ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕಾರ್ಯಾಚರಿಸುತ್ತಿರುವ ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟವು 2024-25ನೇ ಸಾಲಿನಲ್ಲಿ 1,174 ಕೋಟಿ ರು. ವ್ಯವಹಾರ ಮಾಡಿದ್ದು, 12.79 ಕೋಟಿ ರು. ನಿವ್ವಳ ಲಾಭ ದಾಖಲಿಸಿದೆ ಎಂದು ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಕ್ಕೂಟದ ವ್ಯಾಪ್ತಿಯ 751 ಸಂಘಗಳಿಂದ 2024- 25ನೇ ಸಾಲಿನಲ್ಲಿ ದಿನಕ್ಕೆ 3.42 ಲಕ್ಷ ಲೀ. ಹಾಲು ಸಂಗ್ರಹಣೆಯಾಗಿತ್ತು. ಪ್ರಸ್ತುತ 2025-26ನೇ ಸಾಲಿನಲ್ಲಿ ಹಾಲಿನ ಸಂಗ್ರಹದಲ್ಲಿ ಶೇ.16ರಷ್ಟು ಏರಿಕೆಯಾಗಿದ್ದು, ದಿನಂಪ್ರತಿ 3.97 ಲಕ್ಷ ಲೀಟರ್ ಸಂಗ್ರಹವಾಗುತ್ತಿದೆ. ಆದರೂ ಬೇಡಿಕೆ ಹೆಚ್ಚಿರುವುದರಿಂದ ದಿನಕ್ಕೆ 60 ಸಾವಿರದಿಂದ 1.5 ಲಕ್ಷ ಲೀ.ನಷ್ಟು ಹಾಲನ್ನು ಹೊರ ಜಿಲ್ಲೆಗಳಿಂದ ತರಿಸಲಾಗುತ್ತಿದೆ ಎಂದು ಹೇಳಿದರು.2 ಕೋಟಿ ರು. ಪರಿಹಾರ: ಒಕ್ಕೂಟದ ವ್ಯಾಪ್ತಿಯ ಸುಮಾರು 55 ಸಾವಿರ ಹೈನುಗಾರರ ಹಿತದೃಷ್ಟಿಯಿಂದ ಸ್ಥಾಪಿಸಲಾದ ರೈತ ಕಲ್ಯಾಣ ಟ್ರಸ್ಟ್‌ನಿಂದ 2024-25ನೇ ಸಾಲಿನಲ್ಲಿ 2.05 ಕೋಟಿ ರು.ನಷ್ಟು ಮೊತ್ತವನ್ನು ರೈತರ ಮರಣ, ವೈದ್ಯಕೀಯ ವೆಚ್ಚ, ರಾಸುಗಳ ಮರಣದ ಕಾರಣಕ್ಕೆ ಪಾವತಿಸಲಾಗಿದೆ. ಹಾಲು ಉತ್ಪಾದನೆ ಹೆಚ್ಚಳ ಮಾಡಲು ತಿಂಗಳಿಗೆ ಸರಾಸರಿ 1 ಸಾವಿರ ಟನ್ ರಸಮೇವನ್ನು ಖರೀದಿಸಿ ರೈತರಿಗೆ ಮಾರಾಟ ಮಾಡಲಾಗುತ್ತಿದ್ದು, ಹಾಲಿನ ಸಂಗ್ರಹ ಏರಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದರು.ಈರೋಡ್ ರಾಸು ಖರೀದಿ:ಒಕ್ಕೂಟವು ಈರೋಡ್ ಅಥವಾ ಹೊರ ಜಿಲ್ಲೆಗಳಿಂದ ರಾಸು ಖರೀದಿಸಿ ಹೈನುಗಾರರಿಗೆ ನೀಡುವ ಯೋಜನೆ ಹಮ್ಮಿಕೊಂಡಿದೆ. ಈ ರಾಸುಗಳ ಸಾಗಾಟ ಹಾಗೂ ವಿಮಾ ವೆಚ್ಚವನ್ನು ಒಕ್ಕೂಟವೇ ಭರಿಸುತ್ತಿದೆ. 2024-25ನೇ ಸಾಲಿನಲ್ಲಿ ಒಟ್ಟು 229 ಮತ್ತು 25-26ನೇ ಸಾಲಿನಲ್ಲಿ ಈವರೆಗೆ ಒಟ್ಟು 130 ರಾಸುಗಳನ್ನು ಖರೀದಿಸಲಾಗಿದೆ. 2024-25ನೇ ಸಾಲಿನಲ್ಲಿ 30,629 ರಾಸುಗಳಿಗೆ ವಿಮೆ ಮಾಡಿಸಿದ್ದು, 1177 ಕ್ಲೇಮುಗಳನ್ನು ನೀಡಲಾಗಿದೆ ಎಂದು ರವಿರಾಜ್ ಶೆಟ್ಟಿ ತಿಳಿಸಿದರು.ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ಹಾಗೂ ನಿರ್ದೇಶಕ ಸುಚರಿತ ಶೆಟ್ಟಿ ಮಾತನಾಡಿ, ಏ.1ರಿಂದ ಶೇ.3.5 ಫ್ಯಾಟ್ ಮತ್ತು ಶೇ. 8.5 ಎಸ್.ಎನ್.ಎಫ್. ಇರುವ ಹಾಲಿಗೆ ಒಕ್ಕೂಟದಿಂದ ಸಂಘಗಳಿಗೆ 40.30 ರು. ಹಾಗೂ ಸಂಘಗಳಿಂದ ಉತ್ಪಾದಕರಿಗೆ 39 ರು. ನೀಡಲಾಗುತ್ತಿದೆ. ಪ್ರಸ್ತುತ ಒಕ್ಕೂಟದಲ್ಲಿ ಶೇ.4.4 ಫ್ಯಾಟ್ ಮತ್ತು ಶೇ.8.5 ಎಸ್.ಎನ್.ಎಫ್. ದರ್ಜೆಯ ಹಾಲು ರೈತರಿಂದ ಖರೀದಿಯಾಗುತ್ತಿದ್ದು, ಇದಕ್ಕೆ ಒಕ್ಕೂಟವು ಸಂಘಗಳಿಗೆ 42.06 ರು. ಹಾಗೂ ಉತ್ಪಾದಕರಿಗೆ 40.76 ರು. ಪಾವತಿಸುತ್ತಿದೆ, ಇದು ರಾಜ್ಯದಲ್ಲೇ ಅತಿ ಹೆಚ್ಚು ಎಂದು ಹೇಳಿದರು.ಒಕ್ಕೂಟದ ಉಪಾಧ್ಯಕ್ಷ ಉದಯ ಕೋಟ್ಯಾನ್, ಒಕ್ಕೂಟದ ನಿರ್ದೇಶಕರಾದ ಬೆಳಪು ದೇವಿಪ್ರಸಾದ್ ಶೆಟ್ಟಿ, ಎಸ್.ಬಿ. ಜಯರಾಮ ರೈ, ಕೆ. ಶಿವಮೂರ್ತಿ, ಎಚ್. ಪ್ರಭಾಕರ್, ಕೆ. ಚಂದ್ರಶೇಖರ ರಾವ್, ಮಮತಾ ಆರ್. ಶೆಟ್ಟಿ, ನಂದರಾಮ್ ರೈ, ಸುಧಾಕರ ರೈ, ಒಕ್ಕೂಟದ ವ್ಯವಸ್ಥಾಪಕರಾದ ರವಿರಾಜ್ ಉಡುಪ, ಮಧುಸೂದನ್ ಕಾಮತ್ ಇದ್ದರು.
ಮುಂದಿನ ಯೋಜನೆಗಳು- ನೂತನ ಮೌಲ್ಯವರ್ಧಿತ ಉತ್ಪನ್ನಗಳಾದ ಗ್ವಾವಾ ಚಿಲ್ಲಿ ಲಸ್ಸಿ, ನಂದಿನಿ ಸೀಡ್ಸ್ ಲಾಡು, ಪ್ರೊಟೀನ್ ಪನ್ನೀರ್, ಪ್ರೊಟೀನ್ ಪಂಚ್, ವೇ ಡ್ರಿಂಕ್ಸ್ ಇತ್ಯಾದಿ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗುವುದು.- ಪನ್ನೀರ್ ಉತ್ಪನ್ನವನ್ನು ಆಕರ್ಷಕವಾದ ನೂತನ ಅತ್ಯಾಧುನಿಕ ಯಂತ್ರವನ್ನು ಖರೀದಿಸಿ ಪನ್ನೀರ್ ಬಿಡುಗಡೆ ಮಾಡಲು ಯೋಜಿಸಲಾಗಿದೆ.- ಉಡುಪಿ ಡೇರಿ ಆವರಣದಲ್ಲಿ ನೂತನ ಆಡಳಿತ ಕಚೇರಿ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಶೀಘ್ರದಲ್ಲಿ ಉದ್ಘಾಟನೆ ಮಾಡಲಾಗುವುದು. ಅಲ್ಲದೆ, ನೂತನ ಸಿಹಿ ಉತ್ಪನ್ನಗಳ ಉತ್ಪಾದನೆಯನ್ನು ಆರಂಭಿಸಲು ಯೋಜಿಸಲಾಗಿದೆ.- ಉಡುಪಿ ಡೇರಿ ಬಳಕೆಗೆ ಅಗತ್ಯವಿರುವ ನೀರನ್ನು ವಾರಾಹಿ ಯೋಜನೆಯಿಂದ ಪೈಪ್‌ಲೈನ್ ಅಳವಡಿಸಲು ಕ್ರಮ ವಹಿಸಲಾಗುತ್ತಿದೆ.- ಶಾಸಕ ಅಶೋಕ್ ಕುಮಾರ್ ರೈ ಅವರು ಪುತ್ತೂರಿನಲ್ಲಿ ಒಕ್ಕೂಟಕ್ಕೆ 10.30 ಎಕರೆ ಸರ್ಕಾರಿ ಜಾಗ ಮಂಜೂರು ಮಾಡಿಸಿದ್ದು, ಒಕ್ಕೂಟದ ಅಭಿವೃದ್ಧಿಗೆ ಪೂರಕ ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು.- ಒಕ್ಕೂಟದಿಂದ ಐಸ್‌ಕ್ರೀಂ ಘಟಕ ರಚಿಸುವ ನಿಟ್ಟಿನಲ್ಲಿ ಚಿಂತನೆ ನಡೆದಿದೆ.