ಹಾಲಿನ ದರ ಹೆಚ್ಚಳಕ್ಕೆ ಆಗ್ರಹಿಸಿ ಹೈನುಗಾರರ ಪ್ರತಿಭಟನೆ

KannadaprabhaNewsNetwork |  
Published : Jul 08, 2026, 01:15 AM IST
1.ರೈತರು ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ಅವರಿಗೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ರಾಮನಗರ: ಪ್ರತಿ ಲೀಟರ್ ಹಾಲಿಗೆ 10 ರು.ಗಳ ಬೆಲೆ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲೆಯ ಐದು ತಾಲೂಕುಗಳ ಹೈನುಗಾರರು ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದರು

ರಾಮನಗರ: ಪ್ರತಿ ಲೀಟರ್ ಹಾಲಿಗೆ 10 ರು.ಗಳ ಬೆಲೆ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲೆಯ ಐದು ತಾಲೂಕುಗಳ ಹೈನುಗಾರರು ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದರು.

ರಾಮನಗರ, ಹಾರೋಹಳ್ಳಿ, ಕನಕಪುರ, ಚನ್ನಪಟ್ಟಣ ಹಾಗೂ ಮಾಗಡಿ ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ 3 ಸಾವಿರಕ್ಕೂ ಅಧಿಕ ಹೈನುಗಾರರು ಜಿಲ್ಲಾಧಿಕಾರಿಗಳ ಬಳಿ ಜಮಾಯಿಸಿ ಶಾಂತಿಯುತ ಪ್ರತಿಭಟನೆ ನಡೆಸಿದರು. ರೈತರಲ್ಲಿ ಒಂದು ಗುಂಪು ಹಳೇ ಮೈಸೂರು- ಬೆಂಗಳೂರು ಹೆದ್ದಾರಿಯಲ್ಲಿ ವಾಹನ ತಡೆದು ಆಕ್ರೋಶ ವ್ಯಕ್ತಪಡಿಸಿತು.

ರೈತರು ತಮ್ಮೊಂದಿಗೆ ತಂದಿದ್ದ ರಾಸುಗಳ ಕೊರಳಿನಲ್ಲಿ ಹಾಲಿಗೆ ಉತ್ತಮ ದರ‌ ನೀಡುತ್ತಿಲ್ಲ, ನಮಗೆ ತಿನ್ನಲು ಹುಲ್ಲು ಇಲ್ಲ, ಕುಡಿಯಲು ನೀರು ಇಲ್ಲ, ಮಾನ್ಯ ಮುಖ್ಯಮಂತ್ರಿಗಳೇ ನನ್ನ ಜೀವ ಮತ್ತು ನನ್ನ ಮಾಲೀಕನ ಜೀವನ ನಿಮ್ಮ‌ ಕೈಯಲ್ಲಿದೆ, ಹಾಲಿಗೆ ನೀವು ಉತ್ತಮ ಬೆಲೆ ನೀಡದಿದ್ದರೆ ನಮ್ಮ‌ ನಡೆ ಕಸಾಯಿಖಾನೆ ಕಡೆ... ಎಂಬ ಭಿತ್ತಿ ಪತ್ರಗಳನ್ನು ನೇತು ಹಾಕಿದ್ದರು.

ಇಷ್ಟೇ ಅಲ್ಲದೆ, ಕೆಲ ರೈತರು ಹಾಲನ್ನು ರಸ್ತೆಯಲ್ಲಿ ಸುರಿದು ಸಿಟ್ಟು ಪ್ರದರ್ಶಿಸಿದರೆ, ರೈತರ ಮತ್ತೊಂದು ಗುಂಪು ಹೆದ್ದಾರಿಯಲ್ಲಿ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿತು. ರೈತರನ್ನು ತೆರವುಗೊಳಿಸಲು ಪೊಲೀಸರು ಮುಂದಾದಾಗ ನೂಕು ನುಗ್ಗಲು ಉಂಟಾಯಿತು. ಪೊಲೀಸರೊಂದಿಗೆ ರೈತರು ಮಾತಿನ ಚಕಮಕಿಗೆ ಇಳಿದಿದ್ದರಿಂದ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ಕೊನೆಗೆ ತಣ್ಣಗಾದ ಪೊಲೀಸರು ರೈತರನ್ನು ಸಮಾಧಾನ ಪಡಿಸಿದರು.

ಜಿಲ್ಲಾ ವ್ಯಾಪ್ತಿಯ ರಾಮನಗರ, ಚನ್ನಪಟ್ಟಣ, ಕನಕಪುರ, ಹಾರೋಹಳ್ಳಿ ಹಾಗೂ ಮಾಗಡಿ ತಾಲೂಕುಗಳಲ್ಲಿ ಒಟ್ಟು 70 ಸಾವಿರ ರೈತರ ಕುಟುಂಬ ಹೈನುಗಾರಿಕೆಯನ್ನು ನಂಬಿ ಪ್ರತಿನಿತ್ಯ 10 ಲಕ್ಷ ಲೀಟರ್‌ಗೂ ಹೆಚ್ಚು ಹಾಲು ಉತ್ಪಾದನೆ ಮಾಡುತ್ತಿದ್ದು, ಕುಟುಂಬಗಳ ಜೀವನ ನಿರ್ವಹಣೆ ಹಾಗೂ ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ಹೈನುಗಾರಿಕೆಯನ್ನೇ ಅವಲಂಬಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆ, ಪಶು ಆಹಾರ ಹೆಚ್ಚಳ ಮತ್ತು ಮಳೆಯ ಕೊರತೆಯಿಂದ ಹಾಲು ಉತ್ಪಾದಕರು ಜಾನುವಾರುಗಳ ಸಾಕಾಣಿಕೆಗೆ ಬಳಸುವ ಎಲ್ಲಾ ಪದಾರ್ಥಗಳು (ಪಶು ಆಹಾರ ಮತ್ತು ಅದರ ಪೂರಕ ಪದಾರ್ಥಗಳಾದ ಮೇವು ಮೆಕ್ಕೆಜೋಳ, ಪಶು ಔಷಧಿಗಳ) ಮಾರುಕಟ್ಟೆ ಬೆಲೆ ಏರಿಕೆಯಾಗಿರುವುದರಿಂದ ಪ್ರತಿ ಲೀಟರ್ ಹಾಲಿನ ಉತ್ಪಾದನಾ ವೆಚ್ಚ 50 ರು.ಗಳಿಗಿಂತ ಹೆಚ್ಚಾಗಿದೆ. ಇದರ ಪರಿಣಾಮ ಹಾಲು ಉತ್ಪಾದಕರು ತೀವ್ರ ಆರ್ಥಿಕ ನಷ್ಟ ಅನುಭವಿಸುತ್ತಾ ಜಾನುವಾರುಗಳನ್ನು ಮಾರಾಟ ಮಾಡುವ ಪರಿಸ್ಥಿತಿ ಬಂದಿದೆ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದರು.

ಈ ಹಿಂದೆ ಹಾಲು ಉತ್ಪಾದಕರ ಬೇಡಿಕೆಗಳಿಗೆ ಸಕರಾತ್ಮಕವಾಗಿ ಸ್ಪಂದಿಸಿದ್ದೀರಿ. ಹಾಗೆಯೇ ಕಳೆದ ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಪ್ರತಿ ಲೀಟರ್ ಹಾಲಿಗೆ ಪ್ರೋತ್ಸಾಹಧನವನ್ನು 5 ರು.ನಿಂದ 7 ರು.ಗೆ ಹೆಚ್ಚಳ ಮಾಡಿ ರೈತ ಕುಟುಂಬಗಳ ನೆರವಿಗೆ ಬಂದಿದ್ದೀರಿ. ಹಾಗಾಗಿ ನುರಿತ ತಜ್ಞರ ಸಮಿತಿ ಮಾಡಿ ನೈಜತೆಯನ್ನು ಸರ್ಕಾರಕ್ಕೆ ಸಲ್ಲಿಸಿ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ರೈತರು ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ಅವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಹಾಲು ಉತ್ಪಾದಕ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಪಾದ್ರಳ್ಳಿ ಮಹದೇವಯ್ಯ, ವನಜಾ, ಶಿವರಾಜ್ , ಆರ್.ಕೃಷ್ಣಪ್ಪ, ಮಾರುತಿ, ಶಿವಲಿಂಗಯ್ಯ, ಚಂದ್ರ, ತಮ್ಮಯ್ಯ, ಹನುಮಂತಯ್ಯ ಸೇರಿದಂತೆ ಹಾಲು ಉತ್ಪಾದಕರು, ಪಿಎಸಿಎಂಎಸ್ ಅಧ್ಯಕ್ಷರು, ಸಿಇಓಗಳು ಹಾಗೂ ರೈತರು ಭಾಗವಹಿಸಿದ್ದರು.

ಕೋಟ್ ..................

ಹೈನೋದ್ಯಮ ಉದ್ಯೋಗ ಸೃಷ್ಟಿ ಮಾಡುವ ಒಂದು ಬೃಹತ್ ಕ್ಷೇತ್ರವಾಗಿದೆ. ಇಂದು ನಮ್ಮದು ಶಾಂತಿಯುತ ಹೋರಾಟ. ಬೇರೆ ರಾಜ್ಯದಲ್ಲಿ ಹಾಲಿನ ದರ ಹೆಚ್ಚಿದೆ. ಅದರಂತೆ ನಮ್ಮ‌ ಜಿಲ್ಲೆಯವರದೇ ಆದ ಮುಖ್ಯಮಂತ್ರಿ ಡಿ.ಕೆ‌.ಶಿವಕುಮಾರ್ ಅವರು ಪ್ರತಿ ಲೀಟರ್ ಹಾಲಿನ ದರವನ್ನು ಹೆಚ್ಚಳ ಮಾಡುವ ಜೊತೆಗೆ ನಮ್ಮೆಲ್ಲ ಬೇಡಿಕೆಗಳನ್ನು ಈಡೇರಿಸಬೇಕು.

- ಸಿ.ಪುಟ್ಟಸ್ವಾಮಿ, ರೈತ ಮುಖಂಡರು, ಚನ್ನಪಟ್ಟಣ.

ಕೋಟ್ .........

ಹೈನುಗಾರರು ಸಂಕಷ್ಟಕ್ಕೆ ಸಿಲುಕಿದ್ದು, ರಾಸುಗಳನ್ನು ಮಾರಾಟ ಮಾಡುವ ಸ್ಥಿತಿಗೆ ಬಂದಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯ ತಮ್ಮ ಪ್ರಣಾಳಿಕೆಯಲ್ಲಿ ತಿಳಿಸಿರುವಂತೆ ಪ್ರತಿ ಲೀಟರ್ ಹಾಲಿಗೆ ಪ್ರೋತ್ಸಾಹ ಧನವನ್ನು 5 ರು.ನಿಂದ 7 ರು.ಗೆ ಹೆಚ್ಚಳ ಮಾಡಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಅವರು ರೈತ ಕುಟುಂಬಗಳ ನೆರವಿಗೆ ನಿಲ್ಲಬೇಕು.

-ಕೆ.ರವಿ, ಅಧ್ಯಕ್ಷರು, ಎಂಪಿಸಿಎಸ್ , ಮದರ್ ಸಾಬರದೊಡ್ಡಿ.

ಕೋಟ್ ...................

ಪವಿತ್ರ ಕಾರ್ಯ ಮಾಡುವ ರೈತನನ್ನು ಕಾಪಾಡುವುದು ಸರ್ಕಾರದ ಜವಾಬ್ದಾರಿ. ಆದರೆ ಇತ್ತೀಚೆಗೆ ಆಹಾರ ಉತ್ಪಾದಿಸುವ ರೈತಾಪಿ ವರ್ಗ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದ್ದಾರೆ. ಹಾಗಾಗಿ ರೈತ ಅವಲಂಬಿತ ವೃತ್ತಿಗಳಿಗೆ ಬೆಲೆ ಹೆಚ್ಚಳ ಸೇರಿದಂತೆ ಬೆಂಬಲ ಬೆಲೆಗಳನ್ನು ಸರ್ಕಾರ ನೀಡಬೇಕು.

- ಬೈರೇಗೌಡ, ರೈತ ಮುಖಂಡರು, ಮಾಗಡಿ.

ಕೋಟ್ ......................

ಹಾಲು ಉತ್ಪಾದಕರ ಬೇಡಿಕೆಗಳ ಬಗ್ಗೆ ರೈತರ ನಿಯೋಗ ಜಿಲ್ಲಾಧಿಕಾರಿ ಯಶ್ವಂತ್ ವಿ ಗುರುಕರ್ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದು ಬೇಡಿಕೆಗಳ ಈಡೇರಿಸುವುದಾಗಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ನಮ್ಮ‌ ಶಾಂತಿಯುತ ಹೋರಾಟಕ್ಕೆ ಬೆಂಬಲ ನೀಡಿದ ಎಲ್ಲ ಹಾಲು ಉತ್ಪಾದಕ ರೈತರಿಗೂ ಅಭಿನಂದನೆ ಸಲ್ಲಿಸುತ್ತೇನೆ.

-ಮಹದೇವಯ್ಯ, ಜಿಲ್ಲಾಧ್ಯಕ್ಷರು, ಹಾಲು ಉತ್ಪಾದಕರ ಹಿತರಕ್ಷಣಾ ವೇದಿಕೆ.

ಹಾಲು ಉತ್ಪಾದಕರ ಬೇಡಿಕೆಗಳೇನು ? :

* ಹಾಲು ಒಕ್ಕೂಟದಿಂದ ಖರೀದಿಸುತ್ತಿರುವ ಪ್ರತಿ ಲೀಟರ್ ಹಾಲಿನ ದರವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ 10 ರು. ಗಳಷ್ಟು ಹೆಚ್ಚಿಸಿ ಒಂದು ಲೀಟರ್ ಹಾಲಿಗೆ 50 ರು.ಗಳಾಗುವಂತೆ ರಾಜ್ಯ ಸರ್ಕಾರ ಕ್ರಮ ವಹಿಸಬೇಕು

* ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ ಪ್ರತಿ ಲೀಟರ್ ಹಾಲಿಗೆ ಪ್ರೋತ್ಸಾಹಧನನ್ನು 5 ರು.ಗಳಿಂದ 7 ರು.ಗಳಿಗೆ ಹೆಚ್ಚಳ ಮಾಡಬೇಕು.

* ಪಶು ಆಹಾರಕ್ಕೆ ಸರ್ಕಾರದಿಂದ ಶೇಕಡ 50ರಷ್ಟು ಸಬ್ಸಿಡಿ ನೀಡಬೇಕು.

* ಹಾಲು ಉತ್ಪಾದಕರ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕರು ಮತ್ತು ಸಿಬ್ಬಂದಿಗಳಿಗೆ ಪ್ರತಿ ಲೀಟರ್ ಗೆ ಹಿಂದೆ ನೀಡುತ್ತಿರುವ 20 ಪೈಸೆ ಪ್ರೋತ್ಸಾಹವನ್ನು 30 ಪೈಸೆಗೆ ಹೆಚ್ಚಳ ಮಾಡಬೇಕು. ಬಾಕಿ ಇರುವ ಹಣವನ್ನು ಬಿಡುಗಡೆ ಮಾಡಬೇಕು.

* ಹೈನುಗಾರರ ಸಮಸ್ಯೆ ಅಧ್ಯಯನಕ್ಕೆ ನುರಿತ ತಜ್ಞರ ಸಮಿತಿ ರಚಿಸಬೇಕು.

7ಕೆಆರ್ ಎಂಎನ್ 1,2,3.ಜೆಪಿಜಿ

1.ರೈತರು ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ಅವರಿಗೆ ಮನವಿ ಸಲ್ಲಿಸಿದರು.

2,3.ಜಿಲ್ಲಾಧಿಕಾರಿಗಳ ಕಚೇರಿ ಎದುರು ಸಹಸ್ರಾರು ರೈತರು ಪ್ರತಿಭಟನೆ ನಡೆಸಿದರು..

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಲಿಸುತ್ತಿದ್ದ ಲಾರಿಗೆ ಬಸ್ ಡಿಕ್ಕಿ: ಚಾಲಕ ಸೇರಿ ಇಬ್ಬರ ಸಾವು
ಹರಳಯ್ಯ ಸ್ವಾಮೀಜಿ ಮೇಲಿನ ಹಲ್ಲೆಗೆ ಆಕ್ರೋಶ