ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ

Published : Jan 13, 2026, 11:15 AM IST
Mangaluru

ಸಾರಾಂಶ

ನಮ್ಮ ದೇಶದ ಸಹಕಾರಿ ಚಳುವಳಿಗೆ 121 ವರ್ಷಗಳ ಸುಧೀರ್ಘ ಇತಿಹಾಸವಿದ್ದು ಸಹಕಾರ ರಂಗ ವು ಸಮಾಜದ ಎಲ್ಲಾ ಸ್ತರಗಳಲ್ಲಿಯೂ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಪ್ರಾಚೀನ ಭಾರತದಲ್ಲಿ ವೇದಗಳ ಕಾಲದಿಂದಲೂ ಸಹಕಾರ ತತ್ವವು ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿತ್ತು.

ಪ್ರಾಚೀನ ಭಾರತದಲ್ಲಿ ವೇದಗಳ ಕಾಲದಿಂದಲೂ ಸಹಕಾರ ತತ್ವವು ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿತ್ತು.

ಋಗ್ವೇದದಲ್ಲಿ //ಸಂಘ ಛಧ್ವಂ ಸಂವದಧ್ವಂ ಸಂವೋ ಮನಾಂಸಿ ಜಾನತಾಂ// ನಾವೆಲ್ಲರೂ ಒಟ್ಟಿಗೆ ಹೆಜ್ಜೆ ಹಾಕೋಣ. ಒಳ್ಳೆಯ ಮಾತುಗಳೊಂದಿಗೆ ಅರಿತು _ ಕಲಿತು ಬಾಳೋಣ ಎಂಬುದಾಗಿ ಹೇಳಿದೆ.

ನಮ್ಮ ದೇಶದ ಸಹಕಾರಿ ಚಳುವಳಿಗೆ 121 ವರ್ಷಗಳ ಸುಧೀರ್ಘ ಇತಿಹಾಸವಿದ್ದು ಸಹಕಾರ ರಂಗ ವು ಸಮಾಜದ ಎಲ್ಲಾ ಸ್ತರಗಳಲ್ಲಿಯೂ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ.

" ಆಡು ಮುಟ್ಟದ ಸೊಪ್ಪಿಲ್ಲ ಸಹಕಾರಿ ಕ್ಷೇತ್ರ_ _ಮುಟ್ಟದ ಜಾಗವಿಲ್ಲ ".._ ಎಂಬಂತೆ _ಹುಟ್ಟಿನಿಂದ ಚಟ್ಟದವರೆಗೆ ... ಮನುಷ್ಯನ ಜೀವನದ ಎಲ್ಲಾ ಹಂತಗಳಲ್ಲೂ ಎಲ್ಲಾ ಅವಶ್ಯಕತೆಗಳನ್ನು ಸಹಕಾರ ಕ್ಷೇತ್ರ ತನ್ನದೇ ಆದಂತಹ ರೀತಿಯಲ್ಲಿ ಪೂರೈಸುತ್ತಿದೆ.

ಸಹಕಾರಿ ದತ್ತಾಂಶದ ಪ್ರಕಾರ ಪ್ರಸ್ತುತ ನಮ್ಮ ದೇಶದಲ್ಲಿ 55 ವಿಧದ 8.4 ಲಕ್ಷ ಸಹಕಾರಿ ಸಂಘಗಳು ಸ್ಥಾಪನೆಯಾಗಿದ್ದು ದೇಶದ ಸುಮಾರು 30 ಕೋಟಿ ಜನರು ಸಹಕಾರಿ ಸಂಘದ ಸದಸ್ಯರಾಗಿದ್ದಾರೆ. ವಿಶೇಷವಾಗಿ ಕೃಷಿ ,ತೋಟಗಾರಿಕೆ ,ಹೈನುಗಾರಿಕೆ, ಮೀನುಗಾರಿಕೆ , ಬ್ಯಾಂಕಿಂಗ್, ಶಿಕ್ಷಣ , ಆರೋಗ್ಯ ಮತ್ತು ಗ್ರಾಮೀಣ ಉದ್ದಿಮೆಗಳ ಕ್ಷೇತ್ರಗಳಿಗೂ ಸಹಕಾರಿ ಸಂಘ ವ್ಯಾಪಿಸಿದ್ದು ಗ್ರಾಮೀಣಾಭಿವೃದ್ಧಿ ಮತ್ತು ದೇಶದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿವೆ.

" ಸಹಕಾರದಿಂದ ಸಮೃದ್ಧಿ" 2021 ರಲ್ಲಿ ಆರಂಭವಾದ "ನೂತನ ಸಹಕಾರಿ ಕಾಯ್ದೆ"ಯಂತೆ " ಸಹಕಾರದಿಂದ ಸಮೃದ್ಧಿ " ಎಂಬ ದೃಷ್ಟಿಕೋನವನ್ನು ಅನುಷ್ಠಾನ ಮಾಡಿ ದೇಶಾದ್ಯಂತ ಸಹಕಾರಿ ಸಂಘಗಳನ್ನು ಬಲಪಡಿಸಲು ಕೇಂದ್ರ ಸರಕಾರ ಪ್ರತ್ಯೇಕವಾದ ಸಹಕಾರಿ ಸಚಿವಾಲಯದ ಮೂಲಕ ವಿಸ್ತೃತವಾದ ಕಾರ್ಯ ಯೋಜನೆಯನ್ನು ಸಿದ್ಧಪಡಿಸಿ ಅನುಷ್ಠಾನಗೊಳಿಸುತ್ತಿದೆ.

ಸಹಕಾರಿ ಕ್ಷೇತ್ರದ ಕೃಷಿಪತ್ತಿನ ವಲಯ 80% ಮಿಕ್ಕಿದ ಸಣ್ಣ ಮತ್ತು ಅತಿ ಸಣ್ಣ ರೈತರ ಹಣಕಾಸು ಅವಶ್ಯಕತೆಗಳನ್ನು ಪೂರೈಸುತ್ತಿದೆ. ದೇಶದ ಹೈನುಗಾರಿಕೆಯಲ್ಲಿ ಸಹಕಾರಿ ವಲಯ 35 % ತನ್ನ ಪಾಲನ್ನು ಹೊಂದಿದ್ದು ಗುಜರಾತಿನ " ಅಮುಲ್" ಮತ್ತು ಕರ್ನಾಟಕದ "ನಂದಿನಿ" ಹಾಲಿನ ಉತ್ಪನ್ನಗಳ ಮಾರುಕಟ್ಟೆಯಲ್ಲಿ ಸಿಂಹ ಪಾಲನ್ನು ಹೊಂದಿದೆ. ದೇಶ ವಿದೇಶಗಳಲ್ಲಿ ಅತ್ಯುತ್ತಮ ಬ್ರಾಂಡ್ ಆಗಿ ಪ್ರಖ್ಯಾತಿಯನ್ನು ಗಳಿಸುತ್ತಿದೆ.

ದೇಶದ ಕೃಷಿ ವಲಯಕ್ಕೆ ರಸಗೊಬ್ಬರ ಜೈವಿಕ ಪೌಷ್ಟಿಕಾಂಶಗಳು ಮತ್ತು ಕೀಟನಾಶಕಗಳನ್ನು ಪೂರೈಸುತ್ತಿರುವ ಇಪ್ಕೋ ಮತ್ತು ಕ್ರಿಬ್ಕೋ ಎಂಬ ಎರಡು ಸಹಕಾರಿ ಸಂಸ್ಥೆಗಳು ನಮ್ಮ ದೇಶದಲ್ಲಿ ಮಾತ್ರವಲ್ಲದೆ ವಿಶ್ವಮಟ್ಟದಲ್ಲಿ ಉನ್ನತ ಸ್ಥಾನವನ್ನು ಗಳಿಸಿವೆ.

ನಾಗರಿಕ ಜೀವನದ ಪ್ರತಿಯೊಂದು ಹೆಜ್ಜೆ ಹೆಜ್ಜೆಯಲ್ಲೂ ಪರಸ್ಪರ ಸಹಕಾರದ ಅವಶ್ಯಕತೆ ಇದೆ.

ದೇಶದ ಸಹಕಾರಿರಂಗಕ್ಕೆ ಹೊಸದಿಕ್ಕನ್ನು ನೀಡುವ ಮಹತ್ತರ ಉದ್ದೇಶದಿಂದ " ಬಿನಾ ಸಂಸ್ಕಾರ್ ನಹೀ ಸಹಕಾರ್... ಬಿನಾ ಸಹಕಾರ್ ನಹಿ ಉದ್ದಾರ್" ಎನ್ನುವ ಧ್ಯೇಯವಾಕ್ಯದೊಂದಿಗೆ 1978 ಸಪ್ಟಂಬರ್ 15 "ಅನಂತ ಚತುರ್ದಶಿಯ ಶುಭದಿನ" ದಂದು ಸಹಕಾರ ಭಾರತಿ ಸಹಕಾರಿ ಕ್ಷೇತ್ರದ ಏಕೈಕ ಸರಕಾರೇತರ ರಾಜಕೀಯ ರಹಿತ ಸ್ವಯಂಸೇವಾ ರಾಷ್ಟ್ರೀಯ ಸಂಘಟನೆಯಾಗಿ ಜನ್ಮತಾಳಿತು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರಾದ ಮಾನನೀಯ ದಿ. ಲಕ್ಷ್ಮಣರಾವ್ ಇನಾಂದಾರ್ ಮಾರ್ಗದರ್ಶನ ಹಾಗೂ ದಿ. ಮಾಧವರಾವ್ ಗೋಡ್ ಬೋಲೆಯವರ ನೇತೃತ್ವದಲ್ಲಿ ಸಹಕಾರಿ ರಂಗದ ಏಕೈಕ ಸ್ವಯಂಸೇವಾ ಸಂಘಟನೆ ಸಹಕಾರ ಭಾರತಿ -"ಸಂಪರ್ಕˌ ಸೇವೆˌ ಸಮರ್ಪಣೆ "—ಮೂರು ಪ್ರಧಾನ ಸೂತ್ರಗಳ ಆಧಾರದಲ್ಲಿ ಮಹಾರಾಷ್ಟ್ರದ ಪೂನಾದಲ್ಲಿ ಆರಂಭವಾಗಿ ಸಹಕಾರ ಚಳವಳಿ ಮೂಲಕ ಸಮಾಜದ ಅರ್ಥವ್ಯವಸ್ಥೆ ಹಾಗೂ ಸಾಮಾಜಿಕ ಸಬಲೀಕರಣವನ್ನು ಬಲಿಷ್ಟಗೊಳಿಸುವ ಸಂಕಲ್ಪದೊಂದಿಗೆ ಕಾರ್ಯನಿರ್ವಹಿಸುತ್ತಾ ಬರುತ್ತಿದೆ.

1979 ಜನವರಿ 11ರಲ್ಲಿ ರಾಷ್ಟ್ರಮಟ್ಟದಲ್ಲಿ ನೋಂದಾವಣೆಗೊಂಡ ಸಹಕಾರ ಭಾರತಿ ಸಂಘಟನೆಯು ಈ ದಿನವನ್ನು ಪ್ರತಿ ವರ್ಷ ತನ್ನ "ಸಂಸ್ಥಾಪನ ದಿನ "ವನ್ನಾಗಿ ದೇಶಾದ್ಯಂತ ಆಚರಿಸಿಕೊಂಡು ಬರುತ್ತಿದೆ.

ಸಹಕಾರ ಭಾರತಿಯ ಸಂಸ್ಥಾಪಕರಾದ ಮಾನನೀಯ ಶ್ರೀ ಲಕ್ಷ್ಮಣ್ ರಾವ್ ಇನಾಮ್ದಾರ್ ರವರ ಪರಿಚಯ . (1917-1984).

ಶ್ರೀ ಲಕ್ಷ್ಮಣರಾವ್ ಇನಾಮ್ದಾರ್ ರವರ ಜನನ 1917ರ ಸೆಪ್ಟೆಂಬರ್ ತಿಂಗಳ 14 ನೇ ತಾರೀಖಿನ ಋಷಿ ಪಂಚಮಿಯ ಪುಣ್ಯ ದಿನದಂದು ಆಯಿತು .

7 ಜನ ಸಹೋದರರಲ್ಲಿ ಶ್ರೀ ಲಕ್ಷ್ಮಣ್ ರಾವ್ ರವರು ಮೂರನೇಯವರಾಗಿದ್ದು 3 ಜನ ಸಹೋದರಿಯರನ್ನು ಹೊಂದಿದ್ದರು.

ಮೂಲತಃ ಮಹಾರಾಷ್ಟ್ರದ ಸತಾರ ಜಿಲ್ಲೆಯವರಾಗಿದ್ದ ಶ್ರೀ ಇನಾಮ್ದಾರ್ ರವರು ನ್ಯಾಯವಾದಿಯಾಗಿ ವೃತ್ತಿ ಜೀವನವನ್ನು ನಡೆಸುತ್ತಿದ್ದರು.

ಉನ್ನತ ಮೌಲ್ಯಗಳಿಂದ ಕೂಡಿದ ಸಹಕಾರ ಚಳುವಳಿಯಿಂದ ಜನಸಾಮಾನ್ಯರ ಜೀವನ ಮಟ್ಟದಲ್ಲಿ ಸುಧಾರಣೆ ಮಾತ್ರವಲ್ಲದೆ ತನ್ಮೂಲಕ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯ ಎಂಬುವುದು ಅವರ ದೃಷ್ಟಿಕೋನವಾಗಿತ್ತು.

1978 ರಲ್ಲಿ ಸಹಕಾರ ಭಾರತಿಯ ಉದಯವಾದಾಗ ಅದರ ಪ್ರೇರಕ ಶಕ್ತಿಯಾಗಿ ಮುಂಚೂಣಿಯಲ್ಲಿ ಕೆಲಸ ಮಾಡಿದವರು ಸಂಸ್ಥಾಪಕರಾದ * ಮಾನನೀಯ*ಶ್ರೀ ಲಕ್ಷ್ಮಣ್ *ರಾವ್ ಇನಾಮ್ದಾರ್* ರವರು.

ಸ್ವಾತಂತ್ರ್ಯ ಪೂರ್ವದ ಆಗಿನ ಕಾಲದಲ್ಲಿ ಕಾನೂನು ಶಿಕ್ಷಣ ಪಡೆದು ವಕೀಲಿ ವೃತ್ತಿ ನಡೆಸುವುದು ಒಂದು ಗೌರವದ ವಿಚಾರವಾಗಿತ್ತು.

ವಕೀಲಿ ವೃತ್ತಿಯನ್ನು ನಡೆಸುತ್ತಿದ್ದ ಕಾರಣಕ್ಕೆ ಎಲ್ಲರ ಬಾಯಲ್ಲಿ "ವಕೀಲ ಸಾಬ್ " ಎಂದೇ ಕರೆಸಿಕೊಳ್ಳುತ್ತಿದ್ದರು.

ವಕೀಲಿ ವೃತ್ತಿಯ ಜೊತೆಗೆ ತನ್ನ ಸಾಮಾಜಿಕ ಜೀವನವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರಾಗಿ ಗುಜರಾತ್ ರಾಜ್ಯದಲ್ಲಿ ಸಂಘ ಕಾರ್ಯದೊಂದಿಗೆ ತನ್ನನ್ನು ತೊಡಗಿಸಿಕೊಂಡಿದ್ದರು.

ಅಂದಿನ ದಿನದಲ್ಲಿ ಬಾಲ ಸ್ವಯಂಸೇವಕರಾಗಿದ್ದ ಇಂದಿನ ಪ್ರಧಾನಿ ಶ್ರೀ ನರೇಂದ್ರ ಮೋದಿಯವರಿಗೆ ಬಾಲ್ಯದಲ್ಲಿಯೇ ಸಂಘದ ಸಂಸ್ಕಾರ ಮತ್ತು ರಾಷ್ಟ್ರೀಯ ಚಿಂತನೆಯನ್ನು ತುಂಬುವ ಕೆಲಸವನ್ನು ಮಾಡಿದ್ದರು.

1984ರಲ್ಲಿ ತನ್ನ 67ನೇ ವಯಸ್ಸಿನಲ್ಲಿ ಶ್ರೀ ಲಕ್ಷ್ಮಣ್ ರಾವ್ ಇನಾಂದಾರ್ ರವರು ಮಹಾರಾಷ್ಟ್ರದ ಪುಣೆಯಲ್ಲಿ ನಿಧನ ಹೊಂದಿದರು.

ಅವರ ತನ್ನ ನಿಧನ ಪೂರ್ವದ 5 ವರ್ಷಗಳಲ್ಲಿ ಸಹಕಾರ ಭಾರತಿಯ ಕೆಲಸ ಕಾರ್ಯದ ವಿಸ್ತರಣೆಗಾಗಿ ದೇಶಾದ್ಯಂತ ನಿರಂತರ ಪ್ರವಾಸ ಮಾಡಿದ್ದರು.

ಇದರಿಂದಾಗಿ ಸಹಕಾರ ಭಾರತಿಗೆ ದೇಶಾದ್ಯಂತ ಸಂಘಟನಾತ್ಮಕವಾಗಿ ತನ್ನ ನೆಲೆಯನ್ನು ವಿಸ್ತರಿಸಲು ಸಾಧ್ಯವಾಯಿತು.

ಪ್ರಸ್ತುತ ಸಹಕಾರ ಭಾರತಿ ದೇಶದ 28 ರಾಜ್ಯಗಳಲ್ಲಿ ಸುಮಾರು 650 ಜಿಲ್ಲೆಗಳಲ್ಲಿ ಸಕ್ರಿಯವಾದ ಜಿಲ್ಲಾ ಸಮಿತಿಯ ಜೊತೆಗೆ ಸಂಘಟನಾತ್ಮಕವಾಗಿ ಸಹಕಾರ ಕ್ಷೇತ್ರದ ಬಲವರ್ಧನೆಗಾಗಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಾ ಬರುತ್ತಿದೆ.

ಸಹಕಾರ ಭಾರತಿಯ ಪ್ರಧಾನ ತಾತ್ವಿಕ ನೆಲೆಗಳು

ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರದ ಪುನರ್ನಿಮಾಣದ ಕಾರ್ಯದ ಸಂದರ್ಭದಲ್ಲಿ ಸಹಕಾರಿ ಪರಿವಾರದಲ್ಲಿ ನಂಬಿಕೆ ಇರಿಸಿ ಪಕ್ಷ ರಾಜಕಾರಣದಿಂದ ಮೇಲೆದ್ದು ರಾಷ್ಟ್ರೀಯ ದೃಷ್ಟಿಕೋನದಿಂದ ಕೂಡಿದ ರಚನಾತ್ಮಕ ಕಾರ್ಯಗಳ ಮುಖಾಂತರ ಸಮರ್ಥ ಸಹಕಾರಿ ಚಳುವಳಿಯನ್ನು ರೂಪಿಸುವುದು ಸಹಕಾರ ಭಾರತಿಯ ಉದ್ದೇಶವಾಗಿದೆ.

ಈ ಉದ್ದೇಶದ ಸಾಕಾರದಲ್ಲಿ ಸಹಕಾರಿಯಾಗುವಂತಹ 3 ತಾತ್ವಿಕ ವಿಚಾರಗಳನ್ನು ಸಹಕಾರ ಭಾರತೀಯ ತನ್ನಲ್ಲಿ ಅಳವಡಿಸಿಕೊಂಡಿದೆ.

1. ಸಹಕಾರಿ ಪರಿವಾರ ಕಲ್ಪನೆಯಲ್ಲಿ ನಂಬಿಕೆ . ( Co_Operative Family Assumption ). ಸಹಕಾರ ಭಾರತಿಯ ಕಾರ್ಯಕ್ಷೇತ್ರವು ಇಡೀ ಸಹಕಾರ ರಂಗವೇ ಆಗಿರುವುದರಿಂದ ಸಮಗ್ರವಾಗಿ ಸಹಕಾರಿ ಸಮುದಾಯವನ್ನು ಸಂಘಟಿಸಿ ಪೋಣಿಸುವುದು ಇದರ ಪರಮ ಉದ್ದೇಶವಾಗಿದೆ.

ಸಹಕಾರ ರಂಗದ ಬೇರೆ ಬೇರೆ ಘಟಕಗಳಾದ ಸಹಕಾರ ಸಂಘಗಳು ಆಡಳಿತ ಮಂಡಳಿ ಸದಸ್ಯರು ಸಿಬ್ಬಂದಿ ವರ್ಗ ಸಹಕಾರ ಇಲಾಖೆ ಇವರೆಲ್ಲರ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ಈ ಕ್ಷೇತ್ರದ ಯಶಸ್ಸು ಸಾಧ್ಯ.

ಸಹಕಾರ ಕ್ಷೇತ್ರದ ಪ್ರತಿಯೊಂದು ಘಟಕವು ಒಂದಕ್ಕೊಂದು ಪೂರಕವಾಗಿ ಕೆಲಸ ನಿರ್ವಹಿಸಿ ಸಮಗ್ರ ಸಹಕಾರಿ ರಂಗದ ಹಿತವನ್ನು ಬಯಸುವುದೇ ಸಹಕಾರ ಭಾರತಿಯ ಕಾರ್ಯಯೋಜನೆಯಾಗಿರುತ್ತದೆ.

ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಚಿವಾಲಯ ಮತ್ತು ಸಚಿವರು ಗಳ ಜೊತೆಗೆ ನಿರಂತರ ಸಂಪರ್ಕ, ಸಹಕಾರಿ ಇಲಾಖೆಗಳ ಮೂಲಕ ನಿಕಟ ಬಾಂಧವ್ಯ ಮತ್ತು ಸಂವಾದಗಳ ಮೂಲಕ ಸಹಕಾರಿ ಕ್ಷೇತ್ರದಲ್ಲಿ ಸೌಹಾರ್ದಯುತ ವಾತಾವರಣ ನಿರ್ಮಾಣದ ಕೆಲಸವನ್ನು ಸಹಕಾರ ಭಾರತಿ ಯಶಸ್ವಿಯಾಗಿ ಮಾಡಿಕೊಂಡು ಬರುತ್ತಿದೆ.

2. ಪಕ್ಷ ರಾಜಕಾರಣದಿಂದ ದೂರ_ ರಾಷ್ಟ್ರ ರಾಜಕಾರಣದ ಮೇಲೆ ನಂಬಿಕೆ. ( Away from party politics.)

ಸಹಕಾರ ಭಾರತಿಯು ರಾಜಕೀಯ ಪಕ್ಷಗಳ ಹಿಡಿತದಿಂದ ಮುಕ್ತವಾಗಿರುವ ಸಂಘಟನೆಯಾಗಿದೆ.

ರಾಜಕೀಯ ಪಕ್ಷಗಳ ಸಾಮಾನ್ಯ ಕಾರ್ಯ ಸೂಚಿಯಲ್ಲಿ ಅಧಿಕಾರಗ್ರಹಣ ಹೆಚ್ಚು ಮಹತ್ವವನ್ನು ಪಡೆಯುತ್ತದೆ. ಆದರೆ ಸಹಕಾರ ಕ್ಷೇತ್ರದ ಸಂಘಟನೆಗಾಗಿ ಸಂಸ್ಕಾರ ಮತ್ತು ಸೇವೆಯಿಂದ ಸಹಕಾರ ಸಂಘಗಳಿಂದ ಸಮಾಜದ ಅಭಿವೃದ್ಧಿ ಸಾಧ್ಯ ಎನ್ನುವ ನಂಬಿಕೆ ಸಹಕಾರ ಭಾರತಿಯದ್ದಾಗಿದೆ .

ಅದಕ್ಕಾಗಿ ರಾಜಕೀಯೇತರ ಅಸ್ತಿತ್ವದ ಅಗತ್ಯವನ್ನು ಮನಗಂಡಿರುತ್ತದೆ.

3. ರಚನಾತ್ಮಕ ದೃಷ್ಟಿಕೋನ.(Constructive Vision)

ರಾಷ್ಟ್ರ ಹಿತದ ಯಾವುದೇ ವಿಷಯಗಳಿಗೆ ತಕ್ಷಣವೇ ಸ್ಪಂದಿಸುವ ಮನೋಭಾವ ಕರ್ತವ್ಯ ಭಾವನೆ ಮತ್ತು ಸಕಾರಾತ್ಮಕ ವಿಚಾರವೇ ರಚನಾತ್ಮಕ ದೃಷ್ಟಿಕೋನ.

ಸಹಕಾರ ಭಾರತಿಯ ಸದಸ್ಯರಿಗೆ ಉತ್ತಮ ಸಂಸ್ಕಾರ ದೊರೆತು ಅವರಲ್ಲಿ ಗುಣವಿಕಾಸವಾಗಿ ಸಾಮಾಜಿಕ ಜವಾಬ್ದಾರಿ ಮತ್ತು ರಾಷ್ಟ್ರೀಯ ಚಾರಿತ್ರ್ಯದ ನಿರ್ಮಾಣದ ಮೂಲಕ ಸಮೃದ್ಧ ಹಾಗೂ ಸಂಪತ್ಭರಿತ ರಾಷ್ಟ್ರ ನಿರ್ಮಾಣ ಸಾಧ್ಯ ಎಂಬ ನಂಬಿಕೆ ಈ ವಿಚಾರದಲ್ಲಿದೆ.

ಪಕ್ಷ ರಾಜಕಾರಣದಿಂದ ದೂರವಾಗಿದ್ದರೂ ರಾಷ್ಟ್ರ ರಾಜಕಾರಣ ದೊಂದಿಗೆ ಸ್ವಾರ್ಥ ರಹಿತವಾದ ಕಾರ್ಯ ಶೈಲಿಯನ್ನು ಅಳವಡಿಸಿಕೊಂಡಿರುತ್ತದೆ.

ನಾಗಪುರದ ಶ್ರೀ ವಸಂತ್ ರಾವ್*ದೇವ್ ಪೂಜಾರ್ ರವರು ಸಹಕಾರ ಭಾರತಿಯ ಪ್ರಥಮ ರಾಷ್ಟ್ರೀಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಸಹಕಾರ ಭಾರತಿಯ ಪ್ರಥಮ ರಾಷ್ಟ್ರೀಯ ಅಧಿವೇಶನ _ಮುಂಬೈಯಲ್ಲಿ ಜರುಗಿತ್ತು_ .

ಪ್ರತಿ 3 ವರ್ಷಕ್ಕೊಮ್ಮೆ ದೇಶದ ನಾನಾ ರಾಜ್ಯಗಳಲ್ಲಿ ಸಕಾರ ಭಾರತೀಯ ರಾಷ್ಟ್ರೀಯ ಸಮ್ಮೇಳನವು ಆಯೋಜನೆಗೊಳ್ಳುತ್ತಿದ್ದು, ಪ್ರತಿ 3 ವರ್ಷಕ್ಕೊಮ್ಮೆ ರಾಷ್ಟ್ರೀಯ ಅಧಿವೇಶನದಲ್ಲಿ ಹೊಸ ರಾಷ್ಟ್ರೀಯ ಅಧ್ಯಕ್ಷರ ಸಹಿತ ನೂತನ ರಾಷ್ಟ್ರೀಯ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಆಯ್ಕೆಗೊಳ್ಳುತ್ತಿದ್ದು, ಅದಕ್ಕೆ ಮುಂಚಿತವಾಗಿ ರಾಜ್ಯ ಮತ್ತು ಜಿಲ್ಲೆಯಲ್ಲಿ ನೂತನ ಸಮಿತಿಗಳು ರಚನೆಯಾಗುತ್ತವೆ.

ಕಳೆದ ವರ್ಷ ಡಿಸೆಂಬರ್ ನಲ್ಲಿ ಜರುಗಿದ ಸಹಕಾರ ಭಾರತೀಯ 8 ನೇ ರಾಷ್ಟ್ರೀಯ ಅಧಿವೇಶನದಲ್ಲಿ ಪ್ರಸ್ತುತ ಸಹಕಾರ ಭಾರತಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಮುಂಬೈ ವಿಶ್ವವಿದ್ಯಾ ನಿಲಯದ ನಿವೃತ್ತ ವಾಣಿಜ್ಯ ಶಾಸ್ತ್ರದ ಪ್ರೊಫೆಸರ್ ಶ್ರೀ ಉದಯ ವಾಸುದೇವ ಜೋಶಿಯವರು ಕಾರ್ಯನಿರ್ವಹಿಸುತ್ತಿದ್ದು, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾಗಿ ಬಿಹಾರದ ಸಹಕಾರಿ ಮುಖಂಡರಾದ ಶ್ರೀ ದೀಪಕ್ ಚೌರಾಷಿಯ ಮತ್ತು ಸಂಘಟನಾ ಕಾರ್ಯದರ್ಶಿಯಾಗಿ ಪೂರ್ಣಾವಧಿ ಕಾರ್ಯಕರ್ತರಾದ ಮುಂಬೈಯ ಶ್ರೀ ಸಂಜಯ್ ಪಾಚ್ಪೋರೆಯವರು ಕಾರ್ಯನಿರ್ವಹಿಸುತ್ತಿದ್ದಾರೆ.

ಕರ್ನಾಟಕಕ್ಕೆ ಸಹಕಾರ ಭಾರತಿಯ ಪ್ರವೇಶ

ಕರ್ನಾಟಕಕ್ಕೆ1989ರಲ್ಲಿ ಹೆಜ್ಜೆಯಿಟ್ಟ ಸಂಘಟನೆ ಕಳೆದ 35 ವರ್ಷಗಳಲ್ಲಿ ಹಂತಹಂತವಾಗಿ ವಿಸ್ತರಿಸಲ್ಪಟ್ಟು ಪ್ರಸ್ತುತ *ರಾಜ್ಯದ 32 ಜಿಲ್ಲೆ ಮತ್ತು 3 ಮಹಾನಗರಗಳಲ್ಲಿಮತ್ತು ಸುಮಾರು *195 ತಾಲೂಕುಗಳಲ್ಲಿ ಸಕ್ರಿಯವಾದ ಜಿಲ್ಲೆ ,ಮಹಾನಗರ ಮತ್ತು ತಾಲೂಕು ಸಮಿತಿಗಳಮೂಲಕ ಸಕ್ರಿಯವಾದ ಸಂಘಟನಾತ್ಮಕ ಚಟುವಟಿಕೆಗಳ ಜೊತೆಗೆ ಸಮಾಜಕ್ಕೆ ಬಹಳಷ್ಟು ಸೇವೆಯನ್ನು ಕೊಡಲು ಸಾಧ್ಯವಾಗಿರುವುದನ್ನು ಗುರುತಿಸಬಹುದು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯರಾದ ಮಾನನೀಯ ನ. ಕೃಷ್ಣಪ್ಪ ನವರ ನಿರ್ದೇಶನದಂತೆ 1989ರಲ್ಲಿ ಮಹಾರಾಷ್ಟ್ರದ ದೊಂಬಿವಿಲಿಯಲ್ಲಿ ಜರಗಿದ ಅಖಿಲ ಭಾರತ ಸಹಕಾರ ಭಾರತಿಯ ಮಹತ್ತರವಾದ ಸಭೆಯೊಂದರಲ್ಲಿ ಅಂದಿನ ಹಿರಿಯ ಸಹಕಾರಿಗಳಾದ ಮಂಗಳೂರು ಜನತಾ ಬಜಾರು ಮಾಜಿ ಅಧ್ಯಕ್ಷ ಶ್ರೀ ಪುರಂದರ ಭಟ್ˌ ಕ್ಯಾಂಪ್ಕೊದ ನಿರ್ದೇಶಕ *ಶ್ರೀ ಟಿ.ವಿ.ಭಟ್ ಹಾಗೂ ಅಂದಿನ ಯುವ ಸಹಕಾರಿ ಶ್ರೀ ಕೋಂಕೋಡಿ ಪದ್ಮನಾಭ - ಇವರು ಕರ್ನಾಟಕದಿಂದ ಪ್ರತಿನಿಧಿಸುವ ಮೂಲಕ ಕರ್ನಾಟಕ ಸಹಕಾರ ಭಾರತಿ ಆರಂಭಕ್ಕೆ ನಾಂದಿ ಹಾಡಿದರು.

ಅಖಿಲ ಭಾರತ ಸಹಕಾರ ಭಾರತಿ ಸ್ಥಾಪನೆಯ ಮಾರ್ಗದರ್ಶಕ ಮಾನನೀಯ ಶ್ರೀ ಲಕ್ಷ್ಮಣರಾವ್ ಇನಾಂದಾರ್ ರವರ ಸಹೋದರ ಸಂಘದ ಪ್ರಚಾರಕ ಮಾನನೀಯ ತಾತ್ಯಾರಾವ್ ಇನಾಂದಾರ್ ರವರು ಸಭೆಯಲ್ಲಿ ಉಪಸ್ಥಿತರಿದ್ದು ಕರ್ನಾಟಕ ಸಹಕಾರ ಭಾರತಿಯ ಆರಂಭಕ್ಕೆ ಶುಭ ನುಡಿದರು.

ಅಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರ ಬಲವಾಗಿ ಬೇರೂರಿದ್ದು ಹಾಗೂ ಸಂಘಪರಿವಾರದ ಚಟುವಟಿಕೆಗಳು ಈ ಭಾಗದಲ್ಲಿ ವಿಶೇಷವಾಗಿ ಪಸರಿಸಿದ ಕಾರಣಕ್ಕಾಗಿ ಮಂಗಳೂರು ಮುಖ್ಯಕೇಂದ್ರವಾಗಿ ಸಹಕಾರ ಭಾರತಿಯ ರಾಜ್ಯದ ಚಟುವಟಿಕೆಗಳು ಆರಂಭವಾಯಿತು.

ಮಹಾರಾಷ್ಟ್ರ ಮತ್ತುˌ ಗುಜರಾತಿನ ನಂತರ ಕರ್ನಾಟಕ ಸಹಕಾರ ಭಾರತಿಯ ಹೆಜ್ಜೆಗುರುತಿಗೆ 3 ನೇ ರಾಜ್ಯವಾಯಿತು .

1991ರಲ್ಲಿ ಗುಜರಾತ್ ನ ರಾಜಕೋಟದಲ್ಲಿ ರಾಷ್ಟ್ರೀಯ ಪ್ರಮುಖರ ಸಂಘಟನಾ ಸಭೆಯೊಂದು ಜರಗಿತು .

ಈ ಸಭೆಯಲ್ಲಿ ಕರ್ನಾಟಕದಿಂದ ಶ್ರೀ ಕೋಂಕೋಡಿ ಪದ್ಮನಾಭ ಭಟ್, ˌ ಶ್ರೀ ಪುರಂದರಭಟ್ ˌ ಶ್ರೀ ಟಿ. ವಿ. ಭಟ್ˌ ಶ್ರೀ ರಾಧಾಕೃಷ್ಣ ಕೋಟೆˌ ಶ್ರೀ ಪ್ರಮೋದಕುಮಾರ ರೈ ˌಶ್ರೀ ಕೃಷ್ಣ ನಾಯ್ಕ ಪಾಲ್ಗೊಂಡು ಸಂಘಟನೆಯ ಬಗ್ಗೆ ವಿಶೇಷ ಮಾಹಿತಿಯನ್ನು ಕಲೆ ಹಾಕಿದರು.

1990ರ ದಶಕದ ಆರಂಭದಲ್ಲಿ ದ.ಕ. ಜಿಲ್ಲೆ ಮೂಲಕ ರಾಜ್ಯದಲ್ಲಿ ಸಂಘಟನೆಯತ್ತ ತೊಡಗಿದ ಸಹಕಾರ ಭಾರತಿ ದ.ಕ. ಜಿಲ್ಲಾ ಸಂಚಾಲಕರಾಗಿ ಶ್ರೀ ಕೋಂಕೋಡಿ ಪದ್ಮನಾಭರವರು ಆಯ್ಕೆಯಾದರು.

ಮಂಗಳೂರು ಜನತಾ ಬಜಾರು ಅಂದಿನ ದಿನಗಳಲ್ಲಿ ಪರಿವಾರ ಸಂಘಟನೆ ಕಾರ್ಯಕರ್ತರ ವಿಶೇಷವಾಗಿ ಶ್ರೀ ಕೋಂಕೋಡಿ ಪದ್ಮನಾಭರ ನೇತೃತ್ವದಲ್ಲಿ ಆಧುನೀಕೃತ ದಿನಸಿ ಮಳಿಗೆಯಾಗಿ ರೂಪುಗೊಂಡು ವಿಶೇಷ ಪ್ರಚಾರವನ್ನು ಪಡೆದಿತ್ತು.

90ರ ದಶಕದ ಮಧ್ಯ ಭಾಗದಲ್ಲಿ ಮಣಿಪಾಲ ಸಮೀಪದ ಪರೀಕದಲ್ಲಿ ರಾಷ್ಟ್ರೀಯ ಮಟ್ಟದ ಸಮಾವೇಶವೊಂದು ಜರುಗಿ ರಾಷ್ಟ್ರದಲ್ಲಿ ಸಂಘಟನೆ ಬಲಪಡಿಸುವ ಯೋಜನೆಗಳು ರೂಪುಗೊಂಡಿತು.

ಕರ್ನಾಟಕ ರಾಜ್ಯ ಸಹಕಾರ ಭಾರತಿಯ ಪ್ರಥಮ ಅಧ್ಯಕ್ಷರಾಗಿ ಮಾಜಿ ಶಾಸಕ ಕ್ಯಾಂಪ್ಕೊ ಸಂಸ್ಥೆಯ ಅಧ್ಯಕ್ಷರಾದ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ *ಶ್ರೀ ಉರಿಮಜ್ಲು ರಾಮ ಭಟ್* ರವರು ಕಾರ್ಯನಿರ್ವಹಿಸಿ ಸಹಕಾರ ಭಾರತಿ ಬೆಳವಣಿಗೆಗೆ ನಾಂದಿಹಾಡಿದರು.

ಆ ಬಳಿಕ ಶ್ರೀ ಕೋಂಕೋಡಿಯವರು ರಾಜ್ಯ ಸಂಚಾಲಕರಾಗುವ ಮೂಲಕ ರಾಜ್ಯದಲ್ಲಿ ಸಂಘಟನೆಗೆ ಸಂಚಲನ ಮೂಡಿಸಿದರು.

ಜೊತೆಗೆ ಸುಧೀರ್ಘಾವಧಿಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿ ಸಹಕಾರ ಭಾರತಿ ಗೆ ಮಾರ್ಗದರ್ಶನವನ್ನು ನೀಡುತ್ತಿದ್ದಾರೆ.

ಕರ್ನಾಟಕದ ಕೊಪ್ಪಳದ ಶ್ರೀ ರಮೇಶ್ ವೈದ್ಯರವರು ಸಹಕಾರ ಭಾರತಿಯ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಕಾಲಘಟ್ಟದಲ್ಲಿ 2017ರಲ್ಲಿ ಸಂಸ್ಥಾಪಕರಾದ ದಿವಂಗತ ಶ್ರೀ ಲಕ್ಷ್ಮಣ್ ರಾವ್ ಇನಾಂದಾರ್ ರವರ ಜನ್ಮ ಶತಮಾನೋತ್ಸವ ಸಮಾರಂಭ ನವದೆಹಲಿಯಲ್ಲಿ ಜರುಗಿದಾಗ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಕಾರ್ಯಕ್ರಮಕ್ಕೆ ಆಗಮಿಸಿ, ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಳ್ಳುತ್ತಾ ಸಹಕಾರ ಭಾರತೀಯ ಸಂಸ್ಥಾಪಕರಾದ ಶ್ರೀ ಲಕ್ಷ್ಮಣ್ ರಾವ್ ಇನಾಂದಾರ್ ರವರು ಆಗ ಗುಜರಾತಿನ ಸಂಘದ ಪ್ರಚಾರಕರಾಗಿದ್ದು ಬಾಲ ಸ್ವಯಂಸೇವಕನಾಗಿದ್ದ ನನ್ನನ್ನು ಸಂಘದ ಶಾಖೆಗೆ ಕರೆದುಕೊಂಡು ಹೋಗಿ ಸಂಸ್ಕಾರವನ್ನು ನೀಡಿರುವುದನ್ನು ಸ್ಮರಿಸಿ ಭಾವಪೂರ್ಣ ಮಾತುಗಳನ್ನಾಡಿದ್ದರು.

ಸಹಕಾರ ಭಾರತಿ ಸಂಘಟನಾತ್ಮಕವಾಗಿ, ರಚನಾತ್ಮಕವಾಗಿ ,ಆಂದೋಲನಾತ್ಮಕವಾಗಿ ಮತ್ತು ಪ್ರಾತಿನಿಧ್ಯಾತ್ಮಕವಾಗಿ 4 ಆಯಾಮಗಳಲ್ಲಿ ಕ್ರಿಯಾಶೀಲವಾಗಿ ದೇಶದ ಸಹಕಾರ ರಂಗದ ಸುಧಾರಣೆ ಮತ್ತು ಸರ್ವಾಂಗೀಣ ಅಭಿವೃದ್ಧಿಗಾಗಿ ಕೆಲಸ ಕಾರ್ಯಗಳನ್ನು ನಿರ್ವಹಿಸಿಕೊಂಡು ಬರುತ್ತಿದೆ.

ಸಹಕಾರ ಭಾರತಿ ದೇಶದ ಸಹಕಾರಿ ಕ್ಷೇತ್ರದ ಸುಧಾರಣೆಗಾಗಿ ಪ್ರಜಾಸತ್ತಾತ್ಮಕವಾಗಿ ಕೈಗೊಂಡಿರುವ ಯಶಸ್ವಿ ಆಂದೋಲನಾತ್ಮಕ ಕಾರ್ಯಗಳು :

1. ನ್ಯಾಯಾಂಗದ ಹೋರಾಟದ ಮೂಲಕ ಸಹಕಾರಿ ಸಂಸ್ಥೆಗಳ ಮೇಲೆ ಹೇರಲಾಗಿದ್ದ 5% ಕಲ್ಯಾಣ ನಿಧಿ ರದ್ಧತಿ : 1959ರ ಸಹಕಾರಿ ಕಾಯ್ದೆಗೆ ತಿದ್ದುಪಡಿ.

2. ನಷ್ಟದಲ್ಲಿದ್ದ ಹೈನುಗಾರಿಕೆಗೆ ಚೈತನ್ಯ ನೀಡಲು ರೈತರು ಹಾಲು ಸೊಸೈಟಿಗಳಿಗೆ ಪೂರೈಸುವ ಹಾಲಿಗೆ ಪ್ರತಿ ಲೀಟರ್ ಗೆ ₹2/-ಪ್ರಪ್ರಥಮವಾಗಿ ಸಹಕಾರ ಭಾರತಿಯಿಂದ ಆಗ್ರಹ.. ರಾಜ್ಯ ಸರಕಾರದ ಸ್ಪಂದನೆ.ಪ್ರೋತ್ಸಾಹ ಧನ.. ಇದೀಗ ₹5/-ಕ್ಕೆ ಏರಿಕೆಯಾಗಿದೆ.

3.ಸಿಬಂದಿ ನೇಮಕಾತಿಯ ನಿಯಮ 17 ರಲ್ಲಿದ್ದ ತೊಡಕಿನ ಅಂಶಗಳ ತಿದ್ದುಪಡಿಗೆ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ದಾವೆ.. ನಿಯಮಕ್ಕೆ ತಿದ್ದುಪಡಿ ತರಲು ಯಶಸ್ವಿ.

4. ಕೃಷಿಪತ್ತಿನ ಸಹಕಾರಿ ಸಂಘಗಳ ಪುನಶ್ಚೇತನಕ್ಕಾಗಿ ಪ್ರೊ. ವೈದ್ಯನಾಥನ್ ಸಮಿತಿ ವರದಿ ಜಾರಿಗೆ ಒತ್ತಾಯ. ಅಂಶಿಕ ಯಶಸ್ಸು.

5. ಮೂರನೇ ವ್ಯಕ್ತಿ (Third Party Cheque) ಚೆಕ್ ನಗದೀಕರಣಕ್ಕಾಗಿ ಸಹಕಾರ ಸಂಸ್ಥೆಗಳಿಗೆ ಆರ್‌ಬಿಐ ಅನುಮತಿ ಕೋರಿ ಆಗ್ರಹಪೂರ್ವಕ ಮನವಿ ಸಲ್ಲಿಕೆ. ₹50,000/- ದ ವರಗೆ ಚೆಕ್ ನಗರೀಕರಣಕ್ಕೆ ಅನುಮತಿ.

6. ಸಹಕಾರಿ ಸಂಸ್ಥೆಗಳ ಮೂಲಕ ಇ_ಸ್ಟ್ಯಾಂಪಿಂಗ್ ವ್ಯವಸ್ಥೆ ಕಲ್ಪಿಸಲು ಸರಕಾರಕ್ಕೆ ಮನವಿ. ಸಂಪೂರ್ಣ ಯಶಸ್ಸು.

7. ಸಹಕಾರಿ ಸಂಘಗಳ ಆದಾಯವನ್ನು ತೆರಿಗೆ ವ್ಯಾಪ್ತಿಯಿಂದ ಹೊರಗಿಡಲು ನಿರಂತರ ಹೋರಾಟ ಅಂಶಿಕ ಯಶಸ್ಸು.

8. ಡಿಪೋಸಿಟ್ ಇನ್ಸೂರೆನ್ಸ್ ಸ್ಕೀಮ್ (DIGC) ₹1 ಲಕ್ಷದಿಂದ ₹5 ಲಕ್ಷ ಕ್ಕೆ ಹೆಚ್ಚಿಸಲು ಹೋರಾಟ ಯಶಸ್ವಿಯಾಗಿರುತ್ತದೆ.

9. ಕೃಷಿ ಇಲಾಖೆಯ ಜೊತೆಗಿದ್ದ ಸಹಕಾರಿ ಕ್ಷೇತ್ರಕ್ಕೆ ಪ್ರತ್ಯೇಕವಾದ ಸಹಕಾರಿ ಇಲಾಖೆ ರಚನೆಗೆ ಆಗ್ರಹ. 2021 ರಲ್ಲಿ ಕೇಂದ್ರ ಸರಕಾರ ಪ್ರತ್ಯೇಕ ಸಹಕಾರಿ ಸಚಿವಾಲಯವನ್ನು ರಚಿಸಿರುತ್ತದೆ.

10. ದೇಶದಲ್ಲಿ ಸಹಕಾರಿ ವಿಶ್ವವಿದ್ಯಾನಿಲಯ ಸ್ಥಾಪಿಸಲು ದಶಕಗಳಿಂದ ನಿರಂತರ ಆಗ್ರಹಿಸುತ್ತಿದ್ದ ಸಹಕಾರ ಭಾರತಿಯ ಬೇಡಿಕೆಗೆ ತ್ರಿಭುವನ್ ಸಹಕಾರ ವಿಶ್ವವಿದ್ಯಾನಿಲಯ ಸ್ಥಾಪನೆಯ ಮೂಲಕ ಮಹತ್ವದ ಯಶಸ್ಸು ಲಭಿಸಿದೆ.

11. ಕರ್ನಾಟಕ ಸೌಹಾರ್ದ ಸಹಕಾರಿ ಕಾಯ್ದೆ 1997 ಜಾರಿಗೆ ಒತ್ತಾಯ. ದೇಶದಲ್ಲಿ ಪ್ರಪ್ರಥಮವಾಗಿ ಕರ್ನಾಟಕ ರಾಜ್ಯದಲ್ಲಿಯಶಸ್ವಿ ಕರ್ನಾಟಕ ಸೌಹಾರ್ದ ಸಹಕಾರಿ ಸಂಸ್ಥೆಗಳ ಉದಯ.

12. ನೂತನ ಸಹಕಾರ ನೀತಿಗೆ ಒತ್ತಾಯ. ಇದೀಗ ದೇಶದ ಸಹಕಾರಿ ಸಚಿವರಾದ ಶ್ರೀ ಅಮಿತ್ ಶಾ ರವರ ನೇತೃತ್ವದಲ್ಲಿ ನೂತನ ಸಹಕಾರ ನೀತಿಯ ರಚನೆಯ ಜೊತೆಗೆ ಸಹಕಾರಿ ಕ್ಷೇತ್ರದಲ್ಲಿ ಕ್ರಾಂತಿಕಾರ ಬದಲಾವಣೆಗಳಿಗೆ ನಾಂದಿಯಾಗಿದೆ.

ಸಹಕಾರ ಭಾರತಿ ನಿರಂತರವಾಗಿ ಸಹಕಾರಿ ಕಾಯಿದೆಗಳಲ್ಲಿರುವ ಲೋಪದೋಷಗಳನ್ನು ಸರಿಪಡಿಸಲು ಸರಕಾರದ ಜೊತೆಗೆ ನಿರಂತರ ಸಂಪರ್ಕವನ್ನು ಇಟ್ಟುಕೊಂಡು ಕೆಲವೊಮ್ಮೆ ನ್ಯಾಯಾಂಗ ಹೋರಾಟದ ಮೂಲಕವೂ ಕೂಡ ಯಶಸ್ಸನ್ನು ಪಡೆದಿರುತ್ತದೆ.

ಸಹಕಾರ ಭಾರತಿ ಸಹಕಾರ ಕ್ಷೇತ್ರದ ಬಲವರ್ಧನೆಗಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಮುಂದೆ ಇಟ್ಟಿರುವ ಪ್ರಮುಖ ಬೇಡಿಕೆಗಳು.

1. ಕರ್ನಾಟಕ ರಾಜ್ಯ ಸಹಕಾರಿ ಕಾಯ್ದೆ _1959 ಸಮಗ್ರ ಬದಲಾವಣೆಗೆ ಅಗ್ರಹ.

2. ಜಿಲ್ಲಾ ಮಟ್ಟದಲ್ಲಿ ಪ್ರತ್ಯೇಕ ಜಿಲ್ಲಾ ಸಹಕಾರಿ ನ್ಯಾಯಾಲಯಗಳ ಸ್ಥಾಪನೆ.

3. ವಿಧಾನ ಪರಿಷತ್ ಮತ್ತು ರಾಜ್ಯಸಭೆಗಳಲ್ಲಿ ಸಹಕಾರಿ ಕ್ಷೇತ್ರದಿಂದ ಪ್ರಾತಿನಿಧ್ಯ.

4. ಪಠ್ಯಪುಸ್ತಕಗಳಲ್ಲಿ ಸಹಕಾರಿ ಕ್ಷೇತ್ರದ ಇತಿಹಾಸ, ಮಹತ್ವ ಮತ್ತು ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಸಮಗ್ರ ಮಾಹಿತಿ ಅಳವಡಿಕೆಗೆ ಒತ್ತಾಯ.

5. ಯುವಜನರನ್ನು ಮತ್ತು ಮಹಿಳೆಯರನ್ನು ಸಹಕಾರಿ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ರಾಜ್ಯ ಮತ್ತು ಕೇಂದ್ರ ಸರಕಾರದಿಂದ ವಿವಿಧ ಯೋಜನೆಗಳ ಅನುಷ್ಠಾನ.

6. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕುಗಳಿಗೆ ಅನುಮತಿಸಿರುವ ಸಿಬಿಲ್ ಮತ್ತು ಶೀಘ್ರ ಸಾಲ ವಸೂಲಾತಿಗಾಗಿ ಸೆಕ್ಯೂರಿಟೈಸೇಷನ್ ಕಾಯ್ದೆಯನ್ನು ಸಹಕಾರಿ ಸಂಸ್ಥೆಗಳಿಗೂ ಅಳವಡಿಕೆ ಮಾಡಿಕೊಳ್ಳಲು ಅವಕಾಶ ನೀಡುವುದು.

7. ಸಹಕಾರಿ ಸಂಘಗಳ ತೆರಿಗೆ ನೀತಿಯಲ್ಲಿ ಸ್ಪಷ್ಟತೆ ತರುವುದು.

ಸಹಕಾರ ಭಾರತಿ ಪ್ರತಿ 3 ವರ್ಷಗಳಿಗೊಮ್ಮೆ ರಾಜ್ಯ ಸಮಾವೇಶ ಮತ್ತು ರಾಷ್ಟ್ರೀಯ ಸಮಾವೇಶಗಳನ್ನು ಆಯೋಜಿಸಿ, ಸಹಕಾರಿ ಕ್ಷೇತ್ರದ ಆಗುಹೋಗುಗಳ ಬಗ್ಗೆ ಚರ್ಚಿಸಿ, ಹಲವಾರು ನಿರ್ಣಯಗಳನ್ನು ಕೈಗೊಂಡು ಸರಕಾರಕ್ಕೆ ಬೇಡಿಕೆಗಳನ್ನು ಸಲ್ಲಿಸಿಕೊಂಡು ಬರುತ್ತಿದೆ.

ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ ದಾವಣಗೆರೆಯಲ್ಲಿ ಜರುಗಿದ ಸಹಕಾರ ಭಾರತಿಯ ರಾಜ್ಯ ಸಮ್ಮೇಳನದಲ್ಲಿ ಕರ್ನಾಟಕ ರಾಜ್ಯದ ನೂತನ ಅಧ್ಯಕ್ಷರಾಗಿ ದಾವಣಗೆರೆಯ ಶ್ರೀ ಪ್ರಭುದೇವ. ಆರ್. ಮಾಗನೂರ್ , ಪ್ರಧಾನ ಕಾರ್ಯದರ್ಶಿಯಾಗಿ ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಶ್ರೀ ಸಾಣೂರು ನರಸಿಂಹ ಕಾಮತ್ ಮತ್ತು ಸಂಘಟನಾ ಕಾರ್ಯದರ್ಶಿಯಾಗಿ ತುಮಕೂರಿನ ಶ್ರೀ ಮಂಜುನಾಥ ಬಿ. ಆರ್. ರವರು ಆಯ್ಕೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ .

ಕಳೆದ 46 ವರ್ಷಗಳಲ್ಲಿ ಸಹಕಾರ ಭಾರತಿ ಸಹಕಾರಿ ಕ್ಷೇತ್ರದ ಸುಧಾರಣೆ ಮತ್ತು ಅಭಿವೃದ್ಧಿಯಾಗಿ ನಿರಂತರವಾಗಿ ಕಾರ್ಯ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿದ್ದು, ರಾಷ್ಟ್ರೀಯ ಚಿಂತನೆಗಳ ಮೂಲಕ ಸಹಕಾರಿ ಕ್ಷೇತ್ರಕ್ಕೆ ಹೊಸ ಚೈತನ್ಯವನ್ನು ತುಂಬಲು ನಿರಂತರವಾಗಿ ಶ್ರಮಿಸುತ್ತಿದೆ.

_ ಸಾಣೂರು ನರಸಿಂಹ ಕಾಮತ್, ರಾಜ್ಯ ಪ್ರಧಾನ ಕಾರ್ಯದರ್ಶಿ, ಸಹಕಾರ ಭಾರತಿ ,ಕರ್ನಾಟಕ.

PREV
Get the latest news from Dakshina Kannada (ದಕ್ಷಿಣ ಕನ್ನಡ ಸುದ್ದಿ) — covering coastal city Mangaluru, local governance, beaches & tourism, culture & traditions (Yakshagana, Kambala), education, industry and agriculture, environment, civic issues, and community events from the district on Kannada Prabha News.
Read more Articles on

Recommended Stories

ಕನ್ನಡ ಪುಸ್ತಕಗಳನ್ನು ಕೊಂಡು ಕೊಂಡಾಡಿ : ಹರಿಕೃಷ್ಣ ಪುನರೂರು
ರಥಬೀದಿ ವೆಂಕಟರಮಣ ದೇವಳ: ವ್ಯಾಸಧ್ವಜ, ಸ್ವಾಮೀಜಿ ಪಾದುಕಾ ದಿಗ್ವಿಜಯ ಪಾದಯಾತ್ರೆ