ಸೋಮರಡ್ಡಿ ಅಳವಂಡಿ ಕೊಪ್ಪಳ
ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿದ್ದ ಬಸವರಾಜ ದಢೇಸ್ಗೂರು ಅವಧಿ ಇನ್ನೂ ಇರುವಾಗಲೇ ಏಕಾಏಕಿ ಬದಲಾಯಿಸಿದ್ದು ಭಾರಿ ಚರ್ಚೆ ಹುಟ್ಟು ಹಾಕಿದೆ. ಮೂರು ವರ್ಷದ ಅವಧಿಯ ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದ ದಢೇಸ್ಗೂರು ಈಗಷ್ಟೇ ಒಂದು ವರ್ಷ ಎರಡು ತಿಂಗಳು ಪೂರೈಸಿದ್ದಾರೆ. ಈಗ ಏಕಾಏಕಿ ಕಾರಣ ನೀಡದೆ ದಿಢೀರ್ ಬದಲಾಯಿಸಿರುವುದು ನಾನಾ ಚರ್ಚೆಗೆ ಇಂಬು ನೀಡಿದೆ.
ಇತ್ತೀಚಿಗಷ್ಟೇ ಪತ್ರಿಕಾಗೋಷ್ಠಿಯಲ್ಲಿ ಬಸವರಾಜ ದಢೇಸ್ಗೂರು ಮಾತನಾಡುವ ವೇಳೆಯಲ್ಲಿ ಈಗಲೂ ನಮ್ಮ ನಾಯಕ ಮಾಜಿ ಸಂಸದ ಸಂಗಣ್ಣ ಕರಡಿ ಎಂದಿದ್ದರು. ಇದು ಸಖತ್ ವೈರಲ್ ಆಗಿತ್ತಲ್ಲದೆ, ಇದರ ವಿರುದ್ಧ ಬಿಜೆಪಿ ನಾಯಕರೇ ಕೆಂಡಾಮಂಡಲವಾಗಿದ್ದರು. ಅಷ್ಟೇ ಅಲ್ಲ, ತಮ್ಮ ಫೇಸ್ ಬುಕ್ ನಲ್ಲಿ ಈ ಕುರಿತು ಬರೆದುಕೊಂಡು ಆಕ್ರೋಶ ವ್ಯಕ್ತಪಡಿಸಿದ್ದರು.ಲೋಕಸಭಾ ಚುನಾವಣೆಯಲ್ಲಿ ಕೆಲವೇ ಮತಗಳ ಅಂತರಿಂದ ಪರಾಭವಗೊಂಡಿದ್ದ ಡಾ.ಬಸವರಾಜ ಕ್ಯಾವಟರ್ ತಮ್ಮ ಅಧಿಕೃತ ಖಾತೆಯಲ್ಲಿ ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದರು. ಇದಲ್ಲದೆ ಅನೇಕ ನಾಯಕರು ರಾಜ್ಯನಾಯಕರನ್ನು ಭೇಟಿ ಮಾಡಿ ಈ ಕುರಿತು ವೀಡಿಯೋ ಸಹ ಕೊಟ್ಟಿದ್ದರಲ್ಲದೆ, ಹೀಗಾದರೆ ನಾವು ಹೇಗೆ ಪಕ್ಷ ಕಟ್ಟಲು ಸಾಧ್ಯ ಎಂದು ಅಳಲು ತೋಡಿಕೊಂಡಿದ್ದರು. ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ದ್ರೋಹ ಮಾಡಿ, ಕಾಂಗ್ರೆಸ್ ಪಕ್ಷದಲ್ಲಿರುವ ಮಾಜಿ ಸಂಸದ ಸಂಗಣ್ಣ ಕರಡಿ ಅವರನ್ನು ಸುದ್ದಿಗೋಷ್ಠಿಯಲ್ಲಿ, ಅದೂ ಪಕ್ಷದ ಜಿಲ್ಲಾಧ್ಯಕ್ಷರಾಗಿದ್ದುಕೊಂಡು ನಮ್ಮ ನಾಯಕರು ಎಂದು ಹೇಳಿದರೆ ಏನರ್ಥ ಎಂದೆಲ್ಲ ಕಿಡಿಕಾರಿದ್ದರು.
ಎಸ್ಸಿ ಮೋರ್ಚಾ ಉಪಾಧ್ಯಕ್ಷರನ್ನಾಗಿ ಬಸವರಾಜ ದಢೇಸ್ಗೂರು ಅವರನ್ನು ನೇಮಕ ಮಾಡಿ ಬಡ್ತಿ ನೀಡಲಾಗಿದೆ, ರಾಜ್ಯಾದ್ಯಂತ ಸಂಘಟನೆಯ ಹೊಣೆ ನೀಡಲಾಗಿದೆ ಎಂದು ದಢೇಸ್ಗೂರು ಬೆಂಬಲಿಗರು ಹೇಳುತ್ತಿದ್ದಾರೆ.
ನವೀನ್ ಕುಮಾರ ಹೆಗಲಿಗೆ ಜಿಲ್ಲಾಧ್ಯಕ್ಷ ನೊಗಈ ಹಿಂದೆ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ನವೀನಕುಮಾರ ಗುಳಗಣ್ಣವರು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ್ದರು. ಆದರೂ ಪಕ್ಷದಲ್ಲಿ ಕೆಲವೊಂದು ಬೆಳವಣಿಗೆ ಹಿನ್ನೆಲೆಯಲ್ಲಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಇವರನ್ನು ಹಿಂದೆ ಸರಿಸಿ ಬಸವರಾಜ ದಢೇಸ್ಗೂರು ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು. ಆದರೆ ಈಗ ಅವಧಿ ಇನ್ನೂ ಇರುವಾಗಲೇ ಬಸವರಾಜ ದಢೇಸ್ಗೂರಗೆ ರಾಜ್ಯ ಎಸ್ಸಿ ಮೋರ್ಚಾ ಉಪಾಧ್ಯಕ್ಷ ಸ್ಥಾನ ನೀಡಿ, ನವೀನಕುಮಾರ ಗುಳಗಣ್ಣವರ ಅವರಿಗೆ ಮತ್ತೆ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನದ ನೊಗ ಹೊರಿಸಲಾಗಿದೆ.
ರಾಜ್ಯಾದ್ಯಂತ ಪಕ್ಷ ಸಂಘಟನೆ ಮಾಡುವ ಅಗತ್ಯವಿದ್ದು, ಈಗಾಗಲೇ ನಾಲ್ಕು ವಿಭಾಗಗಳಲ್ಲಿ ಎಸ್ಸಿ ಸಮುದಾಯಗಳ ಸಮಾವೇಶ ಹಮ್ಮಿಕೊಳ್ಳುವ ತಯಾರಿ ನಡೆಸಲಾಗಿದೆ. ಹೀಗಾಗಿಯೇ ನನಗೆ ಎಸ್ಸಿ ಮೋರ್ಚಾ ಜವಾಬ್ದಾರಿ ನೀಡಿದ್ದಾರೆ. ಜಿಲ್ಲಾಧ್ಯಕ್ಷ ಸ್ಥಾನದಿಂದ ನನ್ನನ್ನು ಬೇರೆ ಯಾವುದೇ ಕಾರಣಕ್ಕೂ ಬಿಡಿಸಿಲ್ಲ. ಮಾಜಿ ಸಂಸದ ಸಂಗಣ್ಣ ಕರಡಿ ಕುರಿತು ಮಾತನಾಡಿದ್ದಕ್ಕೂ,ಇದಕ್ಕೂ ಸಂಬಂಧವೇ ಇಲ್ಲ ಎಂದು ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಬಸವರಾಜ ದಢೇಸ್ಗೂರು ತಿಳಿಸಿದ್ದಾರೆ.ಪಕ್ಷ ನನಗೆ ಮತ್ತೆ ಜವಾಬ್ದಾರಿ ನೀಡಿದೆ. ಪಕ್ಷದ ವರಿಷ್ಠರ ಸೂಚನೆಯ ಮೇರೆ ನಾನು ಪಕ್ಷದ ಜಿಲ್ಲಾಧ್ಯಕ್ಷನಾಗಿದ್ದೇನೆ. ಜಿಲ್ಲಾಧ್ಯಕ್ಷರಾಗಿದ್ದ ಬಸವರಾಜ ದಢೇಸ್ಗೂರು ಅವರಿಗೆ ರಾಜ್ಯ ಎಸ್ಸಿ ಮೋರ್ಚಾ ಜವಾಬ್ದಾರಿ ನೀಡಿದ್ದರಿಂದ ಬದಲಾಯಿಸಿದ್ದಾರೆಯೇ ವಿನಃ ಯಾವುದೇ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಪಕ್ಷ ಸಂಘಟನೆಗಾಗಿ ಮತ್ತೆ ನಾನು ಹಗಲಿರಳು ಶ್ರಮಿಸುತ್ತೇನೆ ಎಂದು ಕೊಪ್ಪಳ ಬಿಜೆಪಿ ಜಿಲ್ಲಾಧ್ಯಕ್ಷ ನವೀನಕುಮಾರ ಗುಳಗಣ್ಣವರ ತಿಳಿಸಿದ್ದಾರೆ.