ನರಗುಂದ: ಡಿ.ವಿ. ಗುಂಡಪ್ಪ ಅವರನ್ನು ಆಧುನಿಕ ಕನ್ನಡ ಸಾಹಿತ್ಯದ ನವರತ್ನಗಳಲ್ಲಿ ಒಬ್ಬರೆಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಸಿ. ಹನುಮಂತಗೌಡ್ರು ಹೇಳಿದರು.
ಗ್ರಂಥ ಪಾಲಕರಾದ ವಿ.ಎಸ್. ಪಾರ್ವತಿ ಮಾತನಾಡಿ, ಕನ್ನಡ ಸಂಘ ಹಾಗೂ ಕವಿ ಜಯಂತಿಗಳು ಶೈಕ್ಷಣಿಕವಾಗಿ ಪಠ್ಯಪೂರಕ ಚಟುವಟಿಕೆಯಾಗಿದ್ದು, ಇಂತಹ ಚಟುವಟಿಕೆಗಳನ್ನು ಭಾವಿ ಶಿಕ್ಷಕರಾಗುವ ವಿದ್ಯಾರ್ಥಿಗಳು ಕಲಿತುಕೊಂಡು ಮಕ್ಕಳಿಗೂ ಅದರ ಉದ್ದೇಶಗಳನ್ನು ತಿಳಿಸಬೇಕು ಎಂದು ಹೇಳಿದರು.
ಸೌಭಾಗ್ಯ ಮಾನಣ್ಣವರ್ ಹಾಗೂ ತೇಜಸ್ವಿನಿ ದುಂಡೂರ್ ಕವಿ ಡಿವಿಜಿಯವರ ಪರಿಚಯ ಮಾಡಿಕೊಟ್ಟರು.ಕಾಲೇಜಿನ ಕನ್ನಡ ಉಪನ್ಯಾಸಕ ಎಂ.ಪಿ. ಕ್ಯಾತನಗೌಡ್ರ ಮಾತನಾಡಿ, ಡಿವಿಜಿ ಬುದ್ಧಿವಂತರ ಜಾತಿ ಮತ್ತು ಹೃದಯವಂತರ ಜಾತಿಗಳನ್ನು ಗುರುತಿಸಿದ್ದರು. ಆದರೆ, ಇದರಲ್ಲಿ ಹೃದಯವಂತರೇ ನಿರ್ಣಾಯಕ ಎಂದು ಅವರು ತೀರ್ಮಾನಿಸಿದ್ದರು. ಏಕೆಂದರೆ ಅವರ ದೃಷ್ಟಿಯಲ್ಲಿ ವಿದ್ವತ್ತೆಂದರೆ ಪುಸ್ತಕ ಪಾಂಡಿತ್ಯ, ಸಂಸ್ಕೃತಿ ಎಂದರೆ ಜೀವನದ ಅಂತರಂಗದ ಸೊಗಸು. ಮನುಷ್ಯನಿಗೆ ಸಮಾಜದೊಂದಿಗೆ ಸಂಪರ್ಕವಿರಬೇಕೆನ್ನುವುದು ಡಿವಿಜಿ ಪ್ರತಿಪಾದಿಸಿದ ಮಹಾ ತತ್ವ. ಹಾಗಿಲ್ಲದಿದ್ದರೆ ಬದುಕು ವ್ಯರ್ಥವೆಂದು ಅವರು ಬಗೆದಿದ್ದರು. ಇದಕ್ಕೆ ಅವರ ‘ಮಂಕುತಿಮ್ಮನ ಕಗ್ಗ’ದ ತೊಲಗೆಲವೊ ಮನೆಯಿಂದ ಮನವು ಬರಡಾದಂದೆ । ಹೊಲಸ ತೊಳೆಯಲು ತೋಳ್ಗೆ ಬಲ ಕುಗ್ಗಿದಂದೆ ।।ತೊಲಗು ಜಗದಿಂ ದೂರ, ಇಳೆಗಾಗದಿರು ಭಾರ । ತೊಲಗಿ ನೀಂ ಮರೆಯಾಗು – ಮಂಕುತಿಮ್ಮ ।। ಎನ್ನುವ ಒಂದು ಪದ್ಯವನ್ನು ನೋಡಬಹುದು ಎಂದರು.ಇದೇ ಸಂದರ್ಭದಲ್ಲಿ ಕನ್ನಡ ಸಂಘ ಉದ್ಘಾಟನೆ ಮಾಡಿ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಮಲ್ಲಮ್ಮ ಹಳೆಮನಿ, ಮೇಘಾ ಪಾಟೀಲ್, ಪವಿತ್ರ ಕಿತ್ತೂರ, ಮಲ್ಲಿಕಾರ್ಜುನ ನೇಕಾರ, ಪ್ರೇಮಾ ವಾಲ್ಮೀಕಿ, ಈಶ್ವರ್ ತಳಗಡಿ, ಕಾಲೇಜಿನ ಪ್ರಾಚಾರ್ಯರರು ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.