ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ಘಾಟಿ ಸುಬ್ರಮಣ್ಯ ಕ್ಷೇತ್ರ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಪುಣ್ಯಕ್ಷೇತ್ರ ವಾಗಿದ್ದು, ಇಲ್ಲಿ ಹೆಚ್ಚಿನ ಮೂಲಸೌಕರ್ಯಗಳನ್ನು ಕಲ್ಪಿಸುವುದರೊಂದಿಗೆ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಪ್ರಾಧಿಕಾರದ ವತಿಯಿಂದ ಹೆಚ್ಚಿನ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಮುಜರಾಯಿ ಖಾತೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.ತಾಲೂಕಿನ ಸುಪ್ರಸಿದ್ಧ ಯಾತ್ರಾ ಸ್ಥಳವಾದ ಘಾಟಿ ಸುಬ್ರಹ್ಮಣ್ಯ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಿಂದ ವಿಧಾನಸೌಧದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಮಾದರಿಯಲ್ಲೇ ಘಾಟಿ ಸುಬ್ರಹ್ಮಣ್ಯವನ್ನೂ ಅಭಿವೃದ್ಧಿ ಮಾಡಬೇಕು ಎಂಬುದು ತಮ್ಮ ಒತ್ತಾಸೆಯಾಗಿದೆ. ಪ್ರತಿವರ್ಷ ನಡೆಯುವ ದನಗಳ ಜಾತ್ರೆ ಇಡೀ ದಕ್ಷಿಣ ಭಾರತದಲ್ಲೇ ವಿಶೇಷವಾಗಿದ್ದು, ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು.ಬೆಂ.ಗ್ರಾ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ, ಈ ಭಾಗಕ್ಕೆ ರಸ್ತೆಯ ಅಗಲೀಕರಣದೊಂದಿಗೆ ದ್ವಿಪಥ ರಸ್ತೆಯ ಅಭಿವೃದ್ಧಿ ಮಾಡುವುದರೊಂದಿಗೆ ಕ್ಷೇತ್ರದ ಮೂಲಸೌಕರ್ಯಗಳ ಅಭಿವೃದ್ಧಿಯು ನೂರು ವರ್ಷಗಳಿಗೆ ಅನುಕೂಲಕರವಾದ ಯೋಜನೆಯನ್ನು ರೂಪಿಸಿ ನಿರ್ಮಾಣ ಮಾಡಬೇಕಿದೆ ಎಂದರು.
ವಿವಿಧ ಯೋಜನೆಗಳ ಚರ್ಚೆ:ಕ್ಷೇತ್ರದಲ್ಲಿ ನೀರಿನ ವ್ಯವಸ್ಥೆ, ಕಲ್ಯಾಣ ಮಂಟಪ, ಅನ್ನದಾಸೋಹ ಭವನ, ಒಂದು ಬಾರಿಗೆ ಸುಮಾರು 5 ಸಾವಿರ ಜನರು ಒಟ್ಟಿಗೆ ಕುಳಿತು ಊಟ ಮಾಡಲು ಅನುಕೂಲಕರವಾದ ಅನ್ನದಾಸೋಹ ಭವನ ನಿರ್ಮಾಣದ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಈ ಕ್ಷೇತ್ರವು ಹೆಚ್ಚಿನ ಭಕ್ತಾದಿಗಳನ್ನು ಸೆಳೆಯುವಂತೆ ಅಭಿವೃದ್ಧಿ ಮಾಡಲು ಕಾರ್ಯೋನ್ಮುಖವಾಗುವಂತೆ ಪ್ರಾಧಿಕಾರದ ಸದಸ್ಯರಿಗೆ ತಿಳಿಸಿದರು.ಮುಜರಾಯಿ ಇಲಾಖೆ ಆಯುಕ್ತ ವೆಂಕಟೇಶ್, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಬಸವರಾಜ್, ಕಂದಾಯ ಇಲಾಖೆಯ ಕಾರ್ಯದರ್ಶಿ ರಾಜೇಂದ್ರ ಕಠಾರಿಯಾ, ಆಹಾರ ಸಚಿವರ ಆಪ್ತ ಕಾರ್ಯದರ್ಶಿ ಡಾ.ಹೆಚ್.ನಟರಾಜ್, ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಅನುರಾಧ, ಘಾಟಿ ಸುಬ್ರಮಣ್ಯ ಪ್ರಾಧಿಕಾರದ ಅಧ್ಯಕ್ಷ ರಂಗಪ್ಪ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ರಾಜಣ್ಣ, ಪ್ರಾಧಿಕಾರದ ಸದಸ್ಯರಾದ ಮಹೇಶ್ ಹಾಗೂ ದೇವಸ್ಥಾನ ದ ಆಡಳಿತ ಮಂಡಳಿಯ ಸದಸ್ಯರು ಹಾಗೂ ಅರ್ಚಕರು ಉಪಸ್ಥಿತರಿದ್ದರು.
ಫೋಟೋ-10ಕೆಡಿಬಿಪಿ5- ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಹ್ಮಣ್ಯ ಸಮಗ್ರ ಅಭಿವೃದ್ದಿ ಕುರಿತು ನಡೆದ ಸಭೆಯಲ್ಲಿ ಸಚಿವರಾದ ರಾಮಲಿಂಗಾರೆಡ್ಡಿ, ಕೆ.ಎಚ್.ಮುನಿಯಪ್ಪ ಭಾಗಿಯಾದರು.