ ಆಕೆಯ ಸ್ವಂತ ತಂದೆ ಹೆಗ್ದೇಶ್ ಹಾಗೂ ಮಲ ತಂದೆ ರಾಮಚಂದ್ರರಾವ್ ಮಧ್ಯಪ್ರವೇಶಿಸಿ ಸತಿ-ಪತಿ ಮಧ್ಯೆ ರಾಜಿ ಸಂಧಾನಕ್ಕೆ ಯತ್ನಿಸಿ ವಿಫಲವಾಗಿದ್ದರು. ‘ನಿನ್ನಿಂದ ನನ್ನ ಮಗಳು ಒಳ್ಳೆಯ ದಾರಿಗೆ ಬರುವ ನಿರೀಕ್ಷೆ ಇದೆ. ಸುಮ್ಮನೆ ಆಕೆಯೊಂದಿಗೆ ಜೀವನ ಮಾಡು. ಇಲ್ಲದೆ ಹೋದರೆ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ’ ಎಂದು ಅಳಿಯನಿಗೆ ರನ್ಯಾ ಮಲ ತಂದೆ ಹಾಗೂ ರಾಜ್ಯ ಗೃಹ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರರಾವ್ ಧಮ್ಕಿ ಹಾಕಿದ್ದರು ಎಂದು ತಿಳಿದು ಬಂದಿದೆ.

ದುಬೈಗೆ ತೆರಳದ ಜತಿನ್:

ಈ ಬೆಳವಣಿಗೆ ಬಳಿಕ ಕನಲಿದ ಜತಿನ್‌, ಎರಡು ತಿಂಗಳಿಂದ ಪತ್ನಿಯಿಂದ ಮುನಿಸಿಕೊಂಡು ದೂರವಾಗಿದ್ದರು. ಆಗಲೇ ತಮ್ಮ ಪತ್ನಿಯ ಚಿನ್ನ ಕಳ್ಳ ಸಾಗಾಣಿಕೆ ಕುರಿತು ಡಿಆರ್‌ಐ ಅಧಿಕಾರಿಗಳಿಗೆ ಅವರು ಮಾಹಿತಿ ನೀಡಿದ್ದಾರೆ ಎನ್ನಲಾಗುತ್ತಿದೆ.

ಮಾ.3ರಂದು ದುಬೈಗೆ ತೆರಳಿದ ರನ್ಯಾ ಜತೆ ಜತಿನ್ ಹೋಗಿರಲಿಲ್ಲ. ಎರಡು ದಿನಗಳ ಬಳಿಕ ಮಾ.5 ರಂದು ದುಬೈನಿಂದ ರನ್ಯಾ ಮರಳಿದಾಗ ಜತಿನ್‌ ಮನೆಯಲ್ಲಿದ್ದರು. ವಿಮಾನ ನಿಲ್ದಾಣದಲ್ಲಿ ರನ್ಯಾ ಬಳಿ ಚಿನ್ನ ಪತ್ತೆಯಾದ ಬಳಿಕ ಮನೆಯಲ್ಲಿದ್ದ ಜತಿನ್ ಅವರನ್ನು ವಿಚಾರಣೆ ಸಲುವಾಗಿ ಡಿಆರ್‌ಐ ಅಧಿಕಾರಿಗಳು ಕರೆದೊಯ್ದಿದ್ದರು ಎಂದು ತಿಳಿದು ಬಂದಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''
ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ