ಮುಂಡಗೋಡ: ದಲೈ ಲಾಮಾ ಅವರು ಕೇವಲ ಟಿಬೇಟಿಯನ್ ಜನಾಂಗಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಬದಲಾಗಿ ಇಡೀ ಜಗತ್ತಿಗೆ ಮಾನವೀಯ ಮೌಲ್ಯಗಳ ಸಂದೇಶ ಸಾರಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಹೇಳಿದರು.
ಭಾನುವಾರ ಇಲ್ಲಿಯ ಟಿಬೇಟಿಯನ್ ಕ್ಯಾಂಪ್ ನಂಬರ್ ೩ರ ಕಮ್ಯೂನಿಟಿ ಹಾಲ್‌ನಲ್ಲಿ ಟಿಬೇಟಿಯನ್ ಧರ್ಮಗುರು ದಲಾಯಿ ಲಾಮಾ ಅವರ ೯೦ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ದಲೈ ಲಾಮಾ ಅವರು ಸಮಾಜಕ್ಕೆ ನೀಡಿದ ಕೊಡುಗೆ ಅಪಾರವಾಗಿದ್ದು, ಪ್ರತಿಯೊಬ್ಬರೂ ನೆನಪಿಸಿಕೊಳ್ಳುವ ದಿನವಾದ ದಲೈ ಲಾಮಾ ಅವರ ಜನ್ಮ ದಿನಾಚರಣೆ ಅತ್ಯಮೂಲ್ಯ. ಇಂತಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ನಮ್ಮ ಸೌಭಾಗ್ಯ. ದಲೈ ಲಾಮಾ ಅವರ ಆದರ್ಶಗಳನ್ನು ಪಾಲಿಸಬೇಕಿದೆ. ದಲೈ ಲಾಮಾ ಅವರಿಗೆ ಭಗವಂತ ಇನ್ನೂ ಹೆಚ್ಚಿನ ಆಯುಷ್ಯ ಆರೋಗ್ಯ ನೀಡಲಿ ಎಂದು ಆಶಸುತ್ತೇನೆ ಎಂದರು. ಟಿಬೇಟಿಯನ್ನರಿಗೆ ಅವರ ಸಂಸ್ಕೃತಿಯೇ ಅವರ ಒಗ್ಗಟ್ಟು ಹೆಚ್ಚಿಸಿದೆ. ಇದರಿಂದಲೇ ಮುಂಡಗೋಡ ಟಿಬೇಟಿಯನ್ ಕಾಲನಿ ಶಿಕ್ಷಣ, ಕೃಷಿ, ಆರೋಗ್ಯ ಸೇರಿದಂತೆ ಎಲ್ಲ ಕ್ಷೇತ್ರದಲ್ಲಿ ಕೂಡ ಮುಂದುವರಿದಿದ್ದು, ಏನಾದರೂ ಸಹಾಯ-ಸಹಕಾರ ಬೇಕಾದಲ್ಲಿ ಜಿಲ್ಲಾಡಳಿತ ಸದಾ ನಿಮ್ಮ ಜತೆಗೆ ಇರುತ್ತದೆ ಎಂದು ಭರವಸೆ ನೀಡಿದರು.ದೊಡ್ಡ ಜಿಲ್ಲೆಯಾಗಿರುವ ಉತ್ತರ ಕನ್ನಡದಲ್ಲಿ ಟಿಬೇಟಿಯನ್, ಸಿದ್ದಿ ಸೇರಿದಂತೆ ಹಲವಾರು ಸಮುದಾಯದ ಜನರು ವಾಸಿಸುತ್ತಿದ್ದು, ಇದು ಶಾಂತಿ-ಸಹಬಾಳ್ವೆ ಸಂಕೇತವಾಗಿದೆ ಎಂದು ಜಿಲ್ಲಾಧಿಕಾರಿ ಬಣ್ಣಿಸಿದರು.
ಶಾಸಕ ಶಿವರಾಮ ಹೆಬ್ಬಾರ ಮಾತನಾಡಿ, ಮಾನವಿಯ ಮೌಲ್ಯ ಹಾಗೂ ಶಾಂತಿ ಸಂದೇಶ ಸಾರಿದ ಶಾಂತಿಧೂತ ದಲೈ ಲಾಮಾ ಅವರ ಜನ್ಮ ದಿನ ಆಚರಿಸುವುದೇ ಒಂದು ಭಾಗ್ಯ. ಅವರೊಬ್ಬ ವ್ಯಕ್ತಿ ಮಾತ್ರವಲ್ಲ. ಜಗತ್ತಿಗೆ ಶಕ್ತಿಯಾಗಿದ್ದಾರೆ. ಅವರ ಆದರ್ಶ ನಮ್ಮ ಬದುಕಿಗೆ ದಾರಿದೀಪವಾಗಬೇಕು. ಅವರ ಆಶೀರ್ವಾದ ಪ್ರತಿಯೊಬ್ಬರಿಗೆ ಅತ್ಯವಶ್ಯವಾಗಿದ್ದು, ಅವರೊಂದಿಗೆ ನಾವಿರುವುದು ನಮ್ಮ ಪುಣ್ಯ. ಪ್ರಸ್ತುತ ಬದುಕಿನಲ್ಲಿ ಸಮಾಜಕ್ಕೆ ಅವರ ಮೌಲ್ಯಗಳನ್ನು ಪ್ರಚುರಪಡಿಸುವ ಅಗತ್ಯವಿದೆ ಎಂದರು.ವಿಜೃಂಭಣೆಯ ಜನ್ಮ ದಿನಾಚರಣೆ: ಅತಿಥಿ ಗಣ್ಯರು ಹಾಗೂ ಟಿಬೇಟಿಯನ್ ಮುಖ್ಯಸ್ಥರಿಂದ ಬೃಹತ್ ಗಾತ್ರದ ಕೇಕ್ ಕತ್ತರಿಸುವ ಮೂಲಕ ದಲೈ ಲಾಮಾ ಅವರ ಜನ್ಮ ದಿನವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಮುಂಡಗೋಡ ತಹಸೀಲ್ದಾರ್ ಶಂಕರ ಗೌಡಿ, ಸಿಪಿಐ ರಂಗನಾಥ ನೀಲಮ್ಮನವರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ, ಇಂಡೋ ಟಿಬೇಟಿಯನ್ ಫ್ರೆಂಡ್‌ಶಿಪ್ ಸೊಸೈಟಿ ಅಧ್ಯಕ್ಷ ಎಸ್. ಫಕ್ಕೀರಪ್ಪ, ಕಮಲಾಕರ ನಾಯ್ಕ, ನಾಗರಾಜ ನಾಯ್ಕ, ಎಚ್.ಎಂ. ನಾಯ್ಕ, ಮೋಹನದಾಸ ಕೋಡ್ಕಣಿ, ಸಿದ್ದು ಹಡಪದ, ಟಿಬೇಟಿಯನ್ ಸೆಟ್ಲಮೆಂಟ್ ಚೇರ್‌ಮನ್ ರಿಂಚೆನ್ ವೊಮೊ, ಸೋನಮ್, ಜಂಪಾ ಲೋಬ್ಸಾಂಗ್ ಹಾಗೂ ಸಾವಿರಾರು ಸಂಖ್ಯೆ ಟಿಬೇಟಿಯನ್ನರು, ಬೌದ್ಧ ಸನ್ಯಾಸಿಗಳು ಉಪಸ್ಥಿತರಿದ್ದರು.