ಬೆಂಗಳೂರು: ರಾಜ್ಯದ ಹಲವೆಡೆ ಮತ್ತೆ ಮಳೆ ಅಬ್ಬರಿಸುತ್ತಿದ್ದು, ಕರಾವಳಿಯಲ್ಲಿ ಹವಾಮಾನ ಇಲಾಖೆ ಶನಿವಾರ ರೆಡ್ ಅಲರ್ಟ್ ಘೋಷಿಸಿದ್ದು, ಶಾಲಾ, ಕಾಲೇಜಿಗೆ ರಜೆ ಘೋಷಿಸಲಾಗಿದೆ. ಕುಮಟಾ, ಹೊನ್ನಾವರ ತಾಲೂಕಿನಲ್ಲಿ 12 ಕಾಳಜಿ ಕೇಂದ್ರ ತೆರೆದು 263 ಜನರು ಆಶ್ರಯ ಪಡೆದಿದ್ದಾರೆ.
ಮೂಲ್ಕಿ ತಾಲೂಕು ವ್ಯಾಪ್ತಿ ಭಾರಿ ಗಾಳಿ, ಮಳೆಗೆ ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಕಾರಿನಲ್ಲಿದ್ದ ತಂದೆ ಮಗಳು ಪಾರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಸಾವಿರಕ್ಕೂ ಅಧಿಕ ಅಡಕೆ ಮರ ಧರಾಶಾಹಿಯಾಗಿದೆ. ಶಿವಮೊಗ್ಗದಲ್ಲಿ ಲಿಂಗನಮಕ್ಕಿ ಡ್ಯಾಂಗೆ ಒಂದೇ ದಿನ 40 ಸಾವಿರ ಕ್ಯುಸೆಕ್ ನೀರು ಹರಿದು ಬಂದಿದೆ. ಕೆಲವೆಡೆ ಮನೆಯ ಗೋಡೆಗಳು, ದನದ ಕೊಟ್ಟಿಗೆ ನೆಲಸಮವಾಗಿದೆ. ಚಿಕ್ಕಮಗಳೂರಿನ ಕೆಲವೆಡೆ ವಿದ್ಯುತ್ ಕಂಬಗಳು ಧರೆಗುರುಳಿವೆ.