ಅಗ್ರಹಾರದ ಗಾಯಿತ್ರಿ ದೇವಸ್ಥಾನಕ್ಕೆ ಶ್ರೀಗಳ ಬೇಟಿ, ಆಶೀರ್ವಾಚನ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಪ್ರತಿಯೊಬ್ಬರೂ ಸಂಧ್ಯಾವಂದನೆ, ಗಾಯಿತ್ರಿ ಉಪಾಸನೆ ಮಾಡಬೇಕು ಎಂದು ಬೆಲಗೂರು ಕ್ಷೇತ್ರದ ಶ್ರೀ ಮಾರುತಿ ಪೀಠದ ವಿಜಯ ಮಾರುತಿ ಸ್ವಾಮೀಜಿ ತಿಳಿಸಿದರು.
ಭಾನುವಾರ ಸಂಜೆ ಅಗ್ರಹಾರದ ಗಾಯಿತ್ರಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಸ್ಥಾನ ವೀಕ್ಷಣೆ ಮಾಡಿ, ನಂತರ ಆಶೀರ್ವಚನ ನೀಡಿ, ಗಾಯಿತ್ರಿ ಉಪಾಸನೆಯಿಂದ ಹಿಂದಿನ ಪಾಪಗಳು ಕಳೆದು ಪುಣ್ಯ ಸಂಪಾದನೆ ಆಗಲಿದೆ. ಪ್ರಸ್ತುತ ನಾವು ಸುಖವಾಗಿದ್ದೇವೆ ಎಂದು ಅಂದುಕೊಂಡರೆ ಅದಕ್ಕೆ ಪರಮಾತ್ಮನ ಅನುಗೃಹ ಕಾರಣ. ಮನುಷ್ಯ ಜನ್ಮ ಸಿಕ್ಕುವದು ದುರ್ಲಭವಾಗಿರುವ ಸಂದರ್ಭದಲ್ಲಿ ಮನುಷ್ಯ ಜನ್ಮ ಸಿಕ್ಕಿರುವುದನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಹಿಂದಿನ ಋಷಿ ಮುನಿಗಳು, ಮಹರ್ಷಿಗಳು ಶಾಸ್ತ್ರದ ಮೂಲಕ ನೀತಿ, ನಿಯಮಗಳನ್ನು ಹೇಳಿದ್ದಾರೆ. ನಮ್ಮ ಜೀವನದಲ್ಲಿ ಸಾಧ್ಯವಾದಷ್ಟು ಭಗವಂತನ ಸೇವೆ ಮಾಡಬೇಕು. ಮುಖ್ಯವಾಗಿ ಈ ಜಗತ್ತಿನಲ್ಲಿ ಸಂಪತ್ತು ಸಂಪಾದನೆ ಮಾಡಿದರೆ ಐಶ್ವರ್ಯ ಸಿಕ್ಕಿದಂತೆ ಎಂದು ಹಲವರು ಬಾವಿಸುತ್ತಾರೆ. ಆದರೆ, ಸಂಪತ್ತುಗಳಿಸಿ ಬಾಹುಬಲ ಇದ್ದರೆ ಅದು ಶ್ರೀಮಂತಿಕೆ ಅಲ್ಲ. ಅದು ಶಾಶ್ವತ ಮುಕ್ತಿ ಕೊಡುವುದಿಲ್ಲ. ಅಂತಹ ಶ್ರೀಮಂತಿಕೆ ಕ್ಷಣಿಕವಾಗಿದೆ. ನಾವು ಧರ್ಮದ ಮಾರ್ಗದಲ್ಲಿ ನಡೆದು ಪ್ರತಿಯೊಬ್ಬರಿಗೂ ಒಳಿತು ಬಯಸಬೇಕು ಎಂದರು.
ಜಿಲ್ಲಾ ಬ್ರಾಹ್ಮಣ ಮಹಾ ಸಭಾದ ಉಪಾಧ್ಯಕ್ಷ ಅನಂತಪದ್ಮನಾಭ ಮಾತನಾಡಿ, ಬೆಲಗೂರು ಶ್ರೀಗಳು ಗಾಯಿತ್ರಿ ದೇವಸ್ಥಾನದ ಮಂಡಲ ಪೂಜೆ ಬರಬೇಕಾಗಿತ್ತು. ಕಾರಣಾಂತರದಿಂದ ಬಂದಿರಲಿಲ್ಲ. ಇಂದು ಆಗಮಿಸಿದ್ದು ಎಲ್ಲಾ ಭಕ್ತರಿಗೂ ಸಂತಸ ತಂದಿದೆ. ಬೆಲಗೂರು ಮಾರುತಿ ಪೀಠದ ಹಿಂದಿನ ಅವಧೂತರಾದ ಬಿಂದು ಮಾಧವ ಶರ್ಮ ಅವರು 2013 ರಲ್ಲಿ ಕೋಟಿ ರುದ್ರ ಹೋಮ ನಡೆಸಿದ್ದಾರೆ. ವಿಶ್ವದಲ್ಲೇ ಕೋಟಿ ರುದ್ರ ಹೋಮ ಮಾಡಿರುವುದು ಬೆಲಗೂರು ಪೀಠದಲ್ಲಿ ಮಾತ್ರ ಎಂದರು.ನಂತರ ತಾಲೂಕು ಬ್ರಾಹ್ಮಣ ಮಹಾ ಸಭಾದಿಂದ ಬೆಲಗೂರು ವಿಜಯ ಮಾರುತಿ ಸ್ವಾಮೀಜಿಗೆ ಫಲ ಸಮರ್ಪಣೆ ಮಾಡಲಾಯಿತು .ಶ್ರೀಗಳು ಆಗಮಿಸಿದಾಗ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಗಾಯಿತ್ರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಸಲಾಯಿತು. ಈ ಸಂದರ್ಭದಲ್ಲಿ ತಾಲೂಕು ಬ್ರಾಹ್ಮಣ ಮಹಾ ಸಭಾದ ಅಧ್ಯಕ್ಷ ಕೊನೋಡಿ ಗಣೇಶ್, ಕಾರ್ಯದರ್ಶಿ ಸುರೇಶ್, ಖಜಾಂಚಿ ಅಭಿಷೇಕ್, ಉಪಾಧ್ಯಕ್ಷೆ ಅನ್ನಪೂರ್ಣ ಗೋಪಾಲಕೃಷ್ಣ, ತಾ.ಬ್ರಾಹ್ಮಣ ಮಹಾ ಸಭಾದ ನಿಕಟಪೂರ್ವ ಅಧ್ಯಕ್ಷ ಸದಾಶಿವ ಭಟ್ ಮತ್ತಿತರರು ಇದ್ದರು.