ಯುವಜನತೆ ಅಗ್ನಿಹೋತ್ರದ ಮಹತ್ವ ಅರಿಯಬೇಕು: ನ್ಯಾ.ಹಂಚಾಟೆ

KannadaprabhaNewsNetwork |  
Published : Jul 07, 2025, 12:17 AM IST
6ಕೆಡಿವಿಜಿ5-ದಾವಣಗೆರೆ ತ್ರಿಶೂಲ ಕಲಾ ಭವನದಲ್ಲಿ ಭಾನುವಾರ ನಂದಿತಾವರೆ ಗ್ರಾಮದ ಶ್ರೀ ಸಿದ್ದಲಿಂಗೇಶ್ವರ ಗದ್ದುಗೆ ಮಠ(ಕಾಲಜ್ಞಾನ ಮಠ)ದಿಂದ ಲೋಕ ಕಲ್ಯಾಣಾರ್ಥ, ಸನಾತನ ಧರ್ಮ ರಕ್ಷಣೆಗೆ ಹಮ್ಮಿಕೊಂಡಿದ್ದ ಸಿದ್ಧ ಅಗ್ನಿಹೋತ್ರ ಹೋಮ ಕಾರ್ಯಕ್ರಮಲ್ಲಿ ಅಗ್ನಿಹೋತ್ರದ ಕೈಪಿಡಿ ಬಿಡುಗಡೆ ಮಾಡಿದ ಡಾ.ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ನ್ಯಾ.ಹಂಚಾಟೆ ಸಂಜೀವ ಕುಮಾರ, ಶಾಸಕ ಬಿ.ಪಿ.ಹರೀಶ....................6ಕೆಡಿವಿಜಿ6-ದಾವಣಗೆರೆ ತ್ರಿಶೂಲ ಕಲಾ ಭವನದಲ್ಲಿ ಭಾನುವಾರ ನಂದಿತಾವರೆ ಗ್ರಾಮದ ಶ್ರೀ ಸಿದ್ದಲಿಂಗೇಶ್ವರ ಗದ್ದುಗೆ ಮಠ(ಕಾಲಜ್ಞಾನ ಮಠ)ದಿಂದ ಲೋಕ ಕಲ್ಯಾಣಾರ್ಥ, ಸನಾತನ ಧರ್ಮ ರಕ್ಷಣೆಗೆ ಹಮ್ಮಿಕೊಂಡಿದ್ದ ಸಿದ್ಧ ಅಗ್ನಿಹೋತ್ರ ಹೋಮ ಕಾರ್ಯಕ್ರಮ ಉದ್ಘಾಟಿಸಿದ ಡಾ.ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ನ್ಯಾ.ಹಂಚಾಟೆ ಸಂಜೀವಕುಮಾರ, ಶಾಸಕ ಬಿ.ಪಿ.ಹರೀಶ. | Kannada Prabha

ಸಾರಾಂಶ

ಧಾರ್ಮಿಕ, ವೈಜ್ಞಾನಿಕ ಮಹತ್ವ ಹೊಂದಿರುವ ಅಗ್ನಿಹೋತ್ರ ಹೋಮವನ್ನು ಮುಂದಿನ ಪೀಳಿಗೆಗೂ ಮುಟ್ಟಿಸುವ ಅವಶ್ಯಕತೆ ಇದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಹಂಚಾಟೆ ಸಂಜೀವಕುಮಾರ ತಿಳಿಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಧಾರ್ಮಿಕ, ವೈಜ್ಞಾನಿಕ ಮಹತ್ವ ಹೊಂದಿರುವ ಅಗ್ನಿಹೋತ್ರ ಹೋಮವನ್ನು ಮುಂದಿನ ಪೀಳಿಗೆಗೂ ಮುಟ್ಟಿಸುವ ಅವಶ್ಯಕತೆ ಇದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಹಂಚಾಟೆ ಸಂಜೀವಕುಮಾರ ತಿಳಿಸಿದರು.

ನಗರದ ತ್ರಿಶೂಲ ಕಲಾ ಮಂದಿರದಲ್ಲಿ ಭಾನುವಾರ ಹರಿಹರ ತಾ. ನಂದಿತಾವರೆ ಗ್ರಾಮದ ಶ್ರೀ ಸಿದ್ದಲಿಂಗೇಶ್ವರ ಗದ್ದುಗೆ ಮಠದಿಂದ (ಕಾಲಜ್ಞಾನ ಮಠ) ಲೋಕ ಕಲ್ಯಾಣಾರ್ಥ, ಸನಾತನ ಧರ್ಮ ರಕ್ಷಣೆಗೆ ಹಮ್ಮಿಕೊಂಡಿದ್ದ ಸಿದ್ಧ ಅಗ್ನಿಹೋತ್ರ ಹೋಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಉಪನಿಷತ್‌, ಭಗವದ್ಗೀತೆಯಲ್ಲೂ ಅಗ್ನಿಹೋತ್ರದ ಉಲ್ಲೇಖವಿದ್ದು, ಅತ್ಯಂತ ಪುರಾತನ ಬ್ರಹ್ಮವಿದ್ಯೆಯಾದ ಅಗ್ನಿಹೋತ್ರ ಹೋಮದಿಂದ ಸಾಕಷ್ಟು ಅನುಕೂಲಗಳಿವೆ ಎಂದರು.

ಅಗ್ನಿಹೋತ್ರ ಹೋಮದಿಂದ ಉತ್ತಮ ಆರೋಗ್ಯ ಹೊಂದುವ ಜತೆಗೆ ಸಕಾರಾತ್ಮಕ ಶಕ್ತಿಯು ಆವರಿಸುತ್ತದೆ. ವ್ಯಾಪಾರ, ವ್ಯವಹಾರಗಳಲ್ಲಿ ವೃದ್ಧಿಯಾಗುತ್ತದೆ. ಶಿಕ್ಷಣ, ಆರ್ಥಿಕತೆಯಲ್ಲೂ ಅಭಿವೃದ್ಧಿಯಾಗುತ್ತದೆ. ಇದು ವೈಯಕ್ತಿಕವಾಗಿಯೂ ಸಾಕಷ್ಟು ಜನರಿಗೆ ಅನುಭವಕ್ಕೂ ಬಂದಿದೆ ಎಂದು ಹೇಳಿದರು.

ಮಧ್ಯಪ್ರದೇಶದ ಭೋಪಾಲ್‌ನಲ್ಲಿ ವಿಷಾನಿಲ ಸೋರಿಕೆಯಿಂದಾಗಿ ಸುಮಾರು 3 ಸಾವಿರಕ್ಕೂ ಅಧಿಕ ಜನರು ಸಾವನ್ನಪ್ಪಿದ್ದರು. ನೂರಾರು ಮಂದಿ ಅಂಗವೈಕಲ್ಯಕ್ಕೆ ತುತ್ತಾಗಿದ್ದರು. ಆದರೆ, ಅದೇ ಭೋಪಾಲ್‌ನಲ್ಲಿ ಅನಿಲ ಸೋರಿಕೆಯ ಸಮೀಪದ ಕೆಲವು ಮನೆಗಳಲ್ಲಿ ಅಗ್ನಿಹೋತ್ರ ಮಾಡುತ್ತಿದ್ದವರಿಗೆ ಏನೂ ಆಗಿರಲಿಲ್ಲವೆಂಬುದು ದೃಢಪಟ್ಟಿದೆ. ಪ್ರತಿ ಮನೆ ಮನೆಗಳಲ್ಲೂ ಅಗ್ನಿಹೋತ್ರ ಹೋಮ ಮಾಡುವ ಅವಶ್ಯಕತೆ ಇದೆ ಎಂದರು.

ಅತ್ಯಂತ ಪವಿತ್ರವಾದ ಅಗ್ನಿಹೋತ್ರ ಹೋಮವು ಕೇವಲ ಧಾರ್ಮಿಕ ವಿಧಿವಿಧಾನ, ಆಚರಣೆ ಮಾತ್ರವಲ್ಲ, ವೈಜ್ಞಾನಿಕ ಪ್ರಕ್ರಿಯೆಯೂ ಆಗಿದೆ. ಭಾರತದ ಅಖಂಡತೆಯ ಸ್ವರೂಪವಾದ ಸಂವಿಧಾನವು ಪ್ರಜಾಪ್ರಭುತ್ವ, ಭ್ರಾತೃತ್ವ, ಶಾಂತಿಯನ್ನು ಸಾರುತ್ತದೆ. ಅದೇ ರೀತಿ ಅಗ್ನಿಹೋತ್ರ ಹೋಮದಿಂದ ದ್ವೇಷ ಅಳಿದು, ಭ್ರಾತೃತ್ವ, ಶಾಂತಿ ನೆಲೆಸುತ್ತದೆ. ಸಂವಿಧಾನದ ಆಶಯ ನೆರವೇರಲು ಅಗ್ನಿಹೋತ್ರ ಹೋಮವು ಪರಿಣಾಮಕಾರಿ ಔಷಧಿ ಎನ್ನಬಹುದು ಎಂದು ತಿಳಿಸಿದರು.

ಹರಿಹರ ಶಾಸಕ ಬಿ.ಪಿ.ಹರೀಶ ಮಾತನಾಡಿ, ಜ್ಯೋತಿಷ್ಯ, ನಮ್ಮ ಸಂಸ್ಕೃತಿ, ಪರಂಪರೆ, ಆಚರಣೆಗಳಲ್ಲಿ ಯಾವುದೇ ಮೂಢನಂಬಿಕೆಗಳು ಇಲ್ಲ. ಜ್ಯೋತಿಷ್ಯ, ಹೋಮ, ಹವನಗಳೆಲ್ಲವೂ ಋಷಿ ಮುನಿಗಳಿಂದ ಬಂದ ಬಳುವಳಿಗಳು. ಋಷಿಮುನಿಗಳ ಕಾಲದಲ್ಲೇ ಇವೆಲ್ಲರೂ ಆಚರಣೆಗೆ ಬಂದಿವೆ ಎಂದರು.

ಶ್ರೀಮಠದ ಪೀಠಾಧ್ಯಕ್ಷ ಡಾ. ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ದಾವಣಗೆರೆ ಮಾಜಿ ಮೇಯರ್ ಎಸ್.ಟಿ.ವೀರೇಶ, ತ್ರಿಶೂಲ್ ಕಲಾ ಭ‍ವನದ ಮಾಲೀಕ ಕೆ.ಆರ್.ಶಿವಕುಮಾರ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ವಕೀಲ ಅರುಣ ಜೋಷಿ, ಧಾರವಾಡದ ಗ್ರಾಮ ವಿಕಾಸ್ ಸೊಸೈಟಿಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಜಗದೀಶ ಶೇಖರ ನಾಯ್ಕ, ಜಿ.ಕೊಟ್ರೇಶ, ಸಿದ್ದರಾಮ ಮಾರಿಹಾಳ್, ಬನ್ನಯ್ಯ ಸ್ವಾಮಿ ಇತರರು ಇದ್ದರು. ಇದೇ ವೇಳೆ ಸಿದ್ಧ ಅಗ್ನಿಹೋತ್ರದ ಕೈಪಿಡಿ ಬಿಡುಗಡೆ ಮಾಡಲಾಯಿತು. ದರ್ಶಿನಿ, ಭಾರ್ಗವಿ ಆರಂಭದಲ್ಲಿ ಪ್ರಾರ್ಥಿಸಿದರು.

ಪುರಾತನ ಕಾಲದಿಂದಲೂ ನಮ್ಮಲ್ಲಿರುವ ಸಂಸ್ಕಾರ, ಪರಂಪರೆ, ಆಚರಣೆಗೆ ಅದರದ್ದೇ ಆದ ಮಹತ್ವವಿದೆ. ಸಿದ್ಧ ಅಗ್ನಿಹೋತ್ರ ಸೇರಿದಂತೆ ಸಾಕಷ್ಟು ಹೋಮ, ಹವನಗಳ ಮಹತ್ವ ಇಂದಿನ ವೈಜ್ಞಾನಿಕ ಸಂಶೋಧನೆಗಳಿಂ

ದಲೂ ಅರಿವಾಗಿದೆ. ನಮ್ಮ ಧರ್ಮ, ಪರಂಪರೆ, ಸಂಸ್ಕೃತಿ ಯಾವುದೂ ಮೂಢನಂಬಿಕೆಗಳಲ್ಲ. ಇವೆಲ್ಲವೂ ವೈಜ್ಞಾನಿಕ ತಳಹದಿಯ ಮೇಲೆಯೇ ನಿಂತಿವೆ.

ಬಿ.ಪಿ.ಹರೀಶ, ಶಾಸಕ.

PREV