ರೈತರ ಆರ್ಥಿಕ ಪ್ರಗತಿಗೆ ಹೈನುಗಾರಿಕೆ ಸಹಕಾರಿ: ಶಾಸಕ ಕೆ.ಎಂ.ಉದಯ್

KannadaprabhaNewsNetwork |  
Published : Dec 23, 2025, 01:45 AM IST
22ಕೆಎಂಎನ್ ಡಿ23 | Kannada Prabha

ಸಾರಾಂಶ

ಪಶು ಆಸ್ಪತ್ರೆಗಳು ಊರಿನ ಹೊರಭಾಗದಲ್ಲಿ ಇರುವುದರಿಂದ ಗ್ರಾಮಸ್ಥರು ಮದ್ಯಪಾನ ಮತ್ತಿತರ ಕಾನೂನು ಬಾಹಿರ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿದ್ದಾರೆ ಎಂದು ದೂರುಗಳು ಸಾಮಾನ್ಯವಾಗಿವೆ. ಗ್ರಾಮದ ಮುಖಂಡರು ಇಂತಹ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಮೂಲಕ ರಕ್ಷಣೆಗೆ ಮುಂದಾಗಬೇಕು.

ಕನ್ನಡಪ್ರಭ ವಾರ್ತೆ ಮದ್ದೂರು

ರೈತರ ಆರ್ಥಿಕ ಅಭಿವೃದ್ಧಿಗೆ ಹೈನುಗಾರಿಕೆ ಸಹಕಾರಿಯಾಗಿದೆ ಎಂದು ಶಾಸಕ ಕೆ.ಎಂ.ಉದಯ್ ಸೋಮವಾರ ಹೇಳಿದರು. ತಾಲೂಕಿನ ವಳಗೆರೆಹಳ್ಳಿಯಲ್ಲಿ 48.34 ಲಕ್ಷ ರು. ವೆಚ್ಚದಲ್ಲಿ ಪಶು ಆಸ್ಪತ್ರೆ ನೂತನ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಿ ಮಾತನಾಡಿ, ಹವಾಮಾನ ವೈಪರಿತ್ಯ ಮತ್ತಿತರ ಕಾರಣಗಳಿಂದ ಕೃಷಿಯಲ್ಲಿ ನಷ್ಟ ಹೊಂದುತ್ತಿರುವ ರೈತರಿಗೆ ಹೈನುಗಾರಿಕೆ ವರದಾನವಾಗಿದೆ ಎಂದರು.

ರಾಜ್ಯ ಸರ್ಕಾರವು ಸಹ ಹೆಚ್ಚು ಹಾಲುಉತ್ಪಾದನೆ ದೃಷ್ಟಿಯಿಂದ ಹೈನುಗಾರಿಕೆಗೆ ಹೆಚ್ಚಿನ ಉತ್ತೇಜನ ನೀಡುತ್ತಿದೆ. ಹೈನುಗಾರರು ಇದರ ಪ್ರಯೋಜನ ಪಡೆದುಕೊಂಡು ಹಾಲಿನ ಹೆಚ್ಚುಉತ್ಪಾದನೆ ಜೊತೆಗೆ ಆರ್ಥಿಕವಾಗಿ ಸದೃಢರಾಗಬೇಕು ಎಂದರು.

ಪಶು ಆಸ್ಪತ್ರೆಗಳು ಊರಿನ ಹೊರಭಾಗದಲ್ಲಿ ಇರುವುದರಿಂದ ಗ್ರಾಮಸ್ಥರು ಮದ್ಯಪಾನ ಮತ್ತಿತರ ಕಾನೂನು ಬಾಹಿರ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿದ್ದಾರೆ ಎಂದು ದೂರುಗಳು ಸಾಮಾನ್ಯವಾಗಿವೆ. ಗ್ರಾಮದ ಮುಖಂಡರು ಇಂತಹ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಮೂಲಕ ರಕ್ಷಣೆಗೆ ಮುಂದಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಪಶು ವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ಡಾ.ಟಿ.ಎಚ್.ಗೋವಿಂದ, ಪಶುವೈದ್ಯಾಧಿಕಾರಿ ಡಾ.ಕಾರ್ತಿಕ್, ಮದ್ದೂರು ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷ ಮಮತಾ ಶಂಕರೇಗೌಡ, ಗ್ರಾಪಂ ಸದಸ್ಯ ಸುನಿಲ್ ಕುಮಾರ್, ಮುಖಂಡರಾದ ಪುಟ್ಟರಾಜು, ವಿ.ಸಿ.ಉಮಾಶಂಕರ್, ಸೋ.ಶಿ.ಪ್ರಕಾಶ್, ಉಮೇಶ್ ಮತ್ತಿತರು ಭಾಗವಹಿಸಿದ್ದರು.

ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಸುರೇಶ್ ಕಂಠಿಯಿಂದ 1 ಲಕ್ಷ ರು. ದೇಣಿಗೆ

ಮದ್ದೂರು:

ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ ಕಾಂಗ್ರೆಸ್ ಭವನಕ್ಕೆ ಜಿಪಂ ಮಾಜಿ ಅಧ್ಯಕ್ಷ ಸುರೇಶ್ ಕಂಠಿ 1 ಲಕ್ಷ ರು. ದೇಣಿಗೆ ನೀಡಿದರು.

ತಾಲೂಕಿನ ಕದಲೂರು ಗ್ರಾಮದ ಶಾಸಕ ಕೆ.ಎಂ.ಉದಯ್ ನಿವಾಸಕ್ಕೆ ಸೋಮವಾರ ಭೇಟಿ ನೀಡಿದ ಸುರೇಶ್ ಕಂಠಿ, 1 ಲಕ್ಷ ರು. ನಗದನ್ನು ಶಾಸಕರಿಗೆ ಹಸ್ತಾಂತರಿಸಿದರು. ಪ್ರವಾಸಿ ಮಂದಿರ ಸಮೀಪ ನಿರ್ಮಾಣವಾಗುತ್ತಿರುವ ಕಾಂಗ್ರೆಸ್ ಭವನ ನಿರ್ಮಾಣಕ್ಕೆ 1 ಲಕ್ಷ ರು. ದೇಣಿಗೆ ನೀಡುವುದಾಗಿ ಭೂಮಿ ಪೂಜೆ ನೆರವೇರಿಸಲು ಬಂದಿದ್ದ ಮಾಜಿ ಸಂಸದ ಡಿ.ಕೆ.ಸುರೇಶ್ ಸಮ್ಮುಖದಲ್ಲಿ ವಾಗ್ದಾನ ಮಾಡಿದ್ದೆ. ಅದರಂತೆ ಶಾಸಕರ ಸಮ್ಮುಖದಲ್ಲಿ ದೇಣಿಗೆ ನೀಡಿದ್ದೇನೆ ಎಂದು ಸುರೇಶ್ ಕಂಠಿ ತಿಳಿಸಿದರು.

ನಂತರ ಮಾತನಾಡಿದ ಶಾಸಕ ಉದಯ್, ಸುರೇಶ್ ಕಂಠಿ ಅವರು ದೇಣಿಗೆ ನೀಡಿ ಕೊಟ್ಟ ಮಾತು ಉಳಿಸಿಕೊಂಡು ತಾವು ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತ ಎಂದು ಸಾಬೀತು ಪಡಿಸಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಈ ವೇಳೆ ಬ್ಲಾಕ್ ಕಾಂಗ್ರೆಸ ಮಾಜಿ ಅಧ್ಯಕ್ಷ ಕದಲೂರು ರಾಮಕೃಷ್ಣ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎರಡು ಪೋಲಿಯೊ ಹನಿ ಮಕ್ಕಳಿಗೆ ಜೀವಾಮೃತ: ಶಾಸಕ ಪ್ರಸಾದ್ ಅಬ್ಬಯ್ಯ
₹22267 ಕೋಟಿ ವೆಚ್ಚದಲ್ಲಿ 16.75 ಕಿ.ಮೀ ಸುರಂಗ ರಸ್ತೆ ನಿರ್ಮಿಸಲು ಅದಾನಿ ಗ್ರೂಪ್ ಬಿಡ್‌ ಸಲ್ಲಿಕೆ