ಪರಿಶಿಷ್ಟರ ಅರ್ಥಿಕಾಭಿವೃದ್ಧಿಗೆ ಹೈನುಗಾರಿಕೆ ಪೂರಕ

KannadaprabhaNewsNetwork | Published : Mar 18, 2025 12:31 AM

ಸಾರಾಂಶ

ಇದು ಕೇಂದ್ರ ಸರ್ಕಾರದ ಕಾರ್ಯಕ್ರಮವಾಗಿದ್ದು ಪರಿಶಿಷ್ಟ ಪಂಗಡದ ಜನರಿರುವ ಪ್ರದೇಶಗಳಲ್ಲಿ ಪಶುಪಾಲನೆ, ಕೋಳಿ ಸಾಕಾಣಿಕೆ, ಕುರಿ ಸಾಕಾಣಿಕೆ ಇತ್ಯಾದಿಗಳ ಪಾಲನೆ ಮತ್ತು ಪೋಷಣೆಗಾಗಿ ಹಲವು ಮಾಹಿತಿಗಳನ್ನು ಸಂಸ್ಥೆ ವತಿಯಿಂದ ಹೈನುಗಾರರಿಗೆ ನೀಡುತ್ತಿದ್ದು ಇದರ ಮೂಲಕ ಪರಿಶಿಷ್ಟ ಪಂಗಡ ಆರ್ಥಿಕ ಅಭಿವೃದ್ದಿಗೆ ನೆರವಾಗುವುದಾಗಿದೆ.

ಕನ್ನಡಪ್ರಭ ವಾರ್ತೆ ಚಿಂತಾಮಣಿ

ಹಸುಗಳಿಗೆ ಹಸಿರುಮೇವು, ಸಮತೋಲನ ಆಹಾರ ಬಳಕೆ, ಒಣ ಮೇವಿನ ಯೂರಿಯಾ ಕಾಕಂಬಿ, ರಸಮೇವು, ಸಂಪೂರ್ಣ ಆಹಾರ ಮಿಶ್ರಣ, ಬೈಪಾಸ್ ಆಹಾರ ಮತ್ತು ಖನಿಜ ಮಿಶ್ರಣದ ಆಹಾರ ನೀಡುವುದರಿಂದ ಪಶುಗಳಲ್ಲಿ ಹಾಲಿನ ಉತ್ಪಾದನೆ ಹೆಚ್ಚುವುದರ ಜೊತೆಗೆ ಅವುಗಳ ಬಂಜೆತನವನ್ನು ನಿವಾರಿಸಬಹುದಾಗಿದೆ ಎಂದು ಎನ್‌ಐಎಎನ್‌ಪಿ ನಿರ್ದೇಶಕ ಡಾ ಅರ್ಥಬಂಧು ಸಾಹು ಹೇಳಿದರು.

ತಾಲೂಕಿನ ಬ್ರಾಹ್ಮಣದಿನ್ನೆಯಲ್ಲಿ ಬೆಂಗಳೂರಿನ ಆಡುಗೋಡಿಯ ರಾಷ್ಟ್ರೀಯ ಪಶು ಪೋಷಣೆ ಮತ್ತು ಶರೀರ ಕ್ರಿಯಾ ವಿಜ್ಞಾನ ಸಂಸ್ಥೆ ಮತ್ತು ಪರಿಶಿಷ್ಟ ಪಂಗಡ ಅಭಿವೃದ್ಧಿಗಾಗಿ ಕ್ರಿಯಾ ಯೋಜನೆಯಡಿಯಲ್ಲಿ ನಡೆದ ರೈತರ ಮತ್ತು ವಿಜ್ಞಾನಿಗಳ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪರಿಶಿಷ್ಟರ ಅಭಿವೃದ್ಧಿಗೆ ನೆರವು

ಇದು ಕೇಂದ್ರ ಸರ್ಕಾರದ ಕಾರ್ಯಕ್ರಮವಾಗಿದ್ದು ಪರಿಶಿಷ್ಟ ಪಂಗಡದ ಜನರಿರುವ ಪ್ರದೇಶಗಳಲ್ಲಿ ಪಶುಪಾಲನೆ, ಕೋಳಿ ಸಾಕಾಣಿಕೆ, ಕುರಿ ಸಾಕಾಣಿಕೆ ಇತ್ಯಾದಿಗಳ ಪಾಲನೆ ಮತ್ತು ಪೋಷಣೆಗಾಗಿ ಹಲವು ಮಾಹಿತಿಗಳನ್ನು ಸಂಸ್ಥೆ ವತಿಯಿಂದ ಹೈನುಗಾರರಿಗೆ ನೀಡುತ್ತಿದ್ದು ಇದರ ಮೂಲಕ ಪರಿಶಿಷ್ಟ ಪಂಗಡ ಆರ್ಥಿಕ ಅಭಿವೃದ್ದಿಗೆ ನೆರವಾಗುವುದಾಗಿದೆ.

ಅವಿಭಜಿತ ಕೋಲಾರ ಜಿಲ್ಲೆ ಹಾಲು ಮತ್ತು ರೇಷ್ಮೆಗೆ ಪ್ರಸಿದ್ದಿಯನ್ನು ಪಡೆದಿದ್ದು ಆಧುನಿಕ ತಂತ್ರಜ್ಞಾನ ಬಳಸಿಕೊಂಡು, ಪಶುಪೋಷಣೆ ಮತ್ತು ಹಸುಗಳಲ್ಲಿ ಬಂಜೆತನ ಹೋಗಲಾಡಿಸುವ ಮೂಲಕ ಆರ್ಥಿಕವಾಗಿ ಸಬಲರಾಗಬೇಕೆಂದರು.

ಹಿತ್ತಲಕೋಳಿ ತಳಿ ಫಾರಂ ಮಾಡಿ

ಪ್ರಧಾನ ವಿಜ್ಞಾನಿ ಡಾ ಆನಂದನ್ ಮಾತನಾಡಿ, ನಾಟಿ ಕೋಳಿ ಫಾರಂ ಕೋಳಿ ಮಾಡಬೇಕಾದರೆ ಅದು ಸ್ವಲ್ಪ ವೆಚ್ಚದಾಯಕವಾಗಿದ್ದು, ಅವುಗಳ ಪಾಲನೆಗೆ ಶೆಡ್, ಫಿಡ್ ಸುಧಾರಣೆ ಮಾಡುವುದು ತ್ರಾಸದಾಯಕವಾಗುತ್ತದೆ. ಇದರಿಂದ ನಾಟಿ ಮತ್ತು ಫಾರಂ ಕೋಳಿಗಳಿಗಿಂತ ಮಿಗಿಲಾದ ಹಿತ್ತಲಕೋಳಿ ತಳಿಯನ್ನು ಅಭಿವೃದ್ಧಿ ಪಡೆಸಿದ್ದು ವಾರ್ಷಿಕ ೧೬೦-೧೮೦ ಮೊಟ್ಟೆ ನೀಡುತ್ತದೆ. ಇದು ರೈತರಿಗೆ ಅನುಕೂಲವಾಗುತ್ತದೆ. ಇಲ್ಲಿನ ರೈತರಿಗೆ ೧ ತಿಂಗಳ ಮರಿಯನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.

ಪ್ರಧಾನ ವಿಜ್ಞಾನಿ ಡಾ ಗಿರಿಧರ್ ಮಾತನಾಡಿ ಹಸು ಮತ್ತು ಕೋಳಿ ಸಾಕಾಣಿಕೆಗೆ ಮೇವು ಪ್ರಮುಖವಾಗಿದ್ದು ಕಡಿಮೆ ಮಳೆಯಲ್ಲೂ ಬೆಳೆಯುವ ಮತ್ತು ವಾರ್ಷಿಕ ಮೂರು ಬಾರಿ ಕೊಯ್ಲನ್ನು ಮಾಡಿಕೊಳ್ಳಲು ಅವಕಾಶವಿದೆ. ೩ ವರ್ಷ ಈ ಜೋಳದಿಂದ ಮೇವು ಪಡೆಯಬಹುದಾಗಿದೆ. ರಸಮೇವು ಮಾಡಿಕೊಂಡಲ್ಲಿ ಪಶು ಹಾಗೂ ಕೋಳಿಗಳ ಮೇವು ಲಭ್ಯವಾಗಿ ಉತ್ತಮ ಪೋಷಣೆ ಲಭಿಸುತ್ತದೆ ಎಂದರು.

ಹೈನುಗಾರರಿಗೆ ಅನುಕೂಲ

ಮುಖ್ಯ ಪಶು ವೈದ್ಯ ಡಾ ವಿಶ್ವನಾಥ್ ಮಾತನಾಡಿ, ಹೈನುಗಾರರಿಗೆ ಅನುಕೂಲವಾಗುವಂತಹ ಕಾರ್ಯಕ್ರಮ ಇದಾಗಿದ್ದು ಪರಿಶಿಷ್ಟ ಪಂಗಡ ೧೦೦ ಮಂದಿಗೆ ಪ್ರತಿಯೊಬ್ಬರಿಗೂ ೬,೬೦೦ (ಆರು ಸಾವಿರ ಆರುನೂರು) ಮೌಲ್ಯದ ಮ್ಯಾಟ್, ಫಿಡ್, ೨ ಸಾವಿರ, ಮಿನಿರಲ್ ಮಿಕ್ಸ್ , ಕಿಟ್ , ಹಾಲಿನ ಕ್ಯಾನ್ ನ್ನು ಒದಗಿಸಲಾಗುತ್ತಿದೆ. ಹಸುಗಳಿಗೆ ಯಾವ ರೀತಿಯ ಪೋಷಣೆಯನ್ನು ಒದಗಿಸಿದರೆ ಅದು ಹಸುಗಳಿಗೆ ಉಪಯೋಗವಾಗುತ್ತವೆಯೋ ಮತ್ತು ಅನುಪಯೋಗವಾಗುತ್ತಿದೆಯೋ ಎಂಬ ಅಂಶಗಳು ತಿಳಿದುಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಡಾ ಅರ್ಥಬಂದು ಸಾಹು, ಪ್ರಧಾನ ವಿಜ್ಞಾನಿ ಡಾ. ಆನಂದನ್ ಡಾ. ಗಿರಿಧರ್, ಡಾ ರಾಜೇಂದ್ರನ್ , ಹಿರಿಯ ಪಶು ವೈದ್ಯ ಡಾ ವಿಶ್ವನಾಥ್, ಹಿರಿಯ ವಿಜ್ಞಾನಿ ಡಾ .ಕೃಷ್ಣಪ್ಪ ಗ್ರಾ.ಪಂ ಅಧ್ಯಕ್ಷ ಚಂದ್ರಪ್ಪ, ಮುಖ್ಯ ಶಿಕ್ಷಕ ಶಿವಶಂಕರ್, ಶ್ರೀನಿವಾಸ್, ಗ್ರಾಮದ ಹಿರಿಯರಾದ ನರಸಿಂಹಪ್ಪ, ನಾರಾಯಣಸ್ವಾಮಿ, ಶ್ರೀನಿವಾಸ್, ಸೊಸೈಟಿ ಶ್ರೀನಿವಾಸ್, ಮಂಜುನಾಥ್, ಕೃಷ್ಣಪ್ಪ, ಅಶ್ವಿನಿ, ಶ್ವೇತಾ, ಚಂದ್ರಪ್ಪ, ಗ್ರಾಮಸ್ಥರು ಉಪಸ್ಥಿತರಿದ್ದರು.

.

Share this article