ಕೊಪ್ಪಳ: ಗ್ಯಾರಂಟಿ ಉತ್ಸವ ಕಾರ್ಯಕ್ರಮಕ್ಕೆ ಸ್ವಯಂ ಪ್ರೇರಿತವಾಗಿ ಫಲಾನುಭವಿಗಳು ನಿರೀಕ್ಷೆ ಮೀರಿ ಆಗಮಿಸಿದ್ದಾರೆ. ಆಸನಗಳು ಸಾಲದ್ದಕ್ಕೆ ಕಲ್ಯಾಣ ಮಂಟಪದ ಹೊರ ಮೈದಾನದಲ್ಲಿ ಖುರ್ಚಿ ಹಾಕಿಸಿದ್ದೇವೆ. ಇಷ್ಟಾದರೂ ಬಿಜೆಪಿ ಜಿಲ್ಲಾಧ್ಯಕ್ಷ ದಢೇಸ್ಗೂರು ಹತಾಶೆ ಭಾವನೆಯಿಂದ ಹುರುಳಿಲ್ಲದ ಆರೋಪ ಮಾಡಿದ್ದಾರೆ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ ಹೇಳಿದ್ದಾರೆ.
ಕ್ಷೇತ್ರದಲ್ಲಿ ಇವರ ಹಿಂದೆ ನಾಲ್ಕು ಜನರು ಬರುತ್ತಿಲ್ಲ. ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಆಗುತ್ತಿರುವ ಅಭಿವೃದ್ಧಿ ಕಾಮಗಾರಿ ನೋಡಿ ಸಹಿಸಿಕೊಳ್ಳಲು ಆಗುತ್ತಿಲ್ಲ. ಸಚಿವ ಶಿವರಾಜ ತಂಗಡಗಿ ಹಗಲಿರಳು ಶ್ರಮಿಸಿ ಕ್ಷೇತ್ರದ ಅಭಿವೃದ್ಧಿ ಮಾಡುವುದನ್ನು ನೋಡಿ ಸುಳ್ಳು ಆರೋಪ ಮಾಡುವುದು ಸರಿಯಲ್ಲ ಎಂದರು.
ಗ್ಯಾರಂಟಿ ಉತ್ಸವ ಯಶಸ್ವಿಯಾಗಿ ನಡೆದಿದೆ. ಸರ್ಕಾರಿ ಕಾರ್ಯಕ್ರಮ ಆಗಿದ್ದರಿಂದ ಪಕ್ಷದ ಅಧ್ಯಕ್ಷ ಅಮರೇಗೌಡ ಬಯ್ಯಾಪುರ ಹಾಗೂ ಮಾಜಿ ಶಾಸಕ ಕೆ.ಬಸವರಾಜ ಹಿಟ್ನಾಳ ಪ್ರವಾಸಿ ಮಂದಿರದಲ್ಲಿಯೇ ಗ್ಯಾರಂಟಿ ಸಮಿತಿಯ ಅಧ್ಯಕ್ಷರನ್ನು ಸ್ವಾಗತಿಸಿದರು. ಹೀಗಾಗಿ, ಅವರು ಕಾರ್ಯಕ್ರಮಕ್ಕೆ ಆಗಮಿಸಲಿಲ್ಲ. ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಮತ್ತು ಶಾಸಕ ರಾಘವೇಂದ್ರ ಹಿಟ್ನಾಳ ಬೇರೆ ಕೆಲಸದಿಂದ ಆಗಮಿಸಿಲ್ಲ. ನಾವೆಲ್ಲ ಒಗ್ಗಟ್ಟಾಗಿದ್ದೇವೆ, ಆದರೆ, ನಿಮ್ಮ ಪರಿಸ್ಥಿತಿ ಏನಾಗಿದೆ ಹೇಳಿ ಎಂದು ಪ್ರಶ್ನಿಸಿದರು.ಅಟ್ರಾಸಿಟಿ ಕೇಸ್ ಕುರಿತು ಆರೋಪ ಮಾಡಿದ್ದರಲ್ಲ, ಇದೆಲ್ಲವೂ ಸುಳ್ಳು, ನೀವು ಶಾಸಕರಾಗಿದ್ದಾಗಿನ ಕತೆ ತೆಗೆದರೇ ದೊಡ್ಡದಿದೆ. ಸಚಿವ ಶಿವರಾಜ ತಂಗಡಗಿ ಎಂದೂ ಹಸ್ತಕ್ಷೇಪ ಮಾಡುವುದಿಲ್ಲ. ಎಲ್ಲರೂ ಸಹಬಾಳ್ವೆಯಿಂದ ಇರಲಿ ಎನ್ನುವ ದೊಡ್ಡ ಗುಣ ಹೊಂದಿದ್ದಾರೆ ಎಂದರು.
ನೀವು ಶಾಸಕರಾಗಿದ್ದಾಗ ಮಾತನಾಡಿದ್ದ ವೀಡಿಯೋ, ಪಿಎಸ್ ಐ ಹಗರಣದಲ್ಲಿ ಸಿಕ್ಕಿ ಹಾಕಿಕೊಂಡಾಗ ನೀವು ಆಡಿದ ಮಾತು, ಅಷ್ಟೇ ಯಾಕೆ ನಿಮ್ಮ ಅದೆಷ್ಟೋ ಆಡಿಯೋ, ವೀಡಿಯೋ ಇವೆ ಎನ್ನುವುದನ್ನು ಒಮ್ಮೆ ನೋಡಿಕೊಳ್ಳಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
50 ಎಕರೆ ಜೂಜು ಕಟ್ಟುವ ಮಾತನಾಡುತ್ತಿರಲ್ಲ, ಇದು ಕಾನೂನು ಬಾಹೀರ ಅಲ್ಲವೇ. ಜೂಜಾಡುವುದು ತಪ್ಪು ಎಂದು ಗೊತ್ತಿದ್ದರೂ ಸವಾಲು ಹಾಕುವ ನಿಮ್ಮ ಮೇಲೆ ಯಾಕೆ ಕೇಸ್ ಹಾಕಬಾರದು ಎಂದು ಪ್ರಶ್ನೆ ಮಾಡಿದರು. ಗ್ಯಾರಂಟಿ ಉತ್ಸವದಲ್ಲಿ ಸಚಿವರು ಯಾವುದೇ ಸುಳ್ಳು ಹೇಳಿಲ್ಲ, ಫಲಾನುಭವಿಗಳ ಲೆಕ್ಕ ನೀಡಿದ್ದಾರೆ. ಬೇಕಾದರೆ ನಿಮಗೂ ಒಂದು ಕಾಪಿ ಕಳುಹಿಸಿ ಕೊಡುವುದಾಗಿ ಹೇಳಿದರು.
ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ ಗೊಂಡಬಾಳ, ಗ್ಯಾರಂಟಿ ಸಮಿತಿ ತಾಲೂಕಾಧ್ಯಕ್ಷ ಬಾಲಚಂದ್ರ, ಸದಸ್ಯರಾದ ಮಂಜುನಾಥ ಗೊಂಡಬಾಳ ಹಾಗೂ ಅನ್ನದಾನ್ಯಯ ಇದ್ದರು.