ಹೈನುಗಾರರಿಗೆ 675 ಕೋಟಿಗೂ ಹೆಚ್ಚಿನ ಹಣ ಬಾಕಿ;5 ತಿಂಗಳಿಂದ ಪ್ರೋತ್ಸಾಹಧನ ಪಾವತಿಸದ ಸರ್ಕಾರ

KannadaprabhaNewsNetwork |  
Published : Oct 22, 2025, 01:03 AM IST
21ಕೆಆರ್ ಎಂಎನ್ 5.ಜೆಪಿಜಿಮಾಗಡಿ ತಾಲೂಕಿನಲ್ಲಿ ದೇಸಿ ಹಸುಗಳ ಸಾಕಾಣಿಕೆ  | Kannada Prabha

ಸಾರಾಂಶ

ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷರಾಗಿ ಮಾಜಿ ಸಂಸದ ಡಿ.ಕೆ.ಸುರೇಶ್ ಆಯ್ಕೆಯಾದ ನಂತರ ಬೆಂಗಳೂರು ಹಾಲು ಒಕ್ಕೂಟದಲ್ಲಿ ಸಮಸ್ಯೆಗಳು ಇಲ್ಲದಂತಾಗುತ್ತದೆ. ರೈತರ ಪರವಾಗಿ ಸರ್ಕಾರದ ವಲಯದಲ್ಲಿ ಒಕ್ಕೂಟದ ಅಧ್ಯಕ್ಷರಾಗಿರುವ ಡಿ.ಕೆ.ಸುರೇಶ್ ರವರು ಮಾತನಾಡುತ್ತಾರೆ ಎಂದು ರೈತರು ಭಾವಿಸಿದ್ದರು. ಆದರೆ ಪ್ರೋತ್ಸಾಹ ಧನವನ್ನು ದೀಪಾವಳಿಯ ಸಂದರ್ಭದಲ್ಲಾದರೂ ಡಿ.ಕೆ.ಸುರೇಶ್ ರವರೇ ಮುತುವರ್ಜಿ ವಹಿಸಿ ಹಣ ಬಿಡುಗಡೆ ಮಾಡಿಸಿಕೊಡುತ್ತಾರೆ ಎಂಬ ರೈತರ ನಂಬಿಕೆ ಹುಸಿಯಾದಂತಾಗಿದೆ.

ಗಂ.ದಯಾನಂದ ಕುದೂರು.

ಕನ್ನಡಪ್ರಭ ವಾರ್ತೆ ಕುದೂರು

ಹೈನುಗಾರರಿಕೆ ಅವಲಂಬಿಸಿರುವ ರೈತರಿಗೆ ರಾಜ್ಯ ಸರ್ಕಾರ ಪ್ರೋತ್ಸಾಹಧನವನ್ನಾಗಿ 5 ರುಪಾಯಿ ನೀಡುತ್ತಿದೆ. ಆದರೆ, ಕಳೆದ ಐದು ತಿಂಗಳುಗಳಿಂದ ಈ ಹಣ ಹೈನುಗಾರರಿಗೆ ಬಿಡುಗಡೆಯಾಗಿಲ್ಲ. ಸಕಾಲದಲ್ಲಿ ಪ್ರೋತ್ಸಾಹಧನ ಬಿಡುಗಡೆಯಾದರೆ ರೈತರ ಬದುಕಿಗೆ ಅನುಕೂಲವಾಗುತ್ತದೆ. ದೀಪಾವಳಿಯ ಸಂದರ್ಭದಲ್ಲಾದರೂ ಸರ್ಕಾರ ರೈತರಿಗೆ ಹಣ ಬಿಡುಗಡೆ ಮಾಡುತ್ತದೆ ಎಂದು ನಿರೀಕ್ಷಿಸಿದ್ದ ರೈತರಿಗೆ ನಿರಾಶೆಯಾಗಿದೆ.

ರಾಜ್ಯದಲ್ಲಿ ಒಟ್ಟು 16 ಒಕ್ಕೂಟಗಳಿದ್ದು, ಇವುಗಳಿಂದ ಪ್ರತಿನಿತ್ಯ 90 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಪ್ರತಿ ಲೀಟರ್ ಗೆ 5 ರು.ಗಳಂತೆ ಪ್ರೋತ್ಸಾಹಧನ ಒಂದು ತಿಂಗಳಿಗೆ 135 ಕೋಟಿ ಹಣ ನೀಡಬೇಕಾಗಿದೆ. ಐದು ತಿಂಗಳಿಗೆ 675 ಕೋಟಿಗೂ ಹೆಚ್ಚಿನ ಹಣ ಬಿಡುಗಡೆ ಮಾಡಬೇಕಿದೆ ಎಂದು ಮೂಲಗಳು ತಿಳಿಸಿವೆ.

ಬೆಂಗಳೂರು ಹಾಲು ಒಕ್ಕೂಟದಿಂದ ಪ್ರತಿ ನಿತ್ಯ 17 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತದೆ. ಪ್ರತಿ ತಿಂಗಳು ರೈತರಿಗೆ ಇದೊಂದು ಒಕ್ಕೂಟದಿಂದಲೇ 25 ಕೋಟಿ 50 ಲಕ್ಷ ಪ್ರೋತ್ಸಾಹಧನ ನೀಡಬೇಕಾಗಿದೆ. ಕಳೆದ ಐದು ತಿಂಗಳಿಂದ ಒಟ್ಟು 125 ಕೋಟಿ ಹಣ ಬಿಡುಗಡೆ ಮಾಡಬೇಕಾಗಿದೆ.

ರಾಜ್ಯದಲ್ಲಿಯೇ ಅತಿಹೆಚ್ಚು ಹಾಲು ಸಂಗ್ರಹವಾಗುತ್ತಿರುವುದು ಬೆಂಗಳೂರು ಹಾಲು ಒಕ್ಕೂಟದಲ್ಲಿ. ನಂತರದ ಸ್ಥಾನ ಹಾಸನ, ಕೋಲಾರ, ಮಂಡ್ಯ ಜಿಲ್ಲೆಗಳು ಪಡೆದಿವೆ.

ರೈತರು ಒಕ್ಕೂಟಕ್ಕೆ ಹಾಕುವ ಹಾಲಿಗೆ 36 ರು. ನೀಡುತ್ತಾರೆ. 4.0 ಫ್ಯಾಟ್ ಇದ್ದರೆ ಅದಕ್ಕೆ ಹೆಚ್ಚುವರಿಯಾಗಿ 15 ಪೈಸೆ ನೀಡಲಾಗುತ್ತದೆ. ಬೆಂಗಳೂರು ಹಾಲು ಒಕ್ಕೂಟದಲ್ಲಿ ಒಟ್ಟು 2295 ಹಾಲು ಉತ್ಪಾದಕರ ಸಹಕಾರ ಸಂಘಗಳಿವೆ. ಅದರಲ್ಲಿ ನಿಗದಿತವಾಗಿ ಒಂದು ಲಕ್ಷ ರೈತರು ಹಾಲನ್ನು ಒಕ್ಕೂಟಕ್ಕೆ ನೀಡುತ್ತಾರೆ, ಇಷ್ಟೆಲ್ಲಾ ವಹಿವಾಟುಗಳಿದ್ದರು ಸಕಾಲದಲ್ಲಿ ಸರ್ಕಾರ ರೈತರಿಗೆ ಹಣ ಬಿಡುಗಡೆ ಗೊಳಿಸುತ್ತಿಲ್ಲ ಎಂಬುದು ಹಾಲು ಉತ್ಪಾದಕರ ಆರೋಪ. ದೇಸಿ ಹಾಲಿನ ಕೇಂದ್ರಗಳು :

ಮಲೆನಾಡ ಗಿಡ್ಡ, ಹಳ್ಳೀಕಾರ್, ಗಿರ್ ಇಂತಹ ದೇಸಿ ತಳಿಗಳಿಂದ ಸಂಗ್ರಹವಾಗುವ ಹಾಲಿಗೆ ಬೆಂಗಳೂರು ಹಾಲು ಒಕ್ಕೂಟದಿಂದ ಪ್ರತಿ ಲೀಟರ್ ಗೆ 65 ರು.ಗಳನ್ನು ನೀಡಲಾಗುತ್ತದೆ. ಆದರೆ ಎಲ್ಲಾ ಡೇರಿಗಳಲ್ಲೂ ದೇಸಿ ಹಾಲು ಸಂಗ್ರಹ ಮಾಡುವುದಿಲ್ಲ. ಉದಾಹರಣೆಗೆ ಮಾಗಡಿ ತಾಲೂಕಿನಲ್ಲಿ ಗೆಜ್ಜೆಗಾರಪಾಳ್ಯದಲ್ಲಿ ದೇಸಿ ಹಾಲಿನ ಘಟಕವನ್ನು ನಿರ್ಮಾಣ ಮಾಡಲಾಗಿದೆ. ಇಡೀ ತಾಲೂಕಿನ ದೇಸಿ ಹಾಲನ್ನು ಇಲ್ಲಿ ಸಂಗ್ರಹಿಸಲಾಗುತ್ತದೆ. ಆದರೆ ಇದರ ಲಾಭ ಎಲ್ಲ ಗ್ರಾಮಗಳಿಗೂ ಆಗಿಲ್ಲ. ಕುದೂರು ಹೋಬಳಿಯಲ್ಲಿ ಕೇವಲ ಎರಡು ಡೇರಿಗಳಲ್ಲಿ ದೇಸಿ ಹಾಲು ಸಂಗ್ರಹ ಮಾಡಲಾಗುತ್ತದೆ. ಉಳಿದ ಡೇರಿಗಳಲ್ಲಿ ದೇಸಿ ಹಾಲು ಸಂಗ್ರಹ ಮಾಡುವ ವ್ಯವಸ್ಥೆ ಮಾಡಿಲ್ಲದ ಕಾರಣ 65 ರು.ಗಳ ಹಾಲನ್ನು 35 ರು.ಗಳಿಗೆ ರೈತ ನೀಡಬೇಕಾಗಿದೆ ಎಂದು ರೈತರು ಅವಲತ್ತುಕೊಂಡಿದ್ದಾರೆ.ನೌಕರರ ಪ್ರೋತ್ಸಾಹಧನವೂ ಇಲ್ಲ :

ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಕೆಲಸ ನಿರ್ವಹಿಸುವ ನೌಕರರಿಗೆ ಸಂಘದಲ್ಲಿ ಸಂಗ್ರಹವಾಗುವ ಪ್ರತಿ ಲೀಟರ್ ಹಾಲಿಗೆ ಪ್ರೋತ್ಸಾಹಧನವನ್ನಾಗಿ 40 ಪೈಸೆ ನೀಡುವ ಪದ್ಧತಿ ಇದೆ. ಆದರೆ ಈ ಹಣವೂ ಕೂಡಾ ಕಳೆದ ಐದು ತಿಂಗಳಿಂದ ಬಿಡುಗಡೆಗೊಂಡಿಲ್ಲ ಎಂಬುದು ಇಲ್ಲಿ ಗಮನಾರ್ಹ.ಡಿ.ಕೆ.ಸುರೇಶ್ ಮೌನ:

ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷರಾಗಿ ಮಾಜಿ ಸಂಸದ ಡಿ.ಕೆ.ಸುರೇಶ್ ಆಯ್ಕೆಯಾದ ನಂತರ ಬೆಂಗಳೂರು ಹಾಲು ಒಕ್ಕೂಟದಲ್ಲಿ ಸಮಸ್ಯೆಗಳು ಇಲ್ಲದಂತಾಗುತ್ತದೆ. ರೈತರ ಪರವಾಗಿ ಸರ್ಕಾರದ ವಲಯದಲ್ಲಿ ಒಕ್ಕೂಟದ ಅಧ್ಯಕ್ಷರಾಗಿರುವ ಡಿ.ಕೆ.ಸುರೇಶ್ ರವರು ಮಾತನಾಡುತ್ತಾರೆ ಎಂದು ರೈತರು ಭಾವಿಸಿದ್ದರು. ಆದರೆ ಪ್ರೋತ್ಸಾಹ ಧನವನ್ನು ದೀಪಾವಳಿಯ ಸಂದರ್ಭದಲ್ಲಾದರೂ ಡಿ.ಕೆ.ಸುರೇಶ್ ರವರೇ ಮುತುವರ್ಜಿ ವಹಿಸಿ ಹಣ ಬಿಡುಗಡೆ ಮಾಡಿಸಿಕೊಡುತ್ತಾರೆ ಎಂಬ ರೈತರ ನಂಬಿಕೆ ಹುಸಿಯಾದಂತಾಗಿದೆ.ದೀಪಾವಳಿ ಹಬ್ಬದಲ್ಲಾದರೂ ಹಾಲಿನ ಪ್ರೋತ್ಸಾಹಧನ ಬಿಡುಗಡೆಯಾಗಿ ರೈತರ ಮುಖದಲ್ಲಿ ನಗುವಿನ ಹೂಕುಂಡ ಅರಳುತ್ತದೆ ಎಂದು ಬಾವಿಸಿದ್ದೆವು. ಆದರೆ ಹಣ ನೀಡದೆ ರೈತರನ್ನು ನಿರಾಶೆಗೊಳಿಸಿದ ಸರ್ಕಾರಕ್ಕೆ ರೈತರ ನಿಟ್ಟಿಸಿರು ತಟ್ಟದೆ ಇರುವುದಿಲ್ಲ. ಸರ್ಕಾರದ ಬೊಕ್ಕಸದಲ್ಲಿ ಹಣವಿಲ್ಲದ ಕಾರಣ ರೈತರಿಗೆ ಹಣ ಬಿಡುಗಡೆಗೊಳಿಸಿಲ್ಲ. ರೈತರು ದಂಗೆ ಏಳುವ ಮುನ್ನ ರೈತರ ಕಷ್ಟಗಳನ್ನು ಅರ್ಥ ಮಾಡಿಕೊಂಡು ಸರ್ಕಾರ ಎಚ್ಚರಿಕೆಯ ನಡೆ ಇಡಬೇಕು.

- ಬಸವರಾಜ್, ವಿರೋಧ ಪಕ್ಷದ ಮಾಜಿ ಅಧ್ಯಕ್ಷರು, ಬಿಬಿಎಂಪಿ

PREV

Recommended Stories

ಬೆಂಗಳೂರು : ದೀಪಾವಳಿ ವೇಳೆ ವಾಯುಮಾಲಿನ್ಯ ಹೆಚ್ಚಾಗಲಿಲ್ಲ, ಭಾರೀ ಇಳಿಕೆ!
ಹೊಸೂರಿಗೆ ಮೆಟ್ರೋ ವಿಸ್ತರಣೆ ಅಸಾಧ್ಯ : ರಾಜ್ಯ ಸರ್ಕಾರಕ್ಕೆ ಬಿಎಂಆರ್‌ಸಿಎಲ್‌ ವರದಿ