ಬೆಳ್ತಂಗಡಿ : ಧರ್ಮಸ್ಥಳ ಗ್ರಾಮ ಪ್ರಕರಣಕ್ಕೆ ಸಂಬಂಧಿಸಿದ ಉತ್ಖನನ ಪ್ರಕ್ರಿಯೆ ವೇಳೆ ಬಾಹುಬಲಿ ಬೆಟ್ಟದ ತಪ್ಪಲಿನಲ್ಲಿ ನಡೆದ ಅಗೆತ ಕಾರ್ಯಾಚರಣೆಯಲ್ಲಿ ಕಳೇಬರ ಪತ್ತೆಯಾಗದಿದ್ದರೆ ಅದು ಮುಸುಕುಧಾರಿ ಅನಾಮಿಕ ದೂರುದಾರನ ತಪ್ಪಲ್ಲ ಎಂದು ದೂರುದಾರೆ ಸುಜಾತಾ ಭಟ್ ಪರ ವಕೀಲ ಮಂಜುನಾಥ್ ಎನ್. ಹೇಳಿದ್ದಾರೆ.
ಶನಿವಾರ ಬಾಹುಬಲಿ ಬೆಟ್ಟದ ತಪ್ಪಲಿನಲ್ಲಿ ನಡೆದ ಉತ್ಖನನ ಕಾರ್ಯದ ಬಗ್ಗೆ ಅವರು ಪ್ರತಿಕ್ರಿಯೆ ನೀಡಿದರು. ಇಲ್ಲಿ ಹೊಸ ಮಣ್ಣು ಕಂಡು ಬಂದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಮಂಜುನಾಥ್, ಯಾರೋ ಒಳಸಂಚು ನಡೆಸಿ, ಬಾಹುಬಲಿ ಬೆಟ್ಟದ ತಪ್ಪಲಿನ ಅರಣ್ಯ ಪ್ರದೇಶದಲ್ಲಿ ಬೇಕಂತಲೇ ಹೊಸ ಮಣ್ಣು ಸುರಿದಿದ್ದಾರೆ.
ಸತ್ಯವನ್ನು ಮರೆಮಾಚಲೆಂದು ಕೆಲವು ಹಿತಾಸಕ್ತಿಗಳು ಬೇಕಂತಲೇ ಸಾಕ್ಷಿ ನಾಶದಲ್ಲಿ ತೊಡಗಿರುವಂತೆ ಕಾಣುತ್ತಿದೆ. ಬಾಹುಬಲಿ ಬೆಟ್ಟದ ತಪ್ಪಲಿನ ಅರಣ್ಯ ಪ್ರದೇಶದಲ್ಲಿ ಸಾಕ್ಷಿ ಸಿಗದಿರಲೆಂದೇ ಸುಮಾರು 10 ಅಡಿಯಷ್ಟು ಹೊಸಮಣ್ಣು ಮತ್ತು ತ್ಯಾಜ್ಯವನ್ನು ಸುರಿದಿರುವಂತೆ ಕಾಣುತ್ತಿದೆ. ಎಸ್‌ಐಟಿ ತನಿಖೆಗೆ ಅಡ್ಡಿಪಡಿಸಲೆಂದೇ ಕೆಲವು ವ್ಯಕ್ತಿಗಳು ಇಂತಹ ಹೇಯ ಕೃತ್ಯ ನಡೆಸಿರುವಂತೆ ಕಾಣುತ್ತಿದೆ. ಆದರೆ, ಎಸ್‌ಐಟಿ, ಈ ಒಳಸಂಚನ್ನು ಭೇದಿಸುವುದೆಂಬ ವಿಶ್ವಾಸವಿದೆ ಎಂದರು.